ADVERTISEMENT

ಬೀದರ್‌| ಪದವಿ ವಿದ್ಯಾರ್ಥಿಗಳ ಶೈಕ್ಷಣಿಕ ಗೊಂದಲ ಬಗೆಹರಿಸಲು ಆಗ್ರಹ

​ಪ್ರಜಾವಾಣಿ ವಾರ್ತೆ
Published 3 ಸೆಪ್ಟೆಂಬರ್ 2025, 5:22 IST
Last Updated 3 ಸೆಪ್ಟೆಂಬರ್ 2025, 5:22 IST
ಎಐಡಿಎಸ್‌ಒ ನೇತೃತ್ವದಲ್ಲಿ ಪದವಿ ಕಾಲೇಜು ವಿದ್ಯಾರ್ಥಿಗಳು ಬೀದರ್‌ನಲ್ಲಿ ಮಂಗಳವಾರ ಪ್ರತಿಭಟನೆ ನಡೆಸಿದರು
ಎಐಡಿಎಸ್‌ಒ ನೇತೃತ್ವದಲ್ಲಿ ಪದವಿ ಕಾಲೇಜು ವಿದ್ಯಾರ್ಥಿಗಳು ಬೀದರ್‌ನಲ್ಲಿ ಮಂಗಳವಾರ ಪ್ರತಿಭಟನೆ ನಡೆಸಿದರು   

ಬೀದರ್‌: ರಾಜ್ಯದ ಪದವಿ ಕಾಲೇಜು ವಿದ್ಯಾರ್ಥಿಗಳು ಎದುರಿಸುತ್ತಿರುವ ಶೈಕ್ಷಣಿಕ ಗೊಂದಲವನ್ನು ಬಗೆಹರಿಸುವಂತೆ ಆಗ್ರಹಿಸಿ ಎಐಡಿಎಸ್ಒ ನೇತೃತ್ವದಲ್ಲಿ ವಿದ್ಯಾರ್ಥಿಗಳು ನಗರದ ಡಾ.ಬಿ.ಆರ್‌. ಅಂಬೇಡ್ಕರ್‌ ವೃತ್ತದಲ್ಲಿ ಮಂಗಳವಾರ ಪ್ರತಿಭಟನೆ ನಡೆಸಿದರು.

ಬಳಿಕ ಮುಖ್ಯಮಂತ್ರಿಯವರ ಹೆಸರಿಗೆ ಬರೆದ ಮನವಿ ಪತ್ರವನ್ನು ಜಿಲ್ಲಾಧಿಕಾರಿಗೆ ಸಲ್ಲಿಸಿದರು.

ಸಂಘಟನೆಯ ಬೀದರ್‌ ಜಿಲ್ಲಾ ಸಂಚಾಲಕ ವೆಂಕಟೇಶ ದೇವದುರ್ಗ ಮಾತನಾಡಿ, ರಾಜ್ಯದಾದ್ಯಂತ ಪದವಿ ತರಗತಿಗಳು ಪ್ರಾರಂಭವಾಗಿ ತಿಂಗಳುಗಳೇ ಕಳೆದಿವೆ. ಆದರೆ,  ಇದುವರೆಗೂ ಕಾಲೇಜುಗಳಲ್ಲಿ ಅತಿಥಿ ಉಪನ್ಯಾಸಕರಿಲ್ಲದೆ ವಿದ್ಯಾರ್ಥಿಗಳು ಪರದಾಡುತ್ತಿದ್ದಾರೆ. ರಾಜ್ಯದ ಎಲ್ಲಾ ಸರ್ಕಾರಿ ಪದವಿ ಕಾಲೇಜುಗಳು ಅತಿಥಿ ಉಪನ್ಯಾಸಕರ ಮೇಲೆ ಅವಲಂಬಿತವಾಗಿವೆ. ಇದುವರೆಗೆ ನೇಮಕಾತಿ ನಡೆಯದ ಕಾರಣ ತರಗತಿಗಳು ಸರಿಯಾಗಿ ನಡೆಯುತ್ತಿಲ್ಲ ಎಂದು ದೂರಿದರು.

ADVERTISEMENT

ತರಗತಿ ನಡೆಯದೇ ವಿದ್ಯಾರ್ಥಿಗಳು ತೊಂದರೆಗೆ ಸಿಲುಕಿದ್ದಾರೆ. ಅವರ ಶೈಕ್ಷಣಿಕ ಭವಿಷ್ಯ ಅತಂತ್ರವಾಗಿದೆ. ಮುಂದಿನ ತಿಂಗಳು ಪದವಿ ವಿದ್ಯಾರ್ಥಿಗಳ ಮೊದಲ ಆಂತರಿಕ ಪರೀಕ್ಷೆಗಳು ನಡೆಯಬೇಕಿದೆ. ಪಾಠಗಳು ಇನ್ನೂ ಆರಂಭವಾಗಿಲ್ಲ. ಸರ್ಕಾರದ ಧೋರಣೆ ಸರಿಯಲ್ಲ ಎಂದು ಟೀಕಿಸಿದರು. 

ಯುಜಿಸಿಯ ಹೊಸ ನಿರ್ದೇಶನ ಹಾಗೂ ನ್ಯಾಯಾಲಯದಲ್ಲಿ ಮೊಕದ್ದಮೆ ನಡೆಯುತ್ತಿರುವುದರಿಂದ ಅತಿಥಿ ಉಪನ್ಯಾಸಕರ ನೇಮಕಾತಿ ನನೆಗುದಿಗೆ ಬಿದ್ದಿದೆ. ಶೈಕ್ಷಣಿಕ ವಿಷಯದಲ್ಲಿ ರಾಜ್ಯ ಸರ್ಕಾರವು ಕೇಂದ್ರದ ನಿರ್ಧಾರಗಳನ್ನು ಪಾಲಿಸವುದು ಕಡ್ಡಾಯವಲ್ಲ ಎಂದು ಸುಪ್ರೀಂಕೋರ್ಟ್‌ ಹೇಳಿದೆ. ಆದಕಾರಣ ರಾಜ್ಯ ಸರ್ಕಾರವು ವಿದ್ಯಾರ್ಥಿಗಳ ಶೈಕ್ಷಣಿಕ ಹಿತಾಸಕ್ತಿಗೆ ಪೂರಕವಾದ ಸ್ಪಷ್ಟ ನಿಲುವು ತಾಳಬೇಕು. ಇಂತಹ ಪರಿಸ್ಥಿತಿಯಲ್ಲಿ ರಾಜ್ಯ ಸರ್ಕಾರವು ಸೂಕ್ತವಾದ ತುರ್ತು ಕ್ರಮಗಳನ್ನು ಕೈಗೊಳ್ಳಬೇಕು ಎಂದು ಒತ್ತಾಯಿಸಿದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.