ನಾರಾಯಣಸ್ವಾಮಿ, ರವಿಕುಮಾರ ಶಾಸಕತ್ವ ರದ್ದತಿಗೆ ಆಗ್ರಹಿಸಿ DSS ಪ್ರತಿಭಟನಾ ರ್‍ಯಾಲಿ
ಬೀದರ್: ಗ್ರಾಮೀಣಾಭಿವೃದ್ಧಿ ಮತ್ತು ಪಂಚಾಯತ್‌ರಾಜ್ ಸಚಿವ ಪ್ರಿಯಾಂಕ್ ಖರ್ಗೆ ಅವರನ್ನು ನಿಂದಿಸಿರುವ ವಿಧಾನ ಪರಿಷತ್ತಿನ ವಿರೋಧ ಪಕ್ಷದ ನಾಯಕ ಛಲವಾದಿ ನಾರಾಯಣಸ್ವಾಮಿ, ಕಲಬುರಗಿ ಜಿಲ್ಲಾಧಿಕಾರಿ ಫೌಜಿಯ ತರನ್ನುಮ್ ವಿರುದ್ಧ ಅವಹೇಳನಕಾರಿ ಹೇಳಿಕೆ ಕೊಟ್ಟಿರುವ ಎಂಎಲ್‌ಸಿ ಎನ್. ರವಿಕುಮಾರ ಅವರ ಶಾಸಕತ್ವ ರದ್ದುಗೊಳಿಸಬೇಕೆಂದು ಆಗ್ರಹಿಸಿ ಕರ್ನಾಟಕ ರಾಜ್ಯ ದಲಿತ ಸಂಘರ್ಷ ಸಮಿತಿ ಹಾಗೂ ನಾಗರಿಕ ಹೋರಾಟ ಸಮಿತಿ ಕಾರ್ಯಕರ್ತರು ನಗರದಲ್ಲಿ ಮಂಗಳವಾರ ಪ್ರತಿಭಟನಾ ರ್‍ಯಾಲಿ ನಡೆಸಿದರು.
ನಗರದ ಶಹಾಗಂಜ್‌ನಲ್ಲಿರುವ ಡಾ.ಬಿ.ಆರ್. ಅಂಬೇಡ್ಕರ್ ಭವನದಿಂದ ಜಿಲ್ಲಾಧಿಕಾರಿ ಕಚೇರಿ ವರೆಗೆ ರ್‍ಯಾಲಿ ನಡೆಸಿ, ರಾಜ್ಯಪಾಲರ ಹೆಸರಿಗೆ ಬರೆದ ಮನವಿ ಪತ್ರವನ್ನು ಜಿಲ್ಲಾಧಿಕಾರಿಗೆ ಸಲ್ಲಿಸಿದರು. ರ್‍ಯಾಲಿಯುದ್ದಕ್ಕೂ ನಾರಾಯಣಸ್ವಾಮಿ, ರವಿಕುಮಾರ, ಬಿಜೆಪಿ ಹಾಗೂ ಆರ್‌ಎಸ್‌ಎಸ್ ವಿರುದ್ಧ ಘೋಷಣೆಗಳನ್ನು ಹಾಕಿದರು.
ಸಚಿವ ಪ್ರಿಯಾಂಕ್ ಖರ್ಗೆ ಅವರನ್ನು ನಾಯಿಗೆ ಹೋಲಿಕೆ ಮಾಡಿ ಸಾರ್ವಜನಿಕವಾಗಿ ಅವರ ವ್ಯಕ್ತಿತ್ವಕ್ಕೆ ಧಕ್ಕೆ ತಂದಿರುವ ಮನುವಾದಿ ನಾರಾಯಣಸ್ವಾಮಿ ವಿರುದ್ಧ ಮಾನನಷ್ಟ ಮೊಕದ್ದಮೆ ಹೂಡಲು ಸಮುದಾಯ ಚಿಂತಿಸುತ್ತಿದೆ. ಸಂವಿಧಾನಬದ್ಧ ಹುದ್ದೆಗೆ ಚ್ಯುತಿ ತರುವ ರೀತಿಯಲ್ಲಿ ನಡೆದುಕೊಂಡಿರುವ ನಾರಾಯಣಸ್ವಾಮಿ ಅವರನ್ನು ಕೂಡಲೇ ವಿರೋಧ ಪಕ್ಷದ ನಾಯಕನ ಸ್ಥಾನದಿಂದ ತೆಗೆದು, ಅವರ ಸದಸ್ಯತ್ವ ರದ್ದುಗೊಳಿಸಬೇಕು ಎಂದು ಒತ್ತಾಯಿಸಿದರು.
ಕಲಬುರಗಿ ಜಿಲ್ಲಾಧಿಕಾರಿ ಪಾಕಿಸ್ತಾನದಿಂದ ಬಂದವರಂತೆ ಕಾಣುತ್ತದೆ ಎಂದು ಅಗೌರವದಿಂದ ಮಾತನಾಡಿರುವ ವಿಧಾನ ಪರಿಷತ್ತಿನ ಮುಖ್ಯ ಸಚೇತಕ ಎನ್. ರವಿಕುಮಾರ ಹೇಳಿಕೆ ಖಂಡನಾರ್ಹವಾದುದು. ಈಗಾಗಲೇ ಅವರನ್ನು ಕ್ಷಮೆಯಾಚಿಸುವಂತೆ ಹೈಕೋರ್ಟ್ ತಾಕೀತು ಮಾಡಿದೆ. ಸಂವಿಧಾನಾತ್ಮಕ ಹುದ್ದೆಯಲ್ಲಿರುವ ವ್ಯಕ್ತಿ ಇಂತಹ ಹೇಳಿಕೆ ಕೊಟ್ಟಿರುವುದು ಸರಿಯಲ್ಲ. ಕೂಡಲೇ ಅವರನ್ನು ಆ ಸ್ಥಾನದಿಂದ ವಜಾಗೊಳಿಸಬೇಕೆಂದು ಆಗ್ರಹಿಸಿದರು.
