ಬಸವಕಲ್ಯಾಣ: ತಾಲ್ಲೂಕಿನ ಕೊಹಿನೂರ ಗ್ರಾಮದ ಪರಿಶಿಷ್ಟರ ಓಣಿಯಾದ ಭೀಮನಗರದಲ್ಲಿ ಚರಂಡಿ ವ್ಯವಸ್ಥೆ ಇಲ್ಲದ್ದರಿಂದ ಕಲ್ಮಷ ನೀರು ಅಲ್ಲಲ್ಲಿ ಸಂಗ್ರಹಗೊಂಡು, ದುರ್ನಾತ ಬೀರುತ್ತಿದೆ. ಜನರು ಮೂಗು ಮುಚ್ಚಿಕೊಂಡು ಓಡಾಡಬೇಕಾಗುತ್ತಿದೆ.
–ಇದು ಹೋಬಳಿ ಕೇಂದ್ರವಾದರೂ ಸ್ವಚ್ಛತೆ ಬಗ್ಗೆ ನಿರ್ಲಕ್ಷ್ಯ ವಹಿಸಲಾಗಿದೆ. ಡಾ.ಬಿ.ಆರ್. ಅಂಬೇಡ್ಕರ್ ಪ್ರತಿಮೆಯ ಸುತ್ತಲಿನಲ್ಲಿ ಹಾಗೂ ರೈತ ಸಂಪರ್ಕ ಕೇಂದ್ರದ ಸಮೀಪದಲ್ಲಿ ಮತ್ತು ಇತರೆ ರಸ್ತೆಗಳಲ್ಲಿ ಯಾವಾಗಲೂ ನೀರು ಸಂಗ್ರಹಗೊಂಡಿರುತ್ತದೆ. ಕೆಸರು ಆಗಿರುತ್ತದೆ. ನೀರು ಪಾಚಿಗಟ್ಟಿ ದುರ್ವಾಸನೆ ಬರುತ್ತದೆ. ಇದರಿಂದಾಗಿ ನೊಣ, ಸೊಳ್ಳೆಗಳ ಕಾಟ ಹೆಚ್ಚಾಗಿದೆ.
ಓಣಿಯ ದಕ್ಷಿಣಕ್ಕೆ ಅಟ್ಟೂರ್ ರಸ್ತೆಯ ಕಡೆಗೆ ತಗ್ಗು ಇರುವ ಕಾರಣ ಚರಂಡಿ ವ್ಯವಸ್ಥೆ ಮಾಡಿದರೆ, ಮನೆ ಬಳಕೆಯ ಹಾಗೂ ಮಳೆ ನೀರು ಆ ಕಡೆ ಸರಾಗವಾಗಿ ಸಾಗಬಹುದಾಗಿದೆ. ಆದರೆ, ಮುಂದಕ್ಕೆ ಹೋಗಲು ದಾರಿಯೇ ಇಲ್ಲದ್ದರಿಂದ ನೀರು ನಿಂತಲ್ಲೇ ನಿಲ್ಲುತ್ತಿದೆ. ಹೀಗಾಗಿ ಇಲ್ಲಿನ ನಿವಾಸಿಗಳು ತೊಂದರೆಯಲ್ಲಿದ್ದು ಮಹಿಳೆಯರು ಮತ್ತು ಮಕ್ಕಳು ಕೆಲಸಲ ಕಾಲು ಜಾರಿ ಬಿದ್ದಿದ್ದಾರೆ. ವಾಹನ ಸಂಚಾರಕ್ಕೆ ಅಡೆತಡೆ ಆಗುತ್ತಿದೆ.
‘ಚರಂಡಿ ನಿರ್ಮಿಸಲು ಆಗ್ರಹಿಸಿ ಓಣಿ ನಿವಾಸಿಗಳಿಂದ ಪಿಡಿಒಗೆ ಹತ್ತಾರು ಸಲ ವಿನಂತಿಸಲಾಗಿದೆ. ಆದರೂ, ಅವರು ನಿರ್ಲಕ್ಷ್ಯ ತೋರಿದ್ದಾರೆ. ಒಂದು ವೇಳೆ ಶೀಘ್ರದಲ್ಲಿ ಈ ಸಮಸ್ಯೆ ಬಗೆಹರಿಸದಿದ್ದರೆ ಧರಣಿ ನಡೆಸಬೇಕಾಗುತ್ತದೆ’ ಎಂದು ಮಹೇಶಕುಮಾರ ಹೇಳಿದ್ದಾರೆ.
‘ಮಳೆ ಬರುತ್ತಿರುವ ಕಾರಣ ಎಲ್ಲ ರಸ್ತೆಗಳಲ್ಲಿ ನೀರು ಸಂಗ್ರಹಗೊಂಡು ಪರಿಸ್ಥಿತಿ ಇನ್ನಷ್ಟು ಹದಗೆಟ್ಟಿದೆ. ರಾತ್ರಿ ಹೊತ್ತು ನಡೆದು ಹೋಗುವುದಕ್ಕೂ ಹರ ಸಾಹಸ ಮಾಡಬೇಕಾಗುತ್ತಿದೆ’ ಎಂದು ಲಕ್ಷ್ಮಿಬಾಯಿ ಗೋಳು ತೊಡಿಕೊಂಡರು.
‘ಗ್ರಾಮದಲ್ಲಿ ಅಂಥ ದೊಡ್ಡ ಸಮಸ್ಯೆ ಇಲ್ಲ. ಮಹಿಳೆಯರು ರಸ್ತೆಗೆ ಬಂದು ಬಟ್ಟೆ ಸ್ವಚ್ಛಗೊಳಿಸುವ ಕಾರಣ ಅಲ್ಲಲ್ಲಿ ನೀರು ನಿಂತಿರುತ್ತದೆ. ಆದರೂ ಸಮಸ್ಯೆ ಇದ್ದರೆ ಬಗೆಹರಿಸಲಾಗುತ್ತ’ ಎಂದು ಗ್ರಾಮ ಪಂಚಾಯಿತಿ ಅಭಿವೃದ್ಧಿ ಅಧಿಕಾರಿ ಪ್ರಶಾಂತರೆಡ್ಡಿ ಸ್ಪಷ್ಟಪಡಿಸಿದ್ದಾರೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.