ADVERTISEMENT

ಬಸವಕಲ್ಯಾಣ | ದಸರಾ ಧರ್ಮ ಸಮ್ಮೇಳನ ಉದ್ಘಾಟನೆ: ಅ.2 ರವರೆಗೆ ಇಷ್ಟಲಿಂಗ ಮಹಾಪೂಜೆ

ಮಂಟಪ. ವೇದಿಕೆ ನಿರ್ಮಾಣ: ಅ.2 ರವರೆಗೆ ಪ್ರತಿದಿನ ಬೆಳಿಗ್ಗೆ ಇಷ್ಟಲಿಂಗ ಮಹಾಪೂಜೆ

​ಪ್ರಜಾವಾಣಿ ವಾರ್ತೆ
Published 22 ಸೆಪ್ಟೆಂಬರ್ 2025, 4:47 IST
Last Updated 22 ಸೆಪ್ಟೆಂಬರ್ 2025, 4:47 IST
ಬಸವಕಲ್ಯಾಣದಲ್ಲಿ ನಡೆಯುವ ದಸರಾ ಧರ್ಮ ಸಮ್ಮೇಳನದ ಅಂಗವಾಗಿ ಭಾನುವಾರ ನಗರಕ್ಕೆ ಆಗಮಿಸಿದ ರಂಭಾಪುರಿ ವೀರಸೋಮೇಶ್ವರ ಶಿವಾಚಾರ್ಯರನ್ನು ಕಾರ್ಯಕ್ರಮ ಸ್ವಾಗತ ಸಮಿತಿ ಕಾರ್ಯಾಧ್ಯಕ್ಷ ಶಾಸಕ ಶರಣು ಸಲಗರ ಸ್ವಾಗತಿಸಿದರು
ಬಸವಕಲ್ಯಾಣದಲ್ಲಿ ನಡೆಯುವ ದಸರಾ ಧರ್ಮ ಸಮ್ಮೇಳನದ ಅಂಗವಾಗಿ ಭಾನುವಾರ ನಗರಕ್ಕೆ ಆಗಮಿಸಿದ ರಂಭಾಪುರಿ ವೀರಸೋಮೇಶ್ವರ ಶಿವಾಚಾರ್ಯರನ್ನು ಕಾರ್ಯಕ್ರಮ ಸ್ವಾಗತ ಸಮಿತಿ ಕಾರ್ಯಾಧ್ಯಕ್ಷ ಶಾಸಕ ಶರಣು ಸಲಗರ ಸ್ವಾಗತಿಸಿದರು   

ಬಸವಕಲ್ಯಾಣ: ನಗರದ ಅಕ್ಕ ಮಹಾದೇವಿ ಕಾಲೇಜು ಆವರಣದಲ್ಲಿ ಅಕ್ಟೋಬರ್ 2 ರವರೆಗೆ 34ನೇ ದಸರಾ ಧರ್ಮ ಸಮ್ಮೇಳನ ನಡೆಯಲಿದ್ದು ಇಂದು (ಸೆ22) ರಂದು ಸಂಜೆ ಉದ್ಘಾಟನಾ ಕಾರ್ಯಕ್ರಮ ನಡೆಯಲಿದೆ.

ಕಾರ್ಯಕ್ರಮಕ್ಕೆ ಆಗಮಿಸಿರುವ ಬಾಳೆಹೊನ್ನೂರು ರಂಭಾಪುರಿ ವೀರಸೋಮೇಶ್ವರ ಶಿವಾಚಾರ್ಯರು ಭಾನುವಾರ ನಗರ ಪ್ರವೇಶಿಸಿದ್ದರಿಂದ ಸಾರೋಟದಲ್ಲಿ ಭವ್ಯ ಮೆರವಣಿಗೆ ನಡೆಸಿ ಅವರನ್ನು ವೇದಿಕೆಗೆ ಕರೆತರಲಾಯಿತು.

