ADVERTISEMENT

ಬಜೆಟ್‌ನಲ್ಲಿ ಸಿಕ್ಕೀತೆ ಕೃಷಿ ಕಾಲೇಜು

ಐದು ವರ್ಷಗಳಿಂದ ಸರ್ಕಾರಕ್ಕೆ ಮನವಿ ಮಾಡುತ್ತಿರುವ ಜಿಲ್ಲೆಯ ಜನ

ಚಂದ್ರಕಾಂತ ಮಸಾನಿ
Published 29 ಫೆಬ್ರುವರಿ 2020, 14:29 IST
Last Updated 29 ಫೆಬ್ರುವರಿ 2020, 14:29 IST

ಬೀದರ್: ಜಿಲ್ಲೆ ಕೃಷಿ ಪ್ರಧಾನವಾಗಿದೆ. ಬಹುತೇಕ ಜನ ಕೃಷಿಯನ್ನೇ ಅವಲಂಬಿಸಿದ್ದಾರೆ. ತೋಟಗಾರಿಕೆ ಹಾಗೂ ಪಶು ವೈದ್ಯಕೀಯ ಕಾಲೇಜು ಇಲ್ಲಿ ಇವೆ. ಆದರೆ, ಕೃಷಿ ಕಾಲೇಜು ಇನ್ನೂ ಕನಸಾಗಿಯೇ ಉಳಿದಿದೆ. ಜಿಲ್ಲೆಗೆ ಕೃಷಿ ಕಾಲೇಜು ಮಂಜೂರು ಮಾಡಬೇಕು ಎನ್ನುವುದು ಬಹುದಿನಗಳ ಬೇಡಿಕೆಯಾಗಿದೆ. ಬಜೆಟ್‌ಗೆ ಮುನ್ನ ಪ್ರತಿ ವರ್ಷ ಸರ್ಕಾರಕ್ಕೆ ಮನವಿ ಸಲ್ಲಿಸಿ ನಿರಾಶೆಗೊಳಗಾಗುತ್ತಿದ್ದಾರೆ. ಈ ಬಾರಿ ಮತ್ತೆ ಕೃಷಿ ಕಾಲೇಜಿನ ಬೇಡಿಕೆ ಮುಂಚೂಣಿಗೆ ಬಂದಿದೆ.

ಜಿಲ್ಲೆಯ ಬಿಜೆಪಿಯ ಏಕೈಕ ಶಾಸಕ ಪ್ರಭು ಚವಾಣ್‌ ಅವರು ಸಚಿವರಾದ ಮೇಲೆ ಜನರ ನಿರೀಕ್ಷೆ ಇನ್ನೂ ಹೆಚ್ಚಾಗಿದೆ. ಗಣರಾಜ್ಯೋತ್ಸವ ಸಮಾರಂಭದಲ್ಲಿ ಸಚಿವರೇ ಈ ವಿಷಯವನ್ನು ಪ್ರಸ್ತಾಪಿಸಿ ‘ಈ ವರ್ಷ ಬೀದರ್‌ ಜಿಲ್ಲೆಗೆ ಕೃಷಿ ಕಾಲೇಜನ್ನು ತಂದೇ ತರುತ್ತೇನೆ’ ಎಂದು ಘೋಷಿಸಿದ್ದರು. ಹೀಗಾಗಿ ಜನರ ವಿಶ್ವಾಸವೂ ಇಮ್ಮಡಿಗೊಂಡಿದೆ.

ಜಿಲ್ಲೆಯ ಅನೇಕ ಸಂಘ ಸಂಸ್ಥೆಗಳು ಹಾಗೂ ಮುಖಂಡರು ಸಹ ಪ್ರಸಕ್ತ ಸಾಲಿನ ಮುಂಗಡ ಪತ್ರದಲ್ಲಿ ಬೀದರ್‌ಗೆ ಕೃಷಿ ಕಾಲೇಜು ಘೋಷಿಸಬೇಕು ಎಂದು ಮನವಿ ಮಾಡಿದ್ದಾರೆ. ಜಿಲ್ಲೆಯ ಶೇ 75 ರಷ್ಟು ಜನ ಕೃಷಿಯನ್ನು ಅವಲಂಬಿಸಿದ್ದಾರೆ. ಬೀದರ್‌ನಲ್ಲಿ ಕೃಷಿ ಕಾಲೇಜು ಆರಂಭವಾದರೆ ಕೃಷಿಗೆ ಸಂಬಂಧಿಸಿದ ಕೋರ್ಸ್‌ಗಳನ್ನು ಮಾಡಲು ಅನುಕೂಲವಾಗಲಿದೆ.

ADVERTISEMENT

ಹಿಂದೆ ಮುಖ್ಯಮಂತ್ರಿಯಾಗಿದ್ದ ಸಿದ್ದರಾಮಯ್ಯ, ಎಚ್‌.ಡಿ.ಕುಮಾರಸ್ವಾಮಿ ಹಾಗೂ ಡಿಸೆಂಬರ್‌ನಲ್ಲಿ ಮುಖ್ಯಮಂತ್ರಿ ಬಿ.ಎಸ್‌.ಯಡಿಯೂರಪ್ಪ ಅವರಿಗೆ ಜಿಲ್ಲೆಯ ಮುಖಂಡರು ಮನವಿ ಸಲ್ಲಿಸಿದ್ದಾರೆ. ಫೆಬ್ರುವರಿ 7 ರಂದು ಬೀದರ್‌ ತಾಲ್ಲೂಕಿನ ಕಮಠಾಣ ಸಮೀಪದ ಕರ್ನಾಟಕ ಪಶು ವೈದ್ಯಕೀಯ ವಿಶ್ವವಿದ್ಯಾಲಯದಲ್ಲಿ ನಡೆದ ರಾಜ್ಯಮಟ್ಟದ ಪಶು ಮೇಳದಲ್ಲಿ ಯಡಿಯೂರಪ್ಪ ಅವರಿಗೆ ರೈತರು ಮನವಿ ಮಾಡಿಕೊಂಡಿದ್ದಾರೆ.

ಕಲ್ಯಾಣ ಕರ್ನಾಟಕ ಭಾಗದ ಆರು ಜಿಲ್ಲೆಗಳ ಪೈಕಿ ಮೂರು ಜಿಲ್ಲೆಗಳಲ್ಲಿ ಮಾತ್ರ ಕೃಷಿ ಕಾಲೇಜುಗಳು ಇವೆ. ಜಿಲ್ಲೆಯ ವಿದ್ಯಾರ್ಥಿಗಳು ಕೃಷಿ ಶಿಕ್ಷಣಕ್ಕಾಗಿ ಕಲಬುರ್ಗಿ, ರಾಯಚೂರು ಇಲ್ಲವೆ ಯಾದಗಿರಿ ಜಿಲ್ಲೆಯ ಭೀಮರಾಯನಗುಡಿಗೆ ತೆರಳಬೇಕಾದ ಸ್ಥಿತಿ ಇದೆ. ರೈತರು ತಮ್ಮ ಮಕ್ಕಳಿಗೆ ವಸತಿ ವ್ಯವಸ್ಥೆ ಕಲ್ಪಿಸಿ ಶಿಕ್ಷಣ ಕೊಡಿಸುವುದು ಬಹಳ ಕಷ್ಟವಾಗುತ್ತಿದೆ.

‘ರಾಯಚೂರು ಕೃಷಿ ವಿಶ್ವವಿದ್ಯಾಲಯದ ಅಧೀನದಲ್ಲಿ ಬೀದರ್‌ ತಾಲ್ಲೂಕಿನ ಜನವಾಡದ ಕೃಷಿ ವಿಜ್ಞಾನ ಕೇಂದ್ರದ ಆವರಣದಲ್ಲಿ ಕೃಷಿ ಡಿಪ್ಲೊಮಾ ಕೋರ್ಸ್‌ಗಳು ಇವೆ. ಕೃಷಿ ಕಾಲೇಜು ಆರಂಭಿಸಿ ನಾಲ್ಕು ವರ್ಷದ ಕೋರ್ಸಗಳು ಶುರುವಾದರೆ ಕೃಷಿ ಆಸಕ್ತ ಜಿಲ್ಲೆಯ ವಿದ್ಯಾರ್ಥಿಗಳಿಗೆ ಇನ್ನೂ ಅನುಕೂಲವಾಗಲಿದೆ’ ಎನ್ನುತ್ತಾರೆ ಕೃಷಿ ವಿಜ್ಞಾನ ಕೇಂದ್ರದ ಮುಖ್ಯಸ್ಥ ಡಾ.ಸುನೀಲಕುಮಾರ ಎನ್‌.ಎಂ.

‘ಪ್ರತಿ ಜಿಲ್ಲೆಗೂ ಒಂದು ಕೃಷಿ ಕಾಲೇಜು ಇರುವುದು ಒಳ್ಳೆಯದು. ಕೃಷಿ ಕುಟುಂಬದ ಮಕ್ಕಳಿಗೆ ಅನುಕೂಲವಾಗಲಿದೆ. 300 ರಿಂದ 400 ಜನರಿಗೆ ಉದ್ಯೋಗಾವಕಾಶ ದೊರೆಯಲಿದೆ’ ಎಂದು ವಿವರಿಸುತ್ತಾರೆ.

‘ಜಿಲ್ಲೆಯ ಹವಾಗುಣ ಕೃಷಿಗೆ ಸೂಕ್ತವಾಗಿದೆ. ಸುಮಾರು 52ಕ್ಕೂ ಅಧಿಕ ಬಗೆಯ ಬೆಳೆಗಳನ್ನು ಬೆಳೆಯಲಾಗುತ್ತದೆ. ಕೃಷಿ ಕಾಲೇಜು ಆರಂಭಿಸಿದರೆ ರೈತರ ಮಕ್ಕಳು ಆಧುನಿಕ ತಂತ್ರಜ್ಞಾನದ ಮೂಲಕ ಕೃಷಿ ಕೈಗೊಳ್ಳಲು ಅನುಕೂಲವಾಗಿದೆ’ ಎಂದು ರಾಜ್ಯ ರೈತ ಸಂಘದ ಜಿಲ್ಲಾ ಘಟಕದ ಅಧ್ಯಕ್ಷ ಮಲ್ಲಿಕಾರ್ಜುನ ಸ್ವಾಮಿ ಹೇಳುತ್ತಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.