ADVERTISEMENT

ಮತಗಟ್ಟೆಗೆ ತೆರಳಿದ ಚುನಾವಣಾ ಸಿಬ್ಬಂದಿ

ಜಿಲ್ಲಾ ಪಂಚಾಯಿತಿಯಲ್ಲಿ ಅಂಗವಿಕಲರೇ ಕಾರ್ಯನಿರ್ವಹಿಸುವ ವಿಶೇಷ ಮತಗಟ್ಟೆ

​ಪ್ರಜಾವಾಣಿ ವಾರ್ತೆ
Published 22 ಏಪ್ರಿಲ್ 2019, 14:30 IST
Last Updated 22 ಏಪ್ರಿಲ್ 2019, 14:30 IST
ಬೀದರ್‌ನ ಬಿ.ವಿ.ಭೂಮರಡ್ಡಿ ಕಾಲೇಜಿನ ಆವರಣದಲ್ಲಿ ಚುನಾವಣಾ ಸಿಬ್ಬಂದಿ ಅಂಗವಿಕಲರಿಗೆ ಮತದಾನ ಮಾಡಲು ಅನುಕೂಲವಾಗುವಂತೆ ಒದಗಿಸಲಾದ ಭೂತಕನ್ನಡಿ ಮತ್ತಿತರ ಸಾಮಗ್ರಿಗಳನ್ನು ಪರಿಶೀಲಿಸಿಕೊಂಡರು
ಬೀದರ್‌ನ ಬಿ.ವಿ.ಭೂಮರಡ್ಡಿ ಕಾಲೇಜಿನ ಆವರಣದಲ್ಲಿ ಚುನಾವಣಾ ಸಿಬ್ಬಂದಿ ಅಂಗವಿಕಲರಿಗೆ ಮತದಾನ ಮಾಡಲು ಅನುಕೂಲವಾಗುವಂತೆ ಒದಗಿಸಲಾದ ಭೂತಕನ್ನಡಿ ಮತ್ತಿತರ ಸಾಮಗ್ರಿಗಳನ್ನು ಪರಿಶೀಲಿಸಿಕೊಂಡರು   

ಬೀದರ್‌: ಲೋಕಸಭಾ ಕ್ಷೇತ್ರದ ಚುನಾವಣಾ ಕಾರ್ಯಕ್ಕೆ ನೇಮಕಗೊಂಡಿರುವ ಮತಗಟ್ಟೆ ಅಧಿಕಾರಿಗಳು ಹಾಗೂ ಸಿಬ್ಬಂದಿಗೆ ನಗರದ ಬಿ.ವಿ.ಭೂಮರಡ್ಡಿ ಕಾಲೇಜು ಹಾಗೂ ತಾಲ್ಲೂಕು ಕೇಂದ್ರಗಳಲ್ಲಿ ಅಗತ್ಯ ಸಾಮಗ್ರಿಗಳನ್ನು ವಿತರಿಸುವ ಕಾರ್ಯ ಸೋಮವಾರ ನಡೆಯಿತು.

ಮಸ್ಟರಿಂಗ್‌ ಕಾರ್ಯದಲ್ಲಿ ಆಯಾ ವಿಧಾನಸಭಾ ಕ್ಷೇತ್ರದ ವ್ಯಾಪ್ತಿಯಲ್ಲಿ ನಿಯೋಜನೆಗೊಂಡಿರುವ ಸಿಬ್ಬಂದಿ ಇವಿಎಂ, ವಿವಿಪ್ಯಾಟ್‌, ಬ್ಯಾಲೆಟ್‌ ಯೂನಿಟ್‌, ಶಾಯಿ, ರಟ್ಟು ಹಾಗೂ ಇತರೆ ಮತಗಟ್ಟೆ ಸಾಮಗ್ರಿಗಳನ್ನು ಸ್ಥಳದಲ್ಲೇ ಪರಿಶೀಲಿಸಿಕೊಂಡರು. ಕೆಲ ಸಿಬ್ಬಂದಿ ಸ್ಥಳದಲ್ಲೇ ಉಪಕರಣಗಳನ್ನು ಪ್ರಾಯೋಗಿಕವಾಗಿ ಜೋಡಣೆ ಮಾಡಿಕೊಂಡು ಗೊಂದಲ ನಿವಾರಿಸಿಕೊಂಡರು.

ಮತದಾನ ಪ್ರಕ್ರಿಯೆಗೆ ತೆರಳುವ ಸಿಬ್ಬಂದಿ ಹಾಗೂ ಪೊಲೀಸರನ್ನು ಕರೆದುಕೊಂಡು ಹೋಗಲು ಕೆಎಸ್‌ಆರ್‌ಟಿಸಿ ಬಸ್‌ಗಳು ಕಾಲೇಜಿನ ಆವರಣದಲ್ಲಿ ಜಮಾವಣೆಗೊಂಡಿದ್ದವು. ಈ ಬಸ್‌ಗಳಲ್ಲಿ ತಮ್ಮ ಮತಗಟ್ಟೆ ಕೇಂದ್ರಗಳತ್ತ ಪ್ರಯಾಣ ಬೆಳೆಸಿದರು.

ADVERTISEMENT

ಸೂಕ್ಷ್ಮ ಮತಗಟ್ಟೆಗಳಲ್ಲಿ ಒಬ್ಬ ಹೆಡ್‌ಕಾನ್‌ಸ್ಟೆಬಲ್‌ ಹಾಗೂ ಗೃಹ ರಕ್ಷಕ ಸಿಬ್ಬಂದಿ, ಸಾಮಾನ್ಯ ಮತಗಟ್ಟೆಯಲ್ಲಿ ಒಬ್ಬ ಪೊಲೀಸ್‌ ಕಾನ್‌ಸ್ಟೆಬಲ್‌ ನಿಯೋಜಿಸಲಾಗಿದೆ. ಪ್ರತಿಯೊಂದು ಮತಗಟ್ಟೆಗೆ ನೇಮಕವಾದ ಸಿಬ್ಬಂದಿಗೆ ಊಟದ ವ್ಯವಸ್ಥೆ, ಮೆಡಿಕಲ್‌ ಕಿಟ್‌ಗಳನ್ನು ಪೂರೈಸಲಾಗಿದೆ. ಚುನಾವಣಾ ಸಿಬ್ಬಂದಿ ಮತಗಟ್ಟೆಗೆ ತೆರಳಲು 244 ಬಸ್‌ಗಳು, 134 ಕ್ರೂಸರ್‌, 219 ಜೀಪ್‌ಗಳು ಹಾಗೂ 120 ಇನ್ನಿತರ ವಾಹನಗಳ ವ್ಯವಸ್ಥೆ ಮಾಡಲಾಗಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.