ADVERTISEMENT

ಹೊಲದಲ್ಲಿ ಚರಗ ಚೆಲ್ಲಿ ಸಂಭ್ರಮಿಸಿದ ರೈತರು

ಕಮಲನಗರ ತಾಲ್ಲೂಕಿನಲ್ಲಿ ಎಳ್ಳ ಅಮಾವಾಸ್ಯೆ ಸಂಭ್ರಮ; ಹೊಲದಲ್ಲಿ ಸಹಭೋಜನ

​ಪ್ರಜಾವಾಣಿ ವಾರ್ತೆ
Published 14 ಜನವರಿ 2021, 3:17 IST
Last Updated 14 ಜನವರಿ 2021, 3:17 IST
ಕಮಲನಗರ ಪಟ್ಟಣದ ಪ್ರಕಾಶ ಸೋಲ್ಲಪುರೆ ಹೊಲದಲ್ಲಿ ಎಳ್ಳ ಅಮಾವಾಸ್ಯೆ ಹಬ್ಬ ಆಚರಿಸಿದರು
ಕಮಲನಗರ ಪಟ್ಟಣದ ಪ್ರಕಾಶ ಸೋಲ್ಲಪುರೆ ಹೊಲದಲ್ಲಿ ಎಳ್ಳ ಅಮಾವಾಸ್ಯೆ ಹಬ್ಬ ಆಚರಿಸಿದರು   

ಕಮಲನಗರ: ತಾಲ್ಲೂಕಿನ ವಿವಿಧ ಗ್ರಾಮಗಳಲ್ಲಿ ಎಳ್ಳ ಅಮಾವಾಸ್ಯೆ ಹಬ್ಬ ಆಚರಿಸಲಾಯಿತು.

ರೈತರು ಪಾಂಡವರ ಮೂರ್ತಿಗಳಿಗೆ ನೈವೇದ್ಯ ಅರ್ಪಿಸಿ ಸಾಂಪ್ರದಾಯಿಕ ಗೀತೆ ಹಾಡಿ ಇರುವ ಅಲ್ಪಸ್ವಲ್ಪ ಬೆಳೆಗೆ ಪೂಜೆ ಸಲ್ಲಿಸಿದರು. ಮನೆಯಿಂದ ತಂದಿದ್ದ ಭಜ್ಜಿ ಮತ್ತು ವಿವಿಧ ಕಾಳಿನ ಪಲ್ಲೆ, ಹುಗ್ಗಿ, ತುಪ್ಪ, ಜೋಳದ ಅನ್ನ, ಅಂಬಲಿ, ರೊಟ್ಟಿ, ಸಜ್ಜಿ ರೊಟ್ಟಿ ಊಟವನ್ನು ಆಪ್ತರು, ಬಂಧುಬಳಗ, ಸ್ನೇಹಿತರಿಗೆ ಬಡಿಸಿ ಸಂಭ್ರಮಿಸಿದರು.

ಈ ಸಲ ಸಕಾಲಕ್ಕೆ ಮುಂಗಾರು ಆಗಮನದಿಂದ ಬೆಳೆ ಸಮೃದ್ಧಿಯಾಗಿ ಬೆಳೆದಿತ್ತು. ಮಳೆ ಅಧಿಕಗೊಂಡು ನೆರೆಗೆ ಬೆಳೆ ಪೂರ್ಣವಾಗಿ ಕೈಕೊಟ್ಟಿದ್ದು, ರೈತ ವರ್ಗಕ್ಕೆ ತೀವ್ರ ಹೊಡೆತ ನೀಡಿದೆ. ಈ ವರ್ಷ ಮುಂಗಾರು ಮತ್ತು ಹಿಂಗಾರು ಬೆಳೆಗೆ ಕಳಪೆ ಬೀಜ ವಿತರಣೆ ಮತ್ತು ವಿಚಿತ್ರ ರೋಗದಿಂದ ಬೆಳೆ ಕೈಕೊಟ್ಟಿದೆ. ತಾಲ್ಲೂಕಿನಲ್ಲಿ 12 ಸಾವಿರ ಹೆಕ್ಕೇರ್‌ ಪ್ರದೇಶದಲ್ಲಿ ಬಿತ್ತನೆಯಾಗಬೇಕಿತ್ತು. ಆದರೆ, ಮಳೆ, ಅಕಾಲಿಕ ಮಳೆಯಿಂದಾಗಿ 8 ಸಾವಿರ ಹೆಕ್ಟೇರ್‌ ಪ್ರದೇಶದಲ್ಲಿ ಮಾತ್ರ ಬಿತ್ತನೆಯಾಗಿತ್ತು. ಅದೂ ಸಹ ಹಾಳಾಗಿದೆ.

