ADVERTISEMENT

ನೃತ್ಯಕ್ಕಿದೆ ಮನಸ್ಸು ಅರಳಿಸುವ ಶಕ್ತಿ

ಉಪನ್ಯಾಸ, ಸಂಗೀತ ನೃತ್ಯೋತ್ಸವ: ಅಕ್ಷರ ದಾಸೋಹ ಸಹಾಯಕ ನಿರ್ದೇಶಕಿ ಗೀತಾ ಗಡ್ಡಿ ಹೇಳಿಕೆ

​ಪ್ರಜಾವಾಣಿ ವಾರ್ತೆ
Published 25 ಜನವರಿ 2023, 6:26 IST
Last Updated 25 ಜನವರಿ 2023, 6:26 IST
ಬೀದರ್‌ನಲ್ಲಿ ನಡೆದ ಉಪನ್ಯಾಸ, ನೃತ್ಯ ಸಂಗೀತೋತ್ಸವ ಹಾಗೂ ಆಶು ಭಾಷಣ ಸ್ಪರ್ಧೆಯನ್ನು ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಸಹಾಯಕ ನಿರ್ದೇಶಕ ಡಾ. ಗೌತಮ ಅರಳಿ ಉದ್ಘಾಟಿಸಿದರು
ಬೀದರ್‌ನಲ್ಲಿ ನಡೆದ ಉಪನ್ಯಾಸ, ನೃತ್ಯ ಸಂಗೀತೋತ್ಸವ ಹಾಗೂ ಆಶು ಭಾಷಣ ಸ್ಪರ್ಧೆಯನ್ನು ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಸಹಾಯಕ ನಿರ್ದೇಶಕ ಡಾ. ಗೌತಮ ಅರಳಿ ಉದ್ಘಾಟಿಸಿದರು   

ಬೀದರ್: ‘ಮನಸ್ಸನ್ನು ಅರಳಿಸುವ ಶಕ್ತಿ ನೃತ್ಯಕ್ಕೆ ಇದೆ’ ಎಂದು ತಾಲ್ಲೂಕು ಪಂಚಾಯಿತಿಯ ಅಕ್ಷರ ದಾಸೋಹ ಸಹಾಯಕ ನಿರ್ದೇಶಕಿ ಗೀತಾ ಗಡ್ಡಿ ಅಭಿಪ್ರಾಯಪಟ್ಟರು.

ನಾಟ್ಯಶ್ರೀ ನೃತ್ಯಾಲಯ ಹಾಗೂ ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಸಹಯೋಗದಲ್ಲಿ ಇಲ್ಲಿಯ ಕಿತ್ತೂರು ರಾಣಿ ಚನ್ನಮ್ಮ ವೃತ್ತದಲ್ಲಿ ಇರುವ ಮಹಾಲಕ್ಷ್ಮಿ ಸಭಾಂಗಣದಲ್ಲಿ ಆಯೋಜಿಸಿದ್ದ ಉಪನ್ಯಾಸ, ಸಂಗೀತ ನೃತ್ಯೋತ್ಸವ ಹಾಗೂ ಆಶು ಭಾಷಣ ಸ್ಪರ್ಧೆಯ ಉದ್ಘಾಟನಾ ಸಮಾರಂಭದಲ್ಲಿ ಅವರು ಉಪನ್ಯಾಸ ನೀಡಿದರು.

‘ನವರಸ ಹೊಂದಿರುವ ನಾಟ್ಯ ಮಕ್ಕಳ ಆಂಗಿಕ ಕೌಶಲ ಹಾಗೂ ಬೌದ್ಧಿಕ ವೃದ್ಧಿಗೂ ನೆರವಾಗುತ್ತದೆ’ ಎಂದು ತಿಳಿಸಿದರು.

ADVERTISEMENT

‘ನಾಟ್ಯ ಪುರಾತನ ಕಾಲದಿಂದ ಬಂದಿದೆ. ರಾಜರ ಆಳ್ವಿಕೆಯಲ್ಲೂ ಇತ್ತು. ರಂಭೆ, ಊರ್ವಶಿ, ಮೇನಕೆ ಶ್ರೇಷ್ಠ ನರ್ತಕಿಯರಾಗಿದ್ದರು’ ಎಂದರು.

