ADVERTISEMENT

ಸ್ವಸಹಾಯ ಸಂಘಗಳಿಂದ ಸಬಲೀಕರಣ

ಸ್ವಸಹಾಯ ಗುಂಪುಗಳ ದಿನಾಚರಣೆಯಲ್ಲಿ ನಾಗಮಾರಪಳ್ಳಿ ಸೇವೆ ಸ್ಮರಿಸಿದ ಚವಾಣ್‌

​ಪ್ರಜಾವಾಣಿ ವಾರ್ತೆ
Published 12 ನವೆಂಬರ್ 2019, 16:30 IST
Last Updated 12 ನವೆಂಬರ್ 2019, 16:30 IST
ಸ್ವಸಹಾಯ ಗುಂಪುಗಳ ದಿನಾಚರಣೆ ಕಾರ್ಯಕ್ರಮದಲ್ಲಿ ಜಿಲ್ಲಾ ಉಸ್ತುವಾರಿ ಸಚಿವ ಪ್ರಭು ಚವಾಣ್ ಮಾತನಾಡಿದರು (ಎಡಚಿತ್ರ) ಕಾರ್ಯಕ್ರಮದಲ್ಲಿ ಪಾಲ್ಗೊಂಡಿದ್ದ ಸ್ವಸಹಾಯ ಗುಂಪುಗಳ ಸದಸ್ಯೆಯರು
ಸ್ವಸಹಾಯ ಗುಂಪುಗಳ ದಿನಾಚರಣೆ ಕಾರ್ಯಕ್ರಮದಲ್ಲಿ ಜಿಲ್ಲಾ ಉಸ್ತುವಾರಿ ಸಚಿವ ಪ್ರಭು ಚವಾಣ್ ಮಾತನಾಡಿದರು (ಎಡಚಿತ್ರ) ಕಾರ್ಯಕ್ರಮದಲ್ಲಿ ಪಾಲ್ಗೊಂಡಿದ್ದ ಸ್ವಸಹಾಯ ಗುಂಪುಗಳ ಸದಸ್ಯೆಯರು   

ಬೀದರ್: ‘ಡಿಸಿಸಿ ಬ್ಯಾಂಕ್ ಮೂಲಕ ದಿ. ಮಾಜಿ ಸಚಿವ ಗುರುಪಾದಪ್ಪ ನಾಗಮಾರಪಳ್ಳಿ ಅವರು ರಚಿಸಿದ ಸ್ವಸಹಾಯ ಗುಂಪುಗಳು ವಿವಿಧ ಸ್ವ ಉದ್ಯೋಗಗಳ ಮೂಲಕ ಮಹಿಳೆಯರು ಆರ್ಥಿಕ ಅಭಿವೃದ್ಧಿ ಹೊಂದಲು ನೆರವಾಗಿವೆ’ ಎಂದು ಜಿಲ್ಲಾ ಉಸ್ತುವಾರಿ ಸಚಿವ ಪ್ರಭು ಚವಾಣ್ ಹೇಳಿದರು.

ಮಾಜಿ ಸಚಿವ ದಿ. ಗುರುಪಾದಪ್ಪ ನಾಗಮಾರಪಳ್ಳಿ ಅವರ ಜನ್ಮದಿನದ ಪ್ರಯುಕ್ತ ನಗರದ ಡಿಸಿಸಿ ಬ್ಯಾಂಕ್‌ನಲ್ಲಿ ಸೋಮವಾರ ಆಯೋಜಿಸಿದ್ದ ಸ್ವಸಹಾಯ ಗುಂಪುಗಳ ದಿನಾಚರಣೆ ಕಾರ್ಯಕ್ರಮದಲ್ಲಿ ಅವರು ಮಾತನಾಡಿ,‘ನಾಗಮಾರಪಳ್ಳಿ ಮಹಿಳಾ ಆರ್ಥಿಕ ಸಬಲೀಕರಣಕ್ಕೆ ಶ್ರಮಿಸಿದ್ದರು. ಅವರ ಜನ್ಮದಿನವನ್ನು ಸ್ವಸಹಾಯ ಗುಂಪುಗಳ ದಿನವನ್ನಾಗಿ ಆಚರಿಸುತ್ತಿರುವುದು ಅರ್ಥಪೂರ್ಣವಾಗಿದೆ’ ಎಂದು ತಿಳಿಸಿದರು.

