ADVERTISEMENT

ಆರ್ಥಿಕ ಸಬಲತೆಗೆ ಕೃಷಿ, ಉಪ ಕಸುಬು ಅಗತ್ಯ: ಪ್ರೊ.ಕೆ.ಸಿ.ವೀರಣ್ಣ

ಕರ್ನಾಟಕ ಪಶು ವೈದ್ಯಕೀಯ, ಪಶು ಹಾಗೂ ಮೀನುಗಾರಿಕೆ ವಿಜ್ಞಾನಗಳ ವಿಶ್ವವಿದ್ಯಾಲಯ

​ಪ್ರಜಾವಾಣಿ ವಾರ್ತೆ
Published 16 ಜುಲೈ 2025, 5:37 IST
Last Updated 16 ಜುಲೈ 2025, 5:37 IST
ಕಾರ್ಯಕ್ರಮದಲ್ಲಿ ಕರ್ನಾಟಕ ಪಶು ವೈದ್ಯಕೀಯ, ಪಶು ಹಾಗೂ ಮೀನುಗಾರಿಕೆ ವಿಜ್ಞಾನಗಳ ವಿಶ್ವವಿದ್ಯಾಲಯದ ಕುಲಪತಿ ಪ್ರೊ.ಕೆ. ಸಿ.ವೀರಣ್ಣ ಹಾಗೂ ಇನ್ನಿತರರು ಪಶುಪಾಲನೆಗೆ ಸಂಬಂಧಿಸಿದ ಪುಸ್ತಕ ಬಿಡುಗಡೆಗೊಳಿಸಿದರು 
ಕಾರ್ಯಕ್ರಮದಲ್ಲಿ ಕರ್ನಾಟಕ ಪಶು ವೈದ್ಯಕೀಯ, ಪಶು ಹಾಗೂ ಮೀನುಗಾರಿಕೆ ವಿಜ್ಞಾನಗಳ ವಿಶ್ವವಿದ್ಯಾಲಯದ ಕುಲಪತಿ ಪ್ರೊ.ಕೆ. ಸಿ.ವೀರಣ್ಣ ಹಾಗೂ ಇನ್ನಿತರರು ಪಶುಪಾಲನೆಗೆ ಸಂಬಂಧಿಸಿದ ಪುಸ್ತಕ ಬಿಡುಗಡೆಗೊಳಿಸಿದರು    

ಬೀದರ್‌: ‘ರೈತರು ಕೃಷಿಯೊಂದನ್ನೇ ನೆಚ್ಚಿಕೊಳ್ಳದೆ ಅದರೊಂದಿಗೆ ಇತರೆ ಉಪ ಕಸುಬು ಮಾಡಿದರೆ ಆರ್ಥಿಕವಾಗಿ ಸಬಲರಾಗಬಹುದು’ ಎಂದು ಕರ್ನಾಟಕ ಪಶು ವೈದ್ಯಕೀಯ, ಪಶು ಹಾಗೂ ಮೀನುಗಾರಿಕೆ ವಿಜ್ಞಾನಗಳ ವಿಶ್ವವಿದ್ಯಾಲಯದ ಕುಲಪತಿ ಪ್ರೊ.ಕೆ.ಸಿ.ವೀರಣ್ಣ ತಿಳಿಸಿದರು.

ಕಟ್ಟಿತೂಗಾಂವ್‌ ಜಾನುವಾರು ಸಂಶೋಧನೆ ಮತ್ತು ಮಾಹಿತಿ ಕೇಂದ್ರ (ದೇವಣಿ), ಪಶು ವೈದ್ಯಕೀಯ ಕಾಲೇಜಿನ ಸಹಯೋಗದಲ್ಲಿ ಪರಿಶಿಷ್ಟ ಜಾತಿ ಮತ್ತು ಪರಿಶಿಷ್ಟ ಪಂಗಡದ ರೈತರು ಹಾಗೂ ಪಶುಪಾಲಕರಿಗೆ ಏರ್ಪಡಿಸಿದ್ದ ‘ವೈಜ್ಞಾನಿಕ ಪಶುಪಾಲನೆಯಿಂದ ಆರ್ಥಿಕ ಅಭಿವೃದ್ಧಿ ಮತ್ತು ಸುಸ್ಥಿರತೆ’ ಕುರಿತ ನಾಲ್ಕು ದಿನಗಳ ತರಬೇತಿ ಕಾರ್ಯಕ್ರಮಕ್ಕೆ ವಿವಿಯಲ್ಲಿ ಮಂಗಳವಾರ ಚಾಲನೆ ನೀಡಿ ಮಾತನಾಡಿದರು. 

