ADVERTISEMENT

ಏರಿದ ಈರುಳ್ಳಿ, ಬಾಗಿದ ಬದನೆಕಾಯಿ

ಪ್ರಮುಖ ತರಕಾರಿ ಬೆಲೆಯಲ್ಲಿ ಏರಿಳಿತ

ಚಂದ್ರಕಾಂತ ಮಸಾನಿ
Published 27 ಆಗಸ್ಟ್ 2021, 19:30 IST
Last Updated 27 ಆಗಸ್ಟ್ 2021, 19:30 IST
ಬೀದರ್‌ನ ಮಾರುಕಟ್ಟೆಯಲ್ಲಿ ಮಾರಾಟಕ್ಕೆ ಇಡಲಾದ ತರಕಾರಿ
ಬೀದರ್‌ನ ಮಾರುಕಟ್ಟೆಯಲ್ಲಿ ಮಾರಾಟಕ್ಕೆ ಇಡಲಾದ ತರಕಾರಿ   

ಬೀದರ್‌: ಗಣೇಶ ಚೌತಿ ಇನ್ನೂ 15 ದಿನ ಬಾಕಿ ಇದ್ದರೂ ತರಕಾರಿ ಬೆಲೆಯಲ್ಲಿ ಏರಿಳಿತ ಉಂಟಾಗಿದೆ. ಸೊಪ್ಪಿನ ಬೆಲೆ ಕಡಿಮೆಯಾಗಿ ಗ್ರಾಹಕರಿಗೆ ಅನುಕೂಲವಾಗಿ ಪರಿಣಮಿಸಿದೆ.

ಈರುಳ್ಳಿ, ನುಗ್ಗೇಕಾಯಿ ಹಾಗೂ ಗಜ್ಜರಿ ಮತ್ತೆ ಎದ್ದು ನಿಂತಿವೆ. ಎಲೆಕೋಸು, ಪಾಲಕ್‌ ಅರಳಿ ನಿಂತರೆ, ಕೊಂತಬರಿ ಘಮಘಮಿಸುತ್ತಿದೆ. ದರ ಸಮರದಲ್ಲಿ ಬದನೆಕಾಯಿ ಬಾಗಿದೆ. ಬೆಂಡೆಕಾಯಿ ಬೆಂಡಾಗಿದೆ. ಕಳೆದ ವಾರ ಹಿರಿಹಿರಿ ಹಿಗ್ಗಿದ್ದ ಹಿರೇಕಾಯಿ ಮೌನವಾಗಿದೆ.

ಪ್ರತಿ ಕ್ವಿಂಟಲ್‌ಗೆ ಬೀನ್ಸ್‌ ಬೆಲೆ ₹ 2 ಸಾವಿರ, ಈರುಳ್ಳಿ, ಗಜ್ಜರಿ, ಬೀಟ್‌ರೂಟ್‌ ₹ 1,500, ನುಗ್ಗೆಕಾಯಿ, ಎಲೆಕೋಸು, ಪಾಲಕ್‌ ₹ 1 ಸಾವಿರ ಹಾಗೂ ಕೊತಂಬರಿ ₹ 500 ಹೆಚ್ಚಾಗಿದೆ, ಮೆಣಸಿನಕಾಯಿ, ಹೂಕೋಸು, ತೊಂಡೆಕಾಯಿ ಹಾಗೂ ಪಾಲಕ್‌ ಪ್ರತಿ ಕ್ವಿಂಟಲ್‌ಗೆ ₹ 1 ಸಾವಿರ, ಬದನೆಕಾಯಿ, ಬೆಂಡೆಕಾಯಿ, ಆಲೂಗಡ್ಡೆ ಹಾಗೂ ಸಬ್ಬಸಗಿ ಬೆಲೆ ₹ 500, ಮೆಂತೆ ಸೊಪ್ಪಿನ ಬೆಲೆ ₹300 ಕಡಿಮೆಯಾಗಿದೆ. ಹಿರೇಕಾಯಿ, ಬೆಳ್ಳುಳ್ಳಿ, ಕರಿಬೇವು ಹಾಗೂ ಟೊಮೆಟೊ ಬೆಲೆ ಸ್ಥಿರವಾಗಿದೆ.

