ADVERTISEMENT

ಪಶು ವಿವಿಯಲ್ಲಿ ‘ಎನ್‌ಪಿಎ’ ಹೆಸರಲ್ಲಿ ವಂಚನೆ

ಬೋಧಕ ಸಿಬ್ಬಂದಿಯಿಂದ ಹಣ ಸಂಗ್ರಹ; ರಾಜ್ಯಪಾಲರಿಗೆ ದೂರು

ಶಶಿಕಾಂತ್ ಎಸ್. ಶೆಂಬೆಳ್ಳಿ
Published 29 ಸೆಪ್ಟೆಂಬರ್ 2025, 23:30 IST
Last Updated 29 ಸೆಪ್ಟೆಂಬರ್ 2025, 23:30 IST
ಬೀದರ್‌ನಲ್ಲಿರುವ ಕರ್ನಾಟಕ ಪಶು ಹಾಗೂ ಮೀನುಗಾರಿಕೆ ವಿಜ್ಞಾನಗಳ ವಿಶ್ವವಿದ್ಯಾಲಯ
ಬೀದರ್‌ನಲ್ಲಿರುವ ಕರ್ನಾಟಕ ಪಶು ಹಾಗೂ ಮೀನುಗಾರಿಕೆ ವಿಜ್ಞಾನಗಳ ವಿಶ್ವವಿದ್ಯಾಲಯ   

ಬೀದರ್‌: ‘ನಾನ್‌ ಪ್ರಾಕ್ಟಿಸಿಂಗ್‌ ಅಲೋವೆನ್ಸಸ್‌’ (ಎನ್‌ಪಿಎ) ಸೌಲಭ್ಯ ಜಾರಿಗೆ ತರುವುದಾಗಿ ಬೋಧಕ ಸಿಬ್ಬಂದಿಯನ್ನು ನಂಬಿಸಿ, ಕರ್ನಾಟಕ ಪಶು ವೈದ್ಯಕೀಯ, ಪಶು, ಮೀನುಗಾರಿಕೆ ವಿಜ್ಞಾನಗಳ ವಿಶ್ವವಿದ್ಯಾಲಯದ ಅಧಿಕಾರಿಗಳು ನಿಯಮಬಾಹಿರವಾಗಿ ಹಣ ಸಂಗ್ರಹಿಸಿರುವ ಕುರಿತು ರಾಜ್ಯಪಾಲರಿಗೆ ದೂರು ಸಲ್ಲಿಕೆಯಾಗಿದೆ.

ವಿ.ವಿ ವ್ಯಾಪ್ತಿಯ ಬೀದರ್‌, ಬೆಂಗಳೂರು, ಗದಗ, ಹಾಸನ ಹಾಗೂ ಶಿವಮೊಗ್ಗ ಕಾಲೇಜುಗಳಲ್ಲಿ ಕೆಲಸ ನಿರ್ವಹಿಸುತ್ತಿರುವ ಸಹಾಯಕ ಪ್ರಾಧ್ಯಾಪಕರು, ಸಹ ಪ್ರಾಧ್ಯಾಪಕರು ಹಾಗೂ ಪ್ರಾಧ್ಯಾಪಕರಿಂದ ಹಣ ಪಡೆಯಲಾಗಿದೆ ಎಂಬ ಗಂಭೀರ ಆರೋಪ ಕೇಳಿ ಬಂದಿದೆ. ಎನ್‌ಪಿಎ ಜಾರಿ ಹೆಸರಿನಲ್ಲಿ ಹಣ ಪಡೆದಿರುವುದನ್ನು, ಹೆಸರು ಬಹಿರಂಗಪಡಿಸಲು ಇಚ್ಛಿಸದ ವಿ.ವಿಯ ಕೆಲ ಸಿಬ್ಬಂದಿ ‘ಪ್ರಜಾವಾಣಿ’ಗೆ ದೃಢಪಡಿಸಿದ್ದಾರೆ.

ಎನ್‌ಪಿಎ ಜಾರಿ ಕುರಿತು ರಾಜ್ಯ ಸರ್ಕಾರ ಆದೇಶ ಮಾಡದಿದ್ದರೂ ‘ಆದೇಶವಾಗಿದೆ’ ಎಂದು ಬೋಧಕ ಸಿಬ್ಬಂದಿಯಿಂದ 2018–2019ನೇ ಸಾಲಿನಿಂದಲೂ ಹಣ ಸಂಗ್ರಹಿಸಲಾಗುತ್ತಿದೆ. ಈಗಾಗಲೇ ₹2 ಕೋಟಿಗೂ ಅಧಿಕ ಹಣ ಸಂಗ್ರಹಿಸಲಾಗಿದೆ ಎಂದು ದೂರಲಾಗಿದೆ. 

