ADVERTISEMENT

ಅತಿವೃಷ್ಟಿ ಪರಿಹಾರ: ಬೀದರ್ ನಿರ್ಲಕ್ಷ್ಯ

ವಿಧಾನ ಪರಿಷತ್ ಮಾಜಿ ಸದಸ್ಯ ವಿಜಯಸಿಂಗ್ ತೀವ್ರ ಅಸಮಾಧಾನ

​ಪ್ರಜಾವಾಣಿ ವಾರ್ತೆ
Published 10 ಆಗಸ್ಟ್ 2022, 13:48 IST
Last Updated 10 ಆಗಸ್ಟ್ 2022, 13:48 IST
ವಿಜಯಸಿಂಗ್
ವಿಜಯಸಿಂಗ್   

ಬೀದರ್: ಅತಿವೃಷ್ಟಿ ಪರಿಹಾರ ವಿಚಾರದಲ್ಲಿ ರಾಜ್ಯ ಸರ್ಕಾರ ಬೀದರ್ ಜಿಲ್ಲೆಯನ್ನು ಸಂಪೂರ್ಣ ನಿರ್ಲಕ್ಷಿಸಿದೆ ಎಂದು ವಿಧಾನ ಪರಿಷತ್ ಮಾಜಿ ಸದಸ್ಯ ವಿಜಯಸಿಂಗ್ ಆರೋಪಿಸಿದ್ದಾರೆ.

ಅತಿವೃಷ್ಟಿ ಪರಿಹಾರ ಕಾರ್ಯಕ್ಕಾಗಿ ಸರ್ಕಾರದ ರಾಜ್ಯದ 21 ಜಿಲ್ಲೆಗಳಿಗೆ ಒಟ್ಟು ₹ 200 ಕೋಟಿ ಬಿಡುಗಡೆ ಮಾಡಿದೆ. ಆದರೆ, ಬೀದರ್‌ಗೆ ನಯಾ ಪೈಸೆ ಕೊಟ್ಟಿಲ್ಲ ಎಂದು ತೀವ್ರ ಅಸಮಾಧಾನ ವ್ಯಕ್ತಪಡಿಸಿದ್ದಾರೆ.

ಇಡೀ ರಾಜ್ಯದಲ್ಲೇ ಬೀದರ್ ಅತಿವೃಷ್ಟಿಗೆ ಹೆಚ್ಚು ತತ್ತರಿಸಿದೆ. ಜಿಲ್ಲೆಯ ರೈತರು ಉದ್ದು, ಹೆಸರು, ತೊಗರಿ, ಸೋಯಾಬೀನ್ ಬೆಳೆಗಳನ್ನು ಕಳೆದುಕೊಂಡು ಕಂಗಾಲಾಗಿದ್ದಾರೆ. ಸಂಕಷ್ಟದ ಸಂದರ್ಭದಲ್ಲಿ ಸರ್ಕಾರ ನೆರವಿಗೆ ಬರಬಹುದು ಎನ್ನುವ ಅವರ ನಿರೀಕ್ಷೆಯೂ ಹುಸಿಯಾಗಿದೆ ಎಂದು ಹೇಳಿದ್ದಾರೆ.

ADVERTISEMENT

ಜಿಲ್ಲೆಯ ಎಲ್ಲ ತಾಲ್ಲೂಕುಗಳು ಅತಿವೃಷ್ಟಿಗೆ ಒಳಗಾಗಿವೆ. ಔರಾದ್‍ನಲ್ಲಿ ಅಧಿಕ ಹಾನಿ ಸಂಭವಿಸಿದೆ. ಜಿಲ್ಲಾ ಉಸ್ತುವಾರಿ ಸಚಿವ ಶಂಕರ ಪಾಟೀಲ ಮುನೇನಕೊಪ್ಪ ಹಾಗೂ ಜಿಲ್ಲೆಯವರೇ ಆದ ಪಶು ಸಂಗೋಪನೆ ಸಚಿವ ಪ್ರಭು ಚವಾಣ್ ಅತಿವೃಷ್ಟಿ ಹಾನಿ ಕುರಿತು ಸರ್ಕಾರಕ್ಕೆ ಮನವರಿಕೆ ಮಾಡುವಲ್ಲಿ ವಿಫಲರಾಗಿದ್ದಾರೆ ಎಂದು ಆಪಾದಿಸಿದ್ದಾರೆ.

ಸರ್ಕಾರ ಕೂಡಲೇ ಬೀದರ್ ಜಿಲ್ಲೆಗೆ ವಿಶೇಷ ಪ್ಯಾಕೇಜ್ ಘೋಷಿಸಬೇಕು. ಅತಿವೃಷ್ಟಿಯಿಂದ ಬೆಳೆ ಹಾನಿಗೊಳಗಾದ ರೈತರಿಗೆ ಪರಿಹಾರ ಕಲ್ಪಿಸಬೇಕು ಎಂದು ಆಗ್ರಹಿಸಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.