ಬೀದರ್: ‘ಜನಸಾಮಾನ್ಯನೂ ಪ್ರಭು ಆಗಬಹುದಾದ ಅಸ್ತ್ರವನ್ನು ಬಾಬಾಸಾಹೇಬ ಅಂಬೇಡ್ಕರ್ ಸಂವಿಧಾನದ ಮೂಲಕ ಕೊಟ್ಟಿದ್ದಾರೆ. ನಾಗರಿಕರು ಸದೃಢ ರಾಷ್ಟ್ರ ನಿರ್ಮಾಣಕ್ಕೆ ಮತ ಅಸ್ತ್ರವನ್ನು ಬಳಸಬೇಕೆ ಹೊರತು ಹಣಕ್ಕಾಗಿ ಮಾರಿಕೊಳ್ಳಬಾರದು’ ಎಂದು ಡಾ.ಬಿ.ಆರ್.ಅಂಬೇಡ್ಕರ್ ಮರಿಮೊಮ್ಮಗ ರಾಜರತನ್ ಅಂಬೇಡ್ಕರ್ ಹೇಳಿದರು.
ನಗರದ ನೆಹರೂ ಕ್ರೀಡಾಂಗಣದಲ್ಲಿ ಗುರುವಾರ ಸಂವಿಧಾನ ಸಂರಕ್ಷಣಾ ಸಮಿತಿಯ ವತಿಯಿಂದ ಆಯೋಜಿಸಿದ್ದ ‘ಸಂವಿಧಾನ ರಕ್ಷಿಸಿ, ದೇಶ ಉಳಿಸಿ’ ಐಕ್ಯತಾ ಸಮಾವೇಶದಲ್ಲಿ ಅವರು ಮಾತನಾಡಿದರು.
‘ಮಹಿಳೆಯರು ಸೀರೆ, ಪುರುಷರು ಮದ್ಯ ಹಾಗೂ ಯುವಕರು ಹಣಕ್ಕಾಗಿ ಮತ ಮಾರಿಕೊಳ್ಳಬಾರದು. ಪುರುಷರು ಒಮ್ಮೆ ಮದ್ಯ ಸೇವಿಸಬಹುದು, ಆದರೆ ರಾಜಕಾರಣಿಗಳು ಐದು ವರ್ಷ ರಕ್ತ ಹೀರುತ್ತಾರೆ. ಹೆಣ್ಣುಮಕ್ಕಳ ಮಾನ ಹರಾಜು ಮಾಡುತ್ತಾರೆ. ಮತಬ್ಯಾಂಕ್ ಸೃಷ್ಟಿಸಲು ರಾಜಕೀಯ ಪಕ್ಷಗಳು ಅಧಿಕಾರದಲ್ಲಿದ್ದಾಗ ಸೈಕಲ್, ಲ್ಯಾಪ್‌ಟಾಪ್ ಹಾಗೂ ಅಕ್ಕಿ ವಿತರಣೆ ಮಾಡುತ್ತವೆ. ಮತದಾರರು ಎಚ್ಚರಿಕೆಯಿಂದ ಮತ ಚಲಾಯಿಸಬೇಕು’ ಎಂದು ತಿಳಿಸಿದರು.
‘ದಲಿತರು, ಲಿಂಗಾಯತರು, ಮುಸ್ಲಿಮರು, ಕ್ರೈಸ್ತರು ಒಗ್ಗೂಡಿರುವುದು ಸಂತಸದ ಸಂಗತಿ. ಸಂವಿಧಾನ ಇರುವ ಕಾರಣ ದೇಶದಲ್ಲಿ ಮಠಗಳು, ಚರ್ಚ್‌ಗಳು ಹಾಗೂ ಮಸೀದಿಗಳು ಸುರಕ್ಷಿತವಾಗಿವೆ. ಬ್ರಹ್ಮಚಾರಿಯೊಬ್ಬರು ಹಿಂದೂಗಳು ಹೆಚ್ಚು ಮಕ್ಕಳನ್ನು ಹೇರುವಂತೆ ಕರೆ ನೀಡಿರುವುದು ಹಾಸ್ಯಾಸ್ಪದ’ ಎಂದು ಹೇಳಿದರು.
