ADVERTISEMENT

ಕೊರೊನಾ ವಾರಿಯರ್ಸ್ ಮಕ್ಕಳಿಗೆ ರಿಯಾಯಿತಿ

ಲಿಂಗರಾಜ ಅಪ್ಪ ಕಾಲೇಜಿನಲ್ಲಿ ಸ್ಯಾನಿಟೈಸೇಷನ್ ಟನೆಲ್ ಉದ್ಘಾಟಿಸಿದ ಬಸವರಾಜ ದೇಶಮುಖ

​ಪ್ರಜಾವಾಣಿ ವಾರ್ತೆ
Published 9 ಜುಲೈ 2020, 7:38 IST
Last Updated 9 ಜುಲೈ 2020, 7:38 IST
ಬೀದರ್‌ ತಾಲ್ಲೂಕಿನ ಗೋರನಳ್ಳಿ ಸಮೀಪದ ಲಿಂಗರಾಜ ಅಪ್ಪ ಎಂಜಿನಿಯರಿಂಗ್ ಕಾಲೇಜಿನಲ್ಲಿ ಅಟೊಮೆಟಿಕ್ ಸ್ಯಾನಿಟೈಸೇಷನ್ ಟನೆಲ್‌ ಅನ್ನು ಕಲಬುರ್ಗಿಯ ಶರಣ ಬಸವೇಶ್ವರ ವಿದ್ಯಾವರ್ಧಕ ಸಂಘದ ಕಾರ್ಯದರ್ಶಿ ಬಸವರಾಜ ದೇಶಮುಖ ಬುಧವಾರ ಉದ್ಘಾಟಿಸಿದರು
ಬೀದರ್‌ ತಾಲ್ಲೂಕಿನ ಗೋರನಳ್ಳಿ ಸಮೀಪದ ಲಿಂಗರಾಜ ಅಪ್ಪ ಎಂಜಿನಿಯರಿಂಗ್ ಕಾಲೇಜಿನಲ್ಲಿ ಅಟೊಮೆಟಿಕ್ ಸ್ಯಾನಿಟೈಸೇಷನ್ ಟನೆಲ್‌ ಅನ್ನು ಕಲಬುರ್ಗಿಯ ಶರಣ ಬಸವೇಶ್ವರ ವಿದ್ಯಾವರ್ಧಕ ಸಂಘದ ಕಾರ್ಯದರ್ಶಿ ಬಸವರಾಜ ದೇಶಮುಖ ಬುಧವಾರ ಉದ್ಘಾಟಿಸಿದರು   

ಜನವಾಡ: ಬೀದರ್‌ ತಾಲ್ಲೂಕಿನ ಗೋರನಳ್ಳಿ ಸಮೀಪದ ಲಿಂಗರಾಜ ಅಪ್ಪ ಎಂಜಿನಿಯರಿಂಗ್ ಕಾಲೇಜಿನಲ್ಲಿ ಕೊರೊನಾ ಸೋಂಕಿನ ಪ್ರಯುಕ್ತ ಸಿದ್ಧಪಡಿಸಲಾದ ಆಟೊಮೆಟಿಕ್ ಸ್ಯಾನಿಟೈಸೇಷನ್ ಟನೆಲ್ ಹಾಗೂ ಸ್ಯಾನಿಟೈಸರ್ ಸ್ಟ್ಯಾಂಡ್‍ಗಳನ್ನು ಕಲಬುರ್ಗಿಯ ಶರಣ ಬಸವೇಶ್ವರ ವಿದ್ಯಾವರ್ಧಕ ಸಂಘದ ಕಾರ್ಯದರ್ಶಿ ಬಸವರಾಜ ದೇಶಮುಖ ಬುಧವಾರ ಉದ್ಘಾಟಿಸಿದರು.

ಏಳು ಅಡಿ ಉದ್ದ, ಮೂರು ಅಡಿ ಅಗಲ ಹಾಗೂ ಆರು ಅಡಿ ಎತ್ತರ ಇರುವ ಸೆನ್ಸರ್ ಆಧಾರಿತ ಆಟೊಮೆಟಿಕ್ ಸ್ಯಾನಿಟೈಸೇಷನ್ ಟನಲ್ ಅನ್ನು ಕಾಲೇಜಿನ ಮುಖ್ಯ ಪ್ರವೇಶ ದ್ವಾರದಲ್ಲಿ ಅಳವಡಿಸಲಾಗಿದೆ. ಅದರ ಒಳಗಿನಿಂದ ಹಾದು ಹೋಗುವವರ ಮೇಲೆ ಐದರಿಂದ ಆರು ಸೆಕೆಂಡ್‍ ಸೋಂಕು ನಿವಾರಕ ದ್ರಾವಣ ಸಿಂಪಡಣೆ ಆಗಲಿದೆ.

