ADVERTISEMENT

ಜನಸ್ನೇಹಿ ಪೊಲೀಸ್‌ ವ್ಯವಸ್ಥೆ ರೂಪಿಸುವುದೇ ನನ್ನ ಗುರಿ

ನೂತನ ಜಿಲ್ಲಾ ಪೊಲೀಸ್‌ ವರಿಷ್ಠಾಧಿಕಾರಿ ನಾಗೇಶ ಡಿ.ಎಲ್

ಚಂದ್ರಕಾಂತ ಮಸಾನಿ
Published 10 ಫೆಬ್ರುವರಿ 2020, 19:45 IST
Last Updated 10 ಫೆಬ್ರುವರಿ 2020, 19:45 IST
ಜಿಲ್ಲಾ ಪೊಲೀಸ್‌ ವರಿಷ್ಠಾಧಿಕಾರಿ ನಾಗೇಶ ಡಿ.ಎಲ್
ಜಿಲ್ಲಾ ಪೊಲೀಸ್‌ ವರಿಷ್ಠಾಧಿಕಾರಿ ನಾಗೇಶ ಡಿ.ಎಲ್   

ಬೀದರ್: ರಾಜ್ಯಮಟ್ಟದ ಪಶು ಮೇಳ, ಬೀದರ್‌ ನಾಗರಿಕ ವಿಮಾನ ನಿಲ್ದಾಣ ಉದ್ಘಾಟನೆ, ವಚನ ವಿಜಯೋತ್ಸವ ಮೊದಲಾದ ಕಾರ್ಯಕ್ರಮಗಳಿಂದಾಗಿ ನಾಲ್ಕು ದಿನ ಬಹುತೇಕ ಪೊಲೀಸ್‌ ಅಧಿಕಾರಿಗಳು ಬಂದೋಬಸ್ತ್‌ನಲ್ಲಿ ನಿರತರಾಗಿದ್ದರು. ಹೀಗಾಗಿ ಇಲ್ಲಿಯ ಪೊಲೀಸ್‌ ಮುಖ್ಯಾಲಯದಲ್ಲಿ ಸೋಮವಾರ ಸಹಜವಾಗಿಯೇ
ಜನದಟ್ಟಣೆ ಇತ್ತು.

ಬೆಳಿಗ್ಗೆ 10 ಗಂಟೆಯಿಂದಲೇ ಜನರು ತಮ್ಮ ಸಮಸ್ಯೆಗಳಿಗೆ ಪರಿಹಾರ ಕಂಡುಕೊಳ್ಳಲು ಅಹವಾಲುಗಳನ್ನು ಹಿಡಿದುಕೊಂಡು ನಿಂತಿದ್ದರು. ಅನೇಕ ಪೊಲೀಸ್‌ ಅಧಿಕಾರಿಗಳು ಕಡತಗಳ ವಿಲೇವಾರಿಗಾಗಿ ಎಸ್‌.ಪಿ ಕಚೇರಿಗೆ ಬಂದಿದ್ದರು. ಪುರಸೊತ್ತಿಲ್ಲದ ಸಮಯದ ಮಧ್ಯೆಯೇ ನೂತನ ಜಿಲ್ಲಾ ಪೊಲೀಸ್‌ ವರಿಷ್ಠಾಧಿಕಾರಿ ನಾಗೇಶ ಡಿ.ಎಲ್ ಅವರು ‘ಪ್ರಜಾವಾಣಿ’ಯೊಂದಿಗೆ ಮಾತಿಗಿಳಿದರು.

* ಜಿಲ್ಲೆಯ ಪೊಲೀಸ್‌ ವ್ಯವಸ್ಥೆ ಸುಧಾರಣೆಗೆ ಏನು ಮಾಡುವಿರಿ?