ಕಾರ್ಯಕ್ರಮ ಉದ್ಘಾಟಿಸಿದ ಕನ್ನಡ ಮತ್ತು ಸಂಸ್ಕೃತಿ ಇಲಾಖೆಯ ಸಹಾಯಕ ನಿರ್ದೇಶಕ ಗೌತಮ
ಅರಳಿ, ‘ನಾಟ್ಯಶ್ರಿ ನೃತ್ಯಾಲಯ ಕೇವಲ ನಾಟ್ಯಕ್ಕೆ ಸೀಮಿತವಾಗಿಲ್ಲ. ಸಾಹಿತ್ತಿಕ, ಸಾಂಸ್ಕೃತಿಕ ಚಟುವಟಿಕೆಗಳಲ್ಲಿ ತೊಡಗಿಸಿಕೊಂಡಿದೆ. ಉಪನ್ಯಾಸವನ್ನೂ ಏರ್ಪಡಿಸುತ್ತಿದೆ. ಪ್ರತಿಭೆಗಳಿಗೆವೇದಿಕೆ ಕಲ್ಪಿಸುತ್ತಿದೆ’ ಎಂದು ಹೇಳಿದರು.

‘ನೃತ್ಯ, ಸಂಗೀತ ಹಾಗೂ ಸಾಹಿತ್ಯ ಒಂದಕ್ಕೊಂದು ಪೂರಕವಾಗಿವೆ. ಸಾಹಿತ್ಯ ಹಾಗೂ ಸಂಗೀತ ನೃತ್ಯಕ್ಕೆ ಹೆಚ್ಚು ಕಳೆ ತಂದುಕೊಡುತ್ತವೆ’ ಎಂದು ಅಧ್ಯಕ್ಷತೆ ವಹಿಸಿದ್ದ ಹಿರಿಯ ಸಾಹಿತಿ ಭಾರತಿ ವಸ್ತ್ರದ್ ನುಡಿದರು.

‘ನಾಟ್ಯಶ್ರೀ ನೃತ್ಯಾಲಯ ವೈವಿಧ್ಯಮಯ ಕಾರ್ಯಕ್ರಮಗಳನ್ನು ಹಮ್ಮಿಕೊಳ್ಳುತ್ತಿರುವುದು ಉತ್ತಮ ಬೆಳವಣಿಗೆಯಾಗಿದೆ. ಆಶು ಭಾಷಣ ಮಕ್ಕಳ ಪ್ರತಿಭೆ ಪ್ರದರ್ಶನಕ್ಕೆ ಉತ್ತಮ ವೇದಿಕೆಯಾಗಿದೆ’ ಎಂದು ತಿಳಿಸಿದರು.

ರಾಷ್ಟ್ರೀಯ ಜನಪದ ಬುಡಕಟ್ಟು ಕಲಾ ಪರಿಷತ್ ಕಾರ್ಯದರ್ಶಿ ಡಾ. ರಾಜಕುಮಾರ ಹೆಬ್ಬಾಳೆ, ನಾಟ್ಯಶ್ರೀ ನೃತ್ಯಾಲಯದ ನಿರ್ದೇಶಕ ಕೆ. ಸತ್ಯಮೂರ್ತಿ ಮಾತನಾಡಿದರು.

ನಾಟ್ಯಶ್ರೀ ನೃತ್ಯಾಲಯದ ಮಕ್ಕಳ 1 ರಿಂದ 6 ನೇ ತರಗತಿ ವಿಭಾಗದ ಆಶು ಭಾಷಣ ಸ್ಪರ್ಧೆಯಲ್ಲಿ ಯುಕ್ತಿ ಅರಳಿ ಪ್ರಥಮ ಮತ್ತು ರೋಶಿನಿ ದ್ವಿತೀಯ ಹಾಗೂ 7 ರಿಂದ 10ನೇ ತರಗತಿ ವಿಭಾಗದಲ್ಲಿ ಮೈತ್ರಿ ಪ್ರಥಮ ಮತ್ತು ಕೀರ್ತಿ ದ್ವಿತೀಯ ಸ್ಥಾನ ಪಡೆದರು. ಎರಡೂ ವಿಭಾಗಗಳಲ್ಲಿ ಪ್ರಥಮ ಮತ್ತು ದ್ವಿತೀಯ ಸ್ಥಾನ ಗಳಿಸಿದವರಿಗೆ ಕ್ರಮವಾಗಿ ತಲಾ ₹ 1,000 ಹಾಗೂ ₹ 500 ನಗದು ಬಹುಮಾನ ವಿತರಿಸಲಾಯಿತು.

