ADVERTISEMENT

ಬೀದರ್‌| ನಿರ್ದೇಶಕರಿಗೊಂದು, ಸದಸ್ಯರಿಗೆ ಇನ್ನೊಂದು ನೀತಿ: ಮಲ್ಲಿಕಾರ್ಜುನ ಸ್ವಾಮಿ

ಸಕ್ಕರೆ ಕಾರ್ಖಾನೆಗಳ ಆಡಳಿತ ಮಂಡಳಿ ವಿರುದ್ಧ ಸ್ವಾಮಿ ಆಕ್ರೋಶ

​ಪ್ರಜಾವಾಣಿ ವಾರ್ತೆ
Published 15 ಅಕ್ಟೋಬರ್ 2020, 14:41 IST
Last Updated 15 ಅಕ್ಟೋಬರ್ 2020, 14:41 IST
ಮಲ್ಲಿಕಾರ್ಜುನ ಸ್ವಾಮಿ
ಮಲ್ಲಿಕಾರ್ಜುನ ಸ್ವಾಮಿ   

ಬೀದರ್‌: ‘ಜಿಲ್ಲೆಯ ಸಕ್ಕರೆ ಕಾರ್ಖಾನೆಗಳ ಆಡಳಿತ ಮಂಡಳಿಗಳಲ್ಲಿರುವ ರಾಜಕಾರಣಿಗಳು ರೈತರ ಹಿತವನ್ನು ಬಲಿಕೊಟ್ಟು ತಮ್ಮ ಅನುಕೂಲಕ್ಕೆ ತಕ್ಕಂತೆ ಆಡಳಿತ ನಡೆಸುತ್ತಿದ್ದಾರೆ’ ಎಂದು ಕರ್ನಾಟಕ ರಾಜ್ಯ ರೈತ ಸಂಘದ ಜಿಲ್ಲಾ ಘಟಕದ ಅಧ್ಯಕ್ಷ ಮಲ್ಲಿಕಾರ್ಜುನ ಸ್ವಾಮಿ ಆಕ್ರೋಶ ವ್ಯಕ್ತಪಡಿಸಿದರು.

‘ಸಹಕಾರ ಸಂಘಗಳ ನಿಯಮದ ಪ್ರಕಾರ ಸಾಮಾನ್ಯ ಸಭೆಗೆ ನಿರಂತರವಾಗಿ ಗೈರಾದ ರೈತ, ಕಾರ್ಖಾನೆಗೆ ಗೊತ್ತುಪಡಿಸಿದಷ್ಟು ಕಬ್ಬು ಪೂರೈಸದ ರೈತ ಹಾಗೂ ಕಾರ್ಖಾನೆಯೊಂದಿಗೆ ವ್ಯವಹರಿಸದ ರೈತ ಮತದಾನದ ಹಕ್ಕು ಕಳೆದುಕೊಳ್ಳುತ್ತಾನೆ. ಕಾರ್ಖಾನೆ ಸಹ ಕಬ್ಬು ಪೂರೈಸಿದ ರೈತನಿಗೆ 14 ದಿನಗಳಲ್ಲಿ ಕಬ್ಬಿನ ಹಣ ಪಾವತಿಸಬೇಕು. ಆದರೆ, ಹಣ ಪಾವತಿಸಲು ಕಾರ್ಖಾನೆಗಳು ವರ್ಷಗಟ್ಟಲೇ ಸತಾಯಿಸುತ್ತಿವೆ’ ಎಂದು ನಗರದಲ್ಲಿ ಗುರುವಾರ ಮಾಧ್ಯಮಗೋಷ್ಠಿಯಲ್ಲಿ ಆರೋಪಿಸಿದರು.

