ಬೀದರ್: ‘ಡಿಸ್ಕ್ ಜಾಕಿ’ (ಡಿಜೆ) ಮೇಲೆ ನಿರ್ಬಂಧ ವಿಧಿಸಬೇಕೆಂಬ ಹಲವು ವರ್ಷಗಳ ಬೇಡಿಕೆಗೆ ಜಿಲ್ಲಾ ಪೊಲೀಸರು ಸ್ಪಂದಿಸಿದ್ದಾರೆ.
ಎಲ್ಲ ರೀತಿಯ ಡಿಜೆ ಬಳಸುವುದರ ಮೇಲೆ ಪೊಲೀಸರು ಕಡಿವಾಣ ಹೇರಿದ್ದಾರೆ. ಜಿಲ್ಲೆಯಾದ್ಯಂತ ಇದು ಜಾರಿಗೆ ಬಂದಿದ್ದು, ಸದ್ಯದ ಮಟ್ಟಿಗೆ ಮದುವೆ, ಜಯಂತಿ ಸೇರಿದಂತೆ ಇತರೆ ಎಲ್ಲ ಕಾರ್ಯಕ್ರಮಗಳಲ್ಲಿ ಇದರ ಬಳಕೆ ಸಂಪೂರ್ಣ ನಿಂತಿದೆ.
ಡಿಜೆಗಳ ಮೇಲೆ ಪೊಲೀಸರು ವಿಶೇಷ ನಿಗಾ ವಹಿಸಿದ್ದಾರೆ. ಪ್ರತಿಯೊಂದು ಠಾಣಾ ವ್ಯಾಪ್ತಿಯ ಅಧಿಕಾರಿಯೊಬ್ಬರಿಗೆ ಇದರ ಜವಾಬ್ದಾರಿ ವಹಿಸಲಾಗಿದೆ. ಪಾಳಿ ಪ್ರಕಾರ, ಅಧಿಕಾರಿಗಳು ತಮ್ಮ ಠಾಣಾ ವ್ಯಾಪ್ತಿಯಲ್ಲಿ ನಡೆಯುವ ಸಭೆ, ಸಮಾರಂಭಗಳ ಮೇಲೆ ನಿಗಾ ಇಟ್ಟಿದ್ದಾರೆ.
ಇಷ್ಟೇ ಅಲ್ಲ, ಡಿಜೆ ನಡೆಸುವವರಿಗೂ ಪೊಲೀಸರು ಎಚ್ಚರಿಕೆ ನೀಡಿದ್ದಾರೆ. ಒಂದುವೇಳೆ ಪೊಲೀಸರ ಸೂಚನೆಯ ಹೊರತಾಗಿಯೂ ಡಿಜೆ ಬಳಸಿದರೆ ಅಂತಹವರ ವಿರುದ್ಧ ಮುಲಾಜಿಲ್ಲದೆ ಪ್ರಕರಣ ದಾಖಲಿಸಲಾಗುತ್ತಿದೆ. ಹೀಗಾಗಿ ಯಾರೂ ಕೂಡ ಡಿಜೆ ಬಳಸುವ ಧೈರ್ಯ ತೋರಿಸುತ್ತಿಲ್ಲ.
ನಿರ್ಬಂಧವೇಕೆ?: ಜಿಲ್ಲೆಯಲ್ಲಿ ಜಯಂತಿ, ಮದುವೆ, ಜನ್ಮದಿನ ಸೇರಿದಂತೆ ಏನೇ ಕಾರ್ಯಕ್ರಮಗಳಿದ್ದರೂ ಡಿಜೆಗಳ ಬಳಕೆ ಸಾಮಾನ್ಯವಾಗಿತ್ತು. ಸಾರ್ವಜನಿಕ ಸ್ಥಳಗಳು, ರಸ್ತೆಗಳ ಮೇಲೆಲ್ಲಾ ಡಿಜೆ ಹಾಕಿಕೊಂಡು ಕುಣಿಯುವುದು ರೂಢಿಯಾಗಿತ್ತು. ಭಾರಿ ಪ್ರಮಾಣದಲ್ಲಿ ಕಿವಿಗಡಚ್ಚಿಕ್ಕುವ ಸಂಗೀತದಿಂದ ಜನರ ನೆಮ್ಮದಿ ಹಾಳಾಗಿತ್ತು. ಸಂಚಾರ ಅಸ್ತವ್ಯಸ್ತಕ್ಕೂ ಕಾರಣವಾಗಿತ್ತು.
ಸಂಗೀತದ ಶಬ್ದ ಎಷ್ಟಿರುತ್ತಿತ್ತು ಎಂದರೆ ಅದರ ಸಮೀಪದಿಂದ ಯಾವುದೇ ವಾಹನ ಹಾದು ಹೋದರೆ ಅದು ಅಲುಗಾಡುತ್ತಿತ್ತು. ಜನ ಕಿವಿಗಳನ್ನು ಮುಚ್ಚಿಕೊಂಡು ಓಡಾಡುತ್ತಿದ್ದರು. ಅದರಲ್ಲೂ ಹೃದಯ ಸಂಬಂಧಿ ಕಾಯಿಲೆಯಿಂದ ಬಳಲುತ್ತಿರುವವರು, ನವಜಾತ ಶಿಶುಗಳನ್ನು ಹೊಂದಿದವರು ತೀವ್ರ ಸಮಸ್ಯೆ ಎದುರಿಸುತ್ತಿದ್ದರು. ಒಟ್ಟಾರೆ ಸಾರ್ವಜನಿಕರ ನೆಮ್ಮದಿಗೆ ಭಂಗ ಉಂಟಾಗಿತ್ತು. ಇದರ ಮೇಲೆ ನಿರ್ಬಂಧ ಹೇರಬೇಕೆಂದು ಪ್ರಜ್ಞಾವಂತ ನಾಗರಿಕರು ಸತತವಾಗಿ ಒತ್ತಾಯಿಸುತ್ತ ಬಂದಿದ್ದರು. ಅಂತಿಮವಾಗಿ ಪೊಲೀಸರು ಅವರ ಮನವಿಗೆ ಸ್ಪಂದಿಸಿ, ಡಿಜೆ ಮೇಲೆ ನಿರ್ಬಂಧ ಹೇರಿರುವುದಕ್ಕೆ ವ್ಯಾಪಕ ಮೆಚ್ಚುಗೆ ವ್ಯಕ್ತವಾಗಿದೆ.
