ಔರಾದ್: ತಾಲ್ಲೂಕಿನ ನಾಗೂರ (ಬಿ) ಗ್ರಾಮದಲ್ಲಿ ಕಳೆದ 15 ದಿನಗಳಿಂದ ಕುಡಿಯುವ ನೀರಿಗಾಗಿ ಸಮಸ್ಯೆ ಹೆಚ್ಚಾಗಿದೆ.
ಹೆಡಗಾಪೂರ ಗ್ರಾಮ ಪಂಚಾಯಿತಿ ವ್ಯಾಪ್ತಿಯ ನಾಗೂರ ಗ್ರಾಮದಲ್ಲಿ ಕುಡಿಯಲು ನೀರು ಸಿಗದೆ ಜನ ರಾತ್ರಿ ತೋಟದ ಹೊಲಗಳಿಗೆ ಅಲೆಯುತ್ತಿದ್ದಾರೆ. ಜಾನುವಾರುಗಳಿಗೆ ಕುಡಿಯಲು ನೀರು ಸಿಗದೆ ರೈತರು ಕಂಗಾಲಾಗಿದ್ದಾರೆ. ಆದರೂ ಸಂಬಂಧಿತರು ಮೌನ ವಹಿಸಿರುವುದು ಆಕ್ರೋಶಕ್ಕೆ ಕಾರಣವಾಗಿದೆ.
ಗ್ರಾಮದ ಮಹಿಳೆಯರು ಬುಧವಾರ ಖಾಲಿ ಕೊಡ ಹಿಡಿದು ಪ್ರತಿಭಟನೆ ನಡೆಸಿ ಧಿಕ್ಕಾರ ಕೂಗಿದರು.
‘ನಮ್ಮ ಊರಲ್ಲಿ ಸುಮಾರು 2 ಸಾವಿರ ಜನಸಂಖ್ಯೆ ಇದೆ. ಇರುವ ಎರಡು ಕೊಳವೆ ಬಾವಿಯಲ್ಲಿ ಒಂದು ಬತ್ತಿ ಹೋಗಿದೆ. ಮತ್ತೊಂದರಿಂದ ಸಮರ್ಪಕವಾಗಿ ನೀರು ಬಿಡುತ್ತಿಲ್ಲ. ಗ್ರಾಮ ಪಂಚಾಯತಿಯವರಿಗೆ ಕೇಳಿದರೆ ಜೆಜೆಎಂ ಕಾಮಗಾರಿ ಪೂರ್ಣ ಆಗದೆ ಸಮಸ್ಯೆಯಾಗಿದೆ. ಹೊಸದಾಗಿ ಕೊರೆದ ಕೊಳವೆ ಬಾಯಿಂದ ಪೈಪ್‌ಲೈನ್ ಮಾಡಿದರೆ ಎಲ್ಲ ಸರಿ ಹೋಗುತ್ತೆ ಎಂದು ಹೇಳುತ್ತಾರೆ. ಆದರೆ ಜೆಜೆಎಂ ಯೋಜನೆಯ ಅಧಿಕಾರಿಗಳಿಗೆ ಕರೆ ಮಾಡಿದರೆ ಸ್ಪಂದಿಸುವುದೇ ಇಲ್ಲ. ಇಂತಹ ನಿರ್ಲಕ್ಷ್ಯ ಹಾಗೂ ಜನವಿರೋಧಿ ಅಧಿಕಾರಿಗಳ ವಿರುದ್ಧ ಕ್ರಮ ಜರುಗಿಸಬೇಕು’ ಎಂದು ನಾಗೂರ ನಿವಾಸಿ ಸಂತೋಷ ಮಸ್ಕಲೆ ಆಕ್ರೋಶ ಹೊರ ಹಾಕಿದ್ದಾರೆ.
ಒಂದೆರಡು ದಿನಗಳಲ್ಲಿ ನಮ್ಮ ಊರಿನ ನೀರಿನ ಸಮಸ್ಯೆ ಪರಿಹರಿಸದೇ ಇದ್ದಲ್ಲಿ ಕಚೇರಿಗೆ ಮುತ್ತಿಗೆ ಹಾಗೂ ಸಂಚಾರ ತಡೆ ಮಾಡುತ್ತೇವೆ ಎಂದು ಅವರು ಎಚ್ಚರಿಸಿದ್ದಾರೆ.
ನಾಗೂರ ಗ್ರಾಮದಲ್ಲಿ ವಿದ್ಯುತ್ ವ್ಯತ್ಯಯದಿಂದ ನೀರು ಪೂರೈಕೆಯಲ್ಲಿ ಸಮಸ್ಯೆಯಾಗಿದೆ. ಆದರೂ ಜೆಜೆಎಂ ಯೋಜನೆಯಲ್ಲಿ ಕೊರೆದ ಬಾವಿಯಲ್ಲಿ ಸಾಕಷ್ಟು ನೀರಿದೆ. ಅದನ್ನು ಕೊಟ್ಟರೆ ಸಮಸ್ಯೆ ಇರುವುದಿಲ್ಲ ಎಂದು ಪಿಡಿಒ ಮಹಾಲಕ್ಷ್ಮಿ ಪ್ರಜಾವಾಣಿಗೆ ಮಾಹಿತಿ ನೀಡಿದ್ದಾರೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.