ADVERTISEMENT

ರೈತರಿಗೆ ಪರಿಹಾರ ವಿತರಣೆಯಲ್ಲಿ ಮಹಾಮೋಸ: ಭಗವಂತ ಖೂಬಾ ಆರೋಪ

​ಪ್ರಜಾವಾಣಿ ವಾರ್ತೆ
Published 7 ಡಿಸೆಂಬರ್ 2025, 7:03 IST
Last Updated 7 ಡಿಸೆಂಬರ್ 2025, 7:03 IST
ಭಗವಂತ ಖೂಬಾ
ಭಗವಂತ ಖೂಬಾ   

ಬೀದರ್‌: ‘ಬೀದರ್‌ ಜಿಲ್ಲೆಯಲ್ಲಿ ಅತಿವೃಷ್ಟಿಯಿಂದ ಬೆಳೆ ಕಳೆದುಕೊಂಡ ರೈತರಿಗೆ ಪರಿಹಾರ ವಿತರಣೆಯಲ್ಲಿ ಮಹಾಮೋಸವಾಗಿದೆ’ ಎಂದು ಕೇಂದ್ರದ ಮಾಜಿಸಚಿವರೂ ಆದ ಬಿಜೆಪಿ ಮುಖಂಡ ಭಗವಂತ ಖೂಬಾ ಆರೋಪಿಸಿದ್ದಾರೆ.

ಪರಿಹಾರ ಸಿಗುವಲ್ಲಿ ರಾಜ್ಯ ಸರ್ಕಾರದಿಂದ ಮತ್ತು ಜಿಲ್ಲಾ ಉಸ್ತುವಾರಿ ಮಂತ್ರಿಯವರ ಆಡಳಿತ ವೈಫಲ್ಯದಿಂದ ಮಹಾಮೋಸ ನಡೆದಿದೆ. ರೈತರ ಬೆಳೆ ಹಾನಿಗೆ ಶೇ 25ರಷ್ಟು ಪರಿಹಾರ ದೊರೆತಿದೆ. ರಾಜ್ಯ ಸರ್ಕಾರದಲ್ಲಿ ದುಡ್ಡಿಲ್ಲ. ಕಡಿಮೆ ಬೆಳೆ ಹಾನಿಯಾಗಿದೆ ಮತ್ತು ಪ್ರತಿ ತಾಲ್ಲೂಕಿಗೆ ಇಷ್ಟೇ ಎಕರೆ ಹಾಳಾಗಿದೆ ಎಂಬುದಾಗಿ ವರದಿ ನೀಡಬೇಕು. ಟಾರ್ಗೆಟ್‌ ಫಿಕ್ಸ್‌ ಮಾಡಿ, ಪ್ರತಿ ಊರಿಗೆ, ಹೋಬಳಿಗೆ ಮತ್ತು ತಾಲ್ಲೂಕಿಗೆ ಇಂತಿಷ್ಟೆ ಬೆಳೆ ಹಾನಿ ವರದಿ ಮಾಡಿಕೊಡಬೇಕೆಂದು ಸರ್ಕಾರದ ನಿರ್ದೇಶನದ ಮೇರೆಗೆ ಜಿಲ್ಲಾಡಳಿತದ ಕೆಳಹಂತದ ಅಧಿಕಾರಿಗಳಿಗೆ ಒತ್ತಡ ಹಾಕಿದ್ದರಿಂದ ರೈತರಿಗೆ ಅವರ ಹಾಳಾದ ಬೆಳೆಗಳಿಗೆ ಪೂರ್ತಿ ಪರಿಹಾರ ಸಿಕ್ಕಿಲ್ಲ ಎಂದು ಶನಿವಾರ ಪತ್ರಿಕಾ ಪ್ರಕಟಣೆ ಹೊರಡಿಸಿ ಆರೋಪಿಸಿದ್ದಾರೆ.

