ಚಿಟಗುಪ್ಪ (ಹುಮನಾಬಾದ್): ಬಿರುಸಿನ ಮಳೆಯಾದರೆ ಸಾಕು, ತಾಲ್ಲೂಕಿನ ಉಡಬಾಳದಿಂದ ಚಿಟಗುಪ್ಪ ಪಟ್ಟಣಕ್ಕೆ ಸಂಪರ್ಕ ಕಲ್ಪಿಸುವ ರಸ್ತೆ ಮಧ್ಯದಲ್ಲಿರುವ ನಾಗರ ಹಳ್ಳದ ಸೇತುವೆ ದಿಢೀರ್ ಮುಳುಗಡೆಯಾಗುತ್ತದೆ.
ತಾಲ್ಲೂಕಿನ ನಿರ್ಣಾ, ಮುತ್ತಂಗಿ, ಬಸೀರಾಪುರ, ಮದರಗಿ ಗ್ರಾಮಗಳ ಕಡೆ ಹೆಚ್ಚು ಮಳೆ ಸುರಿದಾಗೆಲ್ಲ ಈ ರಸ್ತೆ ಮುಳುಗುವುದಿರಿಂದ ಮಳೆಗಾಲದಲ್ಲಿ ಜನರ, ವಾಹನಗಳ ಸಂಚಾರಕ್ಕೆ ತೊಂದರೆಯಾಗುತ್ತಿದೆ. ಈ ರಸ್ತೆಯು ರಾಜ್ಯ ಹೆದ್ದಾರಿಯಾಗಿದ್ದ ಕಾರಣ ಬೇಮಳಖೇಡಾ, ಉಡಬನ್ನಳ್ಳಿ, ಚಾಂಗಲೇರಾ, ಕಲಬುರಗಿ ಜಿಲ್ಲೆಯ ಚಿಂಚೋಳಿ, ನೆರೆಯ ತೆಲಂಗಾಣದ ರಾಜ್ಯದ ಜಹೀರಾಬಾದ್‌ಗೆ ನಿತ್ಯವೂ ನೂರಾರು ವಾಹನಗಳು ಸಂಚರಿಸುತ್ತವೆ.
ಮಳೆಗಾಲ ಬಂದರೆ ಸಾಕು ಈ ಸೇತುವೆ ದಾಟುವುದೇ ಪ್ರಯಾಣಿಕರಿಗೆ, ಸುತ್ತಲಿನ ಗ್ರಾಮಸ್ಥರು ಮತ್ತು ರೈತರಿಗೆ ಸವಾಲಾಗುತ್ತದೆ. ಜೊತೆಗೆ ಅಪಾಯವನ್ನೂ ತಂದೊಡ್ಡುತ್ತಿದೆ. 30 ವರ್ಷಕ್ಕೂ ಹಳೆಯದಾದ ಈ ಹಳ್ಳದ ಸೇತುವೆಯನ್ನು ಇದುವರೆಗೂ ಮೇಲ್ದರ್ಜೆಗೆ ಏರಿಸಿಲ್ಲ. ಸೇತುವೆಯ ಎತ್ತರ ಮತ್ತು ಅಗಲ ಅತೀ ಕಡಿಮೆ ಇದೆ.
ಈ ಸೇತುವೆ ಜಲಾವೃತವಾದರೆ ಸಾಕು ಸೇತುವೆಯ ಎರಡೂ ಅಂಚಿಗೆ ಗಂಟೆಗಟ್ಟಲೇ ವಾಹನಗಳು ಸಾಲುಗಟ್ಟಿ ನಿಲ್ಲಬೇಕಾಗುತ್ತದೆ. ಒಂದೊಂದು ಬಾರಿ ಎರಡ್ಮೂರು ದಿನವಾದರೂ ಹಳ್ಳದ ನೀರಿನ ಹರಿವು ಕಡಿಮೆ ತಗ್ಗಲ್ಲ!
