ADVERTISEMENT

ಭವಾನಿ ಮಾತೆಗೆ ವಿಶೇಷ ಪೂಜೆ, ಪಲ್ಲಕ್ಕಿ ಮೆರವಣಿಗೆ

​ಪ್ರಜಾವಾಣಿ ವಾರ್ತೆ
Published 6 ಅಕ್ಟೋಬರ್ 2022, 6:09 IST
Last Updated 6 ಅಕ್ಟೋಬರ್ 2022, 6:09 IST
ಭವಾನಿ ಬಿಜಲಗಾಂವ್ ಗ್ರಾಮದಲ್ಲಿ ಬುಧವಾರ ಭವಾನಿ ಮಾತೆ ಪಲ್ಲಕ್ಕಿ ಮೆರವಣಿಗೆ ನಡೆಯಿತು
ಭವಾನಿ ಬಿಜಲಗಾಂವ್ ಗ್ರಾಮದಲ್ಲಿ ಬುಧವಾರ ಭವಾನಿ ಮಾತೆ ಪಲ್ಲಕ್ಕಿ ಮೆರವಣಿಗೆ ನಡೆಯಿತು   

ಕಮಲನಗರ: ತಾಲ್ಲೂಕಿನ ಭವಾನಿ ಬಿಜಲಗಾಂವ ಗ್ರಾಮದ ಬುಧವಾರ ಭವಾನಿ ಮಾತೆ ಪಲ್ಲಕ್ಕಿ ಮೆರವಣಿಗೆ ಅದ್ದೂರಿಯಾಗಿ ಜರುಗಿತು.

ಬೆಳಗ್ಗೆ ಭವಾನಿ ಮಂದಿರದಲ್ಲಿ ದೇವಿಗೆ ಪೂಜೆ ಸಲ್ಲಿಸಲಾಯಿತು. ಅರ್ಚಕ ಸುಭಾಷ ಡೊಂಬಾಳೆ ಅವರು ದೇವಿ ಮೂರ್ತಿಯನ್ನು ವಿಶೇಷವಾಗಿ ಅಲಂಕರಿಸಿದ್ದರು. ಯಲ್ಲಾಲಿಂಗ ಮಠದ ಯೋಗಿ ದ್ತಾತ್ರೆಯ ಮಹಾರಾಜರು ಮರವಣಿಗೆಗೆ ಚಾಲನೆ ನೀಡಿದರು.

ಪಲ್ಲಕ್ಕಿ ಮೆರವಣಿಗೆ ಗ್ರಾಮದ ಹೊರವಲಯದ ಅಗ್ನಿಕುಂಡಕ್ಕೆ ಬಂದು ತಲುಪಿತು. ಹರಿಭಕ್ತ ಭಜನಾ ಮಂಡಳದ ಮಹಿಳೆಯರು ಭಜನೆ ಮಾಡಿದರು.

ADVERTISEMENT

ಮಲ್ಲಾರಿ ಯುವಕ ಸಂಘದ ಯುವಕರು ಡಿಜೆ ಹಾಡಿಗೆ ಕುಣಿದು ಕುಪ್ಪಳಿಸಿದರು.

ಅರ್ಚಕ ಸುಭಾಷ ಮಹಾರಾಜ, ಯಲ್ಲಾಲಿಂಗ ಮಠದ ದತ್ತಾತ್ರೆ ಮಹಾರಾಜ, ಅವಿನಾಶ ಹಕ್ಕೆ, ಪ್ರದೀಪ ಡೊಂಬಾಳೆ, ಗ್ಯಾನೋಬಾ ಡೊಂಬಾಳೆ, ಡಾ.ತಾನಾಜಿ ಡೊಂಬಾಳೆ, ವೆಂಕಟರಾವ ಗುರೂಜಿ ಇದ್ದರು.

ದೇವಿ ಮೆರವಣಿಗೆ

ಹುಲಸೂರ: ನವರಾತ್ರಿ ಅಂಗವಾಗಿ ಪಟ್ಟಣದ 7 ಕಡೆಗಳಲ್ಲಿ ಅಂಬಾಭವಾನಿ ಪ್ರತಿಮೆ ಪ್ರತಿಷ್ಠಾಪನೆ ಮಾಡಿ 9 ದಿನ ಪೂಜೆ, ಪಾರಾಯಣ ನಡೆಯಿತು.

ವಿಜಯದಶಮಿಯಂದು ಹೊರವಲಯದಲ್ಲಿನ ಮಹಾದೇವ ಮಂದಿರದವರೆಗೆ ಮಳೆಯ ಮಧ್ಯದಲ್ಲೂ ದೇವಿಯ ಮೆರವಣಿಗೆ ಜರುಗಿತು.

ಮಹಿಳೆಯರು ಕೈಯಲ್ಲಿ ಬೆಂಕಿ ದಿವಿಟಿಗೆ ಹಿಡಿದು ಕುಣಿದರು. ಅವರ ದೇಹದಲ್ಲಿ ದೇವಿಯ ಪ್ರವೇಶಿಸಿದಾಳೆ ಎಂಬ ನಂಬಿಕೆಯಿದೆ ಭಕ್ತರಲ್ಲಿ.

