ಬೀದರ್: ‘ಕೇವಲ ಭಾಷಣಗಳಿಂದ ನಮ್ಮ ಮಧ್ಯೆ ಕಲೆ ಉಳಿಯಲು ಸಾಧ್ಯವಿಲ್ಲ. ಕಲಾವಿದರಿಗೆ ಪ್ರೋತ್ಸಾಹ ನೀಡಿದರೆ ಮಾತ್ರ ಕಲೆ ಉಳಿಯಲು ಸಾಧ್ಯ’ ಎಂದು ಸಾಹಿತಿ ಚಂದ್ರಪ್ಪ ಹೆಬ್ಬಾಳಕರ್ ಹೇಳಿದರು.
ಕನ್ನಡ ಮತ್ತು ಸಂಸ್ಕೃತಿ ಇಲಾಖೆಯ ವತಿಯಿಂದ ಇಲ್ಲಿಯ ಡಾ.ಚನ್ನಬಸವ ಪಟ್ಟದೇವರು ಜಿಲ್ಲಾ ರಂಗ ಮಂದಿರದಲ್ಲಿ ಶುಕ್ರವಾರ ಏರ್ಪಡಿಸಿದ್ದ ಪರಿಶಿಷ್ಟ ಜಾತಿ ಕಲಾವಿದರ ಜನಪರ ಉತ್ಸವಕ್ಕೆ ಚಾಲನೆ ನೀಡಿ ಅವರು ಮಾತನಾಡಿದರು.
‘ಆಧುನಿಕತೆಯ ಪರಿಣಾಮದಿಂದಾಗಿ ಅನೇಕ ಕಲೆಗಳು ನಶಿಸಿ ಹೋಗಿವೆ. ಅಳಿದುಳಿದ ಕಲೆಗಳನ್ನು ಉಳಿಸಿಕೊಳ್ಳಲು ಪ್ರಯತ್ನಿಸಬೇಕಿದೆ. ಈ ದಿಸೆಯಲ್ಲಿ ಕಲಾವಿದರಿಗೆ ಉತ್ತೇಜನ ನೀಡಬೇಕಿದೆ. ಇಂತಹ ಕಾರ್ಯಕ್ರಮಗಳ ಮೂಲಕವೇ ಕಲೆಗಳನ್ನು ಬೆಳೆಸಬೇಕಿದೆ’ ಎಂದು ಹೇಳಿದರು.
ಜನಪದ ಕಲಾವಿದರ ಬಳಗದ ಅಧ್ಯಕ್ಷ ವಿಜಯಕುಮಾರ ಸೋನಾರೆ ಮಾತನಾಡಿ, ‘ರಾಜ್ಯದ ಕೆಲ ಜಿಲ್ಲೆಗಳಲ್ಲಿ ಸರ್ಕಾರದ ಕಾರ್ಯಕ್ರಮಗಳಲ್ಲಿ ಪಾಲ್ಗೊಳ್ಳಲು ಕಲಾವಿದರು ಅಧಿಕಾರಿಗಳಿಗೆ ಹಣ ನೀಡಬೇಕಾದ ಸ್ಥಿತಿ ಇದೆ. ಹೀಗಾಗಿ ನೈಜ ಕಲಾವಿದರು ಕಾರ್ಯಕ್ರಮ ನೀಡಲು ಮುಂದೆ ಬರುತ್ತಿಲ್ಲ. ಇದರಿಂದ ಕಲೆಗೆ ಹಿನ್ನಡೆಯಾಗುತ್ತಿದೆ’ ಎಂದರು.
‘ಗ್ರಾಮೀಣ ಪ್ರದೇಶದಲ್ಲಿರುವ ನೈಜ ಕಲಾವಿದರನ್ನು ಗುರುತಿಸುವ ಕಾರ್ಯ ನಿರಂತರವಾಗಿ ನಡೆಯಬೇಕು. ಹಿರಿಯ ಕಲಾವಿದರು ಹೊಸ ತಲೆಮಾರಿನ ಕಲಾವಿದರನ್ನು ಬೆಳೆಸುವ ಮೂಲಕ ನಾಡಿನ ಕಲೆ, ಸಂಸ್ಕೃತಿಯನ್ನು ಮುಂದಿನ ಪೀಳಿಗೆಗೆ ಕೊಂಡೊಯ್ಯುವ ಕೆಲಸ ಮಾಡಬೇಕು’ ಎಂದು ಮನವಿ ಮಾಡಿದರು.
‘ಮೊಬೈಲ್‌ಗಳು ಬಂದ ಮೇಲೆ ಬಡ ಕಲಾವಿದರ ಬದುಕು ಕಷ್ಟವಾಗಿದೆ. ಕಲಾವಿದರಿಗೆ ಸರಿಯಾದ ಸಂಭಾವನೆ ದೊರಕುತ್ತಿಲ್ಲ. ಸರ್ಕಾರದಿಂದಲೂ ನಿರಂತರವಾಗಿ ಕಾರ್ಯಕ್ರಮಗಳು ನಡೆಯುತ್ತಿಲ್ಲ. ಜನಪರ ಕಲೆಗಳನ್ನು ಉಳಿಸಿಕೊಳ್ಳಲು ಕಲಾವಿದರಿಗೆ ನೆರವು ನೀಡಬೇಕಾಗಿದೆ’ ಎಂದು ತಿಳಿಸಿದರು.
