ಭಾಲ್ಕಿ: ತಾಲ್ಲೂಕಿನ ಹುಣಜಿ(ಎ) ಸಮೀಪದ ಮಹಾತ್ಮ ಗಾಂಧಿ ಸಹಕಾರ ಸಕ್ಕರೆ ಕಾರ್ಖಾನೆ ಆಡಳಿತ ಮಂಡಳಿಯ ನಿರ್ದೇಶಕರ ಸ್ಥಾನಕ್ಕೆ ಸೋಮವಾರ ಶಾಂತಿಯುತವಾಗಿ ಮತದಾನ ನಡೆಯಿತು.
ಒಟ್ಟು 4,452 ರೈತ ಮತದಾರರಿದ್ದು, ಅದರಲ್ಲಿ 3,106 ರೈತರು ತಮ್ಮ ಹಕ್ಕು ಚಲಾಯಿಸಿದರು. ಶೇ 69ರಷ್ಟು ಮತದಾನವಾಗಿದೆ. ಬೆಳಿಗ್ಗೆ 9 ಗಂಟೆಯಿಂದ ಆರಂಭಗೊಂಡ ಮತದಾನ ಸಂಜೆ 4 ಗಂಟೆ 20 ನಿಮಿಷದವರೆಗೆ ನಡೆಯಿತು. ಬೆಳಿಗ್ಗೆ 11 ಗಂಟೆವರೆಗೂ ನೀರಸವಾಗಿದ್ದ ಮತದಾನ ಮಧ್ಯಾಹ್ನ 12 ಗಂಟೆ ನಂತರ ಬಿರುಸು ಪಡೆದು ಕೊಂಡಿತು. ರೈತರು ಸರತಿ ಸಾಲಿನಲ್ಲಿ ನಿಂತು ಮತದಾನ ಮಾಡುತ್ತಿದ್ದ ದೃಶ್ಯ ಕಂಡು ಬಂತು.
ಪ್ರತಿ ಬಾರಿ ಅವಿರೋಧ ಆಯ್ಕೆ ನಡೆಯುತ್ತಿದ್ದ ಕಾರ್ಖಾನೆಗೆ ಈ ಬಾರಿ ಬಿಜೆಪಿ ಬೆಂಬಲಿಗರು ಸ್ಪರ್ಧೆ ಮಾಡಿದ್ದರಿಂದ ಚುನಾವಣಾ ಕಣ ರಂಗೇರಿತು. ಹೀಗಾಗಿ, 8 ಸ್ಥಾನಗಳಲ್ಲಿ ಅಮರಕುಮಾರ ಖಂಡ್ರೆ ಪೆನಾಲ್ ಮತ್ತು ಬಿಜೆಪಿ ಬೆಂಬಲಿತರ ನಡುವೆ ನೇರ ಸ್ಪರ್ಧೆ ಏರ್ಪಟ್ಟಿತು. ಒಟ್ಟು 13 ನಿರ್ದೇಶಕರ ಸ್ಥಾನಗಳ ಪೈಕಿ 5 ಸ್ಥಾನಗಳು ಅವಿರೋಧ ಆಯ್ಕೆಗೊಂಡ ಹಿನ್ನೆಲೆಯಲ್ಲಿ 8 ಸ್ಥಾನಗಳಿಗೆ ಚುನಾವಣೆ ನಡೆಯಿತು. ಸಾಮಾನ್ಯ ಕ್ಷೇತ್ರ 5, ಸಾಮಾನ್ಯ ಮಹಿಳಾ ಕ್ಷೇತ್ರ 2 ಮತ್ತು ಪರಿಶಿಷ್ಟ ಜಾತಿ 1 ಸ್ಥಾನಕ್ಕೆ ನಡೆದ ಚುನಾವಣೆಯಲ್ಲಿ 15 ಅಭ್ಯರ್ಥಿಗಳು ಕಣದಲ್ಲಿದ್ದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.