ADVERTISEMENT

ಬೀದರ್: ಮೊದಲ ದಿನ ಖುಷಿಯಿಂದ ಶಾಲೆಗೆ ಬಂದ ಚಿಣ್ಣರು

​ಪ್ರಜಾವಾಣಿ ವಾರ್ತೆ
Published 25 ಅಕ್ಟೋಬರ್ 2021, 14:47 IST
Last Updated 25 ಅಕ್ಟೋಬರ್ 2021, 14:47 IST
ಭಾಲ್ಕಿ ತಾಲ್ಲೂಕಿನ ಜ್ಯಾಂತಿ ಗ್ರಾಮದ ಸರ್ಕಾರಿ ಪ್ರಾಥಮಿಕ ಶಾಲೆಯಲ್ಲಿ ಮಕ್ಕಳು ಸಾಮೂಹಿಕ ಪ್ರಾರ್ಥನೆಯಲ್ಲಿ ಪಾಲ್ಗೊಂಡರು
ಭಾಲ್ಕಿ ತಾಲ್ಲೂಕಿನ ಜ್ಯಾಂತಿ ಗ್ರಾಮದ ಸರ್ಕಾರಿ ಪ್ರಾಥಮಿಕ ಶಾಲೆಯಲ್ಲಿ ಮಕ್ಕಳು ಸಾಮೂಹಿಕ ಪ್ರಾರ್ಥನೆಯಲ್ಲಿ ಪಾಲ್ಗೊಂಡರು   

ಬೀದರ್: ಕೋವಿಡ್‌ ಕಾರಣ ಒಂದೂವರೆ ವರ್ಷ ಮುಚ್ಚಿದ್ದ ಪ್ರಾಥಮಿಕ ಶಾಲೆಗಳ ಬಾಗಿಲುಗಳು ಸೋಮವಾರ ತೆರೆದುಕೊಂಡವು. ಜಿಲ್ಲೆಯ ಎಲ್ಲ ಶಾಲೆಗಳಲ್ಲಿ ಚಿಣ್ಣರ ಕಲರವ ಕೇಳಿ ಬಂದಿತು. ಶಿಕ್ಷಕರು ಶಾಲೆಯ ಪ್ರವೇಶ ದ್ವಾರದಲ್ಲೇ ಪ್ರೀತಿಯ ಸ್ವಾಗತ ನೀಡಿ ಮಕ್ಕಳನ್ನು ಬರ ಮಾಡಿಕೊಂಡರು.

ಖಾಸಗಿ ಶಾಲೆಗಳಲ್ಲಿ ಹೆಚ್ಚು ಸಂಭ್ರಮ ಕಂಡು ಬಂದಿತು. ಅನೇಕ ಶಾಲೆಗಳ ಆವರಣಗಳಲ್ಲಿ ರಂಗೋಲಿ ಹಾಕಲಾಗಿತ್ತು. ಪಾಲಕರು ತಮ್ಮ ಮಕ್ಕಳನ್ನು ದ್ವಿಚಕ್ರ ವಾಹನ, ಆಟೊರಿಕ್ಷಾ ಹಾಗೂ ಕಾರುಗಳಲ್ಲಿ ಬಿಟ್ಟು ಹೋದರು. ಖಾಸಗಿ ಶಾಲೆಗಳು ಮಕ್ಕಳಿಗೆ ಚಾಕೊಲೇಟ್‌ ನೀಡಿ ಖುಷಿ ಪಡಿಸಿದವು.

ಸರ್ಕಾರಿ ಶಾಲೆಗಳ ಮಕ್ಕಳು ಗುಂಪುಗೂಡಿ ಶಾಲೆಗೆ ಬಂದು ಸಂಭ್ರಮಿಸಿದರು. ಸರಸ್ವತಿಯ ಭಾವಚಿತ್ರಕ್ಕೆ ಪೂಜೆ ಸಲ್ಲಿಸಿ ಸಾಮೂಹಿಕ ಪ್ರಾರ್ಥನೆ ಮಾಡಿದರು. ಕೆಲ ಶಿಕ್ಷಕರು ಸ್ವಂತ ಖರ್ಚಿನಲ್ಲಿ ಮಕ್ಕಳಿಗೆ ಸಿಹಿ ವಿತರಿಸಿದರು. ಕೆಲ ಶಾಲೆಗಳಲ್ಲಿ ಮಕ್ಕಳಿಗೆ ಹೂವು ನೀಡಿದರೆ, ಇನ್ನು ಕೆಲ ಶಾಲೆಗಳಲ್ಲಿ ಪುಷ್ಪವೃಷ್ಟಿ ಮಾಡಲಾಯಿತು.

