ಬೀದರ್: ಇಲ್ಲಿಯ ರೋಟರಿ ಕ್ಲಬ್ ಆಫ್ ಬೀದರ್ ನ್ಯೂ ಸೆಂಚುರಿಯ ನಿಕಟಪೂರ್ವ ಅಧ್ಯಕ್ಷ ಸೂರ್ಯಕಾಂತ ರಾಮಶೆಟ್ಟಿ ಅವರಿಗೆ ಫೈವ್ ಸ್ಟಾರ್ ಚಾಂಪಿಯನ್ ಪ್ರೆಸಿಡೆಂಟ್, ಕ್ಲಬ್‍ಗೆ ಫೈವ್ ಸ್ಟಾರ್ ಚಾಂಪಿಯನ್ ಕ್ಲಬ್ ಹಾಗೂ ಅಂತರರಾಷ್ಟ್ರೀಯ ರೋಟರಿ ಸಂಸ್ಥೆ ಪ್ರಶಸ್ತಿ ಲಭಿಸಿವೆ.
ಕರ್ನಾಟಕದ 8 ಹಾಗೂ ಆಂಧ್ರಪ್ರದೇಶದ 4 ಜಿಲ್ಲೆಗಳು ಸೇರಿ 12 ಜಿಲ್ಲೆಗಳನ್ನು ಒಳಗೊಂಡಿರುವ ಅಂತರರಾಷ್ಟ್ರೀಯ ರೋಟರಿ ಜಿಲ್ಲೆ 3160 ರಲ್ಲಿ 80 ಕ್ಲಬ್‍ಗಳು ಇವೆ. ಈ ಪೈಕಿ ಅತ್ಯುತ್ತಮ ಕಾರ್ಯಕ್ಕಾಗಿ ಕ್ಲಬ್‍ಗಳ ಇಬ್ಬರು ನಿಕಟಪೂರ್ವ ಅಧ್ಯಕ್ಷರಿಗೆ ಫೈವ್ ಸ್ಟಾರ್ ಚಾಂಪಿಯನ್ ಪ್ರೆಸಿಡೆಂಟ್ ಹಾಗೂ ಐದು ಕ್ಲಬ್‍ಗಳಿಗೆ ಫೈವ್ ಸ್ಟಾರ್ ಚಾಂಪಿಯನ್ ಕ್ಲಬ್ ಪ್ರಶಸ್ತಿ ಸಂದಿದೆ.
ಕೋವಿಡ್ ವೇಳೆ ಸೂರ್ಯಕಾಂತ ರಾಮಶೆಟ್ಟಿ ಅವರ ನೇತೃತ್ವದಲ್ಲಿ ಕ್ಲಬ್ ಪದಾಧಿಕಾರಿಗಳು ಬ್ರಿಮ್ಸ್ ಆಸ್ಪತ್ರೆಗೆ ಆಮ್ಲಜನಕ ಕಾನ್ಸೆಂಟ್ರೇಟರ್, ಪಲ್ಸ್ ಆಕ್ಸಿಮೀಟರ್, ಥರ್ಮೋಮೀಟರ್ ಸೇರಿದಂತೆ ವಿವಿಧ ವೈದ್ಯಕೀಯ ಉಪಕರಣಗಳನ್ನು ಕೊಡುಗೆಯಾಗಿ ನೀಡಿದ್ದರು. ಸೇನಾ ಮಾಹಿತಿ ಕಾರ್ಯಾಗಾರ ನಡೆಸಿದ್ದರು. ನೆಹರೂ ಕ್ರೀಡಾಂಗಣದಲ್ಲಿ ಓಪನ್ ಜಿಮ್ ಸ್ಥಾಪಿಸಿದ್ದರು.
ಕ್ಲಬ್‍ನ ಕ್ರಿಯಾಶೀಲತೆ ಹಾಗೂ ಸೇವಾ ಚಟುವಟಿಕೆಗಳಿಗೆ ಮೂರು ಪ್ರಶಸ್ತಿಗಳು ಹುಡುಕಿಕೊಂಡು ಬಂದಿವೆ.
ಪ್ರಶಸ್ತಿ ಪ್ರದಾನ: ಆಂಧಪ್ರದೇಶದ ನಂದ್ಯಾಳದಲ್ಲಿ ನಡೆದ ಸಮಾರಂಭದಲ್ಲಿ ರೋಟರಿ ಇಂಟರ್‍ನ್ಯಾಷನಲ್ ನಿರ್ದೇಶಕ ಮಹೇಶ ಕೋಟಬಾಗಿ ಹಾಗೂ ರೋಟ್ರ್ಯಾಕ್ಟ್ ಕ್ಲಬ್ ಅಂತರರಾಷ್ಟ್ರೀಯ ಅಧ್ಯಕ್ಷ ರವಿ ವದಲಿಮನಿ ಅವರು ಜಂಟಿಯಾಗಿ ಪ್ರಶಸ್ತಿ ಪ್ರದಾನ ಮಾಡಿದರು.
ರೋಟರಿ ಅಂತರರಾಷ್ಟ್ರೀಯ ಜಿಲ್ಲೆ 3160 ನಿಕಟಪೂರ್ವ ಗವರ್ನರ್ ಚಿನ್ನಪ್ಪ ರೆಡ್ಡಿ, ರೋಟರಿ ಕ್ಲಬ್ ಆಫ್ ಬೀದರ್ ನ್ಯೂ ಸೆಂಚುರಿಯ ಡಾ. ರಘು ಕೃಷ್ಣಮೂರ್ತಿ, ನಿತಿನ್ ಕರ್ಪೂರ, ಡಾ. ಕಪಿಲ್ ಪಾಟೀಲ, ಡಾ. ಜಗದೀಶ ಪಾಟೀಲ, ಸತೀಶ ಸ್ವಾಮಿ, ಶಿವಕುಮಾರ ಪಾಖಲ್, ಶಿವಕುಮಾರ ಪಾಟೀಲ ಇದ್ದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.