ADVERTISEMENT

ಜಿಲ್ಲಾಧಿಕಾರಿ ವಿರುದ್ಧ ಹಕ್ಕುಚ್ಯುತಿ ಮಂಡಿಸಲು ನಿರ್ಧಾರ

ಚುನಾಯಿತ ಪ್ರತಿನಿಧಿಗಳಿಗೆ ಅಗೌರವ: ಅರವಿಂದಕುಮಾರ ಅರಳಿ ಆರೋ‍ಪ

​ಪ್ರಜಾವಾಣಿ ವಾರ್ತೆ
Published 17 ಸೆಪ್ಟೆಂಬರ್ 2022, 13:18 IST
Last Updated 17 ಸೆಪ್ಟೆಂಬರ್ 2022, 13:18 IST
ಬೀದರ್‌ನ ಒಳಾಂಗಣ ಕ್ರೀಡಾಂಗಣದ ಟೆನಿಸ್‌ ಕೋರ್ಟ್‌ನಲ್ಲಿ ವಾಸ್ತವ್ಯ ಮಾಡಿರುವ ಕ್ರೀಡಾ ವಸತಿ ಶಾಲೆಯ ವಿದ್ಯಾರ್ಥಿಗಳು ಊಟದ ವ್ಯವಸ್ಥೆ ಇಲ್ಲದ ಕುರಿತು ವಿಧಾನ ಪರಿಷತ್‌ ಸದಸ್ಯ ಅರವಿಂದಕುಮಾರ ಅರಳಿ ಅವರಿಗೆ ದೂರಿದರು
ಬೀದರ್‌ನ ಒಳಾಂಗಣ ಕ್ರೀಡಾಂಗಣದ ಟೆನಿಸ್‌ ಕೋರ್ಟ್‌ನಲ್ಲಿ ವಾಸ್ತವ್ಯ ಮಾಡಿರುವ ಕ್ರೀಡಾ ವಸತಿ ಶಾಲೆಯ ವಿದ್ಯಾರ್ಥಿಗಳು ಊಟದ ವ್ಯವಸ್ಥೆ ಇಲ್ಲದ ಕುರಿತು ವಿಧಾನ ಪರಿಷತ್‌ ಸದಸ್ಯ ಅರವಿಂದಕುಮಾರ ಅರಳಿ ಅವರಿಗೆ ದೂರಿದರು   

ಬೀದರ್: ‘ಕಲ್ಯಾಣ ಕರ್ನಾಟಕ ಉತ್ಸವ ದಿನಾಚರಣೆ ಕಾರ್ಯಕ್ರಮದಲ್ಲಿ ಜಿಲ್ಲಾಡಳಿತ ಶಿಷ್ಟಾಚಾರ ಉಲ್ಲಂಘನೆ ಮಾಡಿದೆ. ಚುನಾಯಿತ ಪ್ರತಿನಿಧಿಗಳಿಗೆ ಅಗೌರವ ತೋರಿ ಅವರ ಮೇಲೆ ಪರೋಕ್ಷವಾಗಿ ದೌರ್ಜನ್ಯ ನಡೆಸಿದೆ. ಹೀಗಾಗಿ ಜಿಲ್ಲಾಧಿಕಾರಿ ವಿರುದ್ಧ ಹಕ್ಕುಚ್ಯುತಿ ಮಂಡಿಸುವೆ’ ಎಂದು ವಿಧಾನ ಪರಿಷತ್‌ ಸದಸ್ಯ ಅರವಿಂದಕುಮಾರ ಅರಳಿ ತಿಳಿಸಿದರು.

‘ಸಮಾರಂಭದಲ್ಲೇ ಜಿಲ್ಲಾಧಿಕಾರಿ ಗಮನಕ್ಕೆ ತಂದರೂ ಅವರು ನೀವು ಎಲ್ಲಿಯಾದರೂ ಹೋಗಿ ದೂರು ನೀಡಿ ಎಂದು ಬಹಳ ಹಗುರವಾಗಿ ಮಾತನಾಡಿದ್ದಾರೆ. ಸಾರ್ವಜನಿಕ ಸಮಾರಂಭದಲ್ಲಿ ಅನಿವಾರ್ಯವಾಗಿ ಅವಮಾನ ಸಹಿಸಿಕೊಂಡಿದ್ದೇವೆ. ಇದಕ್ಕೆ ವಿಧಾನ ಪರಿಷತ್‌ ಸಭಾಪತಿ ಸಹ ಸಾಕ್ಷಿಯಾಗಿದ್ದಾರೆ’ ಎಂದು ನಗರದ ನೆಹರೂ ಕ್ರೀಡಾಂಗಣದಲ್ಲಿ ಶನಿವಾರ ಧ್ವಜಾರೋಹಣದ ನಂತರ ಮಾಧ್ಯಮ ಪ್ರತಿನಿಧಿಗಳ ಎದುರು ಅಸಮಾಧಾನ ಹೊರ ಹಾಕಿದರು.


‘ಸಮಾರಂಭದ ಅಧ್ಯಕ್ಷತೆ ವಹಿಸಿದ್ದ ಕಾಂಗ್ರೆಸ್‌ ಶಾಸಕ ರಹೀಂ ಖಾನ್‌ ಅವರನ್ನು ಒಂದು ಬದಿಗೆ ಕೂರಿಸಲಾಗಿತ್ತು. ನನ್ನನ್ನು ಇನ್ನೊಂದು ಬದಿಗೆ ಕೂರಿಸಲಾಗಿತ್ತು. ಅಷ್ಟೇ ಅಲ್ಲ, ಜನಪ್ರತಿನಿಧಿಗಳಿಗೆ ಹಿಂದಿನ ಸಾಲಿನಲ್ಲಿ ಕೂರಿಸಿ, ಅಧಿಕಾರಿಗಳು ಮುಂದಿನ ಸಾಲಿನಲ್ಲಿ ಕುಳಿತಿದ್ದರು. ಒಟ್ಟಾರೆ ಕಾರ್ಯಕ್ರಮದಲ್ಲಿ ಶಿಷ್ಟಾಚಾರ ಪಾಲನೆಯಾಗಿಲ್ಲ’ ಎಂದು ದೂರಿದರು.