ADVERTISEMENT

ಬಿಸಿಯೂಟದ ಆಹಾರಧಾನ್ಯ ಇನ್ನೂ ಅನೇಕ ಶಾಲೆಗಳಿಗೆ ತಲುಪಿಲ್ಲ. ಹೀಗಾಗಿ ಅರ್ಧ ದಿನ ಮಾತ್ರ ಶಾಲೆ ನಡೆಸಲಾಯಿತು. ಕೆಲ ಶಾಲೆಗಳಲ್ಲಿ ಶಿಕ್ಷಕರೇ ಮಕ್ಕಳಿಗೆ ಉಪಾಹಾರ ಒದಗಿಸಿದರು.

‘ಮಕ್ಕಳು ಶಾಲೆಯಲ್ಲಿ ಮಾತ್ರ ಪಾಠ ಆಲಿಸಲು ಸಾಧ್ಯ. ಇಷ್ಟು ದಿನ ಮನೆಯಲ್ಲೇ ಇದ್ದ ಕಾರಣ ಓದು ಬರಹದಲ್ಲಿ ಸ್ವಲ್ಪ ಮಟ್ಟಿಗೆ ಹಿನ್ನಡೆಯಾಗಿದೆ. ಶಾಲೆ ಆರಂಭವಾಗಿರುವುದರಿಂದ ನಮಗೂ ಖುಷಿಯಾಗಿದೆ’ ಎಂದು ಹಲಬರ್ಗಾದ ಪಾಲಕ ಶಿವಕುಮಾರ ಬೋರಾಳೆ ಹೇಳಿದರು.

‘ಮೊದಲ ದಿನವೇ ನಿರೀಕ್ಷೆಗಿಂತಲೂ ಅಧಿಕ ಮಕ್ಕಳು ಶಾಲೆಗೆ ಬಂದಿದ್ದಾರೆ. ಪಾಲಕರ ಒಪ್ಪಿಗೆ ಪತ್ರ ಪಡೆದ ನಂತರವೇ ಶಾಲೆಯೊಳಗೆ ಪ್ರವೇಶ ನೀಡಲಾಗಿದೆ. ಬಹುದಿನ ಶಾಲೆಯಿಂದ ದೂರ ಉಳಿದಿದ್ದ ಮಕ್ಕಳು ಖುಷಿಯಿಂದ ತರಗತಿಯಲ್ಲಿ ಪಾಠ ಆಲಿಸಿದರು’ ಎಂದು ಸಾರ್ವಜನಿಕ ಶಿಕ್ಷಣ ಇಲಾಖೆಯ ಉಪ ನಿರ್ದೇಶಕ ಗಂಗಣ್ಣ ಸ್ವಾಮಿ ತಿಳಿಸಿದರು.

ಜಿಲ್ಲೆಯಲ್ಲಿ 507 ಸರ್ಕಾರಿ ಕಿರಿಯ ಪ್ರಾಥಮಿಕ ಶಾಲೆಗಳು, 667 ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆಗಳು,
21 ಖಾಸಗಿ ಕಿರಿಯ ಪ್ರಾಥಮಿಕ ಶಾಲೆಗಳು, 17 ಖಾಸಗಿ ಹಿರಿಯ ಪ್ರಾಥಮಿಕ ಶಾಲೆಗಳು ಹಾಗೂ 38 ಅನುದಾನ ರಹಿತ ಶಾಲೆಗಳು ಇವೆ. ಬಹುತೇಕ ಎಲ್ಲ ಶಾಲೆಗಳಲ್ಲಿ ಅರ್ಧದಷ್ಟು ವಿದ್ಯಾರ್ಥಿಗಳು ತರಗತಿಗಳಿಗೆ ಹಾಜರಾಗಿದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.