
ಭಾಲ್ಕಿ: ‘ನಡೆದಾಡುವ ದೇವರು, ತ್ರಿವಿಧ ದಾಸೋಹಿ ಶಿವಕುಮಾರ ಸ್ವಾಮೀಜಿ ಅವರು ಲಿಂಗೈಕ್ಯರಾದ ದಿನವಾದ ಜ.21ರಂದು ಸರ್ಕಾರದ ವತಿಯಿಂದ ದಾಸೋಹ ದಿನವನ್ನಾಗಿ ಆಚರಿಸಬೇಕು’ ಎಂದು ಸಿದ್ದಗಂಗಾ ಹಳೇ ವಿದ್ಯಾರ್ಥಿಗಳ ಹಾಗೂ ಹಿತೈಷಿಗಳ ಸಂಘದ ಪ್ರಮುಖರು ಒತ್ತಾಯಿಸಿದ್ದಾರೆ.
ಈ ಸಂಬಂಧ ಬೆಂಗಳೂರಿನ ವಿಧಾನ ಸೌಧದಲ್ಲಿ ಸೋಮವಾರ ಅಖಿಲ ಭಾರತ ವೀರಶೈವ ಲಿಂಗಾಯತ ಮಹಾಸಭಾದ ಮಹಾ ಪ್ರಧಾನ ಕಾರ್ಯದರ್ಶಿಯೂ ಆದ ಜಿಲ್ಲಾ ಉಸ್ತುವಾರಿ ಸಚಿವ ಈಶ್ವರ ಖಂಡ್ರೆ ಅವರಿಗೆ ಮನವಿ ಸಲ್ಲಿಸಿದರು.
ನಂತರ ಮಾತನಾಡಿದ ಪ್ರಮುಖರು,‘ಶಿವಕುಮಾರ ಸ್ವಾಮೀಜಿ ಅವರು ವಿಶ್ವದಲ್ಲಿಯೇ ಶ್ರೇಷ್ಠವಾದ ಅನ್ನ, ಜ್ಞಾನ ಹಾಗೂ ವಸತಿಯನ್ನು ಉಚಿತವಾಗಿ ನೀಡುವ ಮೂಲಕ ಲಕ್ಷಾಂತರ ಬಡ ವಿದ್ಯಾರ್ಥಿಗಳ ಬಾಳನ್ನು ಬೆಳಗಿದ್ದಾರೆ. ಈ ಮೊದಲು ಅವರ ಪುಣ್ಯಸ್ಮರಣೆಯ ದಿನವನ್ನು ದಾಸೋಹ ದಿನವನ್ನಾಗಿ ಆಚರಿಸಲಾಗಿತ್ತು. ಆದರೆ ಕಳೆದ ವರ್ಷ ಮಾತ್ರ ಆಚರಿಸಿಲ್ಲ. ಇದರಿಂದ ಲಕ್ಷಾಂತರ ಭಕ್ತಾಧಿಗಳಿಗೆ ನೋವುಂಟಾಗಿದೆ. ಪ್ರಗತಿಪರ ವಿಚಾರಗಳು ಹಾಗೂ ಬಡಮಕ್ಕಳು ಎಂದರೆ ಎಲ್ಲಿಲ್ಲದ ಕಾಳಜಿ ತೋರಿಸುವ ರಾಜ್ಯ ಸರ್ಕಾರ ಜ.21 ಅನ್ನು ದಾಸೋಹ ದಿನವನ್ನಾಗಿ ಆಚರಿಸಬೇಕು ಎಂಬುದು ಲಕ್ಷಾಂತರ ಭಕ್ತಾಧಿಗಳ ಅಪೇಕ್ಷೆಯಾಗಿದೆ’ ಎಂದು ತಿಳಿಸಿದರು.
ಸಿದ್ದಗಂಗಾ ಹಳೇ ವಿದ್ಯಾರ್ಥಿಗಳ ಹಾಗೂ ಹಿತೈಷಿಗಳ ಸಂಘದ ಪ್ರಮುಖರಾದ ಶಿವಕುಮಾರ ಪಾಟೀಲ ತೇಗಂಪೂರ, ದೇವೇಂದ್ರಪ್ಪ ಅವಂಟಿ, ಶಿವಕುಮಾರ ಎಂ.ಮಂಡ್ಯ, ದೇವೇಂದ್ರ ಕರಂಜೆ, ಮೋಹನ್ ಕುಮಾರ್ ಬಿ.ಪಂಪನಗೌಡ, ವಿಜಯಕುಮಾರ ಎಸ್. ಸೇರಿದಂತೆ ಇತರರು ಇದ್ದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.