ಕಾಲೇಜಿನ ಸಿಬ್ಬಂದಿ ಹಾಗೂ ವಿದ್ಯಾರ್ಥಿಗಳ ಸುರಕ್ಷತೆ ದೃಷ್ಟಿಯಿಂದ ಪ್ರತಿ ವಿಭಾಗಕ್ಕೂ ಸ್ಯಾನಿಟೈಸರ್ ಸ್ಟ್ಯಾಂಡ್ ಒದಗಿಸಲಾಗಿದೆ. ವರ್ಗ ಕೋಣೆ ಪ್ರವೇಶಿಸುವ ಪ್ರತಿಯೊಬ್ಬರೂ ಸ್ಯಾನಿಟೈಸರ್ ಬಳಸಿ ಕೈ ಸ್ವಚ್ಛಗೊಳಿಸಿಕೊಂಡ ನಂತರ ಒಳಗೆ ಹೋಗುವ ವ್ಯವಸ್ಥೆ ಮಾಡಲಾಗಿದೆ.

ADVERTISEMENT

ಕೊರೊನಾ ಸೋಂಕು ಇಡೀ ವಿಶ್ವವನ್ನೇ ತಲ್ಲಣಗೊಳಿಸಿದೆ. ದಿನೇ ದಿನೇ ಸೋಂಕಿತರ ಸಂಖ್ಯೆ ಹೆಚ್ಚುತ್ತಲೇ ಇದೆ. ಈವರೆಗೆ ಸೋಂಕಿಗೆ ಔಷಧಿ, ಲಸಿಕೆ ಲಭ್ಯವಾಗಿಲ್ಲ. ಸದ್ಯ ಮುಂಜಾಗ್ರತೆಯೊಂದೇ ಸೋಂಕು ತಡೆಯಲು ಇರುವ ಏಕೈಕ ಮಾರ್ಗವಾಗಿದೆ ಎಂದು ಬಸವರಾಜ ದೇಶಮುಖ ನುಡಿದರು.

ಕಾಲೇಜಿನ ಪ್ರಾಚಾರ್ಯರು, ಪ್ರಾಧ್ಯಾಪಕರು ಹಾಗೂ ವಿದ್ಯಾರ್ಥಿಗಳು ಸೇರಿ ಸ್ಯಾನಿಟೈಸೇಷನ್ ಟನಲ್ ಹಾಗೂ ಸ್ಯಾನಿಟೈಸರ್ ಸ್ಟ್ಯಾಂಡ್ ತಯಾರಿಸಿರುವುದು ಪ್ರಶಂಸನೀಯ. ಮುಂದೆಯೂ ಜನೋಪಯೋಗಿ ಸಂಶೋಧನೆಗಳತ್ತ ಒಲವು ತೋರಬೇಕು. ಈ ಭಾಗದ ಪ್ರತಿಭೆಗಳು ಅಂತರರಾಷ್ಟ್ರೀಯ ಮಟ್ಟದಲ್ಲಿ ಹೆಸರು ಮಾಡಬೇಕು ಎನ್ನುವ ಸಂಸ್ಥೆಯ ಅಧ್ಯಕ್ಷ ಡಾ.ಶರಣಬಸವಪ್ಪ ಅಪ್ಪ ಅವರ ಕನಸು ನನಸಾಗಿಸಬೇಕು ಎಂದು ತಿಳಿಸಿದರು.

ಕೊರೊನಾ ಸೋಂಕು ತಡೆಗಟ್ಟುವ ಕಾರ್ಯದಲ್ಲಿ ತೊಡಗಿಸಿಕೊಂಡಿರುವ ಕೊರೊನಾ ವಾರಿಯರ್ಸ್‍ಗಳ ಮಕ್ಕಳಿಗೆ ಲಿಂಗರಾಜ ಅಪ್ಪ ಎಂಜಿನಿಯರಿಂಗ್ ಕಾಲೇಜಿನಲ್ಲಿ ಪ್ರವೇಶ ಶುಲ್ಕದಲ್ಲಿ ರಿಯಾಯಿತಿ ನೀಡಲಾಗುವುದು ಎಂದು ಪ್ರಕಟಿಸಿದರು.