ADVERTISEMENT

ಈ ಸಂಬಂಧ ಪಶು ವಿ.ವಿ ನಿವೃತ್ತ ಪ್ರಾಧ್ಯಾಪಕ ಹಾಗೂ ಹಿಂದಿನ ಅವಧಿಯ ಆಡಳಿತ ಮಂಡಳಿ ಸದಸ್ಯ ಡಾ. ಕೆ.ವೆಂಕಟ್‌ ರೆಡ್ಡಿ ಅವರು ರಾಜ್ಯಪಾಲರು ಹಾಗೂ ಆರ್ಥಿಕ ಇಲಾಖೆಗೆ ದೂರು ಸಲ್ಲಿಸಿದ್ದಾರೆ. 

‘2018ರ ಅಕ್ಟೋಬರ್‌ 30ರ ಸರ್ಕಾರದ ಆದೇಶದ ಅನ್ವಯ ಪ್ರಾಧ್ಯಾಪಕರಿಗೆ ಯುಜಿಸಿ ಹಾಗೂ ಐಸಿಎಆರ್‌ ಪರಿಷ್ಕೃತ ಏಳನೇ ವೇತನ ಆಯೋಗದ ಪ್ರಕಾರ ವೇತನ ಪಾವತಿಸಲಾಗುತ್ತಿದೆ. ಕೇಂದ್ರೀಯ ಸಮಿತಿ ಶಿಫಾರಸ್ಸಿನ ಮೇರೆಗೆ ಇದನ್ನು ಜಾರಿಗೆ ತರಲಾಗಿದೆ. ಎನ್‌ಪಿಎ ಜಾರಿಗೆ ತರುವುದು ರಾಜ್ಯ ಸರ್ಕಾರಕ್ಕೆ ಸಂಬಂಧಿಸಿದ ವಿಷಯ. ಈ ಬಗ್ಗೆ ಸರ್ಕಾರ ನಿರ್ಧಾರ ಕೈಗೊಳ್ಳದಿದ್ದರೂ ವಿ.ವಿ ಸಿಬ್ಬಂದಿಯನ್ನು ಕತ್ತಲಲ್ಲಿ ಇಟ್ಟು ದೊಡ್ಡ ಮಟ್ಟದ ಭ್ರಷ್ಟಾಚಾರ ಎಸಗಿದ್ದಾರೆ. ಭ್ರಷ್ಟಾಚಾರದಲ್ಲಿ ಭಾಗಿಯಾದವರ ವಿರುದ್ಧ ಸರ್ಕಾರ ಕಾನೂನು ಕ್ರಮ ಜರುಗಿಸಬೇಕು’ ಎಂದು ವೆಂಕಟ್‌ ರೆಡ್ಡಿ ಆಗ್ರಹಿಸಿದ್ದಾರೆ.

‘ಸ್ವಾಯತ್ತ ವಿಶ್ವವಿದ್ಯಾಲಯದಲ್ಲಿ ಎನ್‌ಪಿಎ ಜಾರಿಗೊಳಿಸಲು ಹಣಕಾಸು ಸಮಿತಿ ಮತ್ತು ಆಡಳಿತ ಮಂಡಳಿ ಸಭೆಯಲ್ಲಿ ಚರ್ಚೆಯಾಗಬೇಕು. ಈ ಬಗ್ಗೆ ಯಾವುದೇ ಚರ್ಚೆ ನಡೆಸಿಲ್ಲ. ಆದರೂ ಸಿಬ್ಬಂದಿಗೆ ಸುಳ್ಳು ಹೇಳಿ ವಂಚಿಸಲಾಗುತ್ತಿದೆ. ಬೆಂಗಳೂರಿನ ಪಶು ವೈದ್ಯಕೀಯ ಕಾಲೇಜಿನ ಪೌಲ್ಟ್ರಿ ವಿಜ್ಞಾನ ವಿಭಾಗದ ಸಹಾಯಕ ಪ್ರಾಧ್ಯಾಪಕ ಎಚ್‌.ಸಿ. ಇಂದ್ರೇಶ್‌ ಅವರ ಹೆಸರಿನಲ್ಲಿ ರಾಮನಗರ ಬಿಡದಿಯ ಕರ್ಣಾಟಕ ಬ್ಯಾಂಕ್‌ ಶಾಖೆಯಲ್ಲಿ ಹೊಂದಿರುವ ಖಾತೆ ಮೂಲಕ ಹಣಕಾಸಿನ ವ್ಯವಹಾರ ನಡೆಸಲಾಗಿದೆ’ ಎಂದು ದೂರಿನಲ್ಲಿ ಆರೋಪಿಸಲಾಗಿದೆ.

