ADVERTISEMENT

ಪದವಿ ಅವಧಿ ಹೆಚ್ಚಳಕ್ಕೆ ತೀವ್ರ ವಿರೋಧ

ಎಸ್‍ಎಫ್‍ಐನಿಂದ ಉನ್ನತ ಶಿಕ್ಷಣ ಸಚಿವರಿಗೆ ಮನವಿಪತ್ರ

​ಪ್ರಜಾವಾಣಿ ವಾರ್ತೆ
Published 13 ಜುಲೈ 2021, 15:25 IST
Last Updated 13 ಜುಲೈ 2021, 15:25 IST
ಬೀದರ್‌ನಲ್ಲಿ ಭಾರತ ವಿದ್ಯಾರ್ಥಿ ಫೆಡರೇಷನ್ ಪದಾಧಿಕಾರಿಗಳು ಪದವಿ ವ್ಯಾಸಂಗ ಅವಧಿ ಹೆಚ್ಚಳ ನಿರ್ಧಾರ ಕೈಬಿಡಬೇಕು ಎಂದು ಒತ್ತಾಯಿಸಿ ಉನ್ನತ ಶಿಕ್ಷಣ ಸಚಿವರಿಗೆ ಬರೆದ ಮನವಿಪತ್ರವನ್ನು ಜಿಲ್ಲಾಧಿಕಾರಿ ಕಚೇರಿ ಅಧಿಕಾರಿಗೆ ಸಲ್ಲಿಸಿದರು
ಬೀದರ್‌ನಲ್ಲಿ ಭಾರತ ವಿದ್ಯಾರ್ಥಿ ಫೆಡರೇಷನ್ ಪದಾಧಿಕಾರಿಗಳು ಪದವಿ ವ್ಯಾಸಂಗ ಅವಧಿ ಹೆಚ್ಚಳ ನಿರ್ಧಾರ ಕೈಬಿಡಬೇಕು ಎಂದು ಒತ್ತಾಯಿಸಿ ಉನ್ನತ ಶಿಕ್ಷಣ ಸಚಿವರಿಗೆ ಬರೆದ ಮನವಿಪತ್ರವನ್ನು ಜಿಲ್ಲಾಧಿಕಾರಿ ಕಚೇರಿ ಅಧಿಕಾರಿಗೆ ಸಲ್ಲಿಸಿದರು   

ಬೀದರ್: ಪದವಿ ವ್ಯಾಸಂಗ ಅವಧಿ ನಾಲ್ಕು ವರ್ಷಗಳಿಗೆ ಹೆಚ್ಚಿಸುವ ಹಾಗೂ ಕನ್ನಡ ಭಾಷಾ ಕಲಿಕೆ ಒಂದು ವರ್ಷಕ್ಕೆ ಸೀಮಿತಗೊಳಿಸುವ ನಿರ್ಧಾರಗಳನ್ನು ಕೂಡಲೇ ಕೈಬಿಡಬೇಕು ಎಂದು ಭಾರತ ವಿದ್ಯಾರ್ಥಿ ಫೆಡರೇಷನ್ ಆಗ್ರಹಿಸಿದೆ.

ಫೆಡರೇಷನ್ ಜಿಲ್ಲಾ ಘಟಕದ ಪದಾಧಿಕಾರಿಗಳು ಈ ಕುರಿತು ಉನ್ನತ ಶಿಕ್ಷಣ ಸಚಿವರಿಗೆ ಬರೆದ ಮನವಿಪತ್ರವನ್ನು ನಗರದಲ್ಲಿ ಮಂಗಳವಾರ ಜಿಲ್ಲಾಧಿಕಾರಿ ಕಚೇರಿ ಅಧಿಕಾರಿಗೆ ಸಲ್ಲಿಸಿದರು.

‘ಪದವಿ ವ್ಯಾಸಂಗ ಅವಧಿ ನಾಲ್ಕು ವರ್ಷಗಳಿಗೆ ಏರಿಸಬೇಕು ಎನ್ನುವ ಹೊಸ ಶಿಕ್ಷಣ ನೀತಿಯ ಪ್ರಸ್ತಾವವನ್ನು ರಾಜ್ಯ ಸರ್ಕಾರ ದೇಶದಲ್ಲೇ ಮೊದಲು ಜಾರಿಗೊಳಿಸಲು ಹೊರಟಿರುವುದು ಹಾಗೂ ಮಾತೃಭಾಷೆ ಕಲಿಕೆಯನ್ನು ಒಂದು ವರ್ಷಕ್ಕೆ ಸೀಮಿತಗೊಳಿಸಲು ಪ್ರಯತ್ನಿಸುತ್ತಿರುವುದು ಸರಿಯಲ್ಲ’ ಎಂದು ಹೇಳಿದರು.