ಇಸಂಪಲ್ಲಿ ಭವಾನಿ ಮಂದಿರದ ಅಂಬಾಭವಾನಿ, ನುಲಿಚನ್ನಯ ನಗರದಲ್ಲಿ ರೇಣುಕಾ ದೇವಿ, ಇಂದಿರಾ ನಗರದ ಜೈ ಭವಾನಿ, ಸೂರ್ಯ ಕಾಂತ ಕರಣಪ್ಪ ಆದೇಪ್ಪ ‌ತುಳಜಾ ಭವಾನಿ, ಅಂಬಿಕಾ ದೇವಿ, ದುರ್ಗಾ ದೇವಿಯ ಪೂಜೆ ನಡೆಯಿತು.

ಬುಧವಾರ ದೇವಿಯ ಪ್ರತಿಮೆಗೆ ಮೆರವಣಿಗೆ ಮೂಲಕ ಮಹಾದೇವ ಮಂದಿರ ಆವರಣದಲ್ಲಿ ಊರಿನ ಗೌಡರು ಬನ್ನಿ ಕಡೆದು ನೆರೆದ ಭಕ್ತರಿಗೆ ಹಂಚಿದನಂತರ ಅದನ್ನು ಜನರು ತಮ್ಮ ಬಂದು, ಆಪ್ತಮಿತ್ರರರನ್ನು ಕೊಟ್ಟು ಶುಭ ಕೋರಿದರು.

ಭಜನೆಯೊಂದಿಗೆ ಪೂಜೆ

ಚಿಟಗುಪ್ಪ: ಪಟ್ಟಣ ಸೇರಿದಂತೆ ತಾಲ್ಲೂಕಿನ ಎಲ್ಲೆಡೆ ಬುಧವಾರ ಸಡಗರದಿಂದ ವಿಜಯದಶಮಿ ಆಚರಿಸಲಾಯಿತು.

ಪರಸ್ಪರ ಬನ್ನಿ ನೀಡಿ ಶುಭಾಶಯ ವಿನಿಮಯ ಮಾಡಿಕೊಂಡ ಜನರು, ದೇವಸ್ಥಾನಗಳಲ್ಲಿ ನಡೆದ ವಿಶೇಷ ಪೂಜೆ, ಪಲ್ಲಕ್ಕಿ ಉತ್ಸವಗಳಲ್ಲಿ ಭಾಗಿಯಾಗಿ ಸಂಭ್ರಮಿಸಿದರು.

ಭವಾನಿ ಮಾತೆ ದೇಗುಲದಲ್ಲಿ ಮುಂಜಾನೆ ಸಂಗೀತ ಭಜನೆಯೊಂದಿಗೆ ವಿಶೇಷ ಪೂಜೆ ನಡೆಯಿತು.

ಸಂಜೆ ದೀವಟಿಗೆ, ಸಿಡಿಮದ್ದು ಗುಂಡುಗಳೊಂದಿಗೆ ದೇಗುಲದಲ್ಲಿ ದೇವಿಯ ಪಲ್ಲಕ್ಕಿ ಮೆರವಣಿಗೆ ನಡೆಯಿತು. ವಿದ್ಯುತ್ ದೀಪಗಳಿಂದ ದೇಗುಲ ಅಲಂಕಾರಿಸಲಾಗಿತ್ತು.

ನಿರ್ಣಾ: ತಾಲ್ಲೂಕಿನ ನಿರ್ಣಾ ಭವಾನಿ ದೇಗುಲಕ್ಕೆ ಗ್ರಾಮಸ್ಥರು ಮೆರವಣಿಗೆ ಮೂಲಕ ತೆರಳಿ ಶಮಿ ವೃಕ್ಷದಿಂದ ತಂದಿರುವ ಬನ್ನಿ ಕಟ್ಟು ಮಾವಿನ ಮರದ ಮೇಲಿಟ್ಟಿದಕ್ಕೆ ಪೂಜೆ ಸಲ್ಲಿಸಿ ನಂತರ ಎಲ್ಲರೂ ಸ್ವಿಕರಿಸಿ ಒಬ್ಬರಿಗೊಬ್ಬರು ವಿನಿಮಯ ಮಾಡಿದರು.

ಚಾಂಗಲೇರಾ: ತಾಲ್ಲೂಕಿನ ಚಾಂಗಲೇರಾ ಗ್ರಾಮದಲ್ಲಿ ಸಂಜೆ ಗ್ರಾಮಸ್ಥರೆಲ್ಲರೂ ಸೇರಿ ಮೆರವಣಿಗೆ ಮೂಲಕ ಊರ ಹೊರಗಡೆಯ ಭವಾನಿ ಮಾತೆಯ ಮಂದಿರಕ್ಕೆ ಹೋಗಿ ಶಮಿ ವೃಕ್ಷಕ್ಕೆ ಪೂಜೆ ಸಲ್ಲಿಸಿ ಅದರ ಎಲೆಗಳನ್ನು ವಿನಿಮಯ ಮಾಡಿಕೊಂಡರು.

