ADVERTISEMENT

ಶತಕ ಬಾರಿಸಿದ ಹಿರೇಕಾಯಿ

₹100ರಿಂದ ₹40ಕ್ಕೆ ಇಳಿದ ಟೊಮೆಟೊ

​ಪ್ರಜಾವಾಣಿ ವಾರ್ತೆ
Published 6 ಡಿಸೆಂಬರ್ 2021, 5:02 IST
Last Updated 6 ಡಿಸೆಂಬರ್ 2021, 5:02 IST
ಮಾರಾಟಕ್ಕೆ ಇಡಲಾದ ತರಕಾರಿ
ಮಾರಾಟಕ್ಕೆ ಇಡಲಾದ ತರಕಾರಿ   

ಬೀದರ್: ಕಳೆದ ಕೆಲ ವಾರಗಳಿಂದ ಪ್ರತಿ ಕೆ.ಜಿ.ಗೆ ₹100ರಷ್ಟಿದ್ದ ಟೊಮೆಟೊ ಬೆಲೆ ಈಗ ₹40ಗೆ ಇಳಿದಿದೆ. ₹60ಕ್ಕೆ ಖರೀದಿ ಆಗುತ್ತಿದ್ದ ಹಿರೇಕಾಯಿ ₹100ಗೆ ತಲುಪಿ ಟೊಮೆಟೊ ಸ್ಥಾನವನ್ನು ಆಕ್ರಮಿಸಿಕೊಂಡಿದೆ.

ರಾಜ್ಯದ ವಿವಿಧ ಜಿಲ್ಲೆಗಳಲ್ಲಿ ಸುರಿದಿದ್ದ ಮಳೆಯು ಜಿಲ್ಲೆಯ ತರಕಾರಿ ಮಾರುಕಟ್ಟೆಯ ಮೇಲೆ ಪರಿಣಾಮ ಬೀರಿತ್ತು. ಹೀಗಾಗಿ, ಕಳೆದ ಮೂರು ವಾರಗಳಿಂದ ಟೊಮೆಟೊ ಬೆಲೆ ಕೆ.ಜಿಗೆ ₹100 ಇತ್ತು. ಟೊಮೆಟೊ ಬೆಳೆಗಾರರಿಗೆ ಕೈತುಂಬ ಹಣ ಸಿಕ್ಕಿತ್ತು. ಈಗ ಮಾರುಕಟ್ಟೆಗೆ ಹೆಚ್ಚಿನ ಪ್ರಮಾಣದಲ್ಲಿ ತರಕಾರಿ ಆವಕವಾಗುತ್ತಿದೆ. ಇದರಿಂದಾಗಿ ಬಹುತೇಕ ತರಕಾರಿಗಳ ಬೆಲೆಗಳು ಸ್ಥಿರವಾಗಿವೆ. ಕೆಲವು ತರಕಾರಿ ದರಗಳು ಹೆಚ್ಚಳವಾಗಿದ್ದರೆ ಮತ್ತೆ ಕೆಲವು ಇಳಿಕೆ ಕಂಡಿವೆ.

ಹಿರೇಕಾಯಿ ಆವಾಕ ತಗ್ಗಿದ್ದರಿಂದ ಒಂದೇ ವಾರದಲ್ಲಿ ಬೆಲೆ ದುಪ್ಪಟ್ಟಾಗಿದೆ. ಕಳೆದ ವಾರ ಪ್ರತಿ ಕೆಜಿಗೆ ₹50 ಇದ್ದ ಹಿರೇಕಾಯಿ ಬೆಲೆ ₹100ಗೆ ಏರಿದೆ. ಗಜ್ಜರಿ, ಹೂಕೋಸು, ತೊಂಡೆಕಾಯಿ ಬೆಲೆಯೂ ಏರಿಕೆಯಾಗಿ ಪ್ರತಿ ಕೆಜಿಗೆ ₹ 80ರಂತೆ ಮಾರಾಟವಾಗುತ್ತಿವೆ.

ADVERTISEMENT

ಪ್ರತಿ ಕೆಜಿಯ ಮೇಲೆ ₹ 10 ಇಳಿಕೆಯಾಗಿ ಆಲೂಗಡ್ಡೆ ₹30, ಬೆಳ್ಳುಳ್ಳಿ ₹50, ಬೀನ್ಸ್ ₹70 ಮತ್ತು ಬೀಟ್ ರೂಟ್ ₹50ಗೆ ಖರೀದಿ ಆಗುತ್ತಿದೆ. ಒಂದು ಕೆಜಿ ಟೊಮೆಟೊ ಬೆಲೆಯಲ್ಲಿ ₹60 ಕಡಿತವಾಗಿ ₹40ಗೆ ಮಾರಾಟ ಆಗುತ್ತಿದೆ. ಇದರಿಂದ ಗ್ರಾಹಕ ಮೇಲಿನ ಬೆಲೆಯ ಹೊರೆ ಸ್ವಲ್ಪ ಮಟ್ಟಿಗೆ ಇಳಿಕೆಯಾಗಿದೆ.

ಪ್ರತಿ ಕೆಜಿ ಈರುಳ್ಳಿ ₹40, ಮೆಣಸಿನಕಾಯಿ ₹40, ಎಲೆಕೋಸು ₹30, ಬೆಂಡೆಕಾಯಿ ₹80, ನುಗ್ಗೆಕಾಯಿ 80, ಡೊಣ ಮೆಣಸಿನಕಾಯಿ ₹40, ಚವಳೆಕಾಯಿ ₹80 ಮತ್ತು ಬದನೆಕಾಯಿ ₹50ಯಲ್ಲಿ ಕಳೆದ ವಾರದ ದರದಲ್ಲಿ ಮಾರಾಟ ಆಗುತ್ತಿದೆ. ಸೊಪ್ಪು ಪದಾರ್ಥ ಗಳ ಪೈಕಿ ಕರಿಬೇವು ₹10 ಇಳಿಕೆಯಾಗಿ ₹30ಗೆ ಖರೀದಿ ಆಗುತ್ತಿದೆ. ಪಾಲಕ್ ₹60 ಮತ್ತು ಕೊಂತಂಬರಿ ₹30 ಇದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.