ADVERTISEMENT

ಜನಸ್ನೇಹಿ ಪೊಲೀಸ್‌ ವ್ಯವಸ್ಥೆ ರೂಪಿಸುವುದೇ ನನ್ನ ಗುರಿಯಾಗಿದೆ. ನೀಲಮಣಿರಾಜು ನಿವೃತ್ತಿಯಾದ ನಂತರ ರಾಜ್ಯ ಪೊಲೀಸ್ ಮಹಾನಿರ್ದೇಶಕರಾಗಿ ಪ್ರವೀಣ್ ಸೂದ್ ಅವರು ಅಧಿಕಾರ ವಹಿಸಿಕೊಂಡ ಸಂದರ್ಭದಲ್ಲಿ ಈ ಮಾತನ್ನು ಉಲ್ಲೇಖಿಸಿದ್ದಾರೆ. ಅದನ್ನು ಕಟ್ಟುನಿಟ್ಟಾಗಿ ಜಾರಿಗೆ ತರಲಾಗುವುದು.
ಮಕ್ಕಳು, ಮಹಿಳೆಯರ ರಕ್ಷಣೆ, ಪೊಲೀಸ್ ಠಾಣೆ ಜನಸ್ನೇಹಿಯಾಗುವಂತೆ ಹಲವಾರು ಕಾರ್ಯಕ್ರಮಗಳನ್ನು ಹಮ್ಮಿಕೊಳ್ಳಲಾಗುವುದು. ನ್ಯಾಯ ಹಾಗೂ ರಕ್ಷಣೆ ಬಯಸಿ ಪೊಲೀಸ್‌ ಠಾಣೆಗೆ ಬರುವ ಸಾರ್ವಜನಿಕರಿಗೆ ಕುಳಿತುಕೊಳ್ಳುವ ವ್ಯವಸ್ಥೆ ಮಾಡಬೇಕಿದೆ. ನಾನು ಇನ್ನೂ ಜಿಲ್ಲೆಯ ಯಾವುದೇ ಪೊಲೀಸ್‌ ಠಾಣೆಗೆ ಭೇಟಿ ಕೊಟ್ಟಿಲ್ಲ. ಪೊಲೀಸ್‌ ಅಧಿಕಾರಿಗಳಿಂದ ಮಾಹಿತಿ ಪಡೆಯುತ್ತಿದ್ದೇನೆ. ಶೀಘ್ರದಲ್ಲಿ ಎಲ್ಲ ಪೊಲೀಸ್‌ ಠಾಣೆಗಳಿಗೆ ಭೇಟಿ ನೀಡಲಿದ್ದೇನೆ.

* ಬಹುಮಹಡಿ ಕಟ್ಟಡಗಳಿಗೆ ಸಿಸಿಟಿವಿ ಕ್ಯಾಮೆರಾ ಅಳವಡಿಸಲು ಕ್ರಮ ಕೈಗೊಳ್ಳುವಿರಾ?

ಬಹುಮಹಡಿ ಕಟ್ಟಡ ಹಾಗೂ ಆಸ್ಪತ್ರೆಗಳಿಗೆ ಸಿಸಿಟಿವಿ ಕ್ಯಾಮೆರಾ ಅಳವಡಿಸುವುದು ಕಡ್ಡಾಯ. ಅಪರಾಧ ಸಂಖ್ಯೆಯನ್ನು ಕಡಿಮೆಗೊಳಿಸುವ ಹಾಗೂ ಸಾರ್ವಜನಿಕರಿಗೆ ಸುರಕ್ಷತೆ ಒದಗಿಸುವ ನಿಟ್ಟಿನಲ್ಲಿ ಸಿಸಿಟಿವಿ ಕ್ಯಾಮೆರಾ ಅಳವಡಿಸಬೇಕು. ಕಟ್ಟಡಗಳ ಮಾಲೀಕರನ್ನು ವಿಶ್ವಾಸಕ್ಕೆ ತೆಗೆದುಕೊಂಡು ಈ ಕೆಲಸ ಮಾಡಲಾಗುವುದು.

* ನಗರದಲ್ಲಿರುವ ರಾಷ್ಟ್ರೀಕೃತ ಬ್ಯಾಂಕ್‌ಗಳ ಎಟಿಎಂಗಳಿಗೆ ಭದ್ರತೆ ಒದಗಿಸಲು ಏನು ಮಾಡುವಿರಿ?