ಎನ್‌ಪಿಎ ಹೆಸರಲ್ಲಿ ವಿವಿ ಸಹಾಯಕ ಪ್ರಾಧ್ಯಾಪಕರು ಪ್ರಾಧ್ಯಾಪಕರಿಂದ ತಲಾ ₹50 ಸಾವಿರದ ವರೆಗೆ ಹಣ ಸಂಗ್ರಹಿಸಲಾಗಿದೆ. ಎನ್‌ಪಿಎ ಕುರಿತು ಆರ್‌ಟಿಐ ಮೂಲಕ ವಿವಿಗೆ ಅರ್ಜಿ ಸಲ್ಲಿಸಿದರೆ ಮಾಹಿತಿ ನೀಡಿಲ್ಲ
ಡಾ. ಕೆ. ವೆಂಕಟ್‌ ರೆಡ್ಡಿ ದೂರುದಾರ
ಪಶು ವೈದ್ಯಕೀಯ ವಿವಿಯಲ್ಲಿ ಎನ್‌ಪಿಎ ಹೆಸರಿನಲ್ಲಿ ಹಣ ಸಂಗ್ರಹಿಸಿರುವ ವಿಷಯ ನನ್ನ ಗಮನಕ್ಕೆ ಬಂದಿಲ್ಲ. ಅದ್ಯಾವುದೂ ನನಗೆ ಗೊತ್ತಿಲ್ಲ
ಪ್ರೊ. ಕೆ.ಸಿ. ವೀರಣ್ಣ ಕುಲಪತಿ ಪಶು ವಿ.ವಿ ಬೀದರ್‌

ಏನಿದು ಎನ್‌ಪಿಎ?

ಸರ್ಕಾರದ ಯಾವುದೇ ನಿರ್ದಿಷ್ಟ ಇಲಾಖೆ ವಿಶ್ವವಿದ್ಯಾಲಯದಲ್ಲಿ ‘ನಾನ್‌ ಪ್ರಾಕ್ಟಿಸಿಂಗ್‌ ಅಲೋವೆನ್ಸಸ್‌’ (ಎನ್‌ಪಿಎ) ಜಾರಿಗೊಳಿಸಿದರೆ ಅಲ್ಲಿನ ಸಿಬ್ಬಂದಿ ತಮಗೆ ವಹಿಸಿದ ಕೆಲಸವನ್ನು ಬಿಟ್ಟು ಅನ್ಯ ಕೆಲಸ ಮಾಡುವಂತಿಲ್ಲ. ಕರ್ನಾಟಕ ಪಶು ವೈದ್ಯಕೀಯ ಪಶು ಹಾಗೂ ಮೀನುಗಾರಿಕೆ ವಿಜ್ಞಾನಗಳ ವಿಶ್ವವಿದ್ಯಾಲಯದ ಬೋಧಕ ಸಿಬ್ಬಂದಿ ಪಾಠ–ಪ್ರವಚನ ಸಂಶೋಧನೆ ಹಾಗೂ ವಿಸ್ತರಣೆ ಮಾಡುವುದು ಬಿಟ್ಟರೆ ಬೇರೇನೂ ಮಾಡುವಂತಿಲ್ಲ. ಇದಕ್ಕಾಗಿ ‘ನಾನ್‌ ಪ್ರಾಕ್ಟಿಸಿಂಗ್‌ ಅಲೋವೆನ್ಸಸ್‌’ ಎಂದು ಹೆಚ್ಚುವರಿ ಭತ್ಯೆ ನೀಡಲಾಗುತ್ತದೆ. ಆದರೆ ಪಶು ವಿವಿಯಲ್ಲಿ ಎನ್‌ಪಿಎ ಜಾರಿಗೊಳಿಸಲು ಸರ್ಕಾರ ಅನುಮತಿಯನ್ನೇ ನೀಡಿಲ್ಲ. ಹೀಗಿದ್ದರೂ ಸಿಬ್ಬಂದಿಗೆ ಸುಳ್ಳು ಹೇಳಿ ಹಣ ಸಂಗ್ರಹಿಸಲಾಗುತ್ತಿದೆ ಎಂಬ ಆರೋಪ ಇದೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.