ದಕ್ಷಿಣ ಕರಾವಳಿ ಕನ್ನಡ ಸಂಘದ ಅಧ್ಯಕ್ಷ ಪಿ.ಎನ್. ದಿವಾಕರ್, ಸಂಗೀತ ಕಲಾವಿದೆ ಶೈಲಾ ದಿವಾಕರ್ ಹಾಗೂ ಸವಿಗಾನ ಮ್ಯುಸಿಕ್ ಅಕಾಡೆಮಿಯ ಅಧ್ಯಕ್ಷೆ ಭಾನುಪ್ರಿಯ ಅರಳಿ ಅವರನ್ನು ಶಾಲು ಹೊದಿಸಿ ಸನ್ಮಾನಿಸಲಾಯಿತು.

ಕಲಾವಿದೆ ಸುಧಾರಾಣಿ ಹಾಗೂ ತಂಡದ ಭರತನಾಟ್ಯ, ಅಮೃತಾ ಶೆಟ್ಟಿ ಶಾಸ್ತ್ರೀಯ ಗಾಯನ, ಮಹೇಶಕುಮಾರ, ಪ್ರಿಯಾಂಕಾ ಮತ್ತು ತಂಡದ ಜಾನಪದ ಗಾಯನ, ಅನ್ನಪೂರ್ಣ ಹಾಗೂ ತಂಡದ ಜಾನಪದ ನೃತ್ಯ, ತ್ರೀಶಾ ಮತ್ತು ತಂಡದ ಕೋಲಾಟ ಸಭಿಕರ ಮನಸೂರೆಗೊಂಡವು. ಪ್ರೇಕ್ಷಕರು ಕರತಾಡನದ ಮೂಲಕ ಕಲಾವಿದರನ್ನು ಹುರಿದುಂಬಿಸಿದರು.

ನಾಟ್ಯಶ್ರೀ ನೃತ್ಯಾಲಯದ ಅಧ್ಯಕ್ಷೆ ರಾಣಿ ಸತ್ಯಮೂರ್ತಿ ನೇತೃತ್ವ ವಹಿಸಿದ್ದರು. ಕಲಾವಿದ ಶಂಭುಲಿಂಗ ವಾಲ್ದೊಡ್ಡಿ, ಪ್ರಾಧ್ಯಾಪಕ ಶಿವಕುಮಾರ ಉಪ್ಪೆ, ಪ್ರಮುಖರಾದ ರಾಮಕೃಷ್ಣ ಸಾಳೆ, ಭಗುಸಿಂಗ್ ಜಾಧವ್, ಬಸಯ್ಯ ಸ್ವಾಮಿ, ಕೆ. ಗುರುಮೂರ್ತಿ, ಸಂಗೀತಾ ಮುನೇಶ್ವರ ಲಾಖಾ, ರಮ್ಯಾ ಜೋಶಿ, ಶ್ರೀದೇವಿ, ಕವಿತಾ ರಾಜಶೇಖರ, ಗೋವಿಂದ ಪೂಜಾರಿ, ರಾಘವೇಂದ್ರ, ರವಿಚಂದ್ರ, ಅಶೋಕ ಮಾನಶೆಟ್ಟಿ, ಬಸವರಾಜ ಪಾಟೀಲ, ರಾಮಚಂದ್ರ ಗಣಾಪುರ ಇದ್ದರು.

ಬಸವರಾಜ ಮೂಲಗೆ ಹಾಗೂ ದೇವಿದಾಸ ಜೋಶಿ ನಿರೂಪಿಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.