ADVERTISEMENT

ಆಧುನೀಕರಣದಿಂದ ಜಾನಪದ ಕಲೆಗೆ ಕುತ್ತು

ಕಸಾಪ ಜಿಲ್ಲಾ ಘಟಕದ ಅಧ್ಯಕ್ಷ ಸುರೇಶ ಚನಶೆಟ್ಟಿ ಕಳವಳ

​ಪ್ರಜಾವಾಣಿ ವಾರ್ತೆ
Published 29 ಡಿಸೆಂಬರ್ 2019, 10:37 IST
Last Updated 29 ಡಿಸೆಂಬರ್ 2019, 10:37 IST
ಬೀದರ್‌ನ ಜಿಲ್ಲಾ ರಂಗ ಮಂದಿರದಲ್ಲಿ ನಾಟಕೋತ್ಸವವನ್ನು ಕನ್ನಡ ಸಾಹಿತ್ಯ ಪರಿಷತ್ತಿನ ಜಿಲ್ಲಾ ಘಟಕದ ಅಧ್ಯಕ್ಷ ಸುರೇಶ ಚನಶೆಟ್ಟಿ ಉದ್ಘಾಟಿಸಿದರು
ಬೀದರ್‌ನ ಜಿಲ್ಲಾ ರಂಗ ಮಂದಿರದಲ್ಲಿ ನಾಟಕೋತ್ಸವವನ್ನು ಕನ್ನಡ ಸಾಹಿತ್ಯ ಪರಿಷತ್ತಿನ ಜಿಲ್ಲಾ ಘಟಕದ ಅಧ್ಯಕ್ಷ ಸುರೇಶ ಚನಶೆಟ್ಟಿ ಉದ್ಘಾಟಿಸಿದರು   

ಬೀದರ್: ‘ಆಧುನೀಕರಣದಿಂದ ಜಾನಪದ ಕಲೆಗೆ ಕುತ್ತು ಬಂದಿದೆ. ಜಾಗತೀಕರಣ ಹಾಗೂ ಉದಾರೀಕರಣದ ಕರಿ ನೆರಳಿನಲ್ಲಿ ಜನಪದ ಭಾಷೆ, ಕಲೆ ಮತ್ತು ಸಂಸ್ಕೃತಿ ನಿಧಾನವಾಗಿ ಮರೆಯಾಗುತ್ತಿದೆ’ ಎಂದು ಕನ್ನಡ ಸಾಹಿತ್ಯ ಪರಿಷತ್ತಿನ ಜಿಲ್ಲಾ ಘಟಕದ ಅಧ್ಯಕ್ಷ ಸುರೇಶ ಚನಶೆಟ್ಟಿ ಕಳವಳ ವ್ಯಕ್ತಪಡಿಸಿದರು.

ಜನಜನಿತ ಕಲಾ ಪ್ರದರ್ಶನ ಸಂಘ ಹಾಗೂ ಕರ್ನಾಟಕ ಜಾನಪದ ಪರಿಷತ್ತಿನ ಜಿಲ್ಲಾ ಘಟಕದ ಆಶ್ರಯದಲ್ಲಿ ಇಲ್ಲಿಯ ಜಿಲ್ಲಾ ರಂಗ ಮಂದಿರದಲ್ಲಿ ಆಯೋಜಿಸಿದ್ದ ನಾಟಕೋತ್ಸವಕ್ಕೆ ಹಲಿಗೆ ಬಾರಿಸುವ ಮೂಲಕ ಚಾಲನೆ ನೀಡಿ ಅವರು ಮಾತನಾಡಿದರು.

‘ಕಲಾವಿದರನ್ನು ಪ್ರೋತ್ಸಾಹಿಸಿದರೆ ಮಾತ್ರ ನಾಡಿನಲ್ಲಿ ಜನಪದ ಸಂಸ್ಕೃತಿ, ಕಲೆ ಹಾಗೂ ಭಾಷೆಯ ಸೊಗಡು ಉಳಿಯಲು ಸಾಧ್ಯ’ ಎಂದು ಅಭಿಪ್ರಾಯಪಟ್ಟರು.