‘ಆಡಳಿತ ಮಂಡಳಿಗೆ ಒಂದು, ರೈತರಿಗೆ ಇನ್ನೊಂದು ಕಾನೂನು ಅನುಸರಿಸುತ್ತಿರುವುದು ಸರಿಯಲ್ಲ. ಸಕಾಲದಲ್ಲಿ ರೈತರಿಗೆ ಹಣ ಪಾವತಿಸದ ಕಾರ್ಖಾನೆ ಆಡಳಿತ ಮಂಡಳಿ ನಿರ್ದೇಶಕರಿಗೂ ಸ್ಪರ್ಧಿಸುವ ಅರ್ಹತೆ ಇಲ್ಲದಂತೆ ಕಾನೂನು ಮಾಡಬೇಕು’ ಎಂದು ಒತ್ತಾಯಿಸಿದರು.

ADVERTISEMENT

‘ಕರ್ನಾಟಕ ಸಹಕಾರ ಸಂಘಗಳ ಅಧಿನಿಯಮ 1959ಕ್ಕೆ ತಿದ್ದುಪಡಿ ತಂದ ಪರಿಣಾಮ, ಸಕ್ಕರೆ ಕಾರ್ಖಾನೆಗಳ ಸದಸ್ಯರು ಕೂಡ ಮತದಾನದ ಹಕ್ಕಿನಿಂದ ವಂಚಿತರಾಗುತ್ತಿದ್ದಾರೆ. 2013ರ ತಿದ್ದುಪಡಿ ಕಾಯ್ದೆಯನ್ನು ಕಟ್ಟುನಿಟ್ಟಾಗಿ ಅನುಷ್ಠಾನಕ್ಕೆ ತರುತ್ತಿರುವ ಕಾರಣ ಚುನಾವಣೆಗೆ ಸ್ಪರ್ಧಿಸುವವರು ಮತ್ತು ಮತದಾನ ಮಾಡಬೇಕಾದ ಸದಸ್ಯರ ನಡುವಿನ ಸೌಹಾರ್ದದ ಅಂತರ ಹೆಚ್ಚಾಗುತ್ತಿದೆ’ ಎಂದು ಆರೋಪಿಸಿದರು.

‘ಸಹಕಾರ ಸಂಘಗಳ ತಿದ್ದುಪಡಿ ಅಧಿನಿಯಮದಲ್ಲಿ ಕೆಲವು ಸ್ಪಷ್ಟ ಬದಲಾವಣೆಗಳನ್ನು ತರಲಾಗಿದ್ದರೂ ಈ ಮಾಹಿತಿ ಬಹಳಷ್ಟು ರೈತರಿಗೆ ತಿಳಿದಿಲ್ಲ. ಜಿಲ್ಲೆಯ ಮೂರು ಸಹಕಾರ ಸಕ್ಕರೆ ಕಾರ್ಖಾನೆಗಳಲ್ಲಿ 21 ಸಾವಿರದಿಂದ 25 ಸಾವಿರ ರೈತರು ಸದಸ್ಯತ್ವ ಪಡೆದುಕೊಂಡಿದ್ದಾರೆ. ಆಡಳಿತ ಮಂಡಳಿಯ ಪರವಾಗಿರುವವರಿಗೆ ಅಷ್ಟೇ ಮತದಾನದ ಹಕ್ಕು ನೀಡುವ ಪ್ರಕ್ರಿಯೆ ಮುಂದುವರೆದಿದೆ’ ಎಂದು ಆರೋಪ ಮಾಡಿದರು.

‘ರಾಜಕಾರಣಿಗಳು ರೈತರನ್ನು ಒತ್ತಾಯದಿಂದ ಕಾರ್ಖಾನೆ ಸದಸ್ಯರನ್ನಾಗಿ ಮಾಡಿದ್ದಾರೆ. ಕಾರ್ಖಾನೆ ಷೇರು ಪಡೆಯಲು ರೈತರು ₹ 25 ಸಾವಿರ ಪಾವತಿಸಿದ್ದಾರೆ. ಸಾಮಾನ್ಯ ಸಭೆಗೆ ಹಾಜರಿರಬೇಕು. ಕಾರ್ಖಾನೆಗೆ ಕನಿಷ್ಠ 10 ಟನ್‌ ಕಬ್ಬು ಪೂರೈಸಿರಬೇಕು. ಒಂದು ಸಾವಿರ ರೂಪಾಯಿ ವರೆಗೆ ವ್ಯವಹಾರ ನಡೆಸಿರಬೇಕು. ಇಲ್ಲದಿದ್ದರೆ ಮತದಾನ ಹಕ್ಕು ಕಳೆದುಕೊಳ್ಳಲಿದ್ದಾರೆ ಎಂದು ಸರ್ಕಾರ ಆದೇಶ ಮಾಡಿದೆ’ ಎಂದು ತಿಳಿಸಿದರು.