‘ಪರೀಕ್ಷೆ ಬರೆಯದಿದ್ದರೂ ವಿದ್ಯಾರ್ಥಿಗಳನ್ನು ಉತ್ತೀರ್ಣ ಮಾಡುವ ಶಿಕ್ಷಣ ನೀತಿ ಸರಿಯಲ್ಲ. ಪ್ರಾಥಮಿಕ ಶಾಲೆಯಲ್ಲಿ ಪರೀಕ್ಷೆ ಬರೆಯದೇ ಒಂಬತ್ತನೇ ತರಗತಿಗೆ ಪರೀಕ್ಷೆ ನಡೆಸಿದರೆ ವಿದ್ಯಾರ್ಥಿಗಳು ಹೇಗೆ ಪರೀಕ್ಷೆಯಲ್ಲಿ ಉತ್ತೀರ್ಣರಾಗಲು ಸಾಧ್ಯ? ಮಕ್ಕಳಿಗೆ ಓದಲು, ಬರೆಯಲು ಬರದಂತಹ ಸ್ಥಿತಿ ನಿರ್ಮಾಣವಾಗಿದೆ. ದಲಿತ ಹಾಗೂ ಹಿಂದುಳಿದ ವರ್ಗಗಳನ್ನು ಮೂಲೆಗುಂಪು ಮಾಡುವುದೇ ಇದರ ಮೂಲ ಉದ್ದೇಶ’ ಎಂದು ಆರೋಪಿಸಿದರು.
‘ಶಿಕ್ಷಕರಿಗೆ ಪೋಲಿಯೊ ಲಸಿಕೆ, ಮತದಾರರ ಪಟ್ಟಿ ಸಿದ್ಧಪಡಿಸುವ, ಜನ ಗಣತಿ, ಜಾನುವಾರು ಗಣತಿ ಕೆಲಸ ಕೊಡಲಾಗಿದೆ.
ಪಾಠ ಮಾಡುವ ಕೆಲಸವನ್ನು ಬಿಡಿಸಿ ಬೇರೆ ಕೆಲಸದಲ್ಲಿ ತೊಡಗಿಸಿದರೆ ಅವರು ಮಕ್ಕಳಿಗೆ ಪಾಠ ಮಾಡುವುದು ಯಾವಾಗ? ಸರ್ಕಾರದ ನೀತಿಯಿಂದಾಗಿಯೇ ಶಿಕ್ಷಣದ ಗುಣಮಟ್ಟ ಕುಸಿಯುತ್ತಿದೆ’ ಎಂದು ಟೀಕಿಸಿದರು.
‘ನರೇಂದ್ರ ಮೋದಿ ಅವರಿಗೆ ಮಕ್ಕಳೇ ಇಲ್ಲ. ಅವರಿಗೆ ಮಕ್ಕಳ ಶಿಕ್ಷಣದ ಬಗ್ಗೆ ಏನು ಗೊತ್ತಿದೆ. ಶ್ರೀಮಂತರ ಮಕ್ಕಳು ಬೂಟು, ಟೈ ಕಟ್ಟಿ ಶಾಲೆಗೆ ಹೋದರೆ, ಬಡವರ ಮಕ್ಕಳು ತಟ್ಟೆ ಹಿಡಿದು ಸರ್ಕಾರಿ ಶಾಲೆಗೆ ಬರುವಂತೆ ಮಾಡಿದ್ದಾರೆ. ಇದು ಭಿಕ್ಷೆಯ ತರಬೇತಿ ಅಲ್ಲವೆ’ ಎಂದು ಪ್ರಶ್ನಿಸಿದರು.
‘ಒಂದು ದೇಶಕ್ಕೆ ಒಂದು ತೆರಿಗೆ ನೆಪದಲ್ಲಿ ಜಿಎಸ್‌ಟಿ ಜಾರಿಗೆ ತಂದು 36 ಬಗೆಯ ತೆರಿಗೆಗಳನ್ನು ವಿಧಿಸಿದ್ದಾರೆ. ಆರ್ಥಿಕ ಆಧಾರದ ಮೇಲೆ ಮೀಸಲಾತಿ ಕೊಡಬೇಕು ಎಂಬುವುದು ಅವೈಜ್ಞಾನಿಕ. ಕೋಟ್ಯಂತರ ವ್ಯವಹಾರ ನಡೆಸುವ ಅಂಬಾನಿ ಇಂದಿಗೂ ಬ್ರಾಹ್ಮಣರ ಕಾಲಿಗೆ ಬೀಳುತ್ತಾರೆ. ಜಾತಿ ವ್ಯವಸ್ಥೆ ಇಂದಿಗೂ ಜಾರಿಯಲ್ಲಿದೆ ಎನ್ನುವುದು ಇದಕ್ಕೆ ಉತ್ತಮ ನಿದರ್ಶನ. ಸಾಮಾಜಿಕ ವ್ಯವಸ್ಥೆ ಆಧಾರದ ಮೇಲೆಯೇ ಮೀಸಲಾತಿ ಮುಂದುವರಿಯಬೇಕು’ ಎಂದು ತಿಳಿಸಿದರು.