ಸಸ್ತಾಪುರ ಬಂಗ್ಲಾ ಮಹಾದ್ವಾರದಲ್ಲಿ ಪುಷ್ಪಮಾಲೆ ಹಾಕಿ ಸ್ವಾಗತ ಕೋರಲಾಯಿತು. ಬಳಿಕ ತ್ರಿಪುರಾಂತ ಮಡಿವಾಳ ವೃತ್ತದಿಂದ ಮುಖ್ಯ ರಸ್ತೆಯ ಮೂಲಕ ಮೆರವಣಿಗೆ ನಡೆಸಲಾಯಿತು. ಡೊಳ್ಳು ಮತ್ತಿತರೆ ವಾದ್ಯ ಮೇಳದವರು, ಪುರವಂತರು, ಭಜನಾ ತಂಡದವರು ಪಾಲ್ಗೊಂಡಿದ್ದರು. ಮಹಿಳೆಯರು ಕುಂಭ ಕಲಶ ಹೊತ್ತಿದ್ದರು.

ತಡೋಳಾ ರಾಜೇಶ್ವರ ಶಿವಾಚಾರ್ಯರು, ಹಾರಕೂಡ ಚನ್ನವೀರ ಶಿವಾಚಾರ್ಯರು, ತ್ರಿಪುರಾಂತ ಅಭಿನವ ಘನಲಿಂಗ ರುದ್ರಮುನಿ ಶಿವಾಚಾರ್ಯರು, ಶಾಸಕ ಶರಣು ಸಲಗರ, ಮುಖಂಡರಾದ ಸುನಿಲ ಪಾಟೀಲ, ಸುರೇಶ ಸ್ವಾಮಿ, ದಯಾನಂದ ಶೀಲವಂತ, ಸೂರ್ಯಕಾಂತ ಶೀಲವಂತ, ಬಸವಂತಪ್ಪ ಲವಾರೆ, ವೀರಣ್ಣ ಶೀಲವಂತ, ಡಾ.ಬಸವರಾಜ ಸ್ವಾಮಿ, ರುದ್ರೇಶ್ವರ ಗೋರಟಾ, ಸೂರ್ಯಕಾಂತ ಮಠ, ಸೋಮಶೇಖರ ವಸ್ತ್ರದ್ ಮತ್ತಿತರರು ಪಾಲ್ಗೊಂಡಿದ್ದರು.

ಕಾರ್ಯಕ್ರಮದಲ್ಲಿ ಇಂದು: ಸೆಪ್ಟೆಂಬರ್ 22 ರಂದು ಬೆಳಿಗ್ಗೆ ರಂಭಾಪುರಿ ವೀರಸೋಮೇಶ್ವರ ಶಿವಾಚಾರ್ಯರ ನೇತೃತ್ವದಲ್ಲಿ ಇಷ್ಟಲಿಂಗ ಮಹಾ ಪೂಜೆ ನಡೆಯುವುದು. ಸಂಜೆ 6.30 ಗಂಟೆಗೆ ವೀರಸೋಮೇಶ್ವರ ಶಿವಾಚಾರ್ಯರ ಸಾನಿಧ್ಯದಲ್ಲಿ ಧರ್ಮ  ಸಮ್ಮೇಳನ ನಡೆಯಲಿದೆ. ಮಾಜಿ ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ ಉದ್ಘಾಟಿಸುವರು. ಹಾರಕೂಡ ಚನ್ನವೀರ ಶಿವಾಚಾರ್ಯರು, ಪ್ರಭುಸಾರಂಗ ಶಿವಾಚಾರ್ಯರು ನೇತೃತ್ವ ವಹಿಸುವರು. ಜಿಲ್ಲಾ ಉಸ್ತುವಾರಿ ಸಚಿವ ಈಶ್ವರ ಖಂಡ್ರೆಯವರು ಭಾವಚಿತ್ರ ಬಿಡುಗಡೆಗೊಳಿಸುವರು. ಶಾಸಕ ಶರಣು ಸಲಗರ ಸ್ವಾಗತ ಕೋರುವರು.

