ADVERTISEMENT

ಬೀದರ್‌: ಕಳವು ಪ್ರಕರಣಗಳು | 22 ಆರೋಪಿಗಳ ಬಂಧನ: ₹41.94 ಲಕ್ಷ ಸ್ವತ್ತು ಜಪ್ತಿ

ಬೀದರ್‌ ಜಿಲ್ಲೆಯ ಎಂಟು ಪೊಲೀಸ್‌ ಠಾಣೆಗಳ ವ್ಯಾಪ್ತಿಯ 11 ಪ್ರಕರಣ ಭೇದಿಸಿದ ಪೊಲೀಸರು

​ಪ್ರಜಾವಾಣಿ ವಾರ್ತೆ
Published 11 ಜೂನ್ 2025, 13:57 IST
Last Updated 11 ಜೂನ್ 2025, 13:57 IST
ಜಿಲ್ಲಾ ಪೊಲೀಸ್‌ ವರಿಷ್ಠಾಧಿಕಾರಿ ಪ್ರದೀಪ್‌ ಗುಂಟಿ ಅವರು ವಾರಸುದಾರರಿಗೆ ಸ್ವತ್ತು ಹಿಂತಿರುಗಿಸಿದರು
ಜಿಲ್ಲಾ ಪೊಲೀಸ್‌ ವರಿಷ್ಠಾಧಿಕಾರಿ ಪ್ರದೀಪ್‌ ಗುಂಟಿ ಅವರು ವಾರಸುದಾರರಿಗೆ ಸ್ವತ್ತು ಹಿಂತಿರುಗಿಸಿದರು   

ಬೀದರ್‌: ಜಿಲ್ಲೆಯ ಎಂಟು ಪೊಲೀಸ್‌ ಠಾಣೆಗಳ ವ್ಯಾಪ್ತಿಯಲ್ಲಿ ನಡೆದ 11 ಕಳವು ಪ್ರಕರಣಗಳನ್ನು ಭೇದಿಸಿರುವ ಪೊಲೀಸರು ₹41.94 ಲಕ್ಷ ಸ್ವತ್ತು ಜಪ್ತಿ ಮಾಡಿಕೊಂಡು 22 ಆರೋಪಿಗಳನ್ನು ಬಂಧಿಸಿದ್ದಾರೆ.

ಬಸವಕಲ್ಯಾಣ ನಗರ ಪೊಲೀಸ್‌ ಠಾಣೆಯ ಮೂರು, ಬೀದರ್‌ನ ಗಾಂಧಿಗಂಜ್‌ ಠಾಣೆಯ ಎರಡು, ಹುಮನಾಬಾದ್‌, ಮಂಠಾಳ, ಖಟಕಚಿಂಚೋಳಿ, ಧನ್ನೂರ, ಭಾಲ್ಕಿ ಗ್ರಾಮೀಣ ಠಾಣೆ ಹಾಗೂ ಮನ್ನಳ್ಳಿ ಪೊಲೀಸ್‌ ಠಾಣೆಯ ತಲಾ ಒಂದು ಪ್ರಕರಣ ಇದರಲ್ಲಿ ಸೇರಿದೆ. ಜಪ್ತಿ ಮಾಡಿದ ಸ್ವತ್ತು ಮೂಲ ವಾರಸುದಾರರಿಗೆ ಹಿಂತಿರುಗಿಸಲಾಗಿದೆ ಎಂದು ಜಿಲ್ಲಾ ಪೊಲೀಸ್‌ ವರಿಷ್ಠಾಧಿಕಾರಿ ಪ್ರದೀಪ್‌ ಗುಂಟಿ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

ಭಾಲ್ಕಿ ಗ್ರಾಮೀಣ ಪೊಲೀಸ್‌ ಠಾಣೆಯಲ್ಲಿ ದಾಖಲಾಗಿದ್ದ ಕಳವು ಪ್ರಕರಣದಲ್ಲಿ ₹3 ಲಕ್ಷ ನಗದು, ₹1 ಲಕ್ಷ ಮೌಲ್ಯದ ಕಾರು, ₹3 ಲಕ್ಷ ಮೌಲ್ಯದ ಬುಲೆರೊ ಪಿಕಪ್‌ ವಾಹನ ಸೇರಿದಂತೆ ₹7 ಲಕ್ಷ ಮೌಲ್ಯದ ಸ್ವತ್ತು ಜಪ್ತಿ ಮಾಡಿ, ಮೂವರನ್ನು ಬಂಧಿಸಲಾಗಿದೆ ಎಂದು ಮಾಹಿತಿ ಹಂಚಿಕೊಂಡಿದ್ದಾರೆ.

