ADVERTISEMENT

ಶುದ್ಧ ಕುಡಿಯವ ನೀರಿಗೂ ಪರದಾಟ; ಸಂತಪುರ ನಾಡ ಕಚೇರಿ ಎದುರಲ್ಲೇ ಕಸದ ರಾಶಿ

ಪರಿಶಿಷ್ಟ ಬಡಾವಣೆಯಲ್ಲಿ ಸೌಲಭ್ಯ ಕೊರತೆ

ಮನ್ನಥಪ್ಪ ಸ್ವಾಮಿ
Published 5 ಜುಲೈ 2022, 4:52 IST
Last Updated 5 ಜುಲೈ 2022, 4:52 IST
ಔರಾದ್ ತಾಲ್ಲೂಕಿನ ಸಂತಪುರ ನಾಡ ಕಚೇರಿ ಎದುರಲ್ಲೇ ಬಿದ್ದಿರುವ ಕಸದ ರಾಶಿ
ಔರಾದ್ ತಾಲ್ಲೂಕಿನ ಸಂತಪುರ ನಾಡ ಕಚೇರಿ ಎದುರಲ್ಲೇ ಬಿದ್ದಿರುವ ಕಸದ ರಾಶಿ   

ಔರಾದ್: ತಾಲ್ಲೂಕಿನ ಸಂತಪುರ ಹೋಬಳಿ ಕೇಂದ್ರದಲ್ಲಿ ಶುದ್ಧ ಕುಡಿಯುವ ನೀರು, ಶುಚಿತ್ವ ಸೇರಿದಂತೆ ಮೂಲ ಸೌಲಭ್ಯದ ಕೊರತೆ ಎದುರಾಗಿದೆ.

‘ಪರಿಶಿಷ್ಟ ಜಾತಿ ಜನ ವಾಸಿಸುವ ಬಡಾವಣೆಯಲ್ಲಿ ಚರಂಡಿ ಹೂಳು ತುಂಬಿದೆ. ನಲ್ಲಿ ನೀರಿನ ಪೈಪ್‍ನಲ್ಲಿ ಚರಂಡಿ ನೀರು ಹೋಗಿ ಕುಡಿಯಲು ಕೊಳಚೆ ನೀರು ಪೂರೈಸಲಾಗುತ್ತಿದೆ. ಇದರಿಂದ ಜನರಲ್ಲಿ ಅನಾರೋಗ್ಯದ ಭೀತಿ ಎದುರಾಗಿದೆ’ ಎಂದು ಸಾಮಾಜಿಕ ಕಾರ್ಯಕರ್ತ ತುಕಾರಾಮ ಹಸನ್ಮುಖಿ ತಿಳಿಸಿದರು.

‘ಈಗ ಮಳೆಗಾಲ ಇರುವುದರಿಂದ ಸಮಸ್ಯೆ ತೀವ್ರತೆ ಜಾಸ್ತಿ ಇದೆ. ಚರಂಡಿ ನೀರು ಮನೆಗಳಿಗೆ ನುಗ್ಗುತ್ತಿದೆ. ಈ ಕುರಿತು ಗ್ರಾಮ ಪಂಚಾಯಿತಿಯವರ ಗಮನಕ್ಕೆ ತಂದರೂ ಪ್ರಯೋಜನವಾಗಿಲ್ಲ’ ಎಂದು ಅವರು ದೂರಿದ್ದಾರೆ.

ADVERTISEMENT

ಸಂತಪುರನಲ್ಲಿ ಸ್ವಚ್ಛತೆ ಇಲ್ಲದೆ ಜನರಿಗೆ ತೊಂದರೆಯಾಗಿದೆ. ಗ್ರಾಮ ಪಂಚಾಯಿತಿ ಹಾಗೂ ನಾಡ ಕಚೇರಿ ಎದುರಲ್ಲೇ ಕಸದ ರಾಶಿ ಬಿದ್ದು ಅಲ್ಲಿ ಬಂದು ಹೋಗುವ ಜನ ಮೂಗು ಮುಚ್ಚಿಕೊಂಡು ಓಡಾಡಬೇಕಿದೆ.

‘ಸಂತಪುರ ಗ್ರಾಮದಲ್ಲಿ ಲೋಕೋಪಯೋಗಿ ಇಲಾಖೆ, ಅರಣ್ಯ ಇಲಾಖೆ, ಮೀನುಗಾರಿಕೆ, ಕೈಗಾರಿಕೆ ಹಾಗೂ ಆರೋಗ್ಯ ಇಲಾಖೆ ಸೇರಿದಂತೆ ವಿವಿಧ ಇಲಾಖೆಯ ಕೋಟ್ಯಾಂತರ ರೂಪಾಯಿ ಮೌಲ್ಯದ ಸರ್ಕಾರಿ ಆಸ್ತಿ ಇದೆ. ಆದರೆ ಇದನ್ನೆಲ್ಲ ಹಾಳಾಗುತ್ತಿದ್ದರೂ ಸಂಬಂಧಿತ ಅಧಿಕಾರಿಗಳು ಮೌನ ವಹಿಸಿದ್ದಾರೆ’ ಎಂದು ದಲಿತ ಸಂಘರ್ಷ ಸಮಿತಿ ಜಿಲ್ಲಾ ಸಂಚಾಲಕ ಧನರಾಜ ಮುಸ್ತಾಪುರ’ ದೂರಿದ್ದಾರೆ.

‘ಸಂತಪುರ ಪರಿಶಿಷ್ಟ ಜಾತಿ ಗಲ್ಲಿಯಲ್ಲಿ ಚರಂಡಿ ಹೂಳು ತುಂಬಿರುವ ಬಗ್ಗೆ ಮಾಹಿತಿ ಬಂದಿದೆ. ಈಗ ಅಲ್ಲಿ ಹೊಸದಾಗಿ ಪಿಡಿಒ ಬಂದಿದ್ದಾರೆ. ಈಗ ಮಳೆಗಾಲ ಇರುವುದರಿಂದ ಗ್ರಾಮದಲ್ಲಿ ಸ್ವಚ್ಛತೆ ಹಾಗೂ ಜನರಿಗೆ ಶುದ್ಧ ನೀರು ಪೂರೈಸಲು ಹೆಚ್ಚಿನ ಗಮನ ಹರಿಸುವಂತೆ ಪಿಡಿಒ ಅವರಿಗೆ ಸೂಚನೆ ನೀಡಲಾಗಿದೆ’ ಎಂದು ತಾ.ಪಂ. ಸಹಾಯಕ ನಿರ್ದೇಶಕ ಶಿವಕುಮಾರ ಘಾಟೆ ತಿಳಿಸಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.