ADVERTISEMENT

ಸಬ್‌ಕಾ ಸಾಥ್ ಎನ್ನುವವರಿಂದ ತಾರತಮ್ಯ :ಶಾಸಕ ಬಿ.ನಾರಾಯಣರಾವ್ ಆರೋಪ

ಧರಣಿಯಲ್ಲಿ ಶಾಸಕ ಬಿ.ನಾರಾಯಣರಾವ್ ಆರೋಪ

​ಪ್ರಜಾವಾಣಿ ವಾರ್ತೆ
Published 24 ಡಿಸೆಂಬರ್ 2019, 14:02 IST
Last Updated 24 ಡಿಸೆಂಬರ್ 2019, 14:02 IST
ಬಸವಕಲ್ಯಾಣದ ಮಹಾತ್ಮಗಾಂಧಿ ವೃತ್ತದಲ್ಲಿ ಸೋಮವಾರ ವಿವಿಧ ಮುಸ್ಲಿಂ ಸಂಘಟನೆಗಳಿಂದ ಪೌರತ್ವ ತಿದ್ದುಪಡಿ ಕಾಯ್ದೆಯನ್ನು ವಿರೋಧಿಸಿ ಧರಣಿ ನಡೆಸಲಾಯಿತು
ಬಸವಕಲ್ಯಾಣದ ಮಹಾತ್ಮಗಾಂಧಿ ವೃತ್ತದಲ್ಲಿ ಸೋಮವಾರ ವಿವಿಧ ಮುಸ್ಲಿಂ ಸಂಘಟನೆಗಳಿಂದ ಪೌರತ್ವ ತಿದ್ದುಪಡಿ ಕಾಯ್ದೆಯನ್ನು ವಿರೋಧಿಸಿ ಧರಣಿ ನಡೆಸಲಾಯಿತು   

ಬಸವಕಲ್ಯಾಣ: ‘ಸಬ್‌ಕಾ ಸಾಥ್ ಸಬ್‌ಕಾ ವಿಕಾಸ್ ಎಂಬ ಘೋಷ ವಾಕ್ಯದೊಂದಿದೆ ಅಧಿಕಾರದ ಚುಕ್ಕಾಣಿ ಹಿಡಿದವರು ಪೌರತ್ವ ತಿದ್ದುಪಡಿ ಕಾಯ್ದೆ ಜಾರಿಗೊಳಿಸುವ ಮೂಲಕ ತಾರತಮ್ಯ ನೀತಿ ಅನುಸರಿಸುತ್ತಿದ್ದಾರೆ' ಎಂದು ಶಾಸಕ ಬಿ.ನಾರಾಯಣರಾವ್ ಆರೋಪಿಸಿದರು.

ಇಲ್ಲಿನ ಮಹಾತ್ಮಗಾಂಧಿ ವೃತ್ತದಲ್ಲಿ ವಿವಿಧ ಮುಸ್ಲಿಂ ಸಂಘಟನೆಗಳಿಂದ ಸೋಮವಾರ ಪೌರತ್ವ ತಿದ್ದುಪಡಿ ಕಾಯ್ದೆ ವಿರೋಧಿಸಿ ಆಯೋಜಿಸಿದ್ದ ಧರಣಿಯಲ್ಲಿ ಅವರು ಮಾತನಾಡಿದರು.

`ಬಿಜೆಪಿಯಿಂದ ಮುಸ್ಲಿಂ ವಿರೋಧದದ ನೀತಿ ಅನುಸರಿಸಲಾಗುತ್ತಿದೆ. ತ್ರಿವಳಿ ತಲಾಕ್ ರದ್ದು ಪಡಿಸಲಾಯಿತು. ಕಾಶ್ಮೀರ 370 ಕಲಂ ತೆಗೆದು ಹಾಕಲಾಯಿತು. ಈಗ ಪೌರತ್ವ ತಿದ್ದುಪಡಿ ಕಾಯ್ದೆ ತಂದು ಇವರನ್ನು ಕಡೆಗಣಿಸುವ ದುರುದ್ದೇಶ ಹೊಂದಲಾಗಿದೆ. ಈ ಕಾರಣಕ್ಕಾಗಿಯೇ ಜಾರ್ಖಂಡನಲ್ಲಿ ಬಿಜೆಪಿಯೇತರ ಪಕ್ಷದ ಕೈಗೆ ಚುಕ್ಕಾಣಿ ನೀಡಿದ್ದಾರೆ. ಮಂಗಳೂರಿನಲ್ಲಿ ಈಚೆಗೆ ಪೌರತ್ವ ಕಾಯ್ದೆ ವಿರೋಧಿಸಿ ನಡೆದ ಪ್ರತಿಭಟನೆಯಲ್ಲಿ ಸತ್ತವರ ಬಗ್ಗೆ ನ್ಯಾಯಾಂಗ ತನಿಖೆ ಕೈಗೊಳ್ಳಬೇಕು' ಎಂದರು.