‘ರಭಸ ನೀರಿನಲ್ಲಿ ದಾಟುವಾಗಿ ಎಷ್ಟೋ ಬಾರಿ ಅಪಾಯಗಳೂ ಸಂಭವಿಸಿವೆ. ದನ–ಕರುಗಳು ಸೇರಿದಂತೆ ಮನುಷ್ಯರು ಸಹ ನೀರಿನ ರಭಸಕ್ಕೆ ಕೊಚ್ಚಿಹೋಗಿದ್ದಾರೆ. ವಾಹನಗಳು ಹಳ್ಳಕ್ಕೆ ಬಿದ್ದು ಅವಘಡಗಳು ಸಂಭವಿಸಿವೆ. ರಾತ್ರಿ ಹೊತ್ತು ಹಳ್ಳಕ್ಕೆ ನೀರು ಬಂದರಂತೂ ಅದು ಯಾರಿಗೂ ಗೊತ್ತಾಗುವುದಿಲ್ಲ. ಆಳ ಅರಿಯದೇ ಗೊತ್ತಾಗದೇ ವಾಹನ ಚಲಾಯಿಸಿ ಅವಘಡಗಳಿಗೆ ತುತ್ತಾದವರಿದ್ದಾರೆ. ಎಷ್ಟೋ ಜನ ದ್ವಿಚಕ್ರ ವಾಹನದವರು ನೀರಿನ ಸೆಳೆತಕ್ಕೆ ಸಿಕ್ಕು ಕೊಚ್ಚಿ ಹೋಗಿ ಗಾಯಗೊಂಡಿದ್ದಾರೆ. ಇಷ್ಟಾದರೂ ಯಾವುದೇ ಸರ್ಕಾರ ಈ ಹಳ್ಳದ ಸೇತುವೆ ಮೇಲ್ದರ್ಜೆಗೆ ಮುಂದಾಗಿಲ್ಲ’ ಎಂಬುದು ಉಡಬಾಳ ಗ್ರಾಮಸ್ಥರ ಬೇಸರ.
30 ವರ್ಷಗಳಷ್ಟು ಹಳೆಯ ಹಳ್ಳದ ಸೇತುವೆಸ ಹಳ್ಳದ ರಭಸಕ್ಕೆ ಸಿಲುಕಿ ಹಲವರಿಗೆ ಆಗಿತ್ತು ಗಾಯ ಸೇತುವೆ ಮೇಲ್ದರ್ಜೆಗೇರಿಸಲು ಜನರ ಆಗ್ರಹ
ನಿರ್ಣಾದಿಂದ ಮುತ್ತಂಗಿ ಗ್ರಾಮಕ್ಕೆ ಸಂಪರ್ಕ ಕಲ್ಪಿಸುವ ರಸ್ತೆಯಲ್ಲಿನ ಸೇತುವೆಯಲ್ಲಿ ಗುಂಡಿಗಳು ಬಿದ್ದು ಹಾಳಾಗಿದೆ. ಸಂಬಂಧಪಟ್ಟವರು ಗಮನ ಹರಿಸಬೇಕುಭರತ ರೆಡ್ಡಿ ಚಟನ್ನಳ್ಳಿ ಜೆಡಿಎಸ್ ಯುವ ಮುಖಂಡ
ಪ್ರತಿ ವರ್ಷ ನೀರಿನ ಹರಿವು ಹೆಚ್ಚಾದರೆ ಅವಘಡಗಳು ಸಂಭವಿಸುತ್ತಿವೆ. ಸೇತುವೆ ಮೇಲ್ದರ್ಜೆಗೆ ಏರಿಸಬೇಕೆಂದು ಮನವಿ ಮಾಡಿದರು ಪ್ರಯೋಜನವಾಗಿಲ್ಲ. ಈಗಲಾದರೂ ಸಂಬಂಧಿತರು ಎಚ್ಚೆತ್ತುಕೊಳ್ಳಬೇಕುಲಕ್ಷ್ಮಣ ಕಲ್ಲಶೆಟ್ಟಿ ಉಡಬಾಳ ಗ್ರಾ.ಪಂ.ಮಾಜಿ ಸದಸ್ಯ
ನಿರ್ಣಾ–ಉಡಬಾಳ ಸೇತುವೆ ಮೇಲ್ದರ್ಜೆಗೆ ಏರಿಸುವ ಕುರಿತು ಮೇಲಧಿಕಾರಿಗಳಿಗೆ ಮನವಿ ಮಾಡಲಾಗಿದೆವೆಂಕಟೇಶ ಶಿಂಧೆ ಲೋಕೋಪಯೋಗಿ ಇಲಾಖೆ ಹುಮನಾಬಾದ್ ಎಇಇ
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.