ADVERTISEMENT

ಕಲಾ ಸಂಭ್ರಮೋತ್ಸವ 27ರಂದು, 90 ಕಲಾವಿದರಿಂದ ಶಾಸ್ತ್ರೀಯ, ಜಾನಪದ ನೃತ್ಯ ಪ್ರದರ್ಶನ

​ಪ್ರಜಾವಾಣಿ ವಾರ್ತೆ
Published 24 ಜನವರಿ 2019, 12:22 IST
Last Updated 24 ಜನವರಿ 2019, 12:22 IST
ರಮೇಶ ಕೊಳಾರ
ರಮೇಶ ಕೊಳಾರ   

ಬೀದರ್‌: ನಾಟ್ಯಶ್ರೀ ನೃತ್ಯಾಲಯ ಹಾಗೂ ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಸಹಯೋಗದಲ್ಲಿ ಕಲಾ ಸಂಭ್ರಮೋತ್ಸವ ಹಾಗೂ ನಾಟ್ಯಶ್ರೀ ಪ್ರಶಸ್ತಿ ಪ್ರದಾನ ಸಮಾರಂಭ ಜ.27ರ ಬೆಳಿಗ್ಗೆ 10.30ಕ್ಕೆ ನಗರದ ರಂಗಮಂದಿರದಲ್ಲಿ ನಡೆಯಲಿದೆ.

‘ಕಲಾ ಸಂಭ್ರಮೋತ್ಸವದಲ್ಲಿ 90 ಕಲಾವಿದರು ಭರತನಾಟ್ಯ, ಜಾನಪದ ನೃತ್ಯ, ದೀಪ ನೃತ್ಯ, ವಚನ ನೃತ್ಯ ಹಾಗೂ ನೃತ್ಯ ರೂಪಕ ಪ್ರದರ್ಶಿಸುವರು. ಉತ್ಸವದ ಪ್ರಯುಕ್ತ ಸಂಗೀತ ಹಾಗೂ ಉಪನ್ಯಾಸ ನಡೆಯಲಿದೆ’ ಎಂದು ನಾಟ್ಯಶ್ರೀ ನೃತ್ಯಾಲಯದ ನಿರ್ದೇಶಕಿ ರಾಣಿ ಸತ್ಯಮೂರ್ತಿ ಗುರುವಾರ ಮಾಧ್ಯಮ ಗೋಷ್ಠಿಯಲ್ಲಿ ತಿಳಿಸಿದರು.

‘ಮಧ್ಯಾಹ್ನ 12.30ಕ್ಕೆ ಪ್ರಶಸ್ತಿ ಪ್ರದಾನ ಸಮಾರಂಭವನ್ನು ಜಿಲ್ಲಾ ಉಸ್ತುವಾರಿ ಸಚಿವ ಬಂಡೆಪ್ಪ ಕಾಶೆಂಪೂರ ಉದ್ಘಾಟಿಸುವರು. ರಾಂಪೂರೆ ಕಾಲೊನಿಯ ಬ್ರಹ್ಮಕುಮಾರಿ ಕೇಂದ್ರದ ಬಿ.ಕೆ ಸುನಂದಾ ಸಾನ್ನಿಧ್ಯ ವಹಿಸುವರು. ಹಾಸ್ಯ ಸಾಹಿತಿ ವೈ.ವಿ ಗುಂಡುರಾವ್ ಹಾಗೂ ಜಿಲ್ಲಾ ಕನ್ನಡ ಸಾಹಿತ್ಯ ಪರಿಷತ್‌ನ ಮಾಜಿ ಅಧ್ಯಕ್ಷ ಪ್ರೊ.ಸಿದ್ರಾಮಪ್ಪ ಮಾಸಿಮಾಡೆ ಮುಖ್ಯ ಅತಿಥಿಗಳಾಗಿ ಪಾಲ್ಗೊಳ್ಳುವರು’ ಎಂದು ಹೇಳಿದರು.

