ADVERTISEMENT

ಬಸವಕಲ್ಯಾಣ: ಬಿತ್ತನೆ ಬೀಜ, ಗೊಬ್ಬರಕ್ಕಾಗಿ ರೈತರ ಪ್ರತಿಭಟನೆ

ಮಂಠಾಳದಲ್ಲಿ ಕರ್ನಾಟಕ ರಾಜ್ಯ ರೈತ ಸಂಘದಿಂದ ಖಂಡನೆ

​ಪ್ರಜಾವಾಣಿ ವಾರ್ತೆ
Published 22 ಜೂನ್ 2021, 4:44 IST
Last Updated 22 ಜೂನ್ 2021, 4:44 IST
ಬಸವಕಲ್ಯಾಣ ತಾಲ್ಲೂಕಿನ ಮಂಠಾಳದಲ್ಲಿ ಸೋಮವಾರ ರೈತ ಸಂಘದಿಂದ ಧರಣಿ ನಡೆಸಿ ತಹಶೀಲ್ದಾರ್ ಸಾವಿತ್ರಿ ಸಲಗರ ಅವರಿಗೆ ಮನವಿಪತ್ರ ಸಲ್ಲಿಸಲಾಯಿತು
ಬಸವಕಲ್ಯಾಣ ತಾಲ್ಲೂಕಿನ ಮಂಠಾಳದಲ್ಲಿ ಸೋಮವಾರ ರೈತ ಸಂಘದಿಂದ ಧರಣಿ ನಡೆಸಿ ತಹಶೀಲ್ದಾರ್ ಸಾವಿತ್ರಿ ಸಲಗರ ಅವರಿಗೆ ಮನವಿಪತ್ರ ಸಲ್ಲಿಸಲಾಯಿತು   

ಬಸವಕಲ್ಯಾಣ: ತಾಲ್ಲೂಕಿನ ಹೋಬಳಿ ಕೇಂದ್ರ ಮಂಠಾಳದ ರೈತ ಸಂಪರ್ಕ ಕೇಂದ್ರದ ಎದುರು ಸೋಮವಾರ ಬಿತ್ತನೆ ಬೀಜ ಮತ್ತು ಗೊಬ್ಬರ ಪೂರೈಕೆಗೆ ಆಗ್ರಹಿಸಿ ಕರ್ನಾಟಕ ರಾಜ್ಯ ರೈತ ಸಂಘ ಹಾಗೂ ಹಸಿರು ಸೇನೆಯಿಂದ ಪ್ರತಿಭಟನೆ ನಡೆಸಲಾಯಿತು.

ಕೆಲಕಾಲ ಇಲ್ಲಿ ಧರಣಿ ನಡೆಸಿ ‘ಬೇಕೇ ಬೇಕು. ಬೀಜ ಬೇಕು. ರೈತ ವಿರೋಧಿ ಸರ್ಕಾರಕ್ಕೆ ಧಿಕ್ಕಾರ’ ಎಂಬಿತ್ಯಾದಿ ಘೋಷಣೆಗಳನ್ನು ಕೂಗಲಾಯಿತು.

‘ರೈತರು ಹೆಸರು ನೋಂದಣಿ ಮಾಡಿಸಿ ಕೆಲ ದಿನಗಳಾದರೂ ಸೋಯಾಬೀನ್ ಬೀಜ ವಿತರಿಸುತ್ತಿಲ್ಲ. ತೊಗರಿ ಬೀಜ ಪಡೆದುಕೊಂಡರೆ ಸೋಯಾಬೀನ್ ಬೀಜ ಕೊಡುವುದಿಲ್ಲ ಎಂದು ಕೃಷಿ ಇಲಾಖೆಯವರು ಹೇಳುತ್ತಿದ್ದಾರೆ’ ಎಂದು ರೈತರು ಆಕ್ರೋಶ ವ್ಯಕ್ತಪಡಿಸಿದರು.