‘ವೈಜ್ಞಾನಿಕ ಪಶು ಪಾಲನೆಗೆ ರೈತರು ಮುಂದಾಗಬೇಕು. ಇದರಿಂದ ಆರ್ಥಿಕವಾಗಿ ಸದೃಢರಾಗಬಹುದು. ಕೃಷಿಯಲ್ಲಿ ಏನೇ ಏರುಪೇರಾದರೂ ಇದು ಕೈಹಿಡಿಯುತ್ತದೆ. ಪಶು ಪಾಲನೆ ಹೇಗೆ ಮಾಡಬೇಕು? ಅದರಿಂದ ಕೈತುಂಬ ಹಣ ಹೇಗೆ ಗಳಿಸಬಹುದು ಎಂಬುದನ್ನು ತಜ್ಞರು ಹೇಳುತ್ತಾರೆ. ಅವರ ಸಲಹೆ ಪಡೆದು ಮುಂದುವರಿಯಬೇಕು’ ಎಂದು ಸಲಹೆ ನೀಡಿದರು.

ADVERTISEMENT

‘ಪಶು ಪಾಲನೆಯಲ್ಲಿ ತೊಡಗಿಸಿಕೊಂಡ ಹೆಚ್ಚಿನ ರೈತರು ಆರ್ಥಿಕವಾಗಿ ಸದೃಢರಾಗಿದ್ದಾರೆ. ಈ ವಲಯದಲ್ಲಿ ರೈತರು ಆತ್ಮಹತ್ಯೆ ಮಾಡಿಕೊಂಡ ನಿದರ್ಶನಗಳಿಲ್ಲ. ಇದು ರೈತರಲ್ಲಿ ಆತ್ಮವಿಶ್ವಾಸ ಬೆಳೆಸುತ್ತದೆ. ಆದಕಾರಣ ಪಶು ಪಾಲನೆಯಲ್ಲಿ ಹೆಚ್ಚಾಗಿ ತೊಡಗಿಸಿಕೊಳ್ಳಬೇಕು. ಇದಕ್ಕೆ ನೆರವು ನೀಡಲು ಅನೇಕ ತಜ್ಞರಿದ್ದಾರೆ. ಇದರ ಪ್ರಯೋಜನ ಪಡೆಯಬೇಕು’ ಎಂದು ಪಶುಸಂಗೋಪನೆ ಹಾಗೂ ಪಶುವೈದ್ಯಕೀಯ ಸೇವಾ ಇಲಾಖೆಯ ಉಪನಿರ್ದೇಶಕ ಡಾ.ನರಸಪ್ಪ ಡಿ. ತಿಳಿಸಿದರು.

ನಾಲ್ಕು ದಿನಗಳ ಅವಧಿಯಲ್ಲಿ ತಜ್ಞರು, ರೈತರಿಗೆ ಹೈನುರಾಸುಗಳ ಆಯ್ಕೆ, ಕಡಿಮೆ ಖರ್ಚಿನಲ್ಲಿ ಹಸಿ ಮೇವು ಹಾಗೂ ಪಶು ಆಹಾರ ತಯಾರಿಸುವುದು, ಜಾನುವಾರುಗಳ ಆರೋಗ್ಯ ರಕ್ಷಣೆ, ಪ್ರಸೂತಿ ಹಾಗೂ ಸಂತಾನೋತ್ಪತ್ತಿಯ ಸಮಸ್ಯೆಗಳು, ಬೇಸಿಗೆಯಲ್ಲಿ ಜಾನುವಾರುಗಳ ನಿರ್ವಹಣೆ, ಹಾಲಿನ ವಿವಿಧ ಉತ್ಪನ್ನಗಳು ಹಾಗೂ ಮಾರುಕಟ್ಟೆಯ ಕುರಿತು ಸಲಹೆ ನೀಡುವರು. 

ಕರ್ನಾಟಕ ರಾಜ್ಯ ವಿಜ್ಞಾನ ಮತ್ತು ತಂತ್ರಜ್ಞಾನ ಮಂಡಳಿಯ ಯೋಜನಾ ಎಂಜಿನಿಯರ್‌ ಗಂಗಾಧರಪ್ಪ, ಪಶು ವಿವಿ ಸಂಶೋಧನಾ ನಿರ್ದೇಶಕ ಡಾ.ಬಿ.ವಿ.ಶಿವಪ್ರಕಾಶ, ವಿಸ್ತರಣಾ ನಿರ್ದೇಶಕ ಡಾ.ಬಸವರಾಜ ಅವಟಿ, ಪ್ರಭಾರ ಡೀನ್‌ ಡಾ.ಆರ್. ಜಿ.ಬಿಜುರಕರ್, ಸಹ ಪ್ರಾಧ್ಯಾಪಕ ಡಾ.ಪ್ರಕಾಶಕುಮಾರ ರಾಠೋಡ್‌, ಸಹಾಯಕ ಪ್ರಾಧ್ಯಾಪಕರಾದ ಡಾ.ವಿದ್ಯಾಸಾಗರ, ಡಾ. ಕೊಟ್ರೇಶ ಪ್ರಸಾದ ಇದ್ದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.