ADVERTISEMENT

‘ಕರ್ನಾಟಕ ಜಾನಪದ ಅಕಾಡೆಮಿ ಸದಸ್ಯ ವಿಜಯಕುಮಾರ ಸೋನಾರೆ, ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಸಹಾಯಕ ನಿರ್ದೇಶಕ ರಾಜಶೇಖರ ವಟಗೆ, ಮಂಗಳೂರಿನ ಭರತನಾಟ್ಯ ಗುರು ವಿದ್ವಾನ್ ಕೆ.ಚಂದ್ರಶೇಖರ ನಾವಡ ಹಾಗೂ ನಾಟ್ಯಶ್ರೀ ನೃತ್ಯಾಲಯದ ಪಾಲಕರ ಪ್ರತಿನಿಧಿ ಸತೀಶ ಪಾಟೀಲ ಗೌರವ ಅತಿಥಿಗಳಾಗಿ ಪಾಲ್ಗೊಳ್ಳುವರು’ ಎಂದು ತಿಳಿಸಿದರು.

ಇದಕ್ಕೂ ಮೊದಲು ಬೆಳಿಗ್ಗೆ 10.30ಕ್ಕೆ ನಾಟ್ಯಶ್ರೀ ನೃತ್ಯಾಲಯ ಕಲಾವಿದರು ‘ಶಾಸ್ತ್ರೀಯ ನಾಟ್ಯ ವೈಭವ’ ಪ್ರದರ್ಶಿಸುವರು. ಮಧ್ಯಾಹ್ನ 2ಕ್ಕೆ ‘ಸಂಗೀತ ಲಹರಿ’ ಕಾರ್ಯಕ್ರಮ ನಡೆಯಲಿದೆ. ಕಲಾವಿದರಾದ ಶಂಭುಲಿಂಗ ವಾಲ್ದೊಡ್ಡಿ, ರೇಣುಕಾ ಎಸ್.ಜಿ, ಮಹೇಶ್ವರಿ ಪಾಂಚಾಳ ಹಾಗೂ ಸಂಗಡಿಗರು ಜಾನಪದ ಗೀತೆಗಳನ್ನು ಹಾಡಲಿದ್ದಾರೆ. ಭಾನುಪ್ರಿಯಾ ಅರಳಿ, ಶೈಲಜಾ ದಿವಾಕರ, ಮಹೇಶಕುಮಾರ, ಪ್ರವೀಣಕುಮಾರ ಸಂಗೀತ ಕಾರ್ಯಕ್ರಮ ಪ್ರಸ್ತುತಪಡಿಸುವರು.

ಮಧ್ಯಾಹ್ನ 3.30ಕ್ಕೆ ‘ಭಾರತೀಯ ಸಂಸ್ಕೃತಿಯಲ್ಲಿ ಭರತನಾಟ್ಯ ಪಾತ್ರ’ ಕುರಿತು ಚಂದ್ರಶೇಖರ ನಾವಡ ಉಪನ್ಯಾಸ ನೀಡುವರು. ವಾರ್ತಾ ಮತ್ತು ಸಾರ್ವಜನಿಕ ಸಂಪರ್ಕ ಇಲಾಖೆ ಪ್ರಭಾರ ಸಹಾಯಕ ನಿರ್ದೇಶಕ ಗವಿಸಿದ್ದಪ್ಪ ಹೊಸಮನಿ, ದಕ್ಷಿಣ ಕರಾವಳಿ ಕನ್ನಡ ಸಂಘದ ಅಧ್ಯಕ್ಷೆ ವೀಣಾ ಜಿ.ಶೆಣೈ ಮತ್ತು ಸಂಗೀತ ಕಲಾವಿದೆ ರೇಖಾ ಅಪ್ಪಾರಾವ್ ಸೌದಿ ಉಪಸ್ಥಿತರಿರುವರು.

ಸಂಜೆ 4.15ಕ್ಕೆ ನಡೆಯುವ ‘ಜಾನಪದ ಸಂಭ್ರಮ’ ಕಾರ್ಯಕ್ರಮದಲ್ಲಿ 90 ವಿದ್ಯಾರ್ಥಿಗಳು ಕಲೆಯ ಪ್ರದರ್ಶನ ನೀಡುವರು. ಸದಸ್ಯರಾದ ಶೈಲಜಾ ದಿವಾಕರ್, ಕೆ.ಸತ್ಯಮೂರ್ತಿ, ರಾಘವೇಂದ್ರ ಅಡಿಗ, ರವಿಚಂದ್ರ ಮೂರ್ತಿ ಪತ್ರಿಕಾಗೋಷ್ಠಿಯಲ್ಲಿ ಇದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.