ಜನವಾಡ: ಬೀದರ್ ತಾಲ್ಲೂಕಿನ ಘೋಡಂಪಳ್ಳಿ ಗ್ರಾಮದಿಂದ ಚಿಟ್ಟಾ ಗ್ರಾಮಕ್ಕೆ ಸಂಪರ್ಕ ಕಲ್ಪಿಸುವ ರಸ್ತೆ ಹಾಳಾಗಿದ್ದು, ಪ್ರಯಾಣಿಕರು ಸಂಚಾರಕ್ಕೆ ಸಂಕಷ್ಟ ಅನುಭವಿಸುವಂತಾಗಿದೆ.
‘ಚಿಟ್ಟಾ-ಘೋಡಂಪಳ್ಳಿ ಅಂತರ 4 ಕಿ.ಮೀ. ಇದೆ. ಇದರಲ್ಲಿ ಅರ್ಧದಷ್ಟು ರಸ್ತೆ ತೀವ್ರವಾಗಿ ಹದಗೆಟ್ಟಿದೆ. ರಸ್ತೆ ಮಧ್ಯೆ ಅಲ್ಲಲ್ಲಿ ತಗ್ಗುಗಳು ಬಿದ್ದಿರುವುದರಿಂದ ವಾಹನ ಸಂಚಾರ ದುಸ್ತರವಾಗಿದೆ. ಎರಡು ವರ್ಷಗಳಿಂದ ರಸ್ತೆ ಹಾಳಾಗಿದೆ. ಸಂಬಂಧಪಟ್ಟವರು ದುರಸ್ತಿ ಮಾಡದ ಕಾರಣ ವಾಹನ ಸವಾರರು ಹೈರಾಣ ಆಗುವಂತಾಗಿದೆ’ ಎನ್ನುತ್ತಾರೆ ಘೋಡಂಪಳ್ಳಿ ಗ್ರಾಮದ ಅವಿನಾಶ್ ರೆಡ್ಡಿ ಉಪ್ಪಿನ್.
ಶಿಕ್ಷಣ, ವ್ಯಾಪಾರ, ನೌಕರಿ, ಆಸ್ಪತ್ರೆ, ಕಚೇರಿ ಕೆಲಸ ಸೇರಿದಂತೆ ವಿವಿಧ ಕೆಲಸ ಕಾರ್ಯಗಳಿಗಾಗಿ ಗ್ರಾಮದ ನೂರಾರು ಜನ ನಿತ್ಯ ಜಿಲ್ಲಾ ಕೇಂದ್ರ ಬೀದರ್‌ಗೆ ಹೋಗಿ ಬರುತ್ತಾರೆ. ಆದರೆ, ಹದಗೆಟ್ಟ ರಸ್ತೆ ಸುಗಮ ಸಂಚಾರಕ್ಕೆ ತೊಡಕಾಗಿದೆ ಎಂದು ದೂರುತ್ತಾರೆ.
ಮಳೆಗಾಲದಲ್ಲಿ ತಗ್ಗು ಗುಂಡಿಗಳಲ್ಲಿ ನೀರು ನಿಂತುಕೊಳ್ಳುತ್ತದೆ. ಇದರಿಂದ ತಗ್ಗುಗಳು ಕಾಣಿಸದೆ ವಾಹನ ಸವಾರರು ಯಾತನೆ ಅನುಭವಿಸಬೇಕಾಗಿದೆ. ಈ ರಸ್ತೆಯಲ್ಲಿ ರಾತ್ರಿ ಸಂಚರಿಸುವುದು ಹೆಚ್ಚು ತ್ರಾಸದಾಯಕವಾಗಿದೆ. ಅನೇಕ ಬೈಕ್ ಸವಾರರು ತಗ್ಗುಗಳಲ್ಲಿ ಬಿದ್ದು ಗಾಯಗೊಂಡ ಉದಾಹರಣೆಗಳಿವೆ ಎಂದು ಹೇಳುತ್ತಾರೆ ಗೋಡಂಪಳ್ಳಿಯ ಮತ್ತೊಬ್ಬ ನಿವಾಸಿ ಗುರುನಾಥ ರೆಡ್ಡಿ.
ಸಂಬಂಧಪಟ್ಟವರು ಕೂಡಲೇ ರಸ್ತೆ ದುರಸ್ತಿಗೆ ಕ್ರಮ ಕೈಗೊಳ್ಳಬೇಕು ಎಂದು ಒತ್ತಾಯಿಸುತ್ತಾರೆ ಗ್ರಾಮಸ್ಥರು.
