ಬಸವಕಲ್ಯಾಣ (ಬೀದರ್ ಜಿಲ್ಲೆ): ಸೋಮವಾರದಿಂದ (ಸೆ.22) ಅಕ್ಟೋಬರ್ 2ರ ವರೆಗೆ ನಗರದಲ್ಲಿ ನಡೆಯಲಿರುವ 34ನೇ ದಸರಾ ಧರ್ಮ ಸಮ್ಮೇಳನಕ್ಕಾಗಿ ಭಾನುವಾರ ಆಗಮಿಸಿರುವ ಬಾಳೆಹೊನ್ನೂರು ರಂಭಾಪುರಿ ಪೀಠದ ವೀರಸೋಮೇಶ್ವರ ಶಿವಾಚಾರ್ಯ ಅವರನ್ನು ಸಾರೋಟಿನಲ್ಲಿ ಮೆರವಣಿಗೆ ಮೂಲಕ ಭವ್ಯ ಸ್ವಾಗತ ಕೋರಲಾಯಿತು.
ರಾಷ್ಟ್ರೀಯ ಹೆದ್ದಾರಿಯಲ್ಲಿ ಅವರನ್ನು ಸ್ವಾಗತಿಸಿ ಮುಖ್ಯ ರಸ್ತೆಯ ಮೂಲಕ ಅಕ್ಕ ಮಹಾದೇವಿ ಕಾಲೇಜು ಆವರಣದಲ್ಲಿನ ಮಂಟಪಕ್ಕೆ ಕರೆತರಲಾಯಿತು. ವಾದ್ಯ ಮೇಳದವರು ಪಾಲ್ಗೊಂಡಿದ್ದರು. ಮಹಿಳೆಯರು ಕುಂಭ ಕಲಶ ಹೊತ್ತಿದ್ದರು. ಯುವಕರು ಹರ್ಷದಿಂದ ಕುಣಿದರು.
ಶಾಸಕ ಶರಣು ಸಲಗರ, ತಡೋಳಾ ರಾಜೇಶ್ವರ ಶಿವಾಚಾರ್ಯರು, ಹಾರಕೂಡ ಚನ್ನವೀರ ಶಿವಾಚಾರ್ಯರು ಪಾಲ್ಗೊಂಡಿದ್ದರು. ಬಳಿಕ ನಡೆದ ಸಮಾರಂಭದಲ್ಲಿ ರಂಭಾಪುರಿ ಶಿವಚಾರ್ಯರು ಮಾತನಾಡಿ, ದಸರಾ ಭಾವೈಕ್ಯ ಬೆಸೆಯುವ ಹಬ್ಬವಾಗಿದೆ ಎಂದರು.
ಸೆ. 22ರಂದು ಬೆಳಿಗ್ಗೆ ರಂಭಾಪುರಿ ವೀರಸೋಮೇಶ್ವರ ಶಿವಾಚಾರ್ಯರ ನೇತೃತ್ವದಲ್ಲಿ ಇಷ್ಟಲಿಂಗ ಪೂಜೆ ನಡೆಯಲಿದೆ. ಸಂಜೆ 6.30ಕ್ಕೆ ವೀರಸೋಮೇಶ್ವರ ಶಿವಾಚಾರ್ಯರ ಸಾನ್ನಿಧ್ಯದಲ್ಲಿ ಧರ್ಮ ಸಮ್ಮೇಳನ ಜರುಗಲಿದೆ. ಮಾಜಿ ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ ಉದ್ಘಾಟಿಸುವರು. ಹಾರಕೂಡ ಚನ್ನವೀರ ಶಿವಾಚಾರ್ಯರು, ಪ್ರಭುಸಾರಂಗ ಶಿವಾಚಾರ್ಯರು ನೇತೃತ್ವ ವಹಿಸುವರು. ಜಿಲ್ಲಾ ಉಸ್ತುವಾರಿ ಸಚಿವ ಈಶ್ವರ ಬಿ. ಖಂಡ್ರೆಯವರು ಭಾವಚಿತ್ರ ಬಿಡುಗಡೆಗೊಳಿಸುವರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.