ADVERTISEMENT

ಕಾರ್ಮಿಕರಿಗೆ ಕೋವಿಡ್ ಪರಿಹಾರ ನೀಡಿ: ಸಂಘಟನೆಗಳಿಂದ ಪ್ರತಿಭಟನೆ

ವಿವಿಧ ಬೇಡಿಕೆಗಳ ಈಡೇರಿಕೆಗೆ ಆಗ್ರಹಿಸಿ ಸಂಘಟನೆಗಳಿಂದ ಪ್ರತಿಭಟನೆ

​ಪ್ರಜಾವಾಣಿ ವಾರ್ತೆ
Published 8 ಸೆಪ್ಟೆಂಬರ್ 2020, 1:56 IST
Last Updated 8 ಸೆಪ್ಟೆಂಬರ್ 2020, 1:56 IST
ಹುಮನಾಬಾದ್‌ನಲ್ಲಿ ಸಿಐಟಿಯು ಪದಾಧಿಕಾರಿಗಳು ತಹಶೀಲ್ದಾರ್ ಕಚೇರಿ ಎದರು ಪ್ರತಿಭಟನೆ ನಡೆಸಿ ಗ್ರೇಡ್– 2 ತಹಶೀಲ್ದಾರ್ ಜಯಶ್ರೀ ಅವರಿಗೆ ಮನವಿ ಸಲ್ಲಿಸಿದರು
ಹುಮನಾಬಾದ್‌ನಲ್ಲಿ ಸಿಐಟಿಯು ಪದಾಧಿಕಾರಿಗಳು ತಹಶೀಲ್ದಾರ್ ಕಚೇರಿ ಎದರು ಪ್ರತಿಭಟನೆ ನಡೆಸಿ ಗ್ರೇಡ್– 2 ತಹಶೀಲ್ದಾರ್ ಜಯಶ್ರೀ ಅವರಿಗೆ ಮನವಿ ಸಲ್ಲಿಸಿದರು   

ಹುಮನಾಬಾದ್: ರೈತ ಕಾರ್ಮಿಕರ ವಿವಿಧ ಬೇಡಿಕೆ ಈಡೇರಿಸುವಂತೆ ಆಗ್ರಹಿಸಿ ಸಿಐಟಿಯು, ಕರ್ನಾಟಕ ಪ್ರಾಂತ ರೈತ ಸಂಘ, ಕರ್ನಾಟಕ ಪ್ರಾಂತ ಕೃಷಿ ಕೂಲಿಕಾರರ ಸಂಘ, ಅಖಿಲ ಭಾರತ ಜನವಾದಿ ಮಹಿಳಾ ಸಂಘಟನೆ, ಜಂಟಿ ಕ್ರಿಯಾ ಸಮಿತಿಯಿಂದ ಶನಿವಾರ ಇಲ್ಲಿ ಪ್ರತಿಭಟನೆ ನಡೆಸಿ ಗ್ರೇಡ್– 2 ತಹಶೀಲ್ದಾರ್‌ ಜಯಶ್ರೀ ಅವರಿಗೆ ಮನವಿ ಸಲ್ಲಿಸಿದರು.

ಕಟ್ಟಡ ನಿರ್ಮಾಣ ಕಾರ್ಮಿಕರ ಸಂಘಟನೆಯ ಜಿಲ್ಲಾ ಘಟಕದ ಅಧ್ಯಕ್ಷ ಬಸವರಾಜ ಮಾಳಗೆ ಮಾತನಾಡಿ, ಕೋವಿಡ್‌ ಹಾವಳಿಯಿಂದ ಕಾರ್ಮಿಕರು ಆರ್ಥಿಕವಾಗಿ ಸಾಕಷ್ಟು ತೊಂದರೆ ಅನುಭವಿಸುತ್ತಿದ್ದಾರೆ. ಸರ್ಕಾರ ಕೂಡಲೇ ಕಾರ್ಮಿಕರಿಗೆ ಸಿಗಬೇಕಾದ ಪರಿಹಾರ ಧನವನ್ನು ಅವರ ಖಾತೆಗೆ ಜಮೆ ಮಾಡಬೇಕು ಎಂದರು.

