ADVERTISEMENT

ಜನವಾಡ | ಉಪಯೋಗಕ್ಕೆ ಬಾರದ ಶುದ್ಧ ನೀರಿನ ಘಟಕ

500 ಲೀಟರ್ ಸಾಮರ್ಥ್ಯ: ತುಕ್ಕು ಹಿಡಿಯುತ್ತಿರುವ ಯಂತ್ರೋಪಕರಣ

ನಾಗೇಶ ಪ್ರಭಾ
Published 30 ಜುಲೈ 2025, 4:48 IST
Last Updated 30 ಜುಲೈ 2025, 4:48 IST
ಹಾಳಾದ ಬೀದರ್ ತಾಲ್ಲೂಕಿನ ಗುಮ್ಮಾ ಗ್ರಾಮದ ಶುದ್ಧ ಕುಡಿಯುವ ನೀರಿನ ಘಟಕ
ಹಾಳಾದ ಬೀದರ್ ತಾಲ್ಲೂಕಿನ ಗುಮ್ಮಾ ಗ್ರಾಮದ ಶುದ್ಧ ಕುಡಿಯುವ ನೀರಿನ ಘಟಕ   

ಗುಮ್ಮಾ(ಜನವಾಡ): ಬೀದರ್ ತಾಲ್ಲೂಕಿನ ಗುಮ್ಮಾ ಗ್ರಾಮದಲ್ಲಿ ಸರ್ಕಾರ ಲಕ್ಷಾಂತರ ರೂಪಾಯಿ ಖರ್ಚು ಮಾಡಿ ಸ್ಥಾಪಿಸಿದ ಶುದ್ಧ ಕುಡಿಯುವ ನೀರಿನ ಘಟಕ ಸಾರ್ವಜನಿಕರ ಉಪಯೋಗಕ್ಕೆ ಬಾರದಂತಾಗಿದೆ.

ಯಂತ್ರೋಪಕರಣಗಳು ಹಾಳಾದ ಕಾರಣ ಪ್ರತಿ ಗಂಟೆಗೆ 500 ಲೀಟರ್ ನೀರು ಶುದ್ಧೀಕರಣ ಸಾಮರ್ಥ್ಯದ ಘಟಕದಿಂದ ಹನಿ ಶುದ್ಧ ನೀರು ಕೂಡ ಹೊರ ಬರುತ್ತಿಲ್ಲ. ಘಟಕ ಕೆಟ್ಟು ಐದಾರು ವರ್ಷಗಳಾದರೂ ಸಂಬಂಧಪಟ್ಟವರು ದುರಸ್ತಿ ಮಾಡುವ ಗೋಜಿಗೆ ಹೋಗಿಲ್ಲ ಎನ್ನುತ್ತಾರೆ ಗ್ರಾಮಸ್ಥರು.

ಗ್ರಾಮೀಣ ಕುಡಿಯುವ ನೀರು ಮತ್ತು ನೈರ್ಮಲ್ಯ ಇಲಾಖೆ ಅಧಿಕಾರಿಗಳ ಪ್ರಕಾರ, ಗ್ರಾಮದಲ್ಲಿ 2015-16ರಲ್ಲಿ ಕೆಆರ್‌ಐಡಿಎಲ್‍ನಿಂದ ಘಟಕ ಸ್ಥಾಪಿಸಲಾಗಿದೆ. ಅನಂತರ ಇಲಾಖೆಗೆ ಒಪ್ಪಿಸಲಾಗಿತ್ತು. ಕೆಲ ದಿನಗಳ ನಂತರ ಯಂತ್ರೋಪಕರಣದಲ್ಲಿ ಸಮಸ್ಯೆ ಕಾಣಿಸಿಕೊಂಡಿತ್ತು. ಬಳಿಕ ದುರಸ್ತಿಪಡಿಸಿ 2017-18 ರಲ್ಲಿ ಗ್ರಾಮ ಪಂಚಾಯಿತಿಗೆ ಹಸ್ತಾಂತರಿಸಲಾಗಿದೆ. ಆನಂತರ ಕೆಲ ಅವಧಿವರೆಗೆ ಘಟಕ ಕಾರ್ಯನಿರ್ವಹಿಸಿದೆ. ನಂತರ ಮತ್ತೆ ಹಾಳಾಗಿದ್ದು, ಈವರೆಗೂ ದುರಸ್ತಿ ಕಂಡಿಲ್ಲ.

