ADVERTISEMENT

ದಸರಾ ಸಮಾಪ್ತಿ: ಸಂಭ್ರಮದ ಮೆರವಣಿಗೆ

ಬಟಗೇರಾದ ಮಹಾಲಕ್ಷ್ಮಿ ದೇವಸ್ಥಾನದಲ್ಲಿ ಸಾಂಸ್ಕೃತಿಕ ಚಟುವಟಿಕೆ, ಇತರೆ ಕಾರ್ಯಕ್ರಮ

​ಪ್ರಜಾವಾಣಿ ವಾರ್ತೆ
Published 4 ಅಕ್ಟೋಬರ್ 2025, 3:12 IST
Last Updated 4 ಅಕ್ಟೋಬರ್ 2025, 3:12 IST
ಬಸವಕಲ್ಯಾಣ ತಾಲ್ಲೂಕಿನ ಬಟಗೇರಾದ ಮಹಾಲಕ್ಷ್ಮೀ ದೇವಸ್ಥಾನದಲ್ಲಿ ಶುಕ್ರವಾರ ನಡೆದ ನಾಡಹಬ್ಬ ದಸರಾ ಸಮಾರೋಪದಲ್ಲಿ ಪ್ರತಿಭಾವಂತ ವಿದ್ಯಾರ್ಥಿಗಳಿಗೆ ಬಹುಮಾನ ವಿತರಿಸಲಾಯಿತು
ಬಸವಕಲ್ಯಾಣ ತಾಲ್ಲೂಕಿನ ಬಟಗೇರಾದ ಮಹಾಲಕ್ಷ್ಮೀ ದೇವಸ್ಥಾನದಲ್ಲಿ ಶುಕ್ರವಾರ ನಡೆದ ನಾಡಹಬ್ಬ ದಸರಾ ಸಮಾರೋಪದಲ್ಲಿ ಪ್ರತಿಭಾವಂತ ವಿದ್ಯಾರ್ಥಿಗಳಿಗೆ ಬಹುಮಾನ ವಿತರಿಸಲಾಯಿತು   

ಬಸವಕಲ್ಯಾಣ: ತಾಲ್ಲೂಕಿನ ಬಟಗೇರಾದ ಮಹಾಲಕ್ಷ್ಮೀ ದೇವಸ್ಥಾನದಲ್ಲಿ ಶುಕ್ರವಾರ ನಾಡಹಬ್ಬ ದಸರಾ ಹಬ್ಬವು ಭಕ್ತಿ ಶ್ರದ್ಧೆಯೊಂದಿಗೆ ಸಮಾಪ್ತಿಗೊಂಡಿತು. ಇಡೀ ದಿನ ಮೆರವಣಿಗೆ ಮತ್ತಿತರೆ ಚಟುವಟಿಕೆಗಳು ಜರುಗಿದವು.

ನೂರಕ್ಕೂ ಅಧಿಕ ಮೆಟ್ಟಿಲುಗಳಿರುವ ಗುಡ್ಡದ ಮೇಲಿನ ದೇವಸ್ಥಾನದಿಂದ ದೇವಿಯ ಬೆಳ್ಳಿಯ ಉತ್ಸವ ಮೂರ್ತಿಯನ್ನು ಅಲಂಕೃತ ಪಲ್ಲಕ್ಕಿಯಲ್ಲಿಟ್ಟು ಊರೊಳಗೆ ತಂದು ಮೆರವಣಿಗೆ ನಡೆಸಲಾಯಿತು. ಊರಿನ ಪ್ರಮುಖ ಬೀದಿಗಳಲ್ಲಿ ಪಲ್ಲಕ್ಕಿ ಸಂಚರಿಸಿತು. ಮೆರವಣಿಗೆ ಮನೆ ಎದುರು ಬಂದಾಗ ಪ್ರತಿ ಕುಟುಂಬದವರೂ ಪಲ್ಲಕ್ಕಿಗೆ ನೀರು ಸುರಿದು, ತೆಂಗು, ಕರ್ಪೂರ ಅರ್ಪಿಸಿ, ಕಾಣಿಕೆ ನೀಡಿ ಹರಕೆ ತೀರಿಸಿ ದರ್ಶನ ಪಡೆದರು.