ಬೆಳೆ ಹಾನಿ ಪರಿಹಾರದಲ್ಲಿ ಸಿದ್ದರಾಮಯ್ಯನವರ ಸರ್ಕಾರ ಮತ್ತು ಜಿಲ್ಲಾ ಉಸ್ತುವಾರಿ ಮಂತ್ರಿ ಈಶ್ವರ ಬಿ. ಖಂಡ್ರೆ ರೈತರಿಗೆ ಮಹಾ ಮೋಸ ಮಾಡಿದ್ದಾರೆ. ರೈತರು ನಮಗ್ಯಾಕೆ ಪರಿಹಾರ ಕಡಿಮೆ ಬಂದಿದೆ ಎಂದು ಕಂದಾಯ ನಿರೀಕ್ಷಕರಿಗೆ ಕೇಳಿದರೆ ಮೇಲಿಂದ ನಮಗೆ ಪ್ರತಿ ಹಳ್ಳಿಗಳಿಗೆ ಇಂತಿಷ್ಟೇ ಎಕರೆ ಹಾನಿಯಾಗಿದೆ ಎಂಬುದಾಗಿ ವರದಿ ಕೊಡಬೇಕೆಂದು ಮೌಖಿಕವಾಗಿ ತಿಳಿಸಿದ್ದಾರೆ. ಆದಕಾರಣ ನಾವು ಆ ತರಹ ಮಾಡಿದ್ದೇವೆ ಎಂದು ತಿಳಿಸಿರುವ ಹಲವಾರು ಘಟನೆಗಳು ಜಿಲ್ಲೆಯಲ್ಲಿ ನಡೆದಿವೆ. ಈ ಮಾತುಗಳು ರೈತರಿಗೆ ಕಂದಾಯ ನಿರೀಕ್ಷಕರೇ ಹೇಳಿಕೊಂಡಿದ್ದಾರೆ ಎಂದು ತಿಳಿಸಿದ್ದಾರೆ.

ADVERTISEMENT

ಫಸಲ್ ಬಿಮಾ ಯೋಜನೆಯಡಿ ಸದ್ಯ ಮಧ್ಯ ಋತುವಿನ ಪ್ರತಿಕೂಲ ಪರಿಸ್ಥಿತಿ ಅಡಿಯಲ್ಲಿ ಬೀದರ್‌ ಜಿಲ್ಲೆಯಲ್ಲಿ ತೊಗರಿ ಬೆಳೆ ಆಯ್ಕೆಯಾಗಿದೆ. ಜಿಲ್ಲೆಯ 78,274 ತೊಗರಿ ಬೆಳೆಗಾರರಿಗೆ ₹36.74 ಕೋಟಿ ಪರಿಹಾರ ಜಮೆಯಾಗಿದೆ. ಇದು ಫಸಲ್ ಬಿಮಾ ಯೋಜನೆಯ ನಿಯಮವಾಗಿದೆ. ಇದರಲ್ಲಿ ತಂದೆ ಮಕ್ಕಳ ಪಾತ್ರ ಏನು ಇರುವುದಿಲ್ಲ. ಮುಂದಿನ ತಿಂಗಳು ಸ್ಥಳೀಯ ವಿಪತ್ತು ಅಡಿಯಲ್ಲಿ ಉಳಿದ ಎಲ್ಲಾ ಬೆಳೆಗಳ ರೈತರಿಗೆ ಇನ್ನೂ ಹೆಚ್ಚಿನ ಪರಿಹಾರ ಜಮೆಯಾಗಲಿದೆ. ರಾಜ್ಯ ಸರ್ಕಾರ ರೈತರನ್ನು ಕೈಬಿಟ್ಟರು, ಫಸಲ್ ಬಿಮಾ ಯೋಜನೆ ರೈತರ ಜೊತೆ ನಿಲ್ಲಲಿದೆ. ಯಾರೂ ಆತಂಕ ಪಡುವ ಅಗತ್ಯವಿಲ್ಲ ಎಂದು ಹೇಳಿದ್ದಾರೆ.