ನಗರ ಪ್ರದೇಶದಲ್ಲಿರುವ ಎಟಿಎಂಗಳಿಗೆ ಸುರಕ್ಷತೆ ಒದಗಿಸಬೇಕಿದೆ. ಎಟಿಎಂಗಳಿಗೆ ಕಾವಲುಗಾರರನ್ನು ನೇಮಕ ಮಾಡವುದು ಬ್ಯಾಂಕಿನ ಜವಾಬ್ದಾರಿ. ಈ ದಿಸೆಯಲ್ಲಿ ಸಂಬಂಧಪಟ್ಟ ಅಧಿಕಾರಿಗಳಿಗೊಂದಿಗೆ ಸಮಾಲೋಚನೆ ನಡೆಸಿ ಕ್ರಮ ಕೈಗೊಳ್ಳಲಾಗುವುದು.

ಸಂಚಾರ ಒತ್ತಡ ನಿಯಂತ್ರಿಸುವ ನಿಟ್ಟಿನಲ್ಲಿ ಪ್ರತಿಯೊಬ್ಬರು ಕಟ್ಟುನಿಟ್ಟಾಗಿ ಸಂಚಾರ ನಿಯಮ ಪಾಲನೆ ಮಾಡಬೇಕು. ಈಗಾಗಲೇ ನಗರದಲ್ಲಿ 38 ಕಡೆ ಸಿಸಿಟಿವಿ ಕ್ಯಾಮೆರಾ ಅಳವಡಿಸಲಾಗಿದೆ. ಕಲ್ಯಾಣ ಕರ್ನಾಟಕ ಅಭಿವೃದ್ಧಿ ಮಂಡಳಿಯಿಂದ ಅನುದಾನ ಪಡೆದು ಇನ್ನಷ್ಟು ಸಿಸಿಟಿವಿ ಕಾಮೆರಾ ಅಳವಡಿಸಲಾಗುವುದು.

* ಪೊಲೀಸ್‌ ಠಾಣೆಯ ಹಳೆಯ ಕಟ್ಟಡಗಳ ಸುಧಾರಣೆಗೆ ನಿಮ್ಮ ಹೆಜ್ಜೆ ಏನು?

ದಿನದ 24 ಗಂಟೆಯೂ ಕಾರ್ಯನಿರ್ವಹಿಸುವ ಪೊಲೀಸರ ಹಿತವನ್ನು ಗಮನದಲ್ಲಿಟ್ಟುಕೊಂಡು ಪೊಲೀಸ್‌ ಠಾಣೆಗಳಿಗೆ ಮೂಲಸೌಕರ್ಯ ಒದಗಿಸಲು ಕ್ರಮ ಕೈಗೊಳ್ಳಲಾಗುವುದು.

* ಬೀದರ್‌ ಜಿಲ್ಲೆಯ ಪೊಲೀಸ್‌ ಬ್ಲಾಗ್‌ ಬ್ಲಾಕ್ ಆಗಿದೆಯಲ್ಲ?

ಈಗಷ್ಟೇ ಅಧಿಕಾರ ವಹಿಸಿಕೊಂಡಿರುವೆ. ಹಂತ ಹಂತವಾಗಿ ಪ್ರತಿಯೊಂದನ್ನು ಸರಿಪಡಿಸಲಾಗುವುದು. ತಾಂತ್ರಿಕ ಕಾರಣದಿಂದ ಬ್ಲಾಕ್‌ ಆಗಿರುವ ಪೊಲೀಸ್‌ ಬ್ಲಾಗ್‌ ಮತ್ತೆ ಕಾರ್ಯ ನಿರ್ವಹಿಸಲಿದೆ. ಜಿಲ್ಲೆಯ ಜನರಿಗೆ ಆನ್‌ಲೈನ್‌ ಮೂಲಕ ಪಾರದರ್ಶಕವಾದ ಮಾಹಿತಿ ದೊರೆಯಲಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.