‘ಹಾಲು ಉತ್ಪಾದಕರ ಸಂಘ ಹಾಗೂ ಸಹಕಾರ ಸಕ್ಕರೆ ಕಾರ್ಖಾನೆಗಳನ್ನು ಒಂದೇ ದೃಷ್ಟಿಯಲ್ಲಿ ನೋಡಲಾಗುತ್ತಿದೆ. ರಾಜಕಾರಣಿಗಳು ಎರಡು ಕಾರ್ಖಾನೆಗಳಿಗೆ ಷೇರುದಾರರು ಇದ್ದಾರೆ. ಕಾರ್ಖಾನೆಗಳ ಆಡಳಿತ ಮಂಡಳಿಗೆ ಸ್ಪರ್ಧಿಸಿ ಎರಡು ಸಕ್ಕರೆ ಕಾರ್ಖಾನೆಗಳಿಗೂ ಚೇರಮನ್‌ ಆದ ಉದಾಹರಣೆಗಳು ಇವೆ. ಕಾರ್ಖಾನೆ ನಿರ್ದೇಶಕರಿಗೆ ಒಂದು ನೀತಿ, ಸದಸ್ಯರಿಗೆ ಇನ್ನೊಂದು ನೀತಿ ಅನುಸರಿಸಲಾಗುತ್ತಿದೆ’ ಎಂದು ದೂರಿದರು.

‘ಕಬ್ಬು ಬೆಳೆಗಾರರ ಹಿತ ಕಾಯದ ಕಾರ್ಖಾನೆಗಳು ರೈತರ ಷೇರು ಹಣ ವಾಪಸ್‌ ಕೊಡಬೇಕು. 14 ದಿನಗಳಲ್ಲಿ ರೈತರಿಗೆ ಹಣ ಪಾವತಿಸದ ಆಡಳಿತ ಮಂಡಳಿಯನ್ನು ಸೂಪರ್‌ಸೀಡ್‌ ಮಾಡಬೇಕು. ನಿರ್ದೇಶಕರನ್ನು ಅನರ್ಹಗೊಳಿಸಿ ಮತ್ತೆ ಕಾರ್ಖಾನೆ ಆಡಳಿತ ಮಂಡಳಿ ಚುನಾವಣೆಗೆ ಸ್ಪರ್ಧಿಸದಂತೆ ನಿರ್ಬಂಧ ವಿಧಿಸಬೇಕು’ ಎಂದು ಮನವಿ ಮಾಡಿದರು.

‘ಅತಿವೃಷ್ಟಿಯಿಂದಾಗಿ ಜಿಲ್ಲೆಯಲ್ಲಿ ಸಾವಿರಾರು ಹೆಕ್ಟೇರ್ ಪ್ರದೇಶದಲ್ಲಿನ ಬೆಳೆ ನಷ್ಟವಾಗಿದೆ. ಬೆಳೆ ಕಟಾವಿಗೆ ಬಂದರೂ ಕೊನೆ ಕ್ಷಣದಲ್ಲಿ ನೀರು ಪಾಲಾಗಿದೆ. ರೈತರು ಕಣ್ಣೀರು ಹಾಕುತ್ತಿದ್ದಾರೆ. ಸರ್ಕಾರ ತಕ್ಷಣ ರೈತರ ನೆರವಿಗೆ ಬರಬೇಕು. ಬೆಳೆ ನಷ್ಟ ಪರಿಹಾರ ಒದಗಿಸಬೇಕು’ ಎಂದು ಒತ್ತಾಯಿಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.