‘ಕಲಾವಿದರು ತಂಡಗಳನ್ನು ರಚಿಸಿಕೊಂಡು ನಮ್ಮ ಜಿಲ್ಲೆಯೊಳಗಿನ ಕಲೆಗಳನ್ನು ಉಳಿಸಿಕೊಳ್ಳುವುದರ ಜತೆಗೆ ಬೇರೆ ಜಿಲ್ಲೆಗಳ ವಿಶಿಷ್ಟ ಕಲೆಗಳನ್ನು ಕಲಿತು ನಾಡಿನ ಸಂಸ್ಕೃತಿಯನ್ನು ಬೆಳಗಿಸಬೇಕು’ ಎಂದು ಸಲಹೆ ನೀಡಿದರು.
ಕನ್ನಡ ಸಾಹಿತ್ಯ ಪರಿಷತ್ತಿನ ತಾಲ್ಲೂಕು ಘಟಕದ ಅಧ್ಯಕ್ಷ ಎಂ.ಎಸ್.ಮನೋಹರ್ ಮಾತನಾಡಿ, ‘ಕಲೆಗೆ ಜನಪದ ಕಲೆಯೇ ತಾಯಿ ಬೇರಾಗಿದೆ. ಜನಪದ ಕಲೆಯನ್ನು ಮರೆತರೆ ಬೇರೆ ಯಾವ ಕಲೆಯೂ ಪರಿಪೂರ್ಣವಾಗಲಾರದು’ ಎಂದರು.
‘ಲಾಕ್‌ಡೌನ್ ಅವಧಿಯಲ್ಲಿ ಕಲಾವಿದರೇ ಹೆಚ್ಚು ಕಷ್ಟ ಅನುಭವಿಸಿದ್ದಾರೆ. ತಡ ಮಾಡಿಯಾದರೂ ಸರ್ಕಾರ ಜನಪರ ಉತ್ಸವ ನಡೆಸುತ್ತಿರುವುದು ಸಮಾಧಾನ ತಂದಿದೆ. ಕಲೆಗಳನ್ನು ಉಳಿಸಿಕೊಳ್ಳಲು ಇಂದಿನ ಯುವ ಪೀಳಿಗೆಗೆ ತರಬೇತಿ ನೀಡುವ ಅಗತ್ಯವಿದೆ’ ಎಂದು ಹೇಳಿದರು.
‘ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಕಲಾವಿದರಿಗೆ ತರಬೇತಿ ಆಯೋಜಿಸುವ ಮೂಲಕ ಜನಪದ ಕಾರ್ಯಕ್ರಮಗಳು ಅಚ್ಚುಕಟ್ಟಾಗಿ ನಡೆಯುವಂತೆ ಮಾಡಬೇಕಿದೆ. ಅಂದಾಗ ಮಾತ್ರ ರಾಜ್ಯದ ಎಲ್ಲ ಕಲೆಗಳು ಜೀವಂತವಾಗಿ ಉಳಿಯಲು ಸಾಧ್ಯ ಇದೆ’ ಎಂದು ತಿಳಿಸಿದರು.
ಮುಖ್ಯ ಅತಿಥಿಗಳಾದ ಯುವ ಸಬಲೀಕರಣ ಹಾಗೂ ಕ್ರೀಡಾ ಇಲಾಖೆಯ ಸಹಾಯಕ ನಿರ್ದೇಶಕ ಆರ್.ಸಿ.ನಾಡಿಗೇರ, ಜಿಲ್ಲಾ ಕನ್ನಡ ಅಭಿವೃದ್ಧಿ ಅನುಷ್ಠಾನ ಸಮಿತಿ ಸದಸ್ಯ ಎಂ.ಪಿ.ಮುದಾಳೆ, ವಕೀಲ ಬಿ.ಎಸ್.ಪಾಟೀಲ, ಎಎಸ್‌ಐ ಜಗನ್ನಾಥ ಬಿರಾದಾರ ಇದ್ದರು. ಪತ್ರಕರ್ತ ಚಂದ್ರಕಾಂತ ಎಂ. ಅಧ್ಯಕ್ಷತೆ ವಹಿಸಿದ್ದರು.
ಕನ್ನಡ ಮತ್ತು ಸಂಸ್ಕೃತಿ ಇಲಾಖೆಯ ಸಹಾಯಕ ನಿರ್ದೇಶಕ ಸಿದ್ರಾಮ ಸಿಂಧೆ ಸ್ವಾಗತಿಸಿ, ಪ್ರಾಸ್ತಾವಿಕವಾಗಿ ಮಾತನಾಡಿದರು. ದೇವಿದಾಸ ಜೋಶಿ ನಿರೂಪಿಸಿದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.