ADVERTISEMENT

ಹೈನುಗಾರಿಕೆಯಲ್ಲಿ ಯಶಸ್ಸು ಕಂಡ ಪದವೀಧರ

ಗಿರಿರಾಜ ಎಸ್ ವಾಲೆ
Published 8 ಅಕ್ಟೋಬರ್ 2022, 5:39 IST
Last Updated 8 ಅಕ್ಟೋಬರ್ 2022, 5:39 IST
ಖಟಕಚಿಂಚೋಳಿ ಸಮೀಪದ ಉಚ್ಚಾ ಗ್ರಾಮದ ಬಿ.ಕಾಂ ಪದವೀಧರ ಅಮರ ಸ್ವಾಮಿ ತಾವು ಸಾಕಿದ ಎಮ್ಮೆಯೊಂದಿಗೆ
ಖಟಕಚಿಂಚೋಳಿ ಸಮೀಪದ ಉಚ್ಚಾ ಗ್ರಾಮದ ಬಿ.ಕಾಂ ಪದವೀಧರ ಅಮರ ಸ್ವಾಮಿ ತಾವು ಸಾಕಿದ ಎಮ್ಮೆಯೊಂದಿಗೆ   

ಖಟಕಚಿಂಚೋಳಿ: ಸಮೀಪದ ಉಚ್ಚಾ ಗ್ರಾಮದ ಪದವೀಧರ ಅಮರ ಸ್ವಾಮಿ ಕೃಷಿಯೊಂದಿಗೆ ಹೈನುಗಾರಿಕೆ ಮಾಡುವ ಮೂಲಕ ಯಶಸ್ಸು ಕಾಣುತ್ತಿದ್ದಾರೆ.

ಬಿ.ಕಾಂ. ಪದವಿ ಮುಗಿಯುತ್ತಲೇ ಅಮರ ಸ್ವಾಮಿ ಕೆಲಸಕ್ಕಾಗಿ ಅಲೆದಾಟ ಶುರು ಮಾಡಿದರು. ಅದೇ ಸಮಯದಲ್ಲಿ ಕೊರೊನಾ ಹರಡುವಿಕೆಯಿಂದ ಲಾಕ್‌ಡೌನ್ ಆಯಿತು. ರೈತ ಕುಟುಂಬದವನಾದ ಅಮರ ಧೃತಿಗೆಡದೆ ತಮ್ಮನ್ನು ತಾವು ಹೈನುಗಾರಿಕೆಯಲ್ಲಿ ತೊಡಗಿಸಿಕೊಂಡು ಕೈ ತುಂಬಾ ಆದಾಯ ಪಡೆಯುತ್ತಿದ್ದಾರೆ.

‘ಪ್ರಾರಂಭದಲ್ಲಿ ಒಂದು ಎಮ್ಮೆಯಿಂದ ಹೈನುಗಾರಿಕೆ ಆರಂಭಿಸಿದ್ದೇನೆ. ಈಗ ಆರು ಎಮ್ಮೆ, ಎರಡು ಕರು ಇವೆ. ಪ್ರತಿ ದಿನ 30 ರಿಂದ 35 ಲೀಟರ್ ಹಾಲು ಸಂಗ್ರಹಿಸುತ್ತೇನೆ. ಪ್ರತಿ ಲೀಟರ್ ಹಾಲು ₹60 ಕ್ಕೆ ಮಾರಾಟ ಆಗುತ್ತದೆ. ಇದರಿಂದ ಪ್ರತಿ ತಿಂಗಳಿಗೆ ಖರ್ಚು, ವೆಚ್ಚ ಹೋಗಿ ₹30ರಿಂದ ₹35 ಸಾವಿರ ಗಳಿಸುತ್ತಿದ್ದೇನೆ. ಮುಂದಿನ ದಿನಗಳಲ್ಲಿ ಇನ್ನೂ ಹೆಚ್ಚಿನ ಹಸುಗಳನ್ನು ಸಾಕಬೇಕು. ದೊಡ್ಡ ಮಟ್ಟದ ಸ್ವಂತ ಹಾಲಿನ ಡೈರಿ ಪ್ರಾರಂಭಿಸಬೇಕು ಎಂಬುವುದು ನನ್ನ ಆಸೆಯಾಗಿದೆ’ ಎನ್ನುತ್ತಾರೆ ಅಮರ. ಹಸುಗ ಳಿಗಾಗಿ ಸುಮಾರು ಅರ್ಧ ಎಕರೆ ಹುಲ್ಲು ಬೆಳೆದಿದ್ದೇನೆ. ಅವುಗಳಿಗೆ ಪ್ರತಿ ದಿನ ಹಸಿ ಮೇವು ಹಾಕುತ್ತೇನೆ. ಇದರಿಂದ ಹಾಲು ಹೆಚ್ಚಾಗಿ ಕೊಡುತ್ತವೆ. ಮಳೆ, ಗಾಳಿ ಚಳಿಗಾಗಿ ರಕ್ಷಣೆ ಪಡೆಯಲು ಒಂದು ಸುಸಜ್ಜಿತ ದನದ ಕೊಟ್ಟಿಗೆ ನಿರ್ಮಿಸಿದ್ದೇನೆ ಎಂದು ತಿಳಿಸುತ್ತಾರೆ.