ಪ್ರಧಾನಮಂತ್ರಿ ಫಸಲ್ ಬಿಮಾ ಯೋಜನೆಯಡಿ ಬೆಳೆ ನೋಂದಣಿಯಲ್ಲಿ ಬೀದರ್ ರಾಷ್ಟ್ರದಲ್ಲೇ ಮೊದಲ ಸ್ಥಾನದಲ್ಲಿದೆ. ಇದರಲ್ಲಿ ಡಿಸಿಸಿ ಪಾತ್ರ ಪ್ರಮುಖವಾಗಿದೆ. ಜಿಲ್ಲೆಯನ್ನು ಪ್ರತಿ ಕ್ಷೇತ್ರದಲ್ಲೂ ನಂಬರ್ ಒನ್ ಮಾಡಬೇಕಿದೆಎಂದು ತಿಳಿಸಿದರು.

ADVERTISEMENT

‘ಜಿಲ್ಲಾಡಳಿತ ಕಚೇರಿಗಳ ಸಂಕೀರ್ಣ, ಕನ್ನಡ ಭವನ, ಎಂಜಿನಿಯರಿಂಗ್ ಕಾಲೇಜು ಕಟ್ಟಡ, ಪತ್ರಿಕಾ ಭವನ, ಬೀದರ್- ನಾಂದೇಡ್ ರಸ್ತೆ, ಬೀದರ್- ನಾಂದೇಡ್ ರೈಲು ಮಾರ್ಗ, ನಾಗರಿಕ ವಿಮಾನ ಸೇವೆ ಆರಂಭಿಸಲು ಆದ್ಯತೆ ಕೊಡಲಾಗುವುದು’ ಎಂದು ಹೇಳಿದರು.

ಕಾರ್ಯಕ್ರಮ ಉದ್ಘಾಟಿಸಿದ ಸಂಸದ ಭಗವಂತ ಖೂಬಾ ಮಾತನಾಡಿ, ‘ಸ್ವಸಹಾಯ ಗುಂಪುಗಳ ಮೂಲಕ ಇಡೀ ರಾಜ್ಯವೇ ಬೀದರ್‌ನತ್ತ ತಿರುಗಿ ನೋಡುವಂತೆ ಮಾಡಿದವರು ದಿ. ಗುರುಪಾದಪ್ಪ ನಾಗಮಾರಪಳ್ಳಿ’.‘ಡಿಸಿಸಿ ಬ್ಯಾಂಕ್ ಅಧ್ಯಕ್ಷ ಉಮಾಕಾಂತ ನಾಗಮಾರಪಳ್ಳಿ ಅವರು ತಂದೆ ಹಾಕಿಕೊಟ್ಟ ಮಾರ್ಗದಲ್ಲೇ ಸಾಗುತ್ತಿದ್ದಾರೆ’ ಎಂದು ಹೇಳಿದರು.

ಡಿಸಿಸಿ ಬ್ಯಾಂಕ್ ಅಧ್ಯಕ್ಷ ಉಮಾಕಾಂತ ನಾಗಮಾರಪಳ್ಳಿ ಮಾತನಾಡಿ, ‘ಡಿಸಿಸಿ ಬ್ಯಾಂಕ್ ಸ್ವಸಹಾಯ ಸಂಘಗಳ ಮೂಲಕ ಜಿಲ್ಲೆಯಲ್ಲಿ ತಂದಿರುವ ಬದಲಾವಣೆ ದೇಶಕ್ಕೆ ಮಾದರಿಯಾಗಿದೆ.ದೇಶದ 200ಕ್ಕೂ ಹೆಚ್ಚು ಡಿಸಿಸಿ ಬ್ಯಾಂಕ್‌ಗಳ ಆಡಳಿತ ಮಂಡಳಿ ಸದಸ್ಯರು ಹಾಗೂ ಅಧಿಕಾರಿಗಳು ಕಿರು ಹಣಕಾಸು ವ್ಯವಸ್ಥೆ ಬಗ್ಗೆ ಅರಿಯಲು ಬೀದರ್‌ ಭೇಟಿ ನೀಡಿದ್ದಾರೆ’ ಎಂದು ತಿಳಿಸಿದರು.