ADVERTISEMENT

ಮೌಲಾನಾ ಉಸ್ಮಾನಅಬ್ಬಾಸ್ ನದ್ವಿ ಮಾತನಾಡಿ, `ಬಿಜೆಪಿಯವರು ಪಾಕಿಸ್ತಾನದ ಹೆಸರು ಹೇಳಿ ಮುಸ್ಲಿಮರನ್ನು ದೂರುತ್ತಿದ್ದಾರೆ. ಆದರೆ, ಪಾಕಿಸ್ತಾನಕ್ಕೂ ಇಲ್ಲಿನ ಮುಸ್ಲಿಮರಿಗೂ ಸಂಬಂಧವಿಲ್ಲ. ಒಂದು ವೇಳೆ ಆ ದೇಶದ ವಿರುದ್ಧ ಯುದ್ಧವಾದರೆ ನಾವು ಬಂದೂಕು ಹಿಡಿದು ಹೋರಾಡುತ್ತೇವೆ. ಪೌರತ್ವ ತಿದ್ದುಪಡಿ ಕಾಯ್ದೆಯೂ ಏಕಮುಖವಾದ ನಿರ್ಣಯವಾಗಿದೆ’ ಎಂದರು.

ಕಾಂಗ್ರೆಸ್ ತಾಲ್ಲೂಕು ಘಟಕದ ಅಧ್ಯಕ್ಷ ನೀಲಕಂಠ ರಾಠೋಡ ಮಾತನಾಡಿ, `ಪೌರತ್ವ ತಿದ್ದುಪಡಿ ಕಾಯ್ದೆಯ ಬಗ್ಗೆ ಜನಾಭಿಪ್ರಾಯ ಸಂಗ್ರಹಿಸದೆ ಒತ್ತಾಯಪೂರ್ವಕ ಜಾರಿಗೊಳಿಸಲಾಗುತ್ತಿದೆ’ ಎಂದರು.

ದಲಿತ ಮುಖಂಡ ಅರ್ಜುನ ಕನಕ, ರವೀಂದ್ರ ಗಾಯಕವಾಡ, ರಾಜಾ ಬಾಗಸವಾರ ದರ್ಗಾ ಪ್ರಮುಖ ಜಿಯಾಪಾಷಾ ಜಾಗೀರದಾರ್, ಮೀರ ಫರ್ಕುಂದ‌್ ಅಲಿ, ಮುಜಾಹಿದ ಪಾಷಾ ಖುರೇಶಿ, ಅಜರ ಅಲಿ ನವರಂಗ, ಇಕ್ರಾಮೊದ್ದೀನ್ ಖಾದಿವಾಲೆ, ಪಾಂಡುರಂಗ ಮಾತನಾಡಿದರು.

ತಹಶೀಲ್ದಾರ್ ಸಾವಿತ್ರಿ ಸಲಗರ ಅವರು ಮನವಿ ಪತ್ರ ಸ್ವೀಕರಿಸಿದರು. ಮುಖಂಡರಾದ ತಹಶೀನ ಅಲಿ ಜಮಾದಾರ, ವಾರೀಸ್ ಅಲಿ, ದಿಲೀಪ ಶಿಂಧೆ, ಅನ್ವರ ಭೋಸಗೆ, ಯುವರಾಜ ಭೆಂಡೆ, ದಾವೂದ್ ಮಂಠಾಳ, ಜಬ್ಬಾರ್ ಗೋಬರೆ, ರವೀಂದ್ರ ಬೋರೋಳೆ, ಸಂಜಯಸಿಂಗ‌್ ಹಜಾರಿ, ಹುಜೂರಪಾಷಾ, ಅಸ್ಲಂ ಜನಾಬ್ ಇದ್ದರು.

ಕೆಲ ಯುವಕರು ವಿವಿಧ ಧರ್ಮಗಳ ಮುಖಂ ಡರ ವೇಷ ಧರಿಸಿದ್ದರು. ರಾಷ್ಟ್ರ ಧ್ವಜಗಳನ್ನು, ಮಹಾತ್ಮಗಾಂಧಿ, ಸಂವಿಧಾನ ಶಿಲ್ಪಿ ಡಾ.ಅಂಬೆಡ್ಕರ್ ಅವರ ಭಾವಚಿತ್ರಗಳನ್ನು ಹಿಡಿದಿದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.