ಸಾಂದರ್ಭಿಕ ಚಿತ್ರ
– ಐಸ್ಟಾಕ್ ಚಿತ್ರ
ಬೀದರ್: ಜಿಲ್ಲೆಯಲ್ಲಿ ಸಾಲು ಸಾಲು ಅಪರಾಧ ಪ್ರಕರಣಗಳು ಒಂದಾದ ನಂತರ ಒಂದರಂತೆ ಜರುಗುತ್ತಿದ್ದು, ಜಿಲ್ಲೆಯ ಜನ ಆತಂಕಕ್ಕೆ ಒಳಗಾಗಿದ್ದಾರೆ.
ಡಿ. 26ರಂದು ನಡೆದ ಯುವ ಗುತ್ತಿಗೆದಾರ ಸಚಿನ್ ಪಾಂಚಾಳ್ ಆತ್ಮಹತ್ಯೆ ಪ್ರಕರಣ, ಜನವರಿ 16ರಂದು ನಗರದ ಹೃದಯ ಭಾಗದಲ್ಲಿ ನಡೆದ ಎಸ್‌ಬಿಐ ಬ್ಯಾಂಕಿನೆದುರಿನ ದರೋಡೆ ಪ್ರಕರಣ ರಾಜ್ಯದಾದ್ಯಂತ ದೊಡ್ಡ ಸದ್ದು ಮಾಡಿತ್ತು. ಬಳಿಕ ಕಾನೂನು ಸುವ್ಯವಸ್ಥೆ ಬಗ್ಗೆ ಹಲವು ಪ್ರಶ್ನೆಗಳು ಮೂಡುವಂತೆ ಮಾಡಿತು. ಜಿಲ್ಲಾ ಪೊಲೀಸ್ ಇಲಾಖೆಯು ಸಕ್ರಿಯವಾದಂತೆ ಕಾಣಿಸಿತು. ಜನರಲ್ಲಿ ಭರವಸೆ, ವಿಶ್ವಾಸ ತುಂಬುವ ಕೆಲಸ ಕೂಡ ಮಾಡಿತು. ಹಿರಿಯ ಅಧಿಕಾರಿಗಳೇ ಮುಂದೆ ಬಂದು ಜನರಿಗೆ ಅಭಯ ನೀಡಿದರು. ಆದರೆ, ಒಂದಾದ ನಂತರ ಒಂದರಂತೆ ಅಪರಾಧಿಕ ಪ್ರಕರಣಗಳು ನಡೆಯುತ್ತಿರುವುದರಿಂದ ಜನರಿಗೆ ಪೊಲೀಸರ ಮೇಲಿನ ನಂಬಿಕೆ ದಿನೇ ದಿನೇ ಕಳೆದು ಹೋಗುತ್ತಿದೆ.
ಮಾರ್ಚ್ 31ರಂದು ನಗರದ ಜನವಾಡ ರಸ್ತೆಯಲ್ಲಿನ ಎರಡನೇ ಹೆಚ್ಚುವರಿ ಸಿವಿಲ್ ಮತ್ತು ಜೆಎಂಎಫ್‌ಸಿ–2 ನ್ಯಾಯಾಲಯದ ನ್ಯಾಯಾಧೀಶ ಎಮ್.ಡಿ. ಶೈಜ್ ಚೌಠಾಯಿ ಅವರ ಮನೆಯಲ್ಲಿ ನಡೆದ ಕಳ್ಳತನ ಪ್ರಕರಣವು ತೀವ್ರ ಚರ್ಚೆಗೆ ಗ್ರಾಸ ಒದಗಿಸಿತು. ಇದನ್ನು ಪೊಲೀಸರು ಗಂಭೀರವಾಗಿ ತೆಗೆದುಕೊಂಡು 15 ದಿನಗಳಲ್ಲಿ ಪ್ರಕರಣವನ್ನು ಭೇದಿಸಿ ಆರೋಪಿಗಳನ್ನು ಬಂಧಿಸಿ, ಸ್ವತ್ತು ಜಪ್ತಿ ಮಾಡಿದರು. ಇದಾದ ನಂತರ ರಿಯಲ್ ಎಸ್ಟೇಟ್ ಉದ್ಯಮಿ ಕೊಲೆ, ಮಾಜಿ ಯೋಧನ ಮನೆಯಲ್ಲಿ ನಡೆದ ಕಳವು, ಶನಿವಾರ (ಏ.26) ನಸುಕಿನ ಜಾವ ಡಿಡಿಎಲ್‌ಆರ್ ಜ್ಯೋತಿಲತಾ ಅವರ ಮನೆಯಲ್ಲಿ ನಡೆದ ಡಕಾಯಿತಿ ಪ್ರಕರಣವು ಜನರನ್ನು ಬೆಚ್ಚಿ ಬೀಳುವಂತೆ ಮಾಡಿದೆ. ಇನ್ನು, ಎಸ್‌ಬಿಐ ಎಟಿಎಂ ದರೋಡೆ ಪ್ರಕರಣ ಘಟಿಸಿ ಶನಿವಾರಕ್ಕೆ ನೂರು ದಿನಗಳು ತುಂಬಿವೆ. ಆದರೆ, ಇದುವರೆಗೆ ಆರೋಪಿಗಳ ಸುಳಿವು ಪತ್ತೆಯಾಗಿಲ್ಲ. ‘ಇನ್ನು ಮುಂದೆ ಪೊಲೀಸರನ್ನು ನಂಬಿಕೊಂಡು ಕೂತರೆ ಏನೂ ಆಗಲ್ಲ. ನಮ್ಮ ಸುರಕ್ಷತೆಗೆ ನಾವೇ ಏನಾದರೂ ಮಾಡಿಕೊಳ್ಳಬೇಕು’ ಎಂಬ ಮಾತುಗಳು ಜನಸಾಮಾನ್ಯರಲ್ಲಿ ಸಾಮಾನ್ಯವಾಗಿದೆ.
‘ಹಿರಿಯ ಹಾಗೂ ಕಿರಿಯ ಪೊಲೀಸ್ ಅಧಿಕಾರಿಗಳ ನಡುವಿನ ಸಮನ್ವಯದ ಕೊರತೆಯಿಂದ ಕಾನೂನು ಸುವ್ಯವಸ್ಥೆಯಲ್ಲಿ ಸಮಸ್ಯೆ ಉಂಟಾಗುತ್ತಿದೆ’ ಎಂದು ಪೊಲೀಸ್ ಮೂಲಗಳು ‘ಪ್ರಜಾವಾಣಿ’ಗೆ ತಿಳಿಸಿವೆ.
ಬೀದರ್: ನಗರದ ಓಲ್ಡ್ ಆದರ್ಶ ಕಾಲೊನಿಯ ಮನೆಯೊಂದಕ್ಕೆ ಶನಿವಾರ ನಸುಕಿನ ಜಾವ ನುಗ್ಗಿದ ನಾಲ್ವರು ಮುಸುಕುಧಾರಿ ಡಕಾಯಿತರು, ಮಾರಕಾಸ್ತ್ರಗಳಿಂದ ಮನೆಯಲ್ಲಿದ್ದವರನ್ನು ಹೆದರಿಸಿ ₹15 ಸಾವಿರ ನಗದು ಸೇರಿದಂತೆ ₹15.55 ಲಕ್ಷ ಮೌಲ್ಯದ ಚಿನ್ನಾಭರಣಗಳನ್ನು ಸುಲಿಗೆ ಮಾಡಿ ಪರಾರಿಯಾಗಿದ್ದಾರೆ.
‘ನಾಲ್ವರು ಡಕಾಯಿತರು ಮನೆ ಬಾಗಿಲು ಮುರಿದು ಒಳಗೆ ನುಗ್ಗಿ, ಚಾಕು ಹಾಗೂ ಇತರೆ ಮಾರಕಾಸ್ತ್ರಗಳನ್ನು ಕುತ್ತಿಗೆಗೆ ಹಿಡಿದು ಹೆದರಿಸಿದರು. ನಮ್ಮ ಮೈಮೇಲೆ ಹಾಗೂ ಅಲ್ಮೇರಾದಲ್ಲಿದ್ದ ಚಿನ್ನಾಭರಣ ಕಿತ್ತುಕೊಂಡು, ಬಳಿಕ ಬಾತ್‌ರೂಮ್‌ನಲ್ಲಿ ನಮ್ಮನ್ನು ಕೂಡಿ ಹಾಕಿ ಪರಾರಿಯಾಗಿದ್ದಾರೆ. ಡಕಾಯಿತರು ಹಿಂದಿ ಭಾಷೆಯಲ್ಲಿ ಮಾತನಾಡುತ್ತಿದ್ದರು. ಘಟನೆ ನಡೆದಾಗ ನಾನು, ನನ್ನ ತಾಯಿ ಹಾಗೂ ಮಗ ಮನೆಯಲ್ಲಿದ್ದೆವು’ ಎಂದು ಜ್ಯೋತಿ ಲತಾ ಅವರು ದೂರಿನಲ್ಲಿ ತಿಳಿಸಿದ್ದಾರೆ.