‘ಕೆಲವರು ಡಿಜೆ ಹಚ್ಚಿಕೊಂಡು ತಡರಾತ್ರಿ ತನಕ ಮನಸೋಇಚ್ಛೆ ಕುಣಿದು ಕುಪ್ಪಳಿಸುತ್ತಿದ್ದರು. ಇದರಿಂದ ಜನರ ನೆಮ್ಮದಿಗೆ ಭಂಗ ಉಂಟಾಗಿತ್ತು. ತಡವಾಗಿಯಾದರೂ ಪೊಲೀಸರ ಇದರ ಮೇಲೆ ನಿರ್ಬಂಧ ಹೇರಿರುವುದು ಉತ್ತಮ’ ಎಂದು ಸ್ಥಳೀಯ ನಾಗರಿಕರಾದ ರಮೇಶ ಪಾಟೀಲ, ಮಚೇಂದ್ರ, ರಾಜೇಶ ಬಿರಾದಾರ ಅಭಿಪ್ರಾಯ ಪಟ್ಟಿದ್ದಾರೆ.
ಈ ಸಂಬಂಧ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಪ್ರದೀಪ್ ಗುಂಟಿ ಅವರನ್ನು ‘ಪ್ರಜಾವಾಣಿ’ ಸಂಪರ್ಕಿಸಿದಾಗ ಅವರು ಮಾಹಿತಿಗೆ ಲಭ್ಯರಾಗಲಿಲ್ಲ.
ಡಿಜೆ ಅಬ್ಬರದಲ್ಲಿ ಹಲವು ವರ್ಷಗಳಿಂದ ಬ್ಯಾಂಡ್ ಬಾಜಾದವರಿಗೆ ಯಾರು ಕೇಳುವವರು ಇರಲಿಲ್ಲ. ಈಗ ಡಿಜೆ ಬಳಕೆ ಮೇಲೆ ನಿರ್ಬಂಧ ಹೇರಿರುವುದರಿಂದ ಬ್ಯಾಂಡ್‌ನವರಿಗೆ ಭಾರಿ ಬೇಡಿಕೆ ಸೃಷ್ಟಿಯಾಗಿದೆ. ಬ್ಯಾಂಡ್ ಬಾಜಾ ಬಾರಿಸುವುದು ಬಿಟ್ಟರೆ ಕೆಲವರಿಗೆ ಬೇರೆ ಕೆಲಸ ಗೊತ್ತಿರಲಿಲ್ಲ. ಆದರೆ ಕೆಲಸವಿಲ್ಲದೆ ಕುಳಿತಿದ್ದವರಿಗೆ ಈಗ ಕೈ ತುಂಬ ಕೆಲಸ ಸಿಕ್ಕಿದೆ. ಅವರ ಮುಖದಲ್ಲಿ ಖುಷಿ ಮರಳಿದೆ. ಜಯಂತಿ ಮದುವೆ ಸೇರಿದಂತೆ ಎಲ್ಲ ಕಾರ್ಯಕ್ರಮಗಳಲ್ಲೂ ಈಗ ಬ್ಯಾಂಡ್ ಗಮನ ಸೆಳೆಯುತ್ತಿದೆ.
ಡಿಜೆ ಮತ್ತು ಸಂಗೀತಕ್ಕೆ ಸಂಬಂಧಿಸಿದಂತೆ ಸುಪ್ರೀಂಕೋರ್ಟ್ ಕೆಲವು ನಿರ್ದೇಶಗಳನ್ನು ನೀಡಿದೆ. ಶಬ್ದ ಮಾಲಿನ್ಯವು ಸಂವಿಧಾನದ ಪರಿಚ್ಛೇದ 21ರ ಜೀವಿಸುವ ಮೂಲಭೂತ ಹಕ್ಕಿನ ಸ್ಪಷ್ಟ ಉಲ್ಲಂಘನೆ ಎಂದು ಹೇಳಿದೆ. ಕೆಲವು ವಿಶೇಷ ಸಂದರ್ಭಗಳನ್ನು ಹೊರತುಪಡಿಸಿದರೆ ಮಿಕ್ಕುಳಿದ ಎಲ್ಲ ದಿನಗಳಲ್ಲೂ ರಾತ್ರಿ 10ರಿಂದ ಬೆಳಿಗ್ಗೆ 6 ಗಂಟೆಯ ವರೆಗೆ ಡಿಜೆ ಸಂಗೀತದ ಮೇಲೆ ನಿರ್ಬಂಧ ಹೇರಬೇಕು. ಇದರಿಂದ ಶಬ್ದ ಮಾಲಿನ್ಯ ನಿಯಂತ್ರಿಸಿ ಜನರು ಶಾಂತ ವಾತಾವರಣದಲ್ಲಿ ಬದುಕುವ ಹಕ್ಕು ಖಾತ್ರಿಪಡಿಸುತ್ತದೆ ಎಂದು ಹೇಳಿದೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.