ADVERTISEMENT

ಹಿರೇಕಾಯಿ ಬೆಳೆಗೆ ರೋಗ: ಸಂಕಷ್ಟದಲ್ಲಿ ರೈತ

​ಪ್ರಜಾವಾಣಿ ವಾರ್ತೆ
Published 7 ಜುಲೈ 2022, 5:07 IST
Last Updated 7 ಜುಲೈ 2022, 5:07 IST
ಖಟಕಚಿಂಚೋಳಿ ಸಮೀಪದ ಚಳಕಾಪುರ ವಾಡಿ ಗ್ರಾಮದ ರೈತ ಅಂಬಾಜಿ ಜಾಧವ್ ಎನ್ನುವರ ಹೋಲದಲ್ಲಿ ರೋಗಕ್ಕೆ ತುತ್ತಾದ ಹಿರೇಕಾಯಿ
ಖಟಕಚಿಂಚೋಳಿ ಸಮೀಪದ ಚಳಕಾಪುರ ವಾಡಿ ಗ್ರಾಮದ ರೈತ ಅಂಬಾಜಿ ಜಾಧವ್ ಎನ್ನುವರ ಹೋಲದಲ್ಲಿ ರೋಗಕ್ಕೆ ತುತ್ತಾದ ಹಿರೇಕಾಯಿ   

ಖಟಕಚಿಂಚೋಳಿ: ಸಮೀಪದ ಚಳಕಾಪುರ ವಾಡಿ ಗ್ರಾಮದ ರೈತ ಅಂಬಾಜಿ ಜಾಧವ್ ಅವರ ಒಂದು ಎಕರೆ ಪ್ರದೇಶದಲ್ಲಿ ಬೆಳೆದ ಹಿರೇಕಾಯಿ ರೋಗಕ್ಕೆ ತುತ್ತಾಗಿರುವುದರಿಂದ ಸಂಪೂರ್ಣವಾಗಿ ಬೆಳೆ ಹಾಳಾಗಿದೆ. ಇದರಿಂದ ರೈತ ಆರ್ಥಿಕ ಸಂಕಷ್ಟಕ್ಕೆ ಸಿಲುಕಿದ್ದಾನೆ.

ಕೇವಲ ಮೂರು ತಿಂಗಳ ಬೆಳೆಯಾದ ಹಿರೇಕಾಯಿ ಬದಲಾದ ವಾತಾವರಣದಿಂದ ರೋಗ ತಗುಲಿ ಹಾಳಾಗಿದೆ. ಹಿರೇಕಾಯಿ ಬೆಳೆದು ಕೈ ತುಂಬಾ ಹಣ ಪಡೆಯಬಹುದು ಎಂಬ ರೈತನ ಆಸೆಯ ಮೇಲೆ ತಣ್ಣೀರು ಎರಚಿದಂತಾಗಿದೆ.

ಹಿರೇಕಾಯಿ ಬೆಳೆ ಬೆಳೆಯಲು ಹೊಲ, ಹದ ಮಾಡುವುದು ಸೇರಿದಂತೆ ಔಷಧ ಸಿಂಪಡಣೆ ಸೇರಿದಂತೆ ಇನ್ನಿತರ ಖರ್ಚು ವೆಚ್ಚ ಸೇರಿ ಸುಮಾರು ಐವತ್ತು ಸಾವಿರ ಖರ್ಚಾಗಿದೆ.ಆದರೆ ನಯಾ ಪೈಸೆಯು ಕಾಣಲಿಲ್ಲ ಎಂದು ರೈತಅಂಬಾಜಿ ವ್ಯಕ್ತಪಡಿಸುತ್ತಾರೆ.

ADVERTISEMENT

ಹಿರೇಕಾಯಿ ಬಳ್ಳಿ ಹಚ್ಚಹಸುರಾಗಿ ಎಲ್ಲೆಡೆ ಹರಡಿದೆ. ಆದರೆ ಕಾಯಿಗೆ ರೋಗ ಕಾಣಿಸಿಕೊಂಡಿರುವುದರಿಂದ ದಪ್ಪ ಆಗಲೇ ಇಲ್ಲ.ಅಲ್ಲಿಯೇ ಕಪ್ಪು ಬಣ್ಣಕ್ಕೆ ತಿರುಗುತ್ತಿವೆ. ಬೆಳೆಗೆ ಸತತ ಆರು ಬಾರಿ ದುಬಾರಿ ಬೆಲೆಯ ಔಷಧಿ ಸಿಂಪರಣೆ ಮಾಡಿದ್ದೇನೆ. ಆದರೂ ಕೂಡ ರೋಗ ನಿಯಂತ್ರಣಕ್ಕೆ ಬರಲಿಲ್ಲ ಎಂದು ಅಸಮಾಧಾನ ವ್ಯಕ್ತಪಡಿಸಿದ್ದಾರೆ.

ಕಳೆದ ವರ್ಷ ಕೊರೊನಾ, ಲಾಕ್ ಡೌನ್ ದಿಂದಾಗಿ ನಷ್ಟವಾಗಿದೆ. ಇದೀಗ ಮಳೆ ಹೆಚ್ಚಾಗಿ ಅಥವಾ ರೋಗ ಕಾಣಿಸಿಕೊಂಡು ನಷ್ಟವಾಗಿದೆ. ಹೀಗೆ ರೈತರು ಒಂದಿಲ್ಲೊಂದು ಸಂಕಟಕ್ಕೆ ಸಿಲುಕುತ್ತಾರೆ. ಈ ರೈತನಿಗೆ ತೋಟಗಾರಿಕೆ ಇಲಾಖೆ ವತಿಯಿಂದ ಪರಿಹಾರ ಒದಗಿಸಿಕೋಡಬೇಕು ಎಂದು ರೈತ ಮುಖಂಡ ನಿರ್ಮಲಕಾಂತ ಪಾಟೀಲ ಒತ್ತಾಯಿಸಿದರು.

ರೈತರು ತೋಟಗಾರಿಕೆ ಬೆಳೆಗಳನ್ನು ಬೆಳೆಯುವಾಗ ತೋಟಗಾರಿಕೆ ತಜ್ಞರಿಗೆ ಭೇಟಿ ಮಾಡಿ ಸಲಹೆ ಪಡೆಯಬೇಕು. ಯಾವ ಸಮಯಕ್ಕೆ ಬಿತ್ತನೆ ಮಾಡಬೇಕು,ಯಾವ ಔಷಧಿ ಸಿಂಪರಣೆ ಮಾಡಬೇಕು ಎಂಬುವುದನ್ನು ತಿಳಿಸುತ್ತಾರೆ. ಮುಂದಿನ ದಿನಗಳಲ್ಲಿ ರೈತರು ಕಡ್ಡಾಯವಾಗಿ ತಜ್ಞರ ಸಲಹೆ ಪಡೆಯಬೇಕು ಎಂದು ತೋಟಗಾರಿಕೆ ವಿಜ್ಞಾನಿ ಡಾ.ಮಲ್ಲಿಕಾರ್ಜುನ ನಿಂಗದಳ್ಳಿ ಸಲಹೆ ನೀಡಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.