ಬನ್ನಳ್ಳಿ: ತಾಲ್ಲೂಕಿನ ಬನ್ನಳ್ಳಿ ಗ್ರಾಮಸ್ಥರು ಶಮಿ ವೃಕ್ಷಕ್ಕೆ ಪೂಜೆ ಸಲ್ಲಿಸಿ ನಂತರ ಎಲೆಗಳನ್ನು ಹಂಚಿ ಸುಭಾಶಯ ಕೋರಿದರು.

ದೇವಿ ದರ್ಶನ

ಕಮಲನಗರ: ತಾಲ್ಲೂಕಿನ ಭವಾನಿ ದಾಬಕಾ ಗ್ರಾಮದಲ್ಲಿ ಮಂಗಳವಾರ ನವರಾತ್ರಿ ನಿಮಿತ್ತ ಭಕ್ತರು ಭವಾನಿ ದೇವಿಯ ದರ್ಶನ ಪಡೆದರು.

ಬೆಳಗ್ಗೆ ಅರ್ಚಕ ಶಿವದತ್ತ ಜೋಶಿ, ರಾಧೇಶಾಮ ಅವರು ಮಾತೆಗೆ ವಿಶೇಷ ಪೂಜೆ ಸಲ್ಲಿಸಿದರು. ದೇವಿಗೆ ವಿಶೇಷ ಅಲಂಕಾರ
ಮಾಡಲಾಗಿತ್ತು.

ಮಂದಿರದ ಅಧ್ಯಕ್ಷ ರಮೇಶ ಪಾಟೀಲ, ರಣಜೀತ್‍ ದಾಬಕಾ, ಗ್ರಾ.ಪಂ.ಅಧ್ಯಕ್ಷ, ಸದಸ್ಯರು ಇದ್ದರು.

ವಿವಿಧ ಗ್ರಾಮಗಳಿಂದ ಭಕ್ತರು ಆಗಮಿಸಿದರು.

ರಂಗೋಲಿ ಸ್ಪರ್ಧೆ

ಖಟಕಚಿಂಚೋಳಿ: ಪಟ್ಟಣ ಸೇರಿದಂತೆ ಸುತ್ತಲಿನ ಗ್ರಾಮಗಳಲ್ಲಿ ಬುಧವಾರ ವಿಜಯದಶಮಿಯನ್ನು ಸಂಭ್ರಮದಿಂದ ಆಚರಿಸಲಾಯಿತು.

ಬುಧವಾರ ವಿವಿಧ ದೇವಾಲಯಗಳಲ್ಲಿ ದುರ್ಗಾದೇವಿ, ತುಳಜಾ ಭವಾನಿ, ಮಹಾಲಕ್ಷ್ಮಿ, ಚಾಮುಂಡೇಶ್ವರಿ ದೇವಿಗೆ ಭಕ್ತರು ಪೂಜೆ ಸಲ್ಲಿಸಿದರು.

ಆಯುಧ ಪೂಜೆ ಅಂಗವಾಗಿ ಮಂಗಳವಾರ ತಮ್ಮ ಕೆಲಸದ ಸಾಮಗ್ರಿ, ವಾಹನ ಮತ್ತು ಆಯುಧಗಳನ್ನು ಸ್ವಚ್ಛಗೊಳಿಸಿ ಮನೆ, ಅಂಗಡಿ ಮುಂಗಟ್ಟುಗಳಲ್ಲಿ, ಕೆಲಸ ಮಾಡುವ ಕಚೇರಿಗಳಲ್ಲಿ ಪೂಜೆ ಮಾಡಿದರು.

ಖಟಕಚಿಂಚೋಳಿಯಲ್ಲಿ ಆಯುಧ ಪೂಜೆಯ ದಿನ ರಂಗೋಲಿ ಸ್ಪರ್ಧೆ, ನೃತ್ಯ ಸೇರಿದಂತೆ ಇನ್ನಿತರ ಸಾಂಸ್ಕೃತಿಕ ಕಾರ್ಯಕ್ರಮ ಜರುಗಿದವು. ಅಲ್ಲದೇ ಶಾಸಕ ರಾಜಶೇಖರ ಪಾಟೀಲ, ಮಾಜಿ ಶಾಸಕ ಪ್ರಕಾಶ ಖಂಡ್ರೆ, ಮುಖಂಡ ಡಿ.ಕೆ. ಸಿದ್ರಾಮ್ ದೇವಿಯ ದರ್ಶನ ಪಡೆದರು.

ಮಕ್ಕಳು, ಯುವಕರು, ಮಹಿಳೆಯರು ಹೊಸ ಬಟ್ಟೆ ತೊಟ್ಟು ಸಂಭ್ರಮಿಸಿದರು.

ಸಂಜೆ ದೇವಿಯ ಭವ್ಯ ಮೆರವಣಿಗೆ ನಡೆಯಿತು. ಪರಸ್ಪರ ಬನ್ನಿ ವಿನಿಮಯ ಮಾಡಿಕೊಂಡು ಹಬ್ಬದ ಶುಭಾಶಯ ಕೋರಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.