
ಬೀದರ್: ಇತ್ತೀಚೆಗೆ ರಾಜ್ಯದಲ್ಲಿ ನಡೆದ ಬಸವ ಸಂಸ್ಕೃತಿ ಅಭಿಯಾನದ ಬಗ್ಗೆ ಹಗುರವಾಗಿ ಮಾತನಾಡಿರುವ ಕನೇರಿ ಕಾಡಸಿದ್ದೇಶ್ವರ ಸ್ವಾಮೀಜಿ ಅವರನ್ನು ಕೂಡಲೇ ಬಂಧಿಸಬೇಕು ಎಂದು ಜಾಗತಿಕ ಲಿಂಗಾಯತ ಮಹಾಸಭೆಯ ರಾಜ್ಯ ಘಟಕದ ಕಾರ್ಯದರ್ಶಿ ಕಿರಣ್ ಖಂಡ್ರೆ ಆಗ್ರಹಿಸಿದರು.
ನಗರದಲ್ಲಿ ಬುಧವಾರ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಅವರು, ಕನೇರಿ ಸ್ವಾಮೀಜಿ ವಿರುದ್ಧ ಕೂಡಲೇ ಸ್ವಯಂಪ್ರೇರಿತವಾಗಿ ಕೇಸ್ ದಾಖಲಿಸಿ, ಬಂಧಿಸಬೇಕು. ಬಸವ ಸಂಸ್ಕೃತಿ ಅಭಿಯಾನ ಮುಖ್ಯಮಂತ್ರಿಗಳ ಕೃಪಾಪೋಷಿತ ಕಾರ್ಯಕ್ರಮ, ಅವರನ್ನು ಮೆಟ್ಟಿನಿಂದ ಹೊಡೆಯಬೇಕು ಎಂದೆಲ್ಲ ಕೆಟ್ಟ ಭಾಷೆಗಳನ್ನು ಬಳಸಿರುವ ಕನೇರಿ ಸ್ವಾಮೀಜಿ ಹೇಳಿಕೆ ಸರಿಯಲ್ಲ. ನಮ್ಮದು ಸಿಎಂ ಕೃಪಾಪೋಷಿತ ಅಭಿಯಾನ ಆಗಿರಲಿಲ್ಲ. ಅದು ವಿಶ್ವಗುರು ಬಸವೇಶ್ವರರ ಕೃಪಾಪೋಷಿತ, ಲಿಂಗಾನಂದ ಸ್ವಾಮೀಜಿ ಮತ್ತು ಮಾತೆ ಮಹಾದೇವಿಯವರ ಕೃಪಾಪೋಷಿತ ಅಭಿಯಾನವಾಗಿದೆ ಎಂದು ಹೇಳಿದರು.
ಬಸವ ಭಕ್ತರು ಸ್ವಂತ ಜೇಬಿನಿಂದ ಹಣ ಖರ್ಚು ಮಾಡಿ ಅಭಿಯಾನಗಳಲ್ಲಿ ಪಾಲ್ಗೊಂಡಿದ್ದಾರೆ. ಗದುಗಿನ ಸ್ವಾಮೀಜಿ, ಭಾಲ್ಕಿ ಸ್ವಾಮೀಜಿ ಸೇರಿದಂತೆ ಹಲವಾರು ಬಸವ ಭಕ್ತರು ದೇಣಿಗೆ ನೀಡಿದ್ದಾರೆ. ಇದರಲ್ಲಿ ಯಾವುದೇ ರಾಜಕಾರಣಿಗಳ ಹಣ ನಾವು ಬಳಸಿಕೊಂಡಿಲ್ಲ. ಸರ್ಕಾರವೂ ನಮಗೆ ಸಹಾಯ ಮಾಡಿಲ್ಲ. ಕಾರ್ಯಕ್ರಮದ ಬಗ್ಗೆ ಲೆಕ್ಕ ಕೇಳುವ ನಿಮಗೆ ಯಾವ ನೈತಿಕತೆ ಇದೆ ಎಂದು ಪ್ರಶ್ನಿಸಿದರು.
ವಿದೇಶದಲ್ಲಿ ಹುಟ್ಟಿಕೊಂಡಿರುವ ಧರ್ಮಗಳಿಗೆ ನಮ್ಮ ದೇಶದಲ್ಲಿ ಮಾನ್ಯತೆ ಸಿಕ್ಕಿದೆ. ಬೌದ್ಧ, ಜೈನ, ಕ್ರೈಸ್ತ, ಇಸ್ಲಾಂ ಮತ್ತು ಸಿಖ್ ಧರ್ಮಗಳು ಸ್ವತಂತ್ರ ಧರ್ಮದ ಮಾನ್ಯತೆ ಪಡೆದುಕೊಂಡಿವೆ. ಆದರೆ, ಭಾರತದ ನೆಲದಲ್ಲಿಯೇ ಹುಟ್ಟಿಕೊಂಡ ಲಿಂಗಾಯತ ಧರ್ಮಕ್ಕೆ ಮಾನ್ಯತೆ ಬೇಡವೇ? ಕನೇರಿ ಸ್ವಾಮೀಜಿ ವಿರುದ್ಧ ರಾಜ್ಯದ ಎಲ್ಲಾ ಕಡೆಗಳಲ್ಲಿ ಠಾಣೆಗೆ ದೂರು ಸಲ್ಲಿಸಲಾಗುವುದು. ರಕ್ತ ಹರಿದರೂ ಚಿಂತೆಯಿಲ್ಲ ಧರ್ಮಕ್ಕಾಗಿ ಹಾಗೂ ದೇಶಕ್ಕಾಗಿ ನಿರಂತರವಾಗಿ ಹೋರಾಟ ಮಾಡುತ್ತೇವೆ ಎಂದು ತಿಳಿಸಿದರು.
ವಕೀಲ ಶ್ರೀಕಾಂತ ಭೊರಾಳೆ, ವಿಶ್ವಗುರು ಬಸವ ಧರ್ಮ ಕೇಂದ್ರದ ಅಧ್ಯಕ್ಷ ಓಂಪ್ರಕಾಶ ರೊಟ್ಟೆ ಹಾಜರಿದ್ದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.