ಪ್ರಯಾಣಿಕರ ಅನುಕೂಲಕ್ಕಾಗಿ ಗುಂಡಿಗಳು ಬಿದ್ದಿರುವ ಘೋಡಂಪಳ್ಳಿ-ಚಿಟ್ಟಾ ರಸ್ತೆಯನ್ನು ಪುನರ್ ನಿರ್ಮಾಣ ಮಾಡಲು ಸಂಬಂಧಪಟ್ಟವರು ಕ್ರಮ ಕೈಗೊಳ್ಳಬೇಕುಅವಿನಾಶ್ ರೆಡ್ಡಿ ಘೋಡಂಪಳ್ಳಿ ಗ್ರಾಮಸ್ಥ
ಘೋಡಂಪಳ್ಳಿ- ಬೀದರ್ ಸಂಪರ್ಕ ರಸ್ತೆಯಲ್ಲಿ ಚಿಟ್ಟಾ ಗ್ರಾಮದ ವ್ಯಾಪ್ತಿಯಲ್ಲಿ ನಿರ್ಮಿಸಿದ ಅವೈಜ್ಞಾನಿಕ ರಸ್ತೆ ಉಬ್ಬುಗಳನ್ನು ತೆರವುಗೊಳಿಸಬೇಕುಗುರುನಾಥ ರೆಡ್ಡಿ ಘೋಡಂಪಳ್ಳಿ ಗ್ರಾಮಸ್ಥ
ಘೋಡಂಪಳ್ಳಿ-ಚಿಟ್ಟಾ ರಸ್ತೆ ಹಾಳಾಗಿರುವುದು ಗಮನಕ್ಕೆ ಬಂದಿದೆ. ಆದಷ್ಟು ಬೇಗ ಹೊಸ ರಸ್ತೆ ನಿರ್ಮಾಣಕ್ಕೆ ಕ್ರಮ ಕೈಗೊಳ್ಳಲಾಗುವುದುಭಗವಾನ್ಸಿಂಗ್ ಪಿಡಬ್ಲ್ಯೂಡಿ ಎಇಇ
ಅವೈಜ್ಞಾನಿಕ ರಸ್ತೆ ಉಬ್ಬುಗಳು:
ಘೋಡಂಪಳ್ಳಿಯಿಂದ ಬೀದರ್‌ಗೆ ಸಂಪರ್ಕ ಕಲ್ಪಿಸುವ ರಸ್ತೆಯಲ್ಲಿ ಚಿಟ್ಟಾ ಗ್ರಾಮದ ವ್ಯಾಪ್ತಿಯಲ್ಲಿ ಅವೈಜ್ಞಾನಿಕವಾಗಿ ರಸ್ತೆ ಉಬ್ಬುಗಳನ್ನು ನಿರ್ಮಿಸಲಾಗಿದೆ ಎಂಬ ಆರೋಪ ಪ್ರಯಾಣಿಕರದ್ದಾಗಿದೆ. ಈ ರಸ್ತೆಯಲ್ಲಿ ಚಿಟ್ಟಾ ಗ್ರಾಮ ವ್ಯಾಪ್ತಿಯಲ್ಲೇ 18 ರಸ್ತೆ ಉಬ್ಬುಗಳನ್ನು ನಿರ್ಮಾಣ ಮಾಡಲಾಗಿದೆ ಎಂದು ಗೋಡಂಪಳ್ಳಿಯ ಗುರುನಾಥ ರೆಡ್ಡಿ ಹೇಳುತ್ತಾರೆ. ಶಾಲೆ ಜನನಿಬಿಡ ಸ್ಥಳಗಳಲ್ಲಿ ಉಬ್ಬುಗಳನ್ನು ನಿರ್ಮಿಸುವುದಕ್ಕೆ ತಕರಾರು ಇಲ್ಲ. ಆದರೆ ಎಲ್ಲೆಂದರಲ್ಲಿ ಉಬ್ಬುಗಳನ್ನು ನಿರ್ಮಿಸಲಾಗಿದೆ. ಕೆಲ ರಸ್ತೆ ಉಬ್ಬುಗಳು ಅಪಘಾತಕ್ಕೂ ಕಾರಣವಾಗುತ್ತಿವೆ ಎಂದು ಆರೋಪಿಸುತ್ತಾರೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.