‘ರಾಜಕೀಯ ಪಕ್ಷಗಳು ವಿದೇಶದಿಂದ ನೆರವು ಪಡೆಯುವಂತಿಲ್ಲ. ಬಂಡವಾಳಶಾಹಿಗಳು ಬ್ಯಾಂಕಿನಿಂದ ಸಾಲ ಪಡೆದು ವಿದೇಶಕ್ಕೆ ಪಲಾಯನ ಮಾಡಿದ್ದಾರೆ. ಕೇಂದ್ರದಲ್ಲಿ ಆಡಳಿತದಲ್ಲಿರುವ ಬಿಜೆಪಿ, ದೇಶದ ಜನರ ದಿಕ್ಕು ತಪ್ಪಿಸಿ ಹೊಸ ಹೊಸ ಮಸೂದೆಗಳನ್ನು ಜಾರಿಗೆ ತರಲು ಪ್ರಯತ್ನಿಸುತ್ತಿದೆ’ ಎಂದ ಆರೋಪಿಸಿದರು.
ಬಿಷಪ್ ರಾಬರ್ಟ್ ಮಿರಾಂಡಾ, ಗುರುದ್ವಾರ ಪ್ರಬಂಧಕ ಸಮಿತಿ ವ್ಯವಸ್ಥಾಪಕ ದರ್ಬಾರಾ ಸಿಂಗ್, ಭಂತೆ ವಿಜಯ ರಕ್ಷಿತ ಮಾತನಾಡಿದರು. ಶಾಸಕ ರಹೀಂ ಖಾನ್, ವಿಧಾನ ಪರಿಷತ್ ಸದಸ್ಯ ವಿಜಯಸಿಂಗ್, ಜಿಲ್ಲಾ ಪಂಚಾಯಿತಿ ಅಧ್ಯಕ್ಷೆ ಭಾರತಬಾಯಿ ಶೇರಿಕಾರ, ಉಪಾಧ್ಯಕ್ಷ ಪ್ರಕಾಶ ಪಾಟೀಲ, ಸಂವಿಧಾನ ಸಂರಕ್ಷಣಾ ಸಮಿತಿಯ ಗೌರವಾಧ್ಯಕ್ಷ ಶ್ರೀಕಾಂತ ಸ್ವಾಮಿ, ಅಧ್ಯಕ್ಷ ಅಬ್ದುಲ್ ಮನ್ನಾನ್ ಸೇಠ್, ತಡೋಳಾದ ರಾಜೇಶ್ವರ ಶಿವಾಚಾರ್ಯ, ಜೆಡಿಎಸ್ ಜಿಲ್ಲಾ ಘಟಕದ ಅಧ್ಯಕ್ಷ ರಮೇಶಪಾಟೀಲ ಸೋಲಪುರ, ಅಬ್ದುಲ್ ಗಫೂರ್, ಗೋವಿಂದರಾವ್, ಫಾದರ್ ವಿಜಯಕುಮಾರ, ಬಾಬು ಪಾಸ್ವಾನ್ ಪಾಲ್ಗೊಂಡಿದ್ದರು.
ಸಮಿತಿಯ ಮಹಾ ಪ್ರಧಾನ ಕಾರ್ಯದರ್ಶಿ ಅನಿಲ ಬೆಲ್ದಾರ್ ಪ್ರಾಸ್ತಾವಿಕವಾಗಿ ಮಾತನಾಡಿದರು. ಕಾರ್ಯಾಧ್ಯಕ್ಷ ಅಮೃತರಾವ್ ಚಿಮಕೋಡೆ ಸ್ವಾಗತಿಸಿದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.