ADVERTISEMENT

‘ಪದವಿ ವ್ಯಾಸಂಗ ಅವಧಿ ಮೂರು ವರ್ಷಗಳಿಂದ ನಾಲ್ಕು ವರ್ಷಗಳಿಗೆ ವಿಸ್ತರಿಸುವುದರಿಂದ ಪಾಲಕರಿಗೆ ಒಂದು ವರ್ಷದ ಶಿಕ್ಷಣದ ಖರ್ಚು ಹೆಚ್ಚುವರಿ ಹೊರೆಯಾಗಲಿದೆ. ಮೂರು ವರ್ಷಗಳಲ್ಲಿ ಪದವಿ ಮುಗಿಸಿ ಉದ್ಯೋಗ ಕಂಡುಕೊಳ್ಳುತ್ತಿದ್ದವರು, ಈಗ ಒಂದು ವರ್ಷ ಹೆಚ್ಚುವರಿಯಾಗಿ ಕಾಯಬೇಕಾಗಲಿದೆ. ಇದು, ಖಾಸಗಿ ಶಿಕ್ಷಣ ಸಂಸ್ಥೆಗಳ ಲೂಟಿಯ ಹರಿವು ವಿಸ್ತರಿಸುವ ಹುನ್ನಾರವಾಗಿದೆ’ ಎಂದು ತೀವ್ರ ಅಸಮಾಧಾನ ವ್ಯಕ್ತಪಡಿಸಿದರು.

‘ಉಚಿತ ಹಾಗೂ ಸಮಾನ ಶಿಕ್ಷಣ ನೀತಿ ಜಾರಿಗಾಗಿ ಸುದೀರ್ಘ ಅವಧಿಯಿಂದ ಹೋರಾಟ ನಡೆಯುತ್ತಿದೆ. ಶಿಕ್ಷಣಕ್ಕೆ ಕೇಂದ್ರ ಸರ್ಕಾರವು ಜಿಡಿಪಿಯ ಶೇ 6ರಷ್ಟು ಹಾಗೂ ರಾಜ್ಯ ಸರ್ಕಾರ ಬಜೆಟ್‍ನ ಶೇ 39ರಷ್ಟು ಮೀಸಲಿಡಬೇಕು ಎಂದು ಶಿಕ್ಷಣ ಆಯೋಗಗಳು ಹಾಗೂ ಶಿಕ್ಷಣ ತಜ್ಞರು ಶಿಫಾರಸು ಮಾಡುತ್ತಲೇ ಬಂದಿದ್ದಾರೆ. ಹೊಸ ಶಿಕ್ಷಣ ನೀತಿಯಲ್ಲೂ ಇದನ್ನು ಪ್ರಸ್ತಾಪಿಸಲಾಗಿದೆ. ಆದರೆ, ಯಾವ ಸರ್ಕಾರಗಳೂ ಇವುಗಳ ಅನುಷ್ಠಾನಕ್ಕೆ ಮುಂದಾಗುತ್ತಿಲ್ಲ’ ಎಂದು ಬೇಸರ ವ್ಯಕ್ತಪಡಿಸಿದರು.

‘ಹೊಸ ಶಿಕ್ಷಣ ನೀತಿ 2020ರ ಕುರಿತು ರಾಜ್ಯ ವಿಧಾನಮಂಡಲ ಅಧಿವೇಶನದಲ್ಲಿ ಸಮಗ್ರ ಚರ್ಚೆ ಆಗಬೇಕು. ರಾಜ್ಯದ ಶಿಕ್ಷಣ ಹಕ್ಕುದಾರರೊಂದಿಗೂ ಚರ್ಚಿಸಬೇಕು. ಶಿಕ್ಷಣದ ಎಲ್ಲ ಹಂತದಲ್ಲೂ ಮಾತೃಭಾಷೆ ಕನ್ನಡ ಕಲಿಸಬೇಕು. ಮಾತೃಭಾಷೆಯಲ್ಲಿ ಓದಿದವರಿಗೆ ಆದ್ಯತೆ ಮೇರೆಗೆ ಶಿಷ್ಯವೇತನ ಹಾಗೂ ಉದ್ಯೋಗ ಅವಕಾಶ ಕಲ್ಪಿಸುವ ದಿಸೆಯಲ್ಲಿ ನೀತಿಗಳನ್ನು ರೂಪಿಸಬೇಕು. ಅಲ್ಲಿಯವರೆಗೆ ರಾಜ್ಯದಲ್ಲಿ ನೂತನ ಶಿಕ್ಷಣ ನೀತಿ 2020 ಅನ್ನು ಜಾರಿಗೊಳಿಸಬಾರದು’ ಎಂದು ಆಗ್ರಹಿಸಿದರು.

ಫೆಡರೇಷನ್ ಜಿಲ್ಲಾ ಘಟಕದ ಅಧ್ಯಕ್ಷ ಅರುಣ ಕೋಡಗೆ, ಉಪಾಧ್ಯಕ್ಷ ಅಮರ ಗಾದಗಿ, ಕಾರ್ಯದರ್ಶಿ ರೋಷನ್ ಮಲ್ಕಾಪುರೆ, ತಾಲ್ಲೂಕು ಘಟಕದ ಅಧ್ಯಕ್ಷ ಶಿವಕುಮಾರ ಕಾಶೆಂಪೂರ್, ಮುಖಂಡರಾದ ಅಭಿ ಕಾಳೆ, ಆಕಾಶ ಕೋಡಗೆ ಇದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.