ADVERTISEMENT

ಬೀದರ್ | ಕೊಳವೆಬಾವಿಯ ನೀರು ಕುಡಿದ ಡಿಸಿ, ಸಿಇಒ, ಎಸಿ

ಕೊಳವೆಬಾವಿಯ ಪಂಪ್ ಹೊಡೆದ ರಾಮಚಂದ್ರನ್‌

​ಪ್ರಜಾವಾಣಿ ವಾರ್ತೆ
Published 27 ಜುಲೈ 2020, 15:51 IST
Last Updated 27 ಜುಲೈ 2020, 15:51 IST
ಔರಾದ್ ತಾಲ್ಲೂಕಿನ ವಡಗಾಂವ ಸಮೀಪ ಬತ್ತಿ ಹೋದ ಕೊಳವೆಬಾವಿಯಲ್ಲಿ ನೀರು ಬಂದಾಗ ಜಿಲ್ಲಾಧಿಕಾರಿ ರಾಮಚಂದ್ರನ್ ಪಂಪ್ ಮಾಡಿ ಸಂತಸ ಹಂಚಿಕೊಂಡರು
ಔರಾದ್ ತಾಲ್ಲೂಕಿನ ವಡಗಾಂವ ಸಮೀಪ ಬತ್ತಿ ಹೋದ ಕೊಳವೆಬಾವಿಯಲ್ಲಿ ನೀರು ಬಂದಾಗ ಜಿಲ್ಲಾಧಿಕಾರಿ ರಾಮಚಂದ್ರನ್ ಪಂಪ್ ಮಾಡಿ ಸಂತಸ ಹಂಚಿಕೊಂಡರು   

ಬೀದರ್: ಉನ್ನತ ಹುದ್ದೆಗಳಲ್ಲಿರುವ ಅಧಿಕಾರಿಗಳು ಹಳ್ಳಿಗಳಿಗೆ ತೆರಳಿ ಕೆಸರಲ್ಲಿ ಹೋಗಿ ಕೊಳವೆಬಾವಿಯ ಪಂಪ್ ಹೊಡೆದು ಅದರ ನೀರು ಸೇವಿಸಿ ನೀರಿನ ಗುಣಮಟ್ಟದ ಪರಿಶೀಲಿಸಿದ್ದು ಬಹಳ ಅಪರೂಪ. ಆದರೆ ಜಿಲ್ಲಾಧಿಕಾರಿ ರಾಮಚಂದ್ರನ್ ಆರ್. ಆಕಸ್ಮಿಕವಾಗಿ ಗ್ರಾಮಕ್ಕೆ ತೆರಳಿ ಜನರ ಸಮಸ್ಯೆಗೆ ಸ್ಪಂದಿಸಿರುವುದು ವಾಟ್ಸ್ಆ್ಯಪ್‌ಗಳಲ್ಲಿ ವೈರಲ್ ಆಗಿದೆ.

ಜುಲೈ 23 ರಂದು ಔರಾದ್ ತಾಲ್ಲೂಕು ಆಸ್ಪತ್ರೆಯ ವ್ಯವಸ್ಥೆ ಪರಿಶೀಲಿಸಿ ಮರಳಿ ಬೀದರ್‌ಗೆ ಬರುತ್ತಿದ್ದಾಗ ಗ್ರಾಮದ ಹೊರಗೆ ಹೆಣ್ಣುಮಕ್ಕಳು ಕೊಳವೆಬಾವಿಗೆ ಪಂಪ್ ಮಾಡಿ ನೀರು ಒಯ್ಯುತ್ತಿದ್ದರು. ತಕ್ಷಣ ವಾಹನ ನಿಲ್ಲಿಸಿ ಜಿಲ್ಲಾಧಿಕಾರಿ ಅವರ ಸಮಸ್ಯೆ ಆಲಿಸಿದರು. ಆಗ ಮಹಿಳೆಯರು ‘ಈ ಕೊಳವೆ ಬಾವಿ ಬತ್ತಿ ಹೋಗಿತ್ತು. ಮಳೆ ಚೆನ್ನಾಗಿ ಸುರಿದಿರುವ ಕಾರಣ ಈಗ ನೀರು ಬಂದಿದೆ. ಹೀಗಾಗಿ ಇಲ್ಲಿಂದ ನೀರು ಒಯ್ಯುತ್ತಿದ್ದೇವೆ’ ಎಂದು ತಿಳಿಸಿದರು.

ಕುತೂಹಲದಿಂದ ಕಾರಿನಿಂದ ಕೆಳಗಿಳಿದ ಜಿಲ್ಲಾಧಿಕಾರಿ ಕೆಸರಿನಲ್ಲಿ ನಡೆದುಕೊಂಡು ಕೊಳವೆಬಾವಿ ವರೆಗೂ ಹೋಗಿ ಪಂಪ್ ಮಾಡಿ ನೀರಿನಿಂದ ಗ್ರಾಮಸ್ಥರೊಬ್ಬರ ಕೊಡ ತುಂಬಿದರು. ನಂತರ ಕೊಳವೆಬಾವಿಯ ನೀರನ್ನೂ ಸೇವಿಸಿ ಗುಣಮಟ್ಟ ಪರಿಶೀಲಿಸಿದರು. ಇವರೊಂದಿಗೆ ಜಿಲ್ಲಾ ಪಂಚಾಯಿತಿ ಸಿಇಒ ಗ್ಯಾನೇಂದ್ರಕುಮಾರ ಗಂಗ್ವಾರ್ ಹಾಗೂ ಬೀದರ್ ಉಪ ವಿಭಾಗಾಧಿಕಾರಿ ಅಕ್ಷಯ ಶ್ರೀಧರ್ ಅವರೂ ನೀರು ಕುಡಿದರು.

ADVERTISEMENT

ನೀರು ಹೊತ್ತು ಮನೆಗಳಿಗೆ ಒಯ್ಯುತ್ತಿದ್ದ ಗ್ರಾಮದ ಮಹಿಳೆಯರಿಂದ ನೀರಿನ ಸಮಸ್ಯೆ ಅರಿತುಕೊಂಡರು. ಅರ್ಧಗಂಟೆ ಅಲ್ಲಿಯೇ ಕಳೆದರು. ವಡಗಾಂವದಲ್ಲಿ ಕುಡಿಯುವ ನೀರಿನ ಸಮಸ್ಯೆ ಇರುವುದನ್ನು ಗಂಭೀರವಾಗಿ ಪರಿಗಣಿಸಿದ ಅಧಿಕಾರಿಗಳು ಮನೆ ಬಾಗಿಲಿಗೆ ಗಂಗೆಯನ್ನು ತಲುಪಿಸುವ ಸಂಕಲ್ಪ ಮಾಡಿ ಬೀದರ್‌ಗೆ ಮರಳಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.