ADVERTISEMENT

ಮೊದಲಿಗೆ ಎರಡು ಹಸುಗಳ ಖರೀದಿ ಹಾಗೂ ದನದ ಕೊಟ್ಟಿಗೆ ನಿರ್ಮಾಣಕ್ಕಾಗಿ ₹1.5 ಲಕ್ಷ ಖರ್ಚು ಮಾಡಿದ್ದೇನೆ. ನಂತರ ಹಾಲು ಮಾರಿ ಬಂದ ಆದಾಯದಲ್ಲಿ ಇನ್ನುಳಿದ ನಾಲ್ಕು ಎಮ್ಮೆಗಳನ್ನು ಖರೀದಿ ಸಿದ್ದೇನೆ ಎಂದು ಸಂತಸ ವ್ಯಕ್ತಪಡಿಸುತ್ತಾರೆ.

ಪ್ರಸ್ತುತ ದಿನಗಳಲ್ಲಿ ಯುವಕರು ಕೃಷಿಯಿಂದ ವಿಮುಖರಾಗಿ ಕೆಲಸ ಅರಸಿಕೊಂಡು ದೊಡ್ಡ ದೊಡ್ಡ ಪಟ್ಟಣಗಳಿಗೆ ಅಲೆದಾಡುತ್ತಿದ್ದಾರೆ. ಸೂಕ್ತವಾದ ಕೆಲಸ ಸಿಗುತ್ತಿಲ್ಲ ಎಂದು ಜೀವನದಲ್ಲಿ ಜಿಗುಪ್ಸೆ ಹೊಂದುತ್ತಿದ್ದಾರೆ. ಆದರೆ ಯುವಕ ಅಮರ ಪದವಿ ಮುಗಿಸಿದರು ಸಹ ಕೆಲಸಕ್ಕಾಗಿ ಅಲೆದಾಡದೇ ಹೈನುಗಾರಿಕೆ ಪ್ರಾರಂಭಿಸಿ ಯಶಸ್ಸು ಕಾಣುತ್ತಿದ್ದಾರೆ. ಇವರು ಎಲ್ಲ ನಿರುದ್ಯೋಗಿ ಯುವಕರಿಗೆ ಮಾದರಿಯಾಗಿದ್ದಾರೆ ಎಂದು ಗ್ರಾಮದ ಶಾಂತಯ್ಯ ‌ಸ್ವಾಮಿ ತಿಳಿಸುತ್ತಾರೆ.

ಗ್ರಾಮೀಣ ಭಾಗದ ಯುವಕರು ಉದ್ಯೋಗ ಹುಡುಕಿಕೊಂಡು ನಗರಗಳತ್ತ ಹೋಗುವ ಅಗತ್ಯವಿಲ್ಲ. ಬದಲಾಗಿ ವ್ಯವಸಾಯ ಮಾಡುತ್ತ ಹೈನುಗಾರಿಕೆ ಮಾಡಿ ಹಣ ಗಳಿಸಿ ಉತ್ತಮ ಜೀವನ ರೂಪಿಸಿಕೊಳ್ಳಬಹುದು ಎಂಬುದು ಅಮರ ಅಭಿಪ್ರಾಯವಾಗಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.