ಪೌರಾಡಳಿತ ಸಚಿವ ರಹೀಂಖಾನ್, ಮಾಜಿ ಶಾಸಕ ರಾಜಶೇಖರ ಪಾಟೀಲ, ಕರ್ನಾಟಕ ಮೀನುಗಾರಿಕೆ ಅಭಿವೃದ್ಧಿ ನಿಗಮದ ಅಧ್ಯಕ್ಷೆ ಮಾಲಾ ನಾರಾಯಣರಾವ್, ನಗರಸಭೆ ಅಧ್ಯಕ್ಷ ಸಗೀರುದ್ದೀನ್, ಶಾಸಕ ಪ್ರಭು ಚವ್ಹಾಣ, ಶೈಲೇಂದ್ರ ಬೆಲ್ದಾಳೆ, ವಿಧಾನಪರಿಷತ್ ಸದಸ್ಯ ಎಂ.ಜಿ.ಮುಳೆ, ಮುಖಂಡರದ ರವಿ ಗಾಯಕವಾಡ, ಬಸವರಾಜ ಕೋರಕೆ ಮನೋಹರ ಮೈಸೆ, ಅರ್ಜುನ ಕನಕ ಉಪಸ್ಥಿತರಿರುವರು. ಜಯಶ್ರೀ ಮಲ್ಲಿಕಾರ್ಜುನ ಹೊಸಮನಿ ವಿಶೇಷ ಉಪನ್ಯಾಸ ನೀಡುವರು. ಹಲವಾರು ಜನರಿಗೆ ಗುರುರಕ್ಷೆ ನೀಡಲಾಗುತ್ತದೆ. ಆರಾಧ್ಯ ಹಿರೇಮಠ ಅವರಿಂದ ಭರತನಾಟ್ಯ ನಡೆಯಲಿದೆ. ಗುರುಲಿಂಗಯ್ಯ ಹಿತ್ತಲಶೀರೂರ ಅವರಿಂದ ಸಂಗೀತ ಪ್ರಸ್ತುತಪಡಿಸಲಾಗುತ್ತದೆ.

ಬಸವಕಲ್ಯಾಣದ ಅಕ್ಕ ಮಹಾದೇವಿ ಕಾಲೇಜು ಆವರಣದಲ್ಲಿ ನಡೆಯುವ ದಸರಾ ಧರ್ಮ ಸಮ್ಮೇಳನಕ್ಕಾಗಿ ಸಿದ್ಧಗೊಂಡಿರುವ ಮಂಟಪದ ಭವ್ಯ ಮಹಾದ್ವಾರ

ಎಲ್ಲೆಲ್ಲೂ ಸಿಂಗಾರ: ಬೃಹತ್ ಮಂಟಪ

ವೇದಿಕೆ ಮುಖ್ಯ ರಸ್ತೆಯಲ್ಲಿ ಡಾ.ಅಂಬೇಡ್ಕರ್ ವೃತ್ತ ಹಾಗೂ ಅಕ್ಕ ಮಹಾದೇವಿ ಕಾಲೇಜಿನ ಪ್ರವೇಶದ ಸ್ಥಳದಲ್ಲಿ ಮತ್ತು ಮಂಟಪದ ಪ್ರವೇಶದ ಸ್ಥಳದಲ್ಲಿ ಭವ್ಯ ಹಾಗೂ ಆಕರ್ಷಕ ಸ್ವಾಗತ ಮಹಾದ್ವಾರಗಳನ್ನು ನಿರ್ಮಿಸಲಾಗಿದೆ. ಮುಖ್ಯ ರಸ್ತೆಯಲ್ಲಿ ಅನೇಕ ಕಡೆ ಸ್ವಾಗತ ಕಮಾನುಗಳನ್ನು ಅಳವಡಿಸಲಾಗಿದೆ. ಎಲ್ಲೆಡೆ ವಿದ್ಯುತ್ ದೀಪಾಲಂಕಾರ ಮಾಡಲಾಗಿದೆ. ಕಾಲೇಜಿನ ಆವರಣದಲ್ಲಿ ಸಾವಿರಾರು ಜನರಿಗಾಗಿ ಮಂಟಪ ಮತ್ತು ವೇದಿಕೆ ನಿರ್ಮಿಸಲಾಗಿದೆ. ಪಕ್ಕದಲ್ಲಿನ ತೇರು ಮೈದಾನದಲ್ಲಿ ದಾಸೋಹದ ವ್ಯವಸ್ಥೆ ಕೈಗೊಳ್ಳಲಾಗಿದೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.