ಗುರುಪಾದಪ್ಪ ನಾಗಮಾರಪಳ್ಳಿ ಸೂಪರ್ ಸ್ಪೇಷಾಲಿಟಿಸಹಕಾರ ಆಸ್ಪತ್ರೆಯ ಅಧ್ಯಕ್ಷ ಸೂರ್ಯಕಾಂತ ನಾಗಮಾರಪಳ್ಳಿ ಮಾತನಾಡಿ, ಸಚಿವರು, ಸಂಸದರ ಸಹಕಾರದೊಂದಿಗೆ ಬೀದರ್ ಕ್ಷೇತ್ರದ ಅಭಿವೃದ್ಧಿಗೆ ಎಲ್ಲ ಪ್ರಯತ್ನ ನಡೆಸುತ್ತಿದ್ದೇನೆಎಂದರು.

ರಾಯಚೂರು ಜಿಲ್ಲೆಯ ಮಾನ್ವಿ ತಾಲ್ಲೂಕಿನ ಪ್ರಗತಿಪರ ರೈತ ಮಹಿಳೆ ಕವಿತಾ ಮಿಶ್ರಾ ಅವರು ಕೃಷಿಯಲ್ಲಿನ ತಮ್ಮ ಯಶೋಗಾಥೆಯನ್ನು ಎಳೆಎಳೆಯಾಗಿ ಬಿಡಿಸಿಟ್ಟರು.

ಡಿಸಿಸಿ ಬ್ಯಾಂಕ್ ಉಪಾಧ್ಯಕ್ಷ ಭೀಮರಾವ್ ಪಾಟೀಲ, ಧನರಾಜ ತಾಳಂಪಳ್ಳಿ, ಸಂತೋಷ ತಾಳಂಪಳ್ಳಿ, ಜಗದೀಶ ಖೂಬಾ, ಶಕುಂತಲಾ ಬೆಲ್ದಾಳೆ, ಡಿಸಿಸಿ ಬ್ಯಾಂಕ್ ನಿರ್ದೇಶಕರಾದ ರಾಚಪ್ಪ ಪಾಟೀಲ, ವಿಜಯಕುಮಾರ ಎಸ್. ಪಾಟೀಲ ಗಾದಗಿ, ಪರಮೇಶ್ವರ ಮುಗಟೆ, ಸಂಜಯಸಿಂಗ್ ಹಜಾರಿ, ಮಹಮ್ಮದ್ ಸಲೀಮುದ್ದಿನ್, ಸಂಗಮೇಶ ಪಾಟೀಲ, ಮುಖ್ಯ ಕಾರ್ಯನಿರ್ವಹಣಾಧಿಕಾರಿ ಮಲ್ಲಿಕಾರ್ಜುನ ಮಹಾಜನ, ಪ್ರಧಾನ ವ್ಯವಸ್ಥಾಪಕರಾದ ವಿಠ್ಠಲರೆಡ್ಡಿ ಯಡಮಲ್ಲೆ, ಚನ್ನಬಸಯ್ಯ ಸ್ವಾಮಿ, ಎನ್‍ಎಸ್‍ಎಸ್‌ಎಸ್‌ಕೆ ನಿರ್ದೇಶಕ ಶಶಿಕುಮಾರ ಪಾಟೀಲ ಸಂಗಮ ಇದ್ದರು.

ಚಾಲನೆ: ಇದಕ್ಕೂ ಮುನ್ನ ಜಿಲ್ಲಾ ಉಸ್ತುವಾರಿ ಸಚಿವ ಪ್ರಭು ಚವಾಣ್ ಅವರು ಡಿಸಿಸಿ ಬ್ಯಾಂಕ್‌ ಎಟಿಎಂ ಹಾಗೂ ಎಟಿಎಂ ವ್ಯಾನ್‌ಗೆ ಚಾಲನೆ ನೀಡಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.