ADVERTISEMENT

ದೇವಮಾನೆ ವಿರುದ್ಧ ಕ್ರಮಕ್ಕೆ ಆಗ್ರಹ

ಬಸವೇಶ್ವರ ಎಂಟರ್‍ಪ್ರೈಸೆಸ್ ವಿರುದ್ಧ ಹುಸಿ ಆರೋಪ

​ಪ್ರಜಾವಾಣಿ ವಾರ್ತೆ
Published 17 ಸೆಪ್ಟೆಂಬರ್ 2020, 15:49 IST
Last Updated 17 ಸೆಪ್ಟೆಂಬರ್ 2020, 15:49 IST
ಚಂದ್ರಶೇಖರ ಹೆಬ್ಬಾಳೆ
ಚಂದ್ರಶೇಖರ ಹೆಬ್ಬಾಳೆ   

ಬೀದರ್: ವಿವಿಧ ಸಂಘಟನೆಗಳ ಮೂಲಕ ತಮ್ಮ ಎಂಟರ್‍ಪ್ರೈಸೆಸ್ ವಿರುದ್ಧ ಹುಸಿ ಆರೋಪ ಮಾಡಿಸುತ್ತಿರುವ ಹಿಂದುಳಿದ ವರ್ಗಗಳ ಕಲ್ಯಾಣ ಇಲಾಖೆಯ ರಮೇಶ ದೇವಮಾನೆ ಅವರ ವಿರುದ್ಧ ಕ್ರಮ ಕೈಗೊಳ್ಳಬೇಕು ಎಂದು ಬಸವೇಶ್ವರ ಎಂಟರ್‍ಪ್ರೈಸೆಸ್‍ನ ಮಾಲೀಕ ಚಂದ್ರಶೇಖರ ಹೆಬ್ಬಾಳೆ ಒತ್ತಾಯಿಸಿದ್ದಾರೆ.

ಬಸವೇಶ್ವರ ಎಂಟರ್‍ಪ್ರೈಸೆಸ್ ಹಲವು ವರ್ಷಗಳಿಂದ ಹಿಂದುಳಿದ ವರ್ಗಗಳ ಕಲ್ಯಾಣ ಇಲಾಖೆ ಅಡಿಯ ವಸತಿ ನಿಲಯಗಳಿಗೆ ನಿಯಮಾನುಸಾರವೇ ಆಹಾರಧಾನ್ಯ ಹಾಗೂ ಸಾಮಗ್ರಿಗಳನ್ನು ಪೂರೈಕೆ ಮಾಡುತ್ತಿದೆ. ಇದರಲ್ಲಿ ಯಾವುದೇ ಅವ್ಯವಹಾರ ನಡೆದಿಲ್ಲ ಎಂದು ಹೇಳಿದ್ದಾರೆ.

2019-20ನೇ ಸಾಲಿಗೆ ಸರಬರಾಜು ಮಾಡಿದ ಆಹಾರ ಹಾಗೂ ಇತರ ಸಾಮಗ್ರಿಗಳ ಬಿಲ್ ಅನ್ನು ದೇವಮಾನೆ ಅವರೇ ಪಾಸ್ ಮಾಡಿದ್ದಾರೆ. ಆದರೆ, ಅಕ್ಕಿ, ಗೋಧಿ, ಅಡುಗೆ ಅನಿಲಕ್ಕೆ ಹೆಚ್ಚುವರಿ ದರ ನಮೂದಿಸಲಾಗಿದೆ ಎಂದು ಆರೋಪ ಮಾಡಿದ್ದಾರೆ. ಹಣಕ್ಕಾಗಿ ದೇವಮಾನೆ ತಮಗೆ ಪದೇ ಪದೇ ಕಿರುಕುಳ ಕೊಡುತ್ತಿದ್ದಾರೆ ಎಂದು ದೂರಿದ್ದಾರೆ.

ADVERTISEMENT

2020-21ನೇ ಸಾಲಿನ ಆಹಾರ ಸಾಮಗ್ರಿ ಪೂರೈಕೆ ಟೆಂಡರ್ ನೀಡಿದ್ದಕ್ಕೆ ಹಣ ಕೊಡುವಂತೆ ಒತ್ತಡ ಹೇರುತ್ತಿದ್ದಾರೆ. ಹಣ ಕೊಡದ ಕಾರಣ ಎಂಟರ್‍ಪ್ರೈಸೆಸ್ ಅನ್ನು ಕಪ್ಪು ಪಟ್ಟಿಗೆ ಸೇರಿಸಲು ಶಿಫಾರಸು ಮಾಡಿ, ಕೆಲ ಸಂಘ ಸಂಸ್ಥೆಗಳ ನೆರವಿನಿಂದ ಹೋರಾಟ ಮಾಡಿಸುವ ಬೆದರಿಕೆ ಒಡ್ಡುತ್ತಿದ್ದಾರೆ ಎಂದು ಆರೋಪಿಸಿದ್ದಾರೆ.

ದೇವಮಾನೆ ತಮ್ಮ ಕಚೇರಿ ವ್ಯವಸ್ಥಾಪಕ ನಿವೃತ್ತಿ ಹೊಂದಿದಾಗ ₹ 50 ಸಾವಿರ ಲಂಚ ಪಡೆದು ವಯೋನಿವೃತ್ತಿ ದಾಖಲೆಗಳಿಗೆ ಸಹಿ ಹಾಕಿದ್ದಾರೆ. ಅವರ ವರ್ತನೆಗೆ ಬೇಸತ್ತು ಸಿಬ್ಬಂದಿ ಸಿಇಒಗೆ ದೂರು ಸಲ್ಲಿಸಿದ್ದಾರೆ. ಸಿಬ್ಬಂದಿ ದೂರಿಗೆ ತಾವೇ ಕಾರಣ ಎಂದು ತಮ್ಮ ವಿರುದ್ಧ ಆರೋಪ ಮಾಡಿಸುತ್ತಿದ್ದಾರೆ ಎಂದು ಆಪಾದಿಸಿದ್ದಾರೆ.

ತಮ್ಮ ವರ್ಚಸ್ಸಿಗೆ ಧಕ್ಕೆ ಉಂಟು ಮಾಡಲು ಪ್ರಯತ್ನಿಸುತ್ತಿರುವ ಅವರ ವಿರುದ್ಧ ಕ್ರಮ ಜರುಗಿಸಬೇಕು ಎಂದು ಆಗ್ರಹಿಸಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.