ADVERTISEMENT

‘ಇಂದು ಹಲವು ಕಾರಣಗಳಿಂದಾಗಿ ನೈಜ ಕುಲಾವಿದರನ್ನು ಗುರುತಿಸಲು ಸಾಧ್ಯವಾಗುತ್ತಿಲ್ಲ. ಯಶವಂತ ಕುಚಬಾಳ ಅವರು ದೇಸಿ ನಾಟಕಗಳನ್ನು ಪ್ರದರ್ಶಿಸುವ ಮೂಲಕ ಜನಪದ ಕಲೆಗೆ ಜೀವ ತುಂಬುವ ಕಾರ್ಯ ಮಾಡುತ್ತಿದ್ದಾರೆ’ ಎಂದು ಪ್ರಶಂಸಿಸಿದರು.

‘ಹಿಂದೆ ಹಳ್ಳಿಗಳಲ್ಲಿ ಜನರು ರಾತ್ರಿ ಚಾಪೆ, ಜಮಖಾನೆಯನ್ನು ಹಿಡಿದುಕೊಂಡು ಬಂದು ನಾಟಕಗಳನ್ನು ವೀಕ್ಷಿಸುತ್ತಿದ್ದರು. ನಿದ್ರೆ ಬಂದರೆ ಸ್ಥಳದಲ್ಲೇ ವಿಶ್ರಾಂತಿ ಪಡೆಯುತ್ತಿದ್ದರು. ಆದರೆ, ಮಧ್ಯದಲ್ಲಿ ಎದ್ದು ಹೋಗುತ್ತಿರಲಿಲ್ಲ. ಬೆಳಗಾಗುವವರೆಗೂ ಆಸಕ್ತಿಯಿಂದ ನಾಟಕ ನೋಡುತ್ತಿದ್ದರು. ಆದರೆ, ಟಿವಿ ಹಾಗೂ ಮೊಬೈಲ್‌ಗಳು ಬಂದ ಮೇಲೆ ಜನರಲ್ಲಿ ಅಂತಹ ಆಸಕ್ತಿ ಉಳಿದಿಲ್ಲ’ ಎಂದು ಹೇಳಿದರು.

‘ನೀನಾಸಂನಲ್ಲಿ ತರಬೇತಿ ಪಡೆದಿರುವ ಯಶವಂತ ಕುಚಬಾಳ ಅವರು ಬೀದರ್ ಜಿಲ್ಲೆಯಲ್ಲಿ ಜನಪದ ಸಂಸ್ಕೃತಿಯನ್ನು ಪಸರಿಸಬೇಕು ಎನ್ನುವ ಹೆಬ್ಬಯಕೆಯಿಂದ ಕಾರ್ಯನಿರ್ವಹಿಸುತ್ತಿದ್ದಾರೆ. ಇಂತಹ ಯುವಕರ ಬೆನ್ನುತಟ್ಟಿ ಸರ್ಕಾರ ಮತ್ತು ಸಂಘ-ಸಂಸ್ಥೆಗಳು ಪ್ರೋತ್ಸಾಹಿಸಬೇಕು’ ಎಂದು ಮನವಿ ಮಾಡಿದರು.

ನಿವೃತ್ತ ಡಿವೈಎಸ್‌ಪಿ ಶಿವಾನಂದ ಗಟ್ಟಿ ಅಧ್ಯಕ್ಷತೆ ವಹಿಸಿದ್ದರು. ಕನ್ನಡಾಂಬೆ ಗೆಳೆಯರ ಬಳಗದ ಅಧ್ಯಕ್ಷ ವಿರೂಪಾಕ್ಷ ಗಾದಗಿ, ಜಾನಪದ ಕಲಾವಿದರ ಬಳಗದ ಅಧ್ಯಕ್ಷ ವಿಜಯಕುಮಾರ ಸೋನಾರೆ ಹಾಗೂ ಫರ್ನಾಂಡಿಸ್ ಹಿಪ್ಪಳಗಾಂವ ಉಪಸ್ಥಿತರಿದ್ದರು.

ಯಶವಂತ ಕುಚಬಾಳ ಹಾಗೂ ಸಂಗಡಿಗರು ‘ನಿರುತ್ತರ ಕುಮಾರ’ ಸಾಮಾಜಿಕ ನಾಟಕ ಪ್ರದರ್ಶಿಸಿದರು. ಎಸ್.ಬಿ.ಕುಚಬಾಳ ನಿರೂಪಿಸಿದರು. ಸಿದ್ಧಾರ್ಥ ಸ್ವಾಗತಿಸಿದರು. ವಿಕಾಸ ವಂದಿಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.