ADVERTISEMENT

ವಿದ್ಯಾರ್ಥಿಗಳಲ್ಲಿ ವೈಜ್ಞಾನಿಕ ಆಸಕ್ತಿ ಬೆಳೆಸಿ

ಕನ್ನಡದಲ್ಲಿ ರಾಜ್ಯಮಟ್ಟದ ವಿಜ್ಞಾನ, ತಂತ್ರಜ್ಞಾನ ಸಮ್ಮೇಳನ

​ಪ್ರಜಾವಾಣಿ ವಾರ್ತೆ
Published 14 ಸೆಪ್ಟೆಂಬರ್ 2022, 15:33 IST
Last Updated 14 ಸೆಪ್ಟೆಂಬರ್ 2022, 15:33 IST
ಬೀದರ್‌ನ ಕರ್ನಾಟಕ ಕಲಾ ವಿಜ್ಞಾನ ಹಾಗೂ ವಾಣಿಜ್ಯ ಮಹಾವಿದ್ಯಾಲಯದಲ್ಲಿ ಕರ್ನಾಟಕ ವಿಜ್ಞಾನ ಮತ್ತು ತಂತ್ರಜ್ಞಾನ ಅಕಾಡೆಮಿ ಆಶ್ರಯದಲ್ಲಿ ಆಯೋಜಿಸಿರುವ ಕನ್ನಡದಲ್ಲಿ ರಾಜ್ಯ ಮಟ್ಟದ 4ನೇ ವಿಜ್ಞಾನ ಮತ್ತು ತಂತ್ರಜ್ಞಾನ ಸಮ್ಮೇಳನದಲ್ಲಿ ಕರ್ನಾಟಕ ವಿಜ್ಞಾನ ಮತ್ತು ತಂತ್ರಜ್ಞಾನ ಅಕಾಡೆಮಿ ಸದಸ್ಯ ಪ್ರೊ. ಎ.ಎಚ್.ರಾಜಾಸಾಬ್ ಮಾತನಾಡಿದರು
ಬೀದರ್‌ನ ಕರ್ನಾಟಕ ಕಲಾ ವಿಜ್ಞಾನ ಹಾಗೂ ವಾಣಿಜ್ಯ ಮಹಾವಿದ್ಯಾಲಯದಲ್ಲಿ ಕರ್ನಾಟಕ ವಿಜ್ಞಾನ ಮತ್ತು ತಂತ್ರಜ್ಞಾನ ಅಕಾಡೆಮಿ ಆಶ್ರಯದಲ್ಲಿ ಆಯೋಜಿಸಿರುವ ಕನ್ನಡದಲ್ಲಿ ರಾಜ್ಯ ಮಟ್ಟದ 4ನೇ ವಿಜ್ಞಾನ ಮತ್ತು ತಂತ್ರಜ್ಞಾನ ಸಮ್ಮೇಳನದಲ್ಲಿ ಕರ್ನಾಟಕ ವಿಜ್ಞಾನ ಮತ್ತು ತಂತ್ರಜ್ಞಾನ ಅಕಾಡೆಮಿ ಸದಸ್ಯ ಪ್ರೊ. ಎ.ಎಚ್.ರಾಜಾಸಾಬ್ ಮಾತನಾಡಿದರು   

ಬೀದರ್‌: ‘ಶಿಕ್ಷಕರು ವಿಜ್ಞಾನದ ಕುತೂಹಲಕಾರಿ ಅಂಶಗಳನ್ನು ವಿದ್ಯಾರ್ಥಿಗಳಿಗೆ ಮಾತೃಭಾಷೆಯಲ್ಲೇ ತಿಳಿಸುವ ಮೂಲಕ ಅವರಲ್ಲಿ ವಿಜ್ಞಾನದ ಬಗೆಗೆ ಆಸಕ್ತಿ ಕೆರಳುವಂತೆ ಮಾಡಬೇಕು. ಇದರಿಂದ ವಿದ್ಯಾರ್ಥಿಗಳಲ್ಲಿ ವೈಜ್ಞಾನಿಕ ಮನೋಭಾವ ಹಾಗೂ ಮಾತೃಭಾಷೆ ಬೆಳವಣಿಗೆ ಸಾಧ್ಯವಾಗುತ್ತದೆ’ ಎಂದು ಕರ್ನಾಟಕ ವಿಜ್ಞಾನ ಮತ್ತು ತಂತ್ರಜ್ಞಾನ ಅಕಾಡೆಮಿ ಸದಸ್ಯ ಪ್ರೊ. ಎ.ಎಚ್.ರಾಜಾಸಾಬ್ ಹೇಳಿದರು.