ADVERTISEMENT

ಬಸವಕಲ್ಯಾಣ ನಗರ ಪೊಲೀಸ್‌ ಠಾಣೆಯಲ್ಲಿ ನಡೆದ ಪ್ರತ್ಯೇಕ ಮೂರು ಕಳವು ಪ್ರಕರಣಗಳಲ್ಲಿ ₹90 ಸಾವಿರ ಮೌಲ್ಯದ ಚಿನ್ನಾಭರಣ, ₹2 ಸಾವಿರ ನಗದು, ₹5.90 ಲಕ್ಷ ಮೌಲ್ಯದ ವಿವಿಧ ಕಂಪನಿಯ ಒಂಬತ್ತು ಮೋಟರ್‌ ಸೈಕಲ್‌ ಜಪ್ತಿ ಮಾಡಿ, ನಾಲ್ವರು ಆರೋಪಿಗಳನ್ನು ಬಂಧಿಸಲಾಗಿದೆ ಎಂದು ವಿವರಿಸಿದ್ದಾರೆ.

ಬೀದರ್‌ನ ಗಾಂಧಿ ಗಂಜ್‌ ಪೊಲೀಸ್‌ ಠಾಣೆಯಲ್ಲಿ ದಾಖಲಾದ ಎರಡು ಪ್ರತ್ಯೇಕ ಪ್ರಕರಣಗಳಲ್ಲಿ ₹11.73 ಲಕ್ಷ ಮೌಲ್ಯದ ಚಿನ್ನಾಭರಣ, ಒಂದು ಬೈಕ್‌ ಜಪ್ತಿ ಮಾಡಿ ಮೂವರನ್ನು ವಶಕ್ಕೆ ಪಡೆಯಲಾಗಿದೆ. ಮಂಠಾಳ ಠಾಣೆಯಲ್ಲಿ ನಡೆದ ಕಳವು ಪ್ರಕರಣದಲ್ಲಿ ₹4 ಲಕ್ಷ ಮೌಲ್ಯದ 41 ಗ್ರಾಂ ಚಿನ್ನಾಭರಣ ಜಪ್ತಿ ಮಾಡಿ ನಾಲ್ವರು ಆರೋಪಿಗಳನ್ನು ಬಂಧಿಸಲಾಗಿದೆ ಎಂದು ತಿಳಿಸಿದ್ದಾರೆ.

ಖಟಕಚಿಂಚೋಳಿ ಠಾಣೆಯಲ್ಲಿ ದಾಖಲಾದ ಪ್ರಕರಣದಲ್ಲಿ ₹5 ಲಕ್ಷ ಮೌಲ್ಯದ ಒಂದು ಸ್ವಿಫ್ಟ್‌ ಕಾರು, ₹68 ಸಾವಿರ ನಗದು ಸೇರಿದಂತೆ ಒಟ್ಟು ₹5.68 ಲಕ್ಷ ಮೌಲ್ಯದ ಸ್ವತ್ತು ಜಪ್ತಿ ಮಾಡಿ ನಾಲ್ವರನ್ನು ಬಂಧಿಸಲಾಗಿದೆ. ಧನ್ನೂರ ಠಾಣೆಯಲ್ಲಿ ನಡೆದ ಕಳವು ಪ್ರಕರಣದಲ್ಲಿ ₹4.50 ಲಕ್ಷ ಮೌಲ್ಯದ ಒಂದು ಟಿಪ್ಪರ್‌ ಜಪ್ತಿ ಮಾಡಲಾಗಿದೆ.

ಹುಮನಾಬಾದ್‌ ಠಾಣೆಯಲ್ಲಿ ದಾಖಲಾದ ಕಳವು ಪ್ರಕರಣದಲ್ಲಿ ₹1.19 ಲಕ್ಷ ಮೌಲ್ಯದ ಚಿನ್ನಾಭರಣ ಜಪ್ತಿ ಮಾಡಿ ಇಬ್ಬರನ್ನು ಬಂಧಿಸಲಾಗಿದೆ. ಮನ್ನಳ್ಳಿ ಠಾಣಾ ವ್ಯಾಪ್ತಿಯ ಕಳವು ಪ್ರಕರಣದಲ್ಲಿ ₹72 ಸಾವಿರ ಮೌಲ್ಯದ ಚಿನ್ನಾಭರಣ, ₹30 ಸಾವಿರದ ಒಂದು ಬೈಕ್‌ ಜಪ್ತಿ ಮಾಡಿ ಇಬ್ಬರನ್ನು ಬಂಧಿಸಲಾಗಿದೆ ಎಂದು ಎಸ್‌.ಪಿ ಮಾಹಿತಿ ನೀಡಿದ್ದಾರೆ.

ಎಂಟು ಪೊಲೀಸ್‌ ಠಾಣೆಗಳ ಅಧಿಕಾರಿಗಳು ಸಿಬ್ಬಂದಿ ಉತ್ತಮ ರೀತಿಯಲ್ಲಿ ಕೆಲಸ ನಿರ್ವಹಿಸಿ ಕಳವು ಪ್ರಕರಣಗಳನ್ನು ಭೇದಿಸಿದ್ದಾರೆ. ಜಪ್ತಿ ಮಾಡಿದ ಸ್ವತ್ತು ವಾರಸುದಾರರಿಗೆ ಹಿಂತಿರುಗಿಸಲಾಗಿದೆ
ಪ್ರದೀಪ್‌ ಗುಂಟಿ ಜಿಲ್ಲಾ ಪೊಲೀಸ್‌ ವರಿಷ್ಠಾಧಿಕಾರಿ

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.