ಸದ್ಯ ಕರ್ನಾಟಕದ ರಾಜಕಾರಣದಲ್ಲಿ ಉತ್ತಮವಾದ ಪ್ರಗತಿಪರ ವಿಚಾರಗಳು, ಜೀವಪರ ಚಿಂತನೆಯೊಂದಿಗೆ ಪ್ರಿಯಾಂಕ್ ಖರ್ಗೆ ಬೆಳೆಯುತ್ತಿದ್ದಾರೆ. ಮನುವಾದಿ ಬಿಜೆಪಿ, ಆರ್‌ಎಸ್‌ಎಸ್‌ನವರಿಗೆ ವಿಧಾನಸೌಧದದ ಒಳಗೆ ಹಾಗೂ ಹೊರಗೆ ಸಿಂಹಸ್ವಪ್ನರಾಗಿದ್ದಾರೆ. ಅವರ ಸೈದ್ಧಾಂತಿಕ ಪ್ರಶ್ನೆಗಳಿಗೆ ಉತ್ತರ ಕೊಡಲಾಗದೆ ಅವರ ವೈಯಕ್ತಿಕ ನಿಂದನೆಗೆ ಇಳಿದಿದ್ದಾರೆ. ಇದು ನಾಚಿಕೆಗೇಡಿನ ಸಂಗತಿ ಎಂದರು.
ಬಿಜೆಪಿ, ಆರ್‌ಎಸ್‌ಎಸ್‌ಗೆ ತಮ್ಮ ಸ್ವಾಭಿಮಾನವನ್ನು ಅಡವಿಟ್ಟು, ಮಾನಸಿಕ ಗುಲಾಮಗಿರಿಗೆ ಒಳಗಾಗಿ ಛಲವಾದಿ ನಾರಾಯಣಸ್ವಾಮಿ ಪ್ರಿಯಾಂಕ್ ಖರ್ಗೆ ವಿರುದ್ಧ ಇಲ್ಲಸಲ್ಲದ ಹೇಳಿಕೆ ಕೊಡುತ್ತಿದ್ದಾರೆ. ಇವರಿಗೆ ಸಮುದಾಯ ಎಂದೂ ಕ್ಷಮಿಸುವುದಿಲ್ಲ. ಇವರ ಮನೆಹಾಳು ನೀಚ ಪ್ರವೃತ್ತಿ ಖಂಡನಾರ್ಹವಾದುದು ಎಂದು ಟೀಕಿಸಿದರು.
ಸಮಿತಿ ರಾಜ್ಯ ಸಂಘಟನಾ ಸಂಚಾಲಕ ಮಾರುತಿ ಬೌದ್ಧೆ, ಜಿಲ್ಲಾ ಸಂಚಾಲಕ ಅರುಣ ಪಟೇಲ್, ಜಿಲ್ಲಾ ಸಂಘಟನಾ ಸಂಚಾಲಕ ರಾಜಕುಮಾರ ವಾಘಮಾರೆ, ದಲಿತ ಕಲಾ ಮಂಡಳಿ ಜಿಲ್ಲಾ ಸಂಚಾಲಕರು ಶಿವರಾಜ ಪಡಪಳ್ಳಿ, ಜಿಲ್ಲಾ ಸಂಘಟನಾ ಸಂಚಾಲಕ ಅಶೋಕ ಗಾಯಕವಾಡ, ಮುಖಂಡರಾದ ವಿಠ್ಠಲದಾಸ ಪ್ಯಾಗೆ, ರಮೇಶ ಉಮ್ಮಾಪೂರೆ, ವಾಮನ ಮೈಸಲಗೆ, ರಮೇಶ ಬೆಲ್ದಾರ, ಸತೀಶ ರತ್ನಾಕರ್, ಝರೆಪ್ಪ ವರ್ಮಾ, ಗೋವಿಂದರಾವ್, ಶಿರೋಮಣಿ ಹಲಗೆ, ರಾಹುಲ ಹಾಲಹಿಪ್ಪರ್ಗಾ, ವಿನೋದ ಬಂದಗೆ, ವಿಜಯಕುಮಾರ ಭಾವಿಕಟ್ಟೆ, ಪಂಡಿತರಾವ್ ಚಿದ್ರಿ, ಅಬ್ದುಲ್ ಮನ್ನಾನ್ ಸೇಠ್, ಬಾಬು ಟೈಗರ್, ಮಹೇಶ ಗೋರನಾಳಕರ್, ವಿನಯ್ ಮಾಳಗೆ, ಮಲ್ಲಿಕಾರ್ಜುನ ಮಹೇಂದ್ರಕುಮಾರ, ದಶರಥ ಗುರು, ಅಶೋಕ ಗಾಯಕವಾಡ,
ಸುರೇಶ ಮೊರೆ, ಅಭಿ ಕಾಳೆ, ಶ್ರೀಧರ ಸೋಮನೋರ್, ಗೌತಮ ಮುತ್ತಂಗಿಕರ್, ರಾಹುಲ್ ಹಾಲೇಪೂರ್ಗಿಕರ್ ಮತ್ತಿತರರು ಪಾಲ್ಗೊಂಡಿದ್ದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.