ಛತ್ರಿ–ಚಾಮರ, ಧ್ವಜ ಪತಾಕೆಗಳನ್ನು ಹಿಡಿಯಲಾಗಿತ್ತು. ಡೊಳ್ಳು ಕುಣಿತ, ಹಲಿಗೆ ವಾದನ, ಬ್ಯಾಂಡ್ ಬಾಜಾ ಮತ್ತಿತರೆ ವಾದ್ಯ ಮೇಳದವರು, ಭೂತೇರ ಕುಣಿತ, ಭಜನಾ ತಂಡ, ಕೋಲಾಟ, ಲೇಜಿಂ ಕುಣಿತ, ಮಹಿಳಾ ಆರಾಧಿಗಳ ಕುಣಿತದ ಜಾನಪದ ಕಲಾತಂಡಗಳು ಪಾಲ್ಗೊಂಡಿದ್ದವು. ಎತ್ತರದ ಬೊಂಬೆಗಳು ಸಹ ಜನರನ್ನು ಆಕರ್ಷಿಸಿದವು. ಮೆರವಣಿಗೆ ಹನುಮಾನ ದೇವಸ್ಥಾನದ ಆವರಣ ತಲುಪಿದಾಗ ಸಭೆಯಲ್ಲಿ ರೂಪಾಂತರಗೊಂಡಿತು. ವಾದ್ಯ ಮೇಳಗಳ ಪ್ರದರ್ಶನ ಹಾಗೂ ಇತರೆ ಚಟುವಟಿಕೆಗಳು ನಡೆದವು.

ADVERTISEMENT

ಹಬ್ಬದ ಅಂಗವಾಗಿ ದೇವಸ್ಥಾನದಲ್ಲಿ 10 ದಿನಗಳವರೆಗೆ ದೇವಿ ಪುರಾಣ, ಪ್ರವಚನ, ಭಜನೆ ಹಮ್ಮಿಕೊಳ್ಳಲಾಗಿತ್ತು. ಪ್ರತಿದಿನ ಒಬ್ಬೊಬ್ಬ ಭಕ್ತರಿಂದ ದಾಸೋಹ ವ್ಯವಸ್ಥೆ ಮಾಡಲಾಗಿತ್ತು. ವಿಜಯದಶಮಿಯಂದು ಬನ್ನಿ ಪೂಜೆಯೂ ಸಂಭ್ರಮದಿಂದ ನೆರವೆರಿತು. ವಿವಿಧ ಗ್ರಾಮಗಳ ಭಕ್ತರು ಪಾಲ್ಗೊಂಡಿದ್ದರು.

ವಿದ್ಯಾರ್ಥಿಗಳಿಗೆ ಬಹುಮಾನ

ರಕ್ತದಾನ ಮೆರವಣಿಗೆ ಹನುಮಾನ ದೇವಸ್ಥಾನದ ಆವರಣ ತಲುಪಿದಾಗ ಸಭೆಯಲ್ಲಿ ರೂಪಾಂತರಗೊಂಡಿತು. ಈ ಸಭೆಯಲ್ಲಿ 1997-98ನೇ ಸಾಲಿನ ಎಸ್ಎಸ್ಎಲ್‌ಸಿ ಸಹಪಾಠಿಗಳ ತಂಡದಿಂದ ಪ್ರಸಕ್ತ ಸಾಲಿನಲ್ಲಿ ಅತಿ ಹೆಚ್ಚು ಅಂಕ ಪಡೆದ ಬಟಗೇರಾ ಸರ್ಕಾರಿ ಪ್ರೌಢಶಾಲೆ ವಿದ್ಯಾರ್ಥಿಗಳಿಗೆ ಬಹುಮಾನ ವಿತರಿಸಿ ಸನ್ಮಾನಿಸಲಾಯಿತು. ಜನ್ಮೇಜಯ ಭರತ ರಾಮತೀರ್ಥ(ಶೇ 93.92) ಅವರಿಗೆ ₹11000 ನಗದು ಪ್ರಥಮ ಬಹುಮಾನ ಮತ್ತು ಭಾಗ್ಯಶ್ರೀ ಹಣಮಂತರಾಯ ಗಿಲಗಿಲಿ (ಶೇ 93.76) ₹ 5000 ನಗದು ದ್ವಿತೀಯ ಬಹುಮಾನ ನೀಡಲಾಯಿತು. ತಂಡದ ಸದಸ್ಯರು ಅಧಿಕಾರಿಗಳು ದೇವಸ್ಥಾನ ಸಮಿತಿಯವರು ಗಣ್ಯರು ಉಪಸ್ಥಿತರಿದ್ದರು. ಅಲ್ಲದೆ ನವಮಿಯ ದಿನದಂದು ಗ್ರಾಮದ ಯುವಕರ ತಂಡದಿಂದ ದೇವಸ್ಥಾನದ ಆವರಣದಲ್ಲಿ ಇಡೀ ದಿನ ರಕ್ತದಾನ ಶಿಬಿರ ಹಮ್ಮಿಕೊಳ್ಳಲಾಗಿತ್ತು. 50 ಜನರು ರಕ್ತದಾನ ಮಾಡಿದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.