ಸರ್ಕಾರ ಕಟ್ಟಡ ಮತ್ತು ಇತರ ನಿರ್ಮಾಣ ಕಾರ್ಮಿಕರಿಗೆ ವಾರಕ್ಕೆ ₹2 ಸಾವಿರದಂತೆ ಕನಿಷ್ಠ ಮುಂದಿನ 3 ತಿಂಗಳವರೆಗೆ ಪರಿಹಾರಧನ ನೀಡಬೇಕು ಮತ್ತು ಆದಾಯ ತೆರಿಗೆ ವ್ಯಾಪ್ತಿಯಲ್ಲಿ ಬಾರದ ಎಲ್ಲಾ ಬಡ ಕುಟುಂಬಗಳಿಗೆ ₹7,500ರಂತೆ ಮುಂದಿನ 6 ತಿಂಗಳವರೆಗೆ ಪರಿಹಾರಧನ ನೀಡಬೇಕು ಎಂದು ಆಗ್ರಹಿಸಿದರು.

ADVERTISEMENT

ಸಿಐಟಿಯು ಸಂಘಟನೆ ಜಿಲ್ಲಾ ಕಾರ್ಯದರ್ಶಿ ಪ್ರಭು ಸಂತೋಷಕರ್ ಮಾತನಾಡಿ, ರಾಷ್ಟ್ರೀಯ ಗ್ರಾಮೀಣ ಉದ್ಯೋಗ ಖಾತ್ರಿ ಯೋಜನೆಯನ್ನು ನಗರ ಪ್ರದೇಶಕ್ಕೂ ವಿಸ್ತರಣೆ ಮಾಡಿ ವರ್ಷದಲ್ಲಿ ಕನಿಷ್ಠ 200 ದಿನ ಕೂಲಿ ಒದಗಿಸಬೇಕು. ನಿರುದ್ಯೋಗ ಭತ್ಯೆ ಕೊಡಬೇಕು ಎಂದು ಒತ್ತಾಯಿಸಿದರು.

ಅಂಗನವಾಡಿ ನೌಕರರ ಸಂಘದ ತಾಲ್ಲೂಕು ಘಟಕದ ಅಧ್ಯಕ್ಷೆ ಸುಮಿತ್ರಾ ಜಮಾದಾರ ಮಾತನಾಡಿ, ಅಂಗನವಾಡಿ, ಆಶಾ, ಬಿಸಿಯೂಟ ಯೋಜನೆಗೆ ನೀಡುತ್ತಿರುವ ಅನುದಾನವನ್ನು ಹೆಚ್ಚಿಸಬೇಕು, ಬಾಕಿ ಇರುವ ವೇತನ ಕೂಡಬೇಕು ಮತ್ತು ಅಂಗನವಾಡಿಗಳಲ್ಲಿಯೇ ಪೂರ್ವ ಶಿಕ್ಷಣ ಮುಂದುವರಿಸಬೇಕು ಎಂದು ಒತ್ತಾಯಿಸಿದರು.

ಜನವಾದಿ ಸಂಘಟನೆ ಜಿಲ್ಲಾ ಕಾರ್ಯದರ್ಶಿ ರೇಷ್ಮಾ ಹಂಸರಾಜ, ಕೃಷಿ ಕೂಲಿಕಾರರ ಸಂಘದ ಜಿಲ್ಲಾ ಅಧ್ಯಕ್ಷ ಇಸಾಮೋದ್ದಿನ್ ಮೀರಾಸಾಬ, ಅಕ್ಷರ ದಾಸೋಹ ನೌಕರರ ಸಂಘದ ರೇಖಾ ಹಮೀಲಪೂರ, ಅಂಗನವಾಡಿ ನೌಕರರ ಸಂಘದ ಕಾರ್ಯದರ್ಶಿ ಉಷಾ ಗುತ್ತೆದಾರ, ಕೂಶಾಲ ಹುಣಜಿ ಇದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.