ADVERTISEMENT

‘ಎಳ್ಳು ಅಮಾವಾಸ್ಯೆ ಹಬ್ಬದ ವೇಳೆ ಹೊಲದಲ್ಲಿ ಕಡಲೆ, ಜೋಳ, ಕುಸುಬೆ, ಅವರೆ ಬೆಳೆ ವಿಫುಲವಾಗಿ ಬೆಳೆದು ಹಚ್ಚ ಹಸಿರಿನಿಂದ ಕಂಗೊಳಿಸುತ್ತಿತ್ತು. ಆದರೆ, ಅದ್ಯಾವುದು ಇಂದು ಹೊಲದಲ್ಲಿ ಕಾಣುತ್ತಿಲ್ಲ. ಸಂಪ್ರದಾಯ ಮುರಿದುಹೋಗಬಾರದು ಎಂಬ ಕಾರಣಕ್ಕೆ ಒಣ, ತೊಗರಿ ಹೊಲದಲ್ಲಿ ಎಳ್ಳ ಅಮಾವಾಸ್ಯೆ ಆಚರಿಸಲಾಗುತ್ತಿದೆ. ಅಕಾಲಿಕ ಮಳೆಯಿಂದ ಅಲ್ಪಸ್ವಲ್ಪ ಬೆಳೆದ ಜೋಳವು ಸಂಪೂರ್ಣವಾಗಿ ನೆಲಕ್ಕೆ ಬಿದ್ದಿದ್ದು. ಎತ್ತಿ ಕಟ್ಟೋಣ ಎಂದರೆ ದಂಟು ಮುರಿದು ಬಿಳುತ್ತಿವೆ ಎಂದು ಸುರೇಶ ಸೇರೆ, ಬಾಲಾಜಿ ಬನವಾಸೆ, ಅಂಕೋಶ, ಚನ್ನಬಸವ ಅನೇಕ ರೈತರು ಅಸಹಾಯಕತೆ ವ್ಯಕ್ತಪಡಿಸುತ್ತಾರೆ.

‘ಎಳ್ಳ ಅಮಾವಾಸ್ಯೆಗೆ ಭಜ್ಜಿ ಪಲ್ಲೆ ವಿಶೇಷ. ಆದರೆ ಅದು ತಯಾರಿಸಲು ಬೇಕಾದ ಕಾಳು, ತರಕಾರಿ ಮಾರುಕಟ್ಟೆಯಲ್ಲಿ ದುಬಾರಿಯಾಗಿದೆ. ಪ್ರತಿ ವರ್ಷ ಒಂದು ಕ್ವಿಂಟಲ್ ಅವರೆ ಕಾಳು ಬೆಳೆಯುತ್ತಿದ್ದೆವು. ಜೊತೆಯಲ್ಲಿ ತೊಗರಿ, ವಠಾಣಿ ಸೇರಿ 14 ಚೀಲ ಬೆಳೆಯುತ್ತಿದ್ದೆವು. ಆದರೆ, ಈ ವರ್ಷ ಬೀಜ ಮೊಳಕೆ ಒಡೆದಿಲ್ಲ. ತೊಗರಿ ಬೆಳೆ ಸಮೃದ್ಧಿಯಾಗಿ ಬೆಳೆದಿತ್ತು. 20 ಚೀಲ ರಾಶಿ ಮಾಡಬಹುದು ಎನ್ನುವಷ್ಟರಲ್ಲಿಯೇ 3 ಎಕರೆಯಲ್ಲಿ ಮೂರು ಚೀಲ ಸಹ ಬೆಳೆದಿಲ್ಲ’ ಎಂದು ಡಿಗ್ಗಿ ಗ್ರಾಮದ ಉಮಾಕಾಂತ ಹೇಳಿದರು.

‘ಕಳೆದ ಹಲವು ವರ್ಷಗಳಿಂದ ಒಕ್ಕಲುತನ ಮಾಡಿದ್ದೇನೆ. ಕೆಲವೊಮ್ಮೆ ಮಳೆ ಕೊರತೆಯಾದರೂ ನೀರು ಇವೆ. ಇದರಿಂದ ಹಿಂಗಾರು ಬೆಳೆ ಬರುತ್ತಿತ್ತು. ಆದರೆ ಈ ಬಾರಿ ಮುಂಗಾರು ಮತ್ತು ಹಿಂಗಾರಿನಲ್ಲೂ ಮಳೆಯಾಗಿ ಬೆಳೆ ಕಳೆದುಕೊಂಡಿದ್ದೇವೆ’ ಎಂದು ರೈತ ಉಮಾಕಾಂತ ಬೆಸರದಿಂದ ಹೇಳಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.