ADVERTISEMENT

ಶುದ್ಧ ಕುಡಿಯುವ ನೀರಿನ ಘಟಕ ಸ್ಥಾಪಿಸಿದಾಗ ಗ್ರಾಮಸ್ಥರಿಗೆ ಅತೀವ ಸಂತಸ ಆಗಿತ್ತು. ಆದರೆ, ಅದು ಬಹು ದಿನಗಳವರೆಗೆ ಉಳಿಯಲಿಲ್ಲ ಎಂದು ಬೇಸರದಿಂದ ಹೇಳುತ್ತಾರೆ ಗ್ರಾಮದ ಪ್ರಶಾಂತ ಪಾಟೀಲ.

ಐದು ರೂಪಾಯಿಗೆ ಕ್ಯಾನ್ ನೀರು ಬರುತ್ತಿತ್ತು. ನಿರ್ವಹಣೆ ಇಲ್ಲದಿರುವುದರಿಂದ ಘಟಕ ಹಾಳಾಗಿದೆ. ಯಂತ್ರಗಳು ತುಕ್ಕು ಹಿಡಿದಿದೆ. ಗಾಜುಗಳು ಒಡೆದಿವೆ ಎಂದು ಹೇಳುತ್ತಾರೆ.

ಗ್ರಾಮಸ್ಥರಿಗೆ ಶುದ್ಧ ನೀರಿಗೆ ಘಟಕ ಆಸರೆಯಾಗಿತ್ತು. ಹಾಳಾಗಿದ್ದರಿಂದ ಅನೇಕರು ಸಮೀಪದ ಅಗ್ರಹಾರ ಹಾಗೂ ಬೀದರ್‌ನಿಂದ ಕ್ಯಾನ್‍ಗಳಲ್ಲಿ ಶುದ್ಧ ನೀರು ತರುತ್ತಿದ್ದಾರೆ ಎಂದು ತಿಳಿಸುತ್ತಾರೆ ಗ್ರಾಮದ ನರಸಪ್ಪ ಧನಗರ್.

ಕೆಆರ್‌ಐಡಿಎಲ್‍ನಿಂದ ನೀರಿನ ಘಟಕ ಸ್ಥಾಪನೆ ಆರು ವರ್ಷಗಳಿಂದ ನಿಷ್ಕ್ರಿಯವಾದ ಘಟಕ ಘಟಕ ದುರಸ್ತಿಗೆ ಗ್ರಾಮಸ್ಥರ ಆಗ್ರಹ

ಗ್ರಾಮದ ಜನರಿಗೆ ಶುದ್ಧ ನೀರು ಕೊಡಲು ಸರ್ಕಾರ ಘಟಕ ಆರಂಭಿಸಿತ್ತು. ಘಟಕ ಹಾಳಾಗಿದ್ದರಿಂದ ಸರ್ಕಾರದ ಆಶಯ ಈಡೇರಿಲ್ಲ.
ಪ್ರಶಾಂತ ಪಾಟೀಲ ಗುಮ್ಮಾ ಗ್ರಾಮಸ್ಥ
ಗುಮ್ಮಾ ಗ್ರಾಮದಲ್ಲಿನ ಶುದ್ಧ ಕುಡಿಯುವ ನೀರಿನ ಘಟಕ ಹಾಳಾಗಿರುವುದು ಗಮನಕ್ಕೆ ಬಂದಿದೆ. ಕೂಡಲೇ ದುರಸ್ತಿಗೆ ಕ್ರಮ ಕೈಗೊಳ್ಳಲಾಗುವುದು
ಗಾಯತ್ರಿದೇವಿ ಅಷ್ಟೂರ ಪಿಡಿಒ

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.