ADVERTISEMENT

ಡಿ.ಕೆ.ಶಿವಕುಮಾರ ಹೇಳಿಕೆಗೆ ಲಿಂಗಾಯತ ಧರ್ಮ ಮಹಾಸಭಾ ಖಂಡನೆ

​ಪ್ರಜಾವಾಣಿ ವಾರ್ತೆ
Published 19 ಅಕ್ಟೋಬರ್ 2018, 13:05 IST
Last Updated 19 ಅಕ್ಟೋಬರ್ 2018, 13:05 IST

ಬೀದರ್‌: ಲಿಂಗಾಯತ ಸ್ವತಂತ್ರ ಧರ್ಮ ಮಾನ್ಯತೆಗಾಗಿ ಹಿಂದಿನ ಕಾಂಗ್ರೆಸ್ ಸರ್ಕಾರ ಕೇಂದ್ರಕ್ಕೆ ಶಿಫಾರಸು ಮಾಡಿದ್ದು ಅಪರಾಧವಾಯಿತು. ಅದಕ್ಕಾಗಿ ಕ್ಷಮೆ ಯಾಚಿಸುವೆ ಎಂದು ಜಲ ಸಂಪನ್ಮೂಲ ಸಚಿವ ಡಿ.ಕೆ. ಶಿವಕುಮಾರ ಹೇಳಿರುವುದು ಖಂಡನೀಯ ಎಂದು ಲಿಂಗಾಯತ ಧರ್ಮ ಮಹಾಸಭಾ ಹೇಳಿದೆ.

‘ಲಿಂಗಾಯತರಿಗೆ ನೋವಾಗುವ ರೀತಿಯಲ್ಲಿ ಹೇಳಿಕೆ ನೀಡಿರುವ ಡಿ.ಕೆ. ಶಿವಕುಮಾರ ಅವರು ತಕ್ಷಣ ಲಿಂಗಾಯತರಲ್ಲಿ ಕ್ಷಮೆ ಯಾಚಿಸಬೇಕು’ ಎಂದು ಮಹಾಸಭಾದ ರಾಷ್ಟ್ರೀಯ ಅಧ್ಯಕ್ಷ ಚನ್ನಬಸವಾನಂದ ಸ್ವಾಮೀಜಿ, ಉಪಾಧ್ಯಕ್ಷ ಶಿವರಾಜ್ ಪಾಟೀಲ ಅತಿವಾಳ, ಲಿಂಗಾಯತ ಸಮನ್ವಯ ಸಮಿತಿಯ ಬೀದರ್ ಜಿಲ್ಲಾ ಘಟಕದ ಅಧ್ಯಕ್ಷ ಬಸವರಾಜ ಧನ್ನೂರ ಆಗ್ರಹಿಸಿದ್ದಾರೆ.

‘ನ್ಯಾಯಮೂರ್ತಿ ನಾಗಮೋಹನದಾಸ ನೇತೃತ್ವದ ತಜ್ಞರ ಸಮಿತಿಯು ರಾಜ್ಯ ಸರ್ಕಾರಕ್ಕೆ ವಿಸ್ತೃತವಾದ ವರದಿ ನೀಡಿತ್ತು. ಅದನ್ನು ಆಧರಿಸಿ ಅಂದಿನ ಮುಖ್ಯಮಂತ್ರಿ ಸಿದ್ದರಾಮಯ್ಯ ಸಂಪುಟ ಸಭೆಯಲ್ಲಿ ನಿರ್ಣಯ ತೆಗೆದುಕೊಂಡು ಕೇಂದ್ರಕ್ಕೆ ಶಿಫಾರಸು ಮಾಡಿದ್ದಾರೆ. ಆ ಸಭೆಯಲ್ಲಿ ಮೌನವಾಗಿದ್ದ ಸಚಿವರು ರಂಭಾಪುರಿ ಶ್ರೀಗಳ ವೇದಿಕೆಯಲ್ಲಿ ಕ್ಷಮೆಯಾಚಿಸಿ ಲಿಂಗಾಯತ ಧರ್ಮಕ್ಕೆ ದ್ರೋಹ ಬಗೆದಿದ್ದಾರೆ’ ಎಂದು ಟೀಕಿಸಿದ್ದಾರೆ.

‘ಹಿಂದೆ ಕಾಡುಗಳ್ಳ ವೀರಪ್ಪನ್ ಲಿಂಗಾಯತ ಸಮಾಜದ ನಾಯಕ ಕಾಮಗೆರೆ ನಾಗಪ್ಪ ಅವರನ್ನು ಅಪಹರಿಸಿಕೊಂಡು ಹೋದಾಗ ಲಿಂಗಾಯತ ಮಠಾಧೀಶರು ಹಣಕೊಟ್ಟು ಬಿಡಿಸಿಕೊಂಡು ಬರುವಂತೆ ಡಿಕೆಶಿ ಹೇಳಿಕೆ ನೀಡಿದ್ದರು. ಈಗ ಮತ್ತೆ ಲಿಂಗಾಯತ ವಿರೋಧಿ ಹೇಳಿಕೆ ನೀಡಿರುವುದು ಖಂಡನೀಯ’ ಎಂದು ಹೇಳಿದ್ದಾರೆ.

ADVERTISEMENT

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.