ಜ್ಯೋತಿ ಲತಾ ಅವರು ಮೂಲತಃ ಕಲಬುರಗಿ ಜಿಲ್ಲೆಯ ಅಂಕಲಗಾ ಗ್ರಾಮದವರು. 2016ರಲ್ಲಿ ಪತಿಯ ನಿಧನದ ನಂತರ ಅನುಕಂಪದ ಆಧಾರದ ಮೇಲೆ ನಗರದ ಜಿಲ್ಲಾಧಿಕಾರಿ ಕಚೇರಿಯಲ್ಲಿ ಡಿಡಿಎಲ್‌ಆರ್‌ನಲ್ಲಿ ಸೂಪರಿಟೆಂಡೆಂಟ್ ಆಗಿ ಕೆಲಸ ನಿರ್ವಹಿಸುತ್ತಿದ್ದಾರೆ. ಅಂದಿನಿಂದ ಓಲ್ಡ್ ಆದರ್ಶ ಕಾಲೊನಿಯಲ್ಲಿರುವ ತಾಯಿ ಮನೆಯಲ್ಲಿ 14 ವರ್ಷದ ಮಗನೊಂದಿಗೆ ವಾಸವಾಗಿದ್ದಾರೆ. ಮನೆಯ ಒಂದು ಭಾಗವನ್ನು ಬಾಡಿಗೆಗೆ ಕೊಟ್ಟಿದ್ದು, ಘಟನೆ ನಡೆದಾಗ ಇಬ್ಬರು ಹುಡುಗರಿದ್ದರು ಎಂದು ಪೊಲೀಸರು ಹೇಳಿದ್ದಾರೆ. ನಗರದ ಗಾಂಧಿ ಗಂಜ್ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ಡಕಾಯಿತಿ ಪ್ರಕರಣಕ್ಕೆ ಸಂಬಂಧಿಸಿದಂತೆ ಮನೆಯ ಒಡತಿ ಜ್ಯೋತಿಲತಾ ಅವರು ಮಾಧ್ಯಮಗಳಿಗೆ ಭಿನ್ನವಾದ ಹೇಳಿಕೆಗಳನ್ನು ನೀಡಿದ್ದು, ಅನುಮಾನಕ್ಕೆ ಕಾರಣವಾಗಿದೆ.
ಬೆಳಿಗ್ಗೆ ಅವರನ್ನು ಭೇಟಿ ಮಾಡಿದ ಮಾಧ್ಯಮಗಳಿಗೆ ಜ್ಯೋತಿಲತಾ ಅವರು, ‘ಮನೆಯ ಬಾಗಿಲು ಮುರಿದು, ನನ್ನ ಮಗನ ಹಣೆಗೆ ಗನ್ ಇಟ್ಟು, ಹೆದರಿಸಿ, ಸುಮಾರು 60ರಿಂದ 70 ತೊಲೆ ಚಿನ್ನಾಭರಣಗಳನ್ನು ದೋಚಿಕೊಂಡು ಹೋಗಿದ್ದಾರೆ’ ಎಂದು ಹೇಳಿದ್ದರು. ಇದಾದ ಕೆಲ ಗಂಟೆಗಳಲ್ಲಿ ಅವರು ಭಿನ್ನವಾದ ಹೇಳಿಕೆ ಕೊಟ್ಟಿದ್ದಾರೆ. ‘ಬಾಯ್ತಪ್ಪಿನಿಂದ ಆ ರೀತಿ ಹೇಳಿರುವೆ’ ಎಂದಿದ್ದಾರೆ. ಜೊತೆಗೆ ದೂರಿನಲ್ಲಿ ₹15 ಲಕ್ಷ ಮೌಲ್ಯದ ಚಿನ್ನಾಭರಣ ದೋಚಿಕೊಂಡು ಹೋಗಿದ್ದಾರೆ ಎಂದು ತಿಳಿಸಿದ್ದಾರೆ.
ಈ ಸಂಬಂಧ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಪ್ರದೀಪ್ ಗುಂಟಿ ಅವರನ್ನು ಸಂಪರ್ಕಿಸಿದಾಗ ಅವರು ಮಾಹಿತಿಗೆ ಲಭ್ಯರಾಗಲಿಲ್ಲ.