ಕಾಲೇಜಿನ ಪ್ರಾಚಾರ್ಯ ಡಾ.ಸಂಜೀವ ರೆಡ್ಡಿ ಕೆ.ಹುಡಗಿಕರ್ ಮಾತನಾಡಿ, ಹೊಸ ಸಂಶೋಧನೆ ಹಾಗೂ ಪರೀಕ್ಷಾ ಫಲಿತಾಂಶದಲ್ಲಿ ಕಾಲೇಜು ಈ ಭಾಗದ ಕಾಲೇಜುಗಳಲ್ಲಿ ಮುಂಚೂಣಿಯಲ್ಲಿ ಇದೆ. ವಿಶ್ವೇಶ್ವರಯ್ಯ ತಾಂತ್ರಿಕ ವಿಶ್ವವಿದ್ಯಾಲಯದ ಸೂಚನೆಯಂತೆ ಈ ಬಾರಿ ಪ್ರಾಧ್ಯಾಪಕರು ಹಾಗೂ ವಿದ್ಯಾರ್ಥಿಗಳು ಜತೆಗೂಡಿ ಸ್ಯಾನಿಟೈಸೇಷನ್ ಟನೆಲ್ ಹಾಗೂ ಸ್ಯಾನಿಟೈಸರ್ ಸ್ಟ್ಯಾಂಡ್ ತಯಾರಿಸಿದ್ದಾರೆ ಎಂದು ಹೇಳಿದರು.

ವಿದ್ಯಾರ್ಥಿಗಳಿಗೆ ಸಂಶೋಧನೆಗೆ ಪೂರಕವಾಗಿ ಸಂಸ್ಥೆಯ ಅಧ್ಯಕ್ಷ ಡಾ.ಶರಣಬಸವಪ್ಪ ಅಪ್ಪ ಅವರು ಕಾಲೇಜಿಗೆ ಸಕಲ ಅತ್ಯಾಧುನಿಕ ಸೌಕರ್ಯಗಳನ್ನು ಒದಗಿಸಿದ್ದಾರೆ. ಉತ್ತಮ ಸಂಶೋಧನೆಗಳಿಗೆ ನಗದು ಬಹುಮಾನ ನೀಡಿ ಪ್ರೋತ್ಸಾಹಿಸುತ್ತಿದ್ದಾರೆ. ಅದರ ಫಲಶ್ರುತಿಯಿಂದಾಗಿ ವಿದ್ಯಾರ್ಥಿಗಳು ಹೊಸ ಸಂಶೋಧನೆ ಮೂಲಕ ಗಮನ ಸೆಳೆಯುತ್ತಿದ್ದಾರೆ ಎಂದು ತಿಳಿಸಿದರು.

ಕಾಲೇಜಿನ ಕಾರ್ಯಕ್ರಮಗಳಿಗೆ ಹೊರಗಿನ ಸಂಪನ್ಮೂಲ ವ್ಯಕ್ತಿಗಳನ್ನು ಕರೆಸುವ ಬದಲು ಕಾಲೇಜು ಪ್ರಾಧ್ಯಾಪಕರೇ ಉತ್ತಮ ಸಂಪನ್ಮೂಲ ವ್ಯಕ್ತಿಗಳಾಗಲು ಪ್ರಯತ್ನಿಸಬೇಕು ಎನ್ನುವುದು ಅಪ್ಪ ಅವರ ಆಶಯವಾಗಿದೆ ಎಂದರು.

ಲಿಂಗರಾಜ ಅಪ್ಪ ಎಂಜಿನಿಯರಿಂಗ್ ಕಾಲೇಜು ನಿರ್ದೇಶಕಿ ಡಾ.ಉಮಾ ಬಿ. ದೇಶಮುಖ, ಕಾಲೇಜಿನ ಉಪ ಪ್ರಾಚಾರ್ಯರು, ಎಲ್ಲ ವಿಭಾಗಗಳ ಮುಖ್ಯಸ್ಥರು ಹಾಗೂ ಪ್ರಾಧ್ಯಾಪಕರು ಹಾಜರಿದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.