ಕರ್ನಾಟಕ ಕಲಾ, ವಿಜ್ಞಾನ ಹಾಗೂ ವಾಣಿಜ್ಯ ಮಹಾವಿದ್ಯಾಲಯ, ಕರ್ನಾಟಕ ವಿಜ್ಞಾನ ಮತ್ತು ತಂತ್ರಜ್ಞಾನ ಅಕಾಡೆಮಿ ಆಶ್ರಯದಲ್ಲಿ ನಗರದ ಕರ್ನಾಟಕ ಕಾಲೇಜಿನಲ್ಲಿ ಆಯೋಜಿಸಿರುವ ಕನ್ನಡದಲ್ಲಿ ರಾಜ್ಯ ಮಟ್ಟದ 4ನೇ ವಿಜ್ಞಾನ ಮತ್ತು ತಂತ್ರಜ್ಞಾನ ಸಮ್ಮೇಳನದಲ್ಲಿ ಬುಧವಾರ ಸಂಶೋಧನಾ ಪ್ರಬಂಧಗಳ ಪ್ರಾತ್ಯಕ್ಷಿಕೆ ಹಾಗೂ ಕವಿಗೋಷ್ಠಿ ಉದ್ಘಾಟಿಸಿ ಅವರು ಮಾತನಾಡಿದರು.


‘ಪಾಲಕರು ಹಾಗೂ ಶಿಕ್ಷಕರು ಮಕ್ಕಳ ಸಂಶಯದ ಪ್ರಶ್ನೆಗಳಿಗೆ ಸಮರ್ಥವಾಗಿ ಉತ್ತರಿಸಿದರೆ ಮಾತ್ರ ಮಕ್ಕಳು ಜ್ಞಾನಿಗಳಾಗುತ್ತಾರೆ. ಮಕ್ಕಳ ಪ್ರಶ್ನೆಗೆ ಉತ್ತರಿಸದಿದ್ದರೆ ಅವರ ಆಸಕ್ತಿಯನ್ನೇ ಹತ್ತಿಕ್ಕಿದಂತೆ ಆಗುತ್ತದೆ’ ಎಂದು ತಿಳಿಸಿದರು.

ADVERTISEMENT


‘ಕನ್ನಡದ ಮೂಲಕ ಪ್ರತಿಯೊಬ್ಬರಿಗೆ ವಿಜ್ಞಾನ ತಲುಪಿಸುವ ದಿಸೆಯಲ್ಲಿ ಇಂತಹ ಸಮ್ಮೇಳನಗಳನ್ನು ನಿರಂತರವಾಗಿ ನಡೆಸುವ ಅಗತ್ಯವಿದೆ. ಕನ್ನಡದ ಮೂಲಕ ವೈಜ್ಞಾನಿಕ ಸಂಶೋಧನೆ ನಡೆಸಿದರೆ ಭಾಷೆಯೂ ಅಂತರರಾಷ್ಟ್ರೀಯ ಮಟ್ಟದಲ್ಲಿ ಬೆಳೆಯಲಿದೆ. ವಿದ್ಯಾರ್ಥಿಗಳಿಗೆ ವಿಜ್ಞಾನವು ಆಸಕ್ತಿಯ ವಿಷಯವಾಗಲಿದೆ’ ಎಂದು ಅಭಿಪ್ರಾಯಪಟ್ಟರು.


‘ವಿದ್ಯಾರ್ಥಿಗಳಲ್ಲಿ ವೈಜ್ಞಾನಿಕ ಚಿಂತನೆ ಬೆಳೆಸಲು 2005 ರಿಂದ ಪ್ರೊ. ಯು.ಆರ್.ರಾವ್‌ ನೇತೃತ್ವದಲ್ಲಿ ಸಮ್ಮೇಳನಗಳನ್ನು ನಡೆಸಲಾಗುತ್ತಿದೆ. ಪ್ರತಿಭೆಗೆ ಪ್ರೋತ್ಸಾಹ ನೀಡಲು ವಿದ್ಯಾರ್ಥಿಗಳಿಗೆ ಪ್ರೊ. ಯು.ಆರ್. ರಾವ್‌ ಪ್ರಶಸ್ತಿಯನ್ನೂ ನೀಡಲಾಗುತ್ತಿದೆ.

ಅಕಾಡೆಮಿ ಮೂಲಕ ಶಿಕ್ಷಕರಿಗೆ ತರಬೇತಿ ನೀಡಿ ವಿಜ್ಞಾನವನ್ನು ಪ್ರತಿಯೊಬ್ಬರಿಗೂ ತಲುಪಿಸಲು ಪ್ರಯತ್ನಿಸಲಾಗುತ್ತಿದೆ’ ಎಂದು ತಿಳಿಸಿದರು.


‘ಭಾರತವು ವಿಶ್ವಕ್ಕೆ ಸಂಗೀತ, ಅಂಕೆಯ ಶೂನ್ಯ ಸೇರಿದಂತೆ ಅನೇಕ ಬಗೆಯ ಸಂಪನ್ಮೂಲಗಳನ್ನು ನೀಡಿದೆ. ಇಂದು ಹಲವು ಕ್ಷೇತ್ರಗಳ ಮೂಲಕ ವಿಶ್ವಕ್ಕೆ ಕೊಡುಗೆಯನ್ನು ನೀಡಿದೆ’ ಎಂದು ಹೇಳಿದರು.