ಡಿಸೆಂಬರ್ 26ರಂದು ಯುವ ಗುತ್ತಿಗೆದಾರ ಸಚಿನ್ ಪಾಂಚಾಳ್ ಬೀದರ್‌ನಲ್ಲಿ ರೈಲಿನಡಿ ತಲೆಕೊಟ್ಟು ಆತ್ಮಹತ್ಯೆ; ಎಫ್‌ಐಆರ್ ದಾಖಲಿಸಲು ಹಿಂದೇಟು ಹಾಕಿದ ಪೊಲೀಸರ ಕ್ರಮಕ್ಕೆ ಸಚಿನ್ ಕುಟುಂಬದವರು, ವಿರೋಧ ಪಕ್ಷದವರಿಂದ ಕಟು ಟೀಕೆ
ಜನವರಿ 16ರಂದು ಬೀದರ್‌ನ ಹೃದಯ ಭಾಗದ ಎಸ್‌ಬಿಐ ಬ್ಯಾಂಕಿನೆದುರು ದರೋಡೆ. ದರೋಡೆಕೋರರಿಂದ ಗುಂಡು ಹಾರಿಸಿ ಒಬ್ಬ ಸಿಬ್ಬಂದಿ ಹತ್ಯೆ, ಇನ್ನೊಬ್ಬ ಸಿಬ್ಬಂದಿಗೆ ಗಾಯ
ಮಾರ್ಚ್ 31ರ ರಾತ್ರಿ ಬೀದರ್ ನಗರದ ಜನವಾಡ ರಸ್ತೆಯಲ್ಲಿನ ಎರಡನೇ ಹೆಚ್ಚುವರಿ ಸಿವಿಲ್ ಮತ್ತು ಜೆಎಂಎಫ್‌ಸಿ–2 ನ್ಯಾಯಾಲಯದ ನ್ಯಾಯಾಧೀಶ ಎಮ್.ಡಿ. ಶೈಜ್ ಚೌಠಾಯಿ ಅವರ ಮನೆಯಲ್ಲಿ ಕಳ್ಳತನ. 15 ದಿನಗಳ ನಂತರ (ಏ.15) ಮಹಾರಾಷ್ಟ್ರದ ಪಾರ್ದಿ ಗ್ಯಾಂಗ್‌ನ ಮೂವರ ಬಂಧನ, ಸ್ವತ್ತು ಜಪ್ತಿ
ಏಪ್ರಿಲ್ 4ರಂದು ಬೀದರ್ ನಗರ ಹೊರವಲಯದ ಚಿಕ್ಕಪೇಟೆ–ಅಲಿಯಾಬಾದ್ ರಿಂಗ್‌ರೋಡ್‌ನಲ್ಲಿ ರಿಯಲ್ ಎಸ್ಟೇಟ್ ಉದ್ಯಮಿ, ಹೊನ್ನಿಕೇರಿಯ ವೈಜಿನಾಥ ದತ್ತಾತ್ರೇಯ ಕೊಲೆ. ಏಳು ಗಂಟೆಗಳಲ್ಲಿ ಆರೋಪಿಗಳ ಬಂಧಿಸಿದ ಪೊಲೀಸರು
ಏಪ್ರಿಲ್ 13ರಂದು ಬೀದರ್‌ನ ಸಂಗಮೇಶ ಕಾಲೊನಿಯಲ್ಲಿ ಮಾಜಿ ಯೋಧ ವೀರಶೆಟ್ಟಿ ಅವರ ಮನೆಯಲ್ಲಿ ಕಳ್ಳತನ, 16 ತೊಲೆ ಬಂಗಾರ, ಐದು ತೊಲೆ ಬೆಳ್ಳಿ ಆಭರಣ, ₹30 ಸಾವಿರ ನಗದು ದೋಚಿದ ಕಳ್ಳರು
ಏಪ್ರಿಲ್ 26ರಂದು ನಗರದ ಓಲ್ಡ್ ಆದರ್ಶ ಕಾಲೊನಿಯ ಜ್ಯೋತಿಲತಾ ಅವರ ಮನೆಯಲ್ಲಿ ಡಕಾಯಿತಿ. ₹15 ಲಕ್ಷ ಮೌಲ್ಯದ ಚಿನ್ನಾಭರಣ ದೋಚಿದ ಡಕಾಯಿತರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.