ADVERTISEMENT


‘ದೇಶ ಸ್ವಾತಂತ್ರ್ಯದ ಅಮೃತ ಮಹೋತ್ಸವ ಆಚರಿಸಿಕೊಳ್ಳುತ್ತಿದ್ದರೂ ಬೀದರ್‌ ಜಿಲ್ಲೆಯಲ್ಲಿ ಧ್ವಜಾರೋಹಣ ಮಾಡಲು ಜನಪ್ರತಿನಿಧಿಗಳಿಲ್ಲ. ಆಗಸ್ಟ್‌ 15 ಹಾಗೂ ಸೆಪ್ಟೆಂಬರ್ 17ರಂದು ಜಿಲ್ಲಾಧಿಕಾರಿಯೇ ಧ್ವಜಾರೋಹಣ ನೆರವೇರಿಸಿದ್ದಾರೆ. ತಾಂತ್ರಿಕ ಸಮಸ್ಯೆ ಇದ್ದರೆ ಬೇರೊಬ್ಬ ಸಚಿವರಿಗೆ ಧ್ವಜಾರೋಹಣ ಮಾಡಲು ಅವಕಾಶ ಮಾಡಿಕೊಡಬೇಕು. ಆದರೆ, ಬೀದರ್ ಜಿಲ್ಲೆಯ ವಿಷಯದಲ್ಲಿ ಬಿಜೆಪಿ ಸರ್ಕಾರ ಸಂಪೂರ್ಣ ನಿರ್ಲಕ್ಷ್ಯ ವಹಿಸಿದೆ’ ಎಂದು ಆರೋಪಿಸಿದರು.


‘ಜಿಲ್ಲಾಧಿಕಾರಿ ಗೋವಿಂದ ರೆಡ್ಡಿ ಸೇರಿದಂತೆ ಕೆಲ ಹಿರಿಯ ಅಧಿಕಾರಿಗಳು ನಾರಾಯಣ ಗುರುಗಳ ಜಯಂತಿ ಆಚರಣೆ ಕಾರ್ಯಕ್ರಮದಲ್ಲಿ ಪಾಳ್ಗೊದೆ ಮಹಾಪುರುಷರಿಗೆ ಹಾಗೂ ಈಡಿಗ ಸಮುದಾಯಕ್ಕೆ ಅವಮಾನ ಮಾಡಿದ್ದಾರೆ. ಭಾಲ್ಕಿ ತಾಲ್ಲೂಕಿನ ಧನ್ನೂರ(ಎಚ್) ಗ್ರಾಮದಲ್ಲಿ ದಲಿತರಿಗೆ ಸ್ಮಶಾನ ಭೂಮಿ ಇಲ್ಲದ ಕಾರಣ ಅವರು ಮನೆಯಂಗಳ ಅಥವಾ ಹಿತ್ತಲಲ್ಲಿ ಶವ ಸಂಸ್ಕಾರ ಮಾಡುವ ಸ್ಥಿತಿ ಇದೆ. ಜಿಲ್ಲಾಧಿಕಾರಿಗೆ ಮನವಿ ಮಾಡಿದರೂ ಜಾಗ ಮಂಜೂರು ಮಾಡಲು ಸಿದ್ಧರಿಲ್ಲ’ ಎಂದು ಅಸಮಾಧಾನ ವ್ಯಕ್ತಪಡಿಸಿದರು.


‘300 ವಿದ್ಯಾರ್ಥಿಗಳು ಅಧ್ಯಯನ ಮಾಡಲು ಅವಕಾಶ ಇದ್ದರೂ ಕ್ರೀಡಾ ಶಾಲೆ ಮುಚ್ಚುವ ಹಂತಕ್ಕೆ ಬಂದಿದೆ. ಕೇವಲ 12 ವಿದ್ಯಾರ್ಥಿಗಳು ಕಲಿಯುತ್ತಿದ್ದಾರೆ. ಅವರಿಗೂ ಎರಡು ತಿಂಗಳಿಂದ ಊಟದ ವ್ಯವಸ್ಥೆ ಮಾಡಿಲ್ಲ. 9 ವರ್ಷಗಳಿಂದ ವಿದ್ಯಾರ್ಥಿಗಳು ಟೆನಿಸ್‌ ಕೋರ್ಟ್‌ನಲ್ಲಿ ಮಲಗುತ್ತಿದ್ದಾರೆ. ಕೊಠಡಿಯೊಳಗೆ ಸರಿಯಾದ ವಿದ್ಯುತ್ ದೀಪಗಳೂ ಇಲ್ಲ. ಸರ್ಕಾರ, ವಿದ್ಯಾರ್ಥಿಗಳ ಊಟಕ್ಕೂ ಹಣ ಕೊಡದ ಸ್ಥಿತಿಗೆ ತಲುಪಿದೆ. ಹೀಗಾಗಿ ಬೀದರ್‌ ಜಿಲ್ಲೆಯ ಕ್ರೀಡಾ ಪ್ರತಿಭೆಗಳು ಕಮರುತ್ತಿವೆ’ ಎಂದು ಕಳವಳ ವ್ಯಕ್ತಪಡಿಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.