‘ಪಾಲಕರು ಹಾಗೂ ಶಿಕ್ಷಕರು ಮಕ್ಕಳಲ್ಲಿ ವೈಜ್ಞಾನಿಕ ಮನೋಭಾವ ಬೆಳೆಸಬೇಕು. ಅಂಧಶ್ರದ್ಧೆಯನ್ನು ಹೋಗಲಾಡಿಸಬೇಕು’ ಎಂದು ಸಲಹೆ ನೀಡಿದರು.


ಬಾಗಲಕೋಟೆಯ ಬಸವೇಶ್ವರ ಎಂಜಿನಿಯರಿಂಗ್‌ ಕಾಲೇಜಿನ ಎಲೆಕ್ಟ್ರಿಕ್‌ ಹಾಗೂ ಎಲೆಕ್ಟ್ರಾನಿಕ್‌ ವಿಭಾಗದ ಮುಖ್ಯಸ್ಥ ಸುರೇಶ ಜಂಗಮಶೆಟ್ಟಿ ಮಾತನಾಡಿ, ‘ವಿಜ್ಞಾನ ಶಿಕ್ಷಕರು ವಿದ್ಯಾರ್ಥಿಗಳಿಗೆ ಸಂಶೋಧನೆಗೆ ಅನುವು ಮಾಡಿ ಕೊಡಬೇಕು. ಪ್ರಯೋಗಾಲಯದಲ್ಲಿನ ವಸ್ತುಗಳನ್ನು ಮುಟ್ಟದಂತೆ ಸೂಚಿಸಿದರೆ ವಿದ್ಯಾರ್ಥಿಗಳು ಸಂಶೋಧನೆಗೂ ಹಿಂದೇಟು ಹಾಕುತ್ತಾರೆ’ ಎಂದು ಎಚ್ಚರಿಸಿದರು.


ಅಧ್ಯಕ್ಷತೆ ವಹಿಸಿದ್ದ ಕರ್ನಾಟಕ ರಾಷ್ಟ್ರೀಯ ಶಿಕ್ಷಣ ಸಂಸ್ಥೆಯ ಅಧ್ಯಕ್ಷ ಬಸವರಾಜ ಜಾಬಶೆಟ್ಟಿ ಮಾತನಾಡಿ, ‘ವಿದ್ಯಾರ್ಥಿಗಳು ಅಧ್ಯಯನದ ಮೂಲಕ ವಿಜ್ಞಾನದ ಬಗ್ಗೆ ಆಸಕ್ತಿ ಬೆಳೆಸಿಕೊಳ್ಳಬೇಕು’ ಎಂದು ಹೇಳಿದರು.


ಕರ್ನಾಟಕ ವಿಜ್ಞಾನ ಮತ್ತು ತಂತ್ರಜ್ಞಾನ ಅಕಾಡೆಮಿಯ ವಿ.ಕೆ. ಶ್ರೀನಿವಾಸ ಪ್ರಾಸ್ತಾವಿಕವಾಗಿ ಮಾತನಾಡಿದರು. ಗುಲಬರ್ಗಾ ವಿಶ್ವವಿದ್ಯಾಲಯದ ವಿಶ್ರಾಂತ ಕುಲಪತಿ ಪ್ರೊ. ಬಿ.ಜಿ.ಮೂಲಿಮನಿ, ಕರ್ನಾಟಕ ವಿಜ್ಞಾನ ಮತ್ತು ತಂತ್ರಜ್ಞಾನ ಅಕಾಡೆಮಿಯ ರಾಜ್ಯ ಸಂಯೋಜಕ ಮಹಾದೇವಗೌಡ, ಪ್ರಾಚಾರ್ಯ ಎಂ.ಎಸ್.ಚೆಲ್ವಾ ಇದ್ದರು.


ಪ್ರೊ. ರಾಜೇಂದ್ರ ಬಿರಾದಾರ ಸ್ವಾಗತಿಸಿದರು. ಪ್ರೊ. ಸುನೀತಾ ಕೂಡ್ಲಿಕರ್ ನಿರೂಪಿಸಿದರು. ಅನಿಲಕುಮಾರ ಚಿಕ್ಕಮಾಣೂರ ಪರಿಚಯಿಸಿದರು. ಪ್ರೊ. ಡಿ.ಬಿ.ಕಂಬಾರ ವಂದಿಸಿದರು.

ಕರಾಶಿ ಸಂಸ್ಥೆಯ ಕಾರ್ಯದರ್ಶಿ ಸಿದ್ರಾಮ ಪಾರಾ, ಜಂಟಿ ಕಾರ್ಯದರ್ಶಿ ಸತೀಶ ಪಾಟೀಲ, ಮಹೇಶ ಭದಭದೆ, ರಾಜಶೇಖರ ತಾಂಡೂರ, ಮಲ್ಲಿಕಾರ್ಜುನ ಹತ್ತಿ, ವೀರಭದ್ರಪ್ಪ ಬುಯ್ಯಾ, ರವಿ ಹಾಲಹಳ್ಳಿ ಇದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.