ADVERTISEMENT

ರೈತ ಸಂಘದ ತಾಲ್ಲೂಕು ಘಟಕದ ಉಪಾಧ್ಯಕ್ಷ ಸಂತೋಷಕುಮಾರ ಗುದಗೆ ಮಾತನಾಡಿ, ‘ಬೀಜದ ಅಭಾವ ಆಗಿದ್ದರಿಂದ ಇನ್ನಷ್ಟು ತೊಂದರೆ ಆಗಿದೆ. ಗೊಬ್ಬರ ಕೂಡ ಸಮಯಕ್ಕೆ ಸಿಗುತ್ತಿಲ್ಲ. ಕೆಲ ದಿನಗಳ ಹಿಂದೆಯೇ 600 ಜನರಿಂದ ಹಣ ಪಡೆದು ಹೆಸರು ನೋಂದಾಯಿಸಿಕೊಂಡು ಟೋಕನ್ ನೀಡಲಾಗಿದೆ. ಅವರು ರೈತ ಸಂಪರ್ಕ ಕೇಂದ್ರಕ್ಕೆ ಪ್ರತಿದಿನ ಬಂದು ವಾಪಸ್‌ ಹೋಗುತ್ತಿದ್ದಾರೆ. ಆದರೂ, ಸಂಬಂಧಿತರು ಅಗತ್ಯ ಕ್ರಮ ತೆಗೆದುಕೊಳ್ಳುತ್ತಿಲ್ಲ’ ಎಂದು ದೂರಿದರು.

‘ರೈತರಿಗೆ ವಿಮೆ ಪರಿಹಾರ ನೀಡುತ್ತಿಲ್ಲ. ಸಹಕಾರ ಸಕ್ಕರೆ ಕಾರ್ಖಾನೆ ಯವರು ₹2,400 ಬೆಲೆ ನೀಡುತ್ತೇವೆ ಎಂದು ಭರವಸೆ ನೀಡಿದ್ದರೂ ಇದುವರೆಗೆ ಕೇವಲ ₹1,900 ಪಾವತಿಸಿದ್ದಾರೆ’ ಎಂದು ದೂರಿದರು.

ಸಂಘದ ಪ್ರಧಾನ ಕಾರ್ಯದರ್ಶಿ ಅಣವೀರ ಬಿರಾದಾರ ಮಾತನಾಡಿದರು.

ಕೃಷಿ ಸಹಾಯಕ ನಿರ್ದೇಶಕ ವೀರಶೆಟ್ಟಿ ರಾಠೋಡ, ರೈತ ಸಂಘದ ತಾಲ್ಲೂಕು ಘಟಕದ ಅಧ್ಯಕ್ಷ ರುದ್ರಯ್ಯ ಸ್ವಾಮಿ, ಹೋಬಳಿ ಘಟಕದ ಅಧ್ಯಕ್ಷ ಅನಿಲ ಮರ್ಪಳ್ಳೆ, ಮುಖಂಡ ಗಣೇಶ ಪಾಟೀಲ ಉಪಸ್ಥಿತರಿದ್ದರು.

ಧರಣಿ ಬೆಂಬಲಿಸಿ ಆಮ್ ಆದ್ಮಿ ಪಕ್ಷದ ನಗರ ಘಟಕದ ಅಧ್ಯಕ್ಷ ಎಸ್.ಎಸ್. ಮೋಬಿನ್, ಕಾರ್ಯದರ್ಶಿ ತಾಜೊದ್ದೀನ್, ಅಮಿತ್ ಮಿಶ್ರಾ, ಅಕ್ರಮ ಶೇಖ್ ಪಾಲ್ಗೊಂಡಿದ್ದರು.

ಸಿಪಿಐ ಜಿ.ಎಂ.ಪಾಟೀಲ, ಸಬ್ ಇನ್‌ಸ್ಪೆಕ್ಟರ್ ಜಯಶ್ರೀ ಹೂಡೆಲ್ ಬಿಗಿ ಬಂದೋಬಸ್ತ್ ಕೈಗೊಂಡಿದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.