ಔರಾದ್: ಪ್ರಸಕ್ತ ಸಾಲಿನ ಮುಂಗಾರು ಬಿತ್ತನೆಯಾಗಿ ಹದಿನೈದು ದಿನ ಕಳೆದರೂ ಸರ್ಮಪಕ ಮಳೆಯಾಗದೆ ರೈತರಲ್ಲಿ ಆತಂಕ ಆವರಿಸಿದೆ.
ತಾಲ್ಲೂಕಿನಲ್ಲಿ ಶೇ 75 ರಿಂದ 80ರಷ್ಟು ಬಿತ್ತನೆ ಪೂರ್ಣ ಆಗಿದೆ. ಕೆಲ ಕಡೆ ಮೊಳಕೆ ಕಾಣುತ್ತಿವೆ. ಆದರೆ ತೇವಾಂಶ ಕೊರತೆಯಿಂದ ಅವು ನೆಲ ಬಿಟ್ಟು ಮೇಲೇಳುತ್ತಿಲ್ಲ. ಇದರಿಂದ ರೈತರಲ್ಲಿ ಆತಂಕ ಶುರುವಾಗಿದೆ.
ಮುಂಗಾರು ಪೂರ್ವದಲ್ಲಿ ಮಳೆ ಚೆನ್ನಾಗಿ ಆಗಿರುವುದರಿಂದ ರೈತರು ಬಹಳ ಉತ್ಸಾಹದಿಂದ ಬಿತ್ತನೆ ಮಾಡಿದ್ದಾರೆ. 64,677 ಹೆಕ್ಟೇರ್ ಪೈಕಿ ತಾಲ್ಲೂಕಿನಲ್ಲಿ 43 ಸಾವಿರ ಹೆಕ್ಟೇರ್ ಪ್ರದೇಶದಲ್ಲಿ ಸೋಯಾಬಿನ್ ಬಿತ್ತನೆಯಾಗಿದ್ದು, ಈಗ ರೈತರು ಮಳೆಗಾಗಿ ಎದುರು ನೋಡುತ್ತಿದ್ದಾರೆ.
ಎರಡು ದಿನದ ಹಿಂದೆ ಒಂದಿಷ್ಟು ಮಳೆಯಾಗಿದ್ದು, ಮೊಳಕೆಯಲ್ಲಿ ಚೇತರಿಕೆ ಕಂಡಿತು. ಆದರೆ ಈಗ ಮತ್ತೆ ಒಣ ಗಾಳಿ ಬೀಸುತ್ತಿರುವುದರಿಂದ ಇರುವ ತೇವಾಂಶ ಕಡಿಮೆಯಾಗಿ ರೈತರು ಕಳವಳಪಡುವಂತಾಗಿದೆ.
ಈ ಬಾರಿ ಮುಂಗಾರು ಮಳೆ ಚೆನ್ನಾಗಿದೆ ಎಂಬ ಭರವಸೆ ಮೇಲೆ ಬಿತ್ತನೆ ಮಾಡಿದ್ದೇವೆ. ಆದರೆ ಮಳೆ ಇಲ್ಲದೆ ಮೊಳಕೆ ನೆಲ ಬಿಟ್ಟು ಮೇಲೆ ಬರುತ್ತಿಲ್ಲ. ಹೀಗೆ ಇನ್ನೆರಡು ದಿನ ಕಳೆದರೆ ಬಿತ್ತಿದ್ದಲ್ಲ ವ್ಯರ್ಥವಾಗಲಿದೆ ಎಂದು ಮುಂಗನಾಳ ರೈತ ಗೋವಿಂದ ಅಸಹಾಯಕತೆ ವ್ಯಕ್ತಪಡಿಸಿದ್ದಾರೆ.
ವಿದ್ಯುತ್ ವ್ಯತ್ಯಯ: ಮಳೆ ಕೊರತೆ ನಡುವೆ ಪಂಪಸೆಟ್‌ಗಳಿಗೆ ಸಮರ್ಪಕ ವಿದ್ಯುತ್ ಸಿಗದೆ ರೈತರಿಗೆ ಗಾಯದ ಮೇಲೆ ಬರೆ ಎಳೆದಂತಾಗಿದೆ. ಸರ್ಕಾರ ರೈತರಿಗೆ ಹಗಲು ಹೊತ್ತು ತ್ರಿಫೇಸ್ ವಿದ್ಯುತ್ ಕೊಡಬೇಕು ಎಂಬ ನಿಯಮ ಇದೆ. ಆದರೆ 2-3 ಗಂಟೆಯೂ ಸರ್ಮಪಕ ವಿದ್ಯತ್ ಸಿಗುತ್ತಿಲ್ಲ ಎಂಬ ಗೋಳು ರೈತರು ತೋಡಿಕೊಂಡಿದ್ದಾರೆ.
‘ನಮ್ಮಲ್ಲಿ ನೀರಾವರಿ ವ್ಯವಸ್ಥೆ ಇದೆ. ಹೀಗಾಗಿ ಮಳೆ ಕೊರತೆ ಎದುರಿಸಲು ಬೆಳೆಗಳಿಗೆ ನೀರು ಹಾಕಬೇಕೆಂದರೆ ಸರ್ಮಪಕ ವಿದ್ಯತ್ ಸಿಗುತ್ತಿಲ್ಲ’ ಎಂದು ನಾಗೂರ ರೈತ ಸಂತೋಷ ಮಸ್ಕಲೆ, ಹೆಡಗಾಪೂರದ ಶ್ರೀಮಂತ ಪಾಟೀಲ ಗೋಳು ತೋಡಿಕೊಂಡಿದ್ದಾರೆ.
ಜೆಸ್ಕಾಂನವರು ನಾಲ್ಕೈದು ಗಂಟೆಯಾದರೂ ನಿರಂತರ ವಿದ್ಯುತ್ ಕೊಟ್ಟರೆ ನೀರಾವರಿ ಸೌಲಭ್ಯ ಹೊಂದಿರುವ ರೈತರಿಗೆ ಒಂದಿಷ್ಟು ಅನುಕೂಲವಾಗುತ್ತದೆ ಎಂದು ಅವರು ಮನವಿ ಮಾಡಿದ್ದಾರೆ.
ಮಳೆ ಕೊರತೆಯಿಂದ ರೈತರಲ್ಲಿ ಆತಂಕ ಇನ್ನು ಎರಡು ದಿನ ಹೋದರೆ ಬಿತ್ತಿದ್ದು ವ್ಯರ್ಥ ಪಂಪ್‌ಸೆಟ್‌ಗಳಿಗೆ ಸರ್ಮಪಕ ವಿದ್ಯುತ್ ಪೂರೈಸಲು ಮನವಿ
ಗಾಳಿ ಬೀಸುತ್ತಿರುವುದರಿಂದ ಕೆಲ ಕಡೆ ವಿದ್ಯುತ್ ಪೂರೈಕೆಯಲ್ಲಿ ವ್ಯತ್ಯಯಾಗಿತ್ತು. ಈಗ ಅದನೆಲ್ಲ ಸರಿಪಡಿಸಿ ರೈತರಿಗೆ ಸಮರ್ಪಕ ವಿದ್ಯುತ್ ಪೂರೈಸುತ್ತಿದ್ದೇವೆ.
- ರವಿ ಕಾರಬಾರಿ ಎಇಇ ಜೆಸ್ಕಾಂ ಔರಾದ್
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.