‘ಎಲ್ಲದರಲ್ಲೂ ಮೋಸ’

‘ಉಸ್ತುವಾರಿ ಸಚಿವ ಈಶ್ವರ ಬಿ. ಖಂಡ್ರೆ ಅವರು ರೈತರಿಗೆ ಪರಿಹಾರ ಕೊಡಿಸುವುದರಲ್ಲಿ ಮೋಸ ಕಬ್ಬಿಗೆ ಸಿದ್ದರಾಮಯ್ಯ ಘೋಷಿಸಿದ ₹3300 ಬೆಲೆ ಕೊಡಿಸುವುದರಲ್ಲಿ ಮೋಸ ಬಿಎಸ್ಎಸ್‌ಕೆ ಪ್ರಾರಂಭಿಸುವುದರಲ್ಲಿ ಮೋಸ ಬೆಳೆಹಾನಿ ವರದಿಯಲ್ಲಿ ಮೋಸ ಡಿಸಿಸಿ ಬ್ಯಾಂಕಿನಿಂದ ಸಾಲ ನೀಡದೆ ಮೋಸ ಹೀಗೆ ಎಲ್ಲಾ ಹಂತದಲ್ಲಿಯೂ ಖಂಡ್ರೆ ರೈತರಿಗೆ ಮೋಸ ಮಾಡಿಕೊಂಡೆ ಬರುತ್ತಿದ್ದಾರೆ. ಇವರ ಪರಿವಾರಕ್ಕೆ ರೈತರನ್ನು ಕಂಡ್ರೆ ಇಷ್ಟೇಕೆ ಕೀಳರಿಮೆ ಎಂಬುದು ಅರ್ಥವಾಗುತ್ತಿಲ್ಲ ಎಂದು ಭಗವಂತ ಖೂಬಾ ಪ್ರಶ್ನಿಸಿದ್ದಾರೆ.

‘ಸುಳ್ಳು ಹೇಳಿಕೊಂಡು ತಿರುಗಾಟ’

‘ತಂದೆ ವಿಧಾನಸಭೆಯಲ್ಲಿ ಮಗ ಲೋಕಸಭೆಯಲ್ಲಿ ಕೇಂದ್ರ ಸರ್ಕಾರದ ಬಗ್ಗೆ ಸುಳ್ಳು ಹೇಳಿಕೊಂಡೆ ತಿರುಗಾಡುತ್ತಿದ್ದಾರೆ. ಮಗ ಲೋಕಸಭೆಯಲ್ಲಿ ಫಸಲ್ ಬಿಮಾ ಅಡಿ ಪರಿಹಾರ ಬರುತ್ತಿಲ್ಲ ಎಂದು ಆರೋಪ ಮಾಡುತ್ತಿದ್ದಾರೆ. ಆದರೆ ಈ ಕಡೆ ಫಸಲ್ ಬಿಮಾ ಅಡಿಯಲ್ಲಿ ಪರಿಹಾರ ಜಮೆಯಾಗಿದೆ ಎಂದು ಅವರ ಕಾರ್ಯಕರ್ತರು ಅವರ ತಂದೆ ಸೋಷಿಯಲ್ ಮೀಡಿಯಾದಲ್ಲಿ ಹಾಕಿಕೊಳ್ಳುತ್ತಿದ್ದಾರೆ. ತಂದೆ ಮಗ ಇಬ್ಬರು ವಾಸ್ತವ ಸ್ಥಿತಿ ಅರಿತುಕೊಳ್ಳದೆ ಕೇಂದ್ರದ ಮೇಲೆ ಸುಳ್ಳು ಆರೋಪ ಮಾಡುವುದೆ ಕೆಲಸ ಮಾಡಿಕೊಂಡಿದ್ದಾರೆ’ ಎಂದು ಭಗವಂತ ಖೂಬಾ ಟೀಕಿಸಿದ್ದಾರೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.