ಮಹಾರಾಷ್ಟ್ರದ ನಾಗಪುರ, ಸೋಲಾಪುರದಿಂದ ಈರುಳ್ಳಿ, ಬೆಳ್ಳುಳ್ಳಿ ಆವಕವಾಗಿದೆ. ತೆಲಂಗಾಣದ ಜಿಲ್ಲೆಗಳಿಂದ ಹಿರೇಕಾಯಿ, ತೊಂಡೆಕಾಯಿ, ಬೀನ್ಸ್, ಬೀಟ್‌ರೂಟ್‌, ಚೌಳಿಕಾಯಿ, ಪಡವಲಕಾಯಿ ಹಾಗೂ ಕುಂಬಳಕಾಯಿ ಮಾರುಕಟ್ಟೆಗೆ ಆವಕವಾಗಿದೆ.

ADVERTISEMENT

ಬೆಳಗಾವಿ ಜಿಲ್ಲೆಯಿಂದ ಹಸಿ ಮೆಣಸಿನಕಾಯಿ ಬಂದಿದೆ. ಚಿಟಗುಪ್ಪ, ಭಾಲ್ಕಿ ಹಾಗೂ ಬೀದರ್‌ ತಾಲ್ಲೂಕಿನ ಗ್ರಾಮಾಂತರ ಪ್ರದೇಶದಿಂದ ಬದನೆಕಾಯಿ, ಟೊಮೆಟೊ, ಹೂಕೋಸು, ಎಲೆಕೋಸು, ಕೊತಂಬರಿ ಹಾಗೂ ಸಬ್ಬಸಗಿ, ಮಾರುಕಟ್ಟೆಗೆ ಬಂದಿದೆ.

ಸೊಪ್ಪಿನ ಬೆಲೆಯಲ್ಲಿ ಇಳಿಕೆಯಾಗಿರುವ ಕಾರಣ ಗ್ರಾಹಕರು ಆಸಕ್ತಿಯಿಂದ ಸೊಪ್ಪು ಖರೀದಿಸಿಕೊಂಡು ಹೋಗುತ್ತಿದ್ದಾರೆ. ಬೀನ್ಸ್‌ ಬೆಲೆ ಆಶ್ಚರ್ಯಕರ ರೀತಿಯಲ್ಲಿ ಹೆಚ್ಚಾಗಿದೆ. ಮಾರುಕಟ್ಟೆಗೆ ಕಡಿಮೆ ಪ್ರಮಾಣದಲ್ಲಿ ಆವಕವಾಗಿರುವ ಕಾರಣ ಸಹಜವಾಗಿಯೇ ಬೆಲೆ ಹೆಚ್ಚಳವಾಗಿದೆ. ಮುಂದಿನ ಬೆಲೆ ಇಳಿಯಲಿದೆ’ ಎಂದು ತರಕಾರಿ ವ್ಯಾಪಾರಿ ವಿಜಯಕುಮಾರ ಹೇಳಿದರು.

ಬೀದರ್‌ ತರಕಾರಿ ಚಿಲ್ಲರೆ ಮಾರುಕಟ್ಟೆ

ತರಕಾರಿ (ಪ್ರತಿ ಕೆ.ಜಿ.) ಕಳೆದ ವಾರ- ಈ ವಾರ

ಈರುಳ್ಳಿ 20-25, 35-40
ಮೆಣಸಿನಕಾಯಿ 55-60,40-50
ಆಲೂಗಡ್ಡೆ 40-45,35-40
ಎಲೆಕೋಸು 35-40, 50-60
ಬೆಳ್ಳುಳ್ಳಿ 100-110, 100-110
ಗಜ್ಜರಿ 40-45, 50-60
ಬೀನ್ಸ್‌ 80-90, 100-110
ಬದನೆಕಾಯಿ 40-50, 40-45
ಮೆಂತೆ ಸೊಪ್ಪು 90-100, 60-70
ಹೂಕೋಸು 30-40, 20-30
ಸಬ್ಬಸಗಿ 40-50, 40-45
ಬೀಟ್‌ರೂಟ್‌ 30-40, 50-55
ತೊಂಡೆಕಾಯಿ 35-40, 25-30
ಕರಿಬೇವು 20-30, 20-30
ಕೊತಂಬರಿ 30-35, 30-40
ಟೊಮೆಟೊ 3 0-40, 35-40
ಪಾಲಕ್‌ 40-50, 50-60
ಬೆಂಡೆಕಾಯಿ 40-50, 40-45
ಹಿರೇಕಾಯಿ 40-50, 40-50
ನುಗ್